ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕಂಪು ಎಲ್ಲಿ?

ಅಕ್ಷರ ಗಾತ್ರ

ಮೈಸೂರು ಸ್ಯಾಂಡಲ್ ಸೋಪನ್ನು ತಯಾರಿಸುವ ಕಾರ್ಖಾನೆ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ (ಪ್ರ.ವಾ., ಮೇ 4). ಸುಮಾರು 50 ವರ್ಷಗಳಿಂದ ಮೈಸೂರು ಶ್ರೀಗಂಧದ ಎಣ್ಣೆ ಸಾಬೂನನ್ನೇ ಬಳಸುತ್ತ ಬಂದಿರುವ ನಾನು, ಅದರ ಗುಣಮಟ್ಟಕ್ಕೆ ಕುಂದಾಗದಿರುವುದನ್ನು ಗಮನಿಸಿದ್ದೇನೆ.

ಇದು ಶ್ಲಾಘನೀಯವೇ ಆದರೂ ನಾಡಿನ ಹೆಮ್ಮೆಯ ಗಂಧದೊಂದಿಗೆ ಕನ್ನಡ ಭಾಷೆಯ ಕಂಪನ್ನು ಬೀರುವಲ್ಲಿ ಈ ಸಂಸ್ಥೆ ವಿಫಲವಾಗಿರುವುದು ನನ್ನಂಥವರಿಗೆ ದುಃಖದ ವಿಚಾರವಾಗಿದೆ.

ಚಿಕ್ಕವನಿದ್ದಾಗ ಅಂಗಡಿಯಿಂದ ನಾನು ಕೊಂಡು ತರುತ್ತಿದ್ದ ಇದೇ ಸಾಬೂನಿನ ಇಡೀ ಪೊಟ್ಟಣದ ಮೇಲೆ ದೊಡ್ಡದಾಗಿ ಕನ್ನಡದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಎಂಬ ಅಕ್ಷರಗಳು ಅಚ್ಚಾಗಿರುತ್ತಿದ್ದವು.  ಎಲ್ಲ ಪಾರ್ಶ್ವಗಳಲ್ಲಿಯೂ ಅದೇ ಅಚ್ಚು ಇರುತ್ತಿತ್ತು. ಒಳಗೆ ಸಾಬೂನಿನ ಮೇಲೂ ಕನ್ನಡ ಬರಹವಿರುತ್ತಿತ್ತು. ಕ್ರಮೇಣ ಕನ್ನಡ ಲಿಪಿ ಪೊಟ್ಟಣದ ಒಂದು ಪಾರ್ಶ್ವಕ್ಕೆ ಸೀಮಿತವಾಯಿತು.

ಇನ್ನೂ ಚಿಕ್ಕದಾಗತೊಡಗಿತು. ಈಗಸಾಬೂನಿನ ಮೇಲೆ ಕನ್ನಡವಿಲ್ಲ. ಪೊಟ್ಟಣದ ಮೇಲಿನ ಕನ್ನಡ ಅಕ್ಷರ ಹುಡುಕಬೇಕಾದಷ್ಟು ನಗಣ್ಯವಾಗಿ ಹಿಂಭಾಗದ ಕೆಳಮೂಲೆಯಲ್ಲಿ ಮೂರು ಸಾಲು ಅಚ್ಚಾಗುತ್ತಿವೆ.

ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗುಳ್ಳ ಸರ್ಕಾರಿ ಸ್ವಾಮ್ಯದ ಸಂಸ್ಥೆ ತಯಾರಿಸಿದ ವಸ್ತುಗಳ ಮೇಲೆ ಕನ್ನಡ ಇಲ್ಲವಾಗಿರುವಾಗ ಈ ನಾಡನ್ನು ಮೇಯುತ್ತಿರುವ ಅನ್ಯಭಾಷಿಕರ ಖಾಸಗಿ ಕಾರ್ಖಾನೆ ಅಥವಾ ಕೈಗಾರಿಕೆಗಳ ಉತ್ಪನ್ನಗಳ ಮೇಲೆ ಕನ್ನಡ ಬರಹವನ್ನು ನೀರೀಕ್ಷಿಸಲು ಸಾಧ್ಯವೇ?

ಕರ್ನಾಟಕದ ಹಳ್ಳಿಗಳ ಗೃಹಕೈಗಾರಿಕಾ ಘಟಕಗಳು ಸಿದ್ಧಪಡಿಸುವ ಹಪ್ಪಳ, ಉಪ್ಪಿನಕಾಯಿ ಪೊಟ್ಟಣಗಳ ಮೇಲೂ ಈಗ ಬರೀ ಇಂಗ್ಲಿಷ್ ಬರಹವಿರುತ್ತದೆ. ಕನ್ನಡ ಜನರಲ್ಲಿ ಭಾಷಾಭಿಮಾನವಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ.

ಉನ್ನತ ಸ್ಥಾನಗಳಿಂದ ನಾಲ್ಕನೇ ದರ್ಜೆಯ ನೌಕರನವರೆಗೆ ಕಾರ್ಖಾನೆಗಳಲ್ಲಿ ತುಂಬಿಕೊಂಡಿರುವ ಅನ್ಯಭಾಷಿಕರು ಕನ್ನಡ ಉಳಿಸಲು ಬಂದವರಲ್ಲ. ಈ ಕಣೆಗಳ ನಡುವೆ ಸಿಕ್ಕು ಈ ನೆಲದ ಭಾಷೆ ನಲುಗುತ್ತಿದೆ. ಎಲ್ಲೆಲ್ಲೂ ಕಣ್ಣಿಗೆ ಕಾಣದ ಕೇಳದಾಗುತ್ತಿರುವ ಭಾಷೆಯೊಂದು ಉಳಿದೀತು ಹೇಗೆ? ಶತಮಾನ ಕಳೆದ ಮೇಲಾದರೂ ಮತ್ತೆ ಮೈಸೂರು ಗಂಧದ ಎಣ್ಣೆ ಸಾಬೂನಿನ ಮೇಲೆ ಕನ್ನಡಕ್ಕೆ ಪ್ರಾಧಾನ್ಯ ದೊರೆತೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT