ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಎಎಸ್‌ಐ ಸೇರಿ 6 ಸಾವು

Last Updated 24 ಜೂನ್ 2016, 20:27 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು–ಬೆಂಗಳೂರು ಹೆದ್ದಾರಿಯ ಬಸವಪುರ ಗೇಟ್ ಬಳಿ ಬೈಕ್‌ಗೆ ಜೀಪ್ ಡಿಕ್ಕಿ ಹೊಡೆದು ಎಎಸ್‌ಐ ಹಾಗೂ ಅವರ ಪತ್ನಿ ಮೃತಪಟ್ಟಿದ್ದರೆ, ಬಳ್ಳಾರಿ ರಸ್ತೆಯ ಸಂಜೀವಿನಿನಗರ ಕ್ರಾಸ್‌ ಬಳಿ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಬಿಎಸ್‌ಎಫ್‌ನ ಎಎಸ್‌ಐ ಸಾವನ್ನಪ್ಪಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಎಎಸ್‌ಐಗಳು ಸೇರಿ ಆರು ಮಂದಿ ಪ್ರಾಣ ಬಿಟ್ಟಿದ್ದಾರೆ.

ದಂಪತಿ ಸಾವು: ಬಸವಪುರ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ವಿಭಜಕ ದಾಟಿ ಪಕ್ಕದ ರಸ್ತೆಗೆ ಬಂದ ಜೀಪ್, ಎಎಸ್‌ಐ ಎ.ಎಂ.ನಾಗರಾಜು (55) ಹಾಗೂ ಅವರ ಪತ್ನಿ ಉಮಾ (50) ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮೂಲತಃ ಮಂಡ್ಯ ಜಿಲ್ಲೆಯ ಹಣೆದೊಡ್ಡಿ ಗ್ರಾಮದ ಈ ದಂಪತಿ, ಇಬ್ಬರು ಪುತ್ರರ ಜತೆ ಕೆಂಗೇರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೂರು ವರ್ಷಗಳಿಂದ ಕುಂಬಳಗೋಡು ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದ ನಾಗರಾಜು ಅವರಿಗೆ,  ಇದೇ 18ರಂದು ಎಎಸ್‌ಐ ಹುದ್ದೆಗೆ ಬಡ್ತಿ ಸಿಕ್ಕಿತ್ತು.

ಬಡ್ತಿಯ ಜತೆಗೇ ರಾಮನಗರ ಟೌನ್ ಠಾಣೆಗೆ ವರ್ಗಾವಣೆ ಕೂಡ ಆಗಿತ್ತು. ಎರಡು ದಿನ ರಜೆ ಪಡೆದಿದ್ದ ಅವರು, ಶುಕ್ರವಾರ ಈ ಠಾಣೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವವರಿದ್ದರು.

‘ಉಮಾ ಅವರು ಕೆಲಸದ ನಿಮಿತ್ತ ಮದ್ದೂರಿಗೆ ಹೊರಟಿದ್ದರು. ಹೀಗಾಗಿ ನಾಗರಾಜು, ಪತ್ನಿಯನ್ನು ರಾಮನಗರದವರೆಗೆ ಬಿಟ್ಟು ಕರ್ತವ್ಯಕ್ಕೆ ತೆರಳಲು ನಿರ್ಧರಿಸಿದ್ದರು. ಅಂತೆಯೇ ಬೆಳಿಗ್ಗೆ 5.30ಕ್ಕೆ ದಂಪತಿ ಬೈಕ್‌ನಲ್ಲಿ ಮನೆ ಬಿಟ್ಟಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
‘ಬಸವನಪುರ ಗೇಟ್ ಬಳಿ ಸಾಗುತ್ತಿದ್ದಾಗ ಮೈಸೂರಿನಿಂದ–ಬೆಂಗಳೂರಿಗೆ ಬರುತ್ತಿದ್ದ ಜೀಪ್, ವಿಭಜಕ ದಾಟಿ ಬಂದು ಇವರಿಗೆ ಡಿಕ್ಕಿ ಹೊಡೆಯಿತು. ನಂತರ ಜೀಪ್ ಮೈಮೇಲೆಯೇ ಉರುಳಿದ್ದರಿಂದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದರು’.

‘ಜೀಪ್ ಚಾಲನೆ ಮಾಡುತ್ತಿದ್ದ ನಂದನ್‌ಗೂ (19) ಬೆನ್ನಿಗೆ ಪೆಟ್ಟು ಬಿದ್ದಿದೆ. ಮೈಸೂರಿನಲ್ಲಿ ಬಿ.ಕಾಂ ಓದುತ್ತಿರುವ ಆತ, ಸ್ನೇಹಿತರನ್ನು ಭೇಟಿಯಾಗುವ ಸಲುವಾಗಿ ಬೆಂಗಳೂರಿಗೆ ಬರುತ್ತಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ದುರಂತ ಸಂಭವಿಸಿದ್ದು, ಚೇತರಿಸಿಕೊಂಡ ಬಳಿಕ ನಂದನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು  ಅಧಿಕಾರಿಗಳು ಹೇಳಿದರು.
ಬಸ್‌ ಡಿಕ್ಕಿ: ರೂಪೇನ ಅಗ್ರಹಾರದ ಸರ್ವಿಸ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಹೋಟೆಲ್‌ವೊಂದರ ವ್ಯವಸ್ಥಾಪಕ ಸೂರಜ್ ಚಕ್ರಿ (24) ಎಂಬುವರು ಸಾವನ್ನಪ್ಪಿದ್ದಾರೆ.

ಅರುಣಾಚಲ ಪ್ರದೇಶ ಮೂಲದ ಸೂರಜ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಬೊಮ್ಮಸಂದ್ರದಲ್ಲಿ ನೆಲೆಸಿದ್ದರು. ಮನೆ ಹತ್ತಿರದ ‘ಸಾಯಿ ವಿಶ್ರಂ’  ಹೋಟೆಲ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಅವರು, ಬೇರೆ ಕೆಲಸದ ಹುಡುಕಾಟದಲ್ಲಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಆಡುಗೋಡಿಯ ಕಂಪೆನಿಗೆ ಸಂದರ್ಶನಕ್ಕೆ ತೆರಳುತ್ತಿದ್ದರು.

ಈ ವೇಳೆ ಹೊಸೂರು ಕಡೆಗೆ ಹೊರಟಿದ್ದ ಬಸ್‌, ಅವರ ಬೈಕ್‌ಗೆ ಡಿಕ್ಕಿ ಹೊಡೆಯಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸೂರಜ್ ಕೊನೆಯುಸಿರೆಳೆದರು. ಎಂಟು ತಿಂಗಳ ಹಿಂದಷ್ಟೇ ಅವರ ವಿವಾಹವಾಗಿತ್ತು. ಬಸ್ ಚಾಲಕ ವೀರೇಂದ್ರಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಡಿವಾಳ ಸಂಚಾರ ಪೊಲೀಸರು ತಿಳಿಸಿದರು.

ಮೆಕ್ಯಾನಿಕ್ ಸಾವು: ಎಚ್‌ಎಸ್‌ಆರ್‌ ಲೇಔಟ್‌ 4ನೇ ಹಂತ, 19ನೇ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಸೈಯದ್ ಫೀರ್ (42) ಎಂಬುವರು ಮೃತಪಟ್ಟಿದ್ದಾರೆ. ಮಂಗಮ್ಮನಪಾಳ್ಯ ನಿವಾಸಿಯಾದ ಫೀರ್, ಅಗರ ಸಮೀಪದ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 9 ಗಂಟೆಗೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆಯಿತು. ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಚ್‌ಎಸ್‌ಆರ್ ಲೇಔಟ್ ಸಂಚಾರ ಪೊಲೀಸರು ತಿಳಿಸಿದರು.

ಮಹಿಳೆ ದುರ್ಮರಣ: ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್‌ನಗರದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಟೆಂಪೊ ಹರಿದು ಸುಶೀಲಮ್ಮ (45) ಎಂಬುವರು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ 7.30ಕ್ಕೆ ಈ ಘಟನೆ ನಡೆದಿದೆ. ಅಂಬೇಡ್ಕರ್‌ನಗರ ನಿವಾಸಿಯಾದ ಅವರು, ತಿಂಡಿ ತರಲು ಬೇಕರಿಗೆ ಹೋಗುತ್ತಿದ್ದರು. ಈ ವೇಳೆ ಟೆಂಪೊ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದಾಗ ಮೈಮೇಲೆ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಪರಾರಿ ಯಾಗಿದ್ದು, ಟೆಂಪೊ ಜಪ್ತಿ ಮಾಡಲಾಗಿದೆ ಎಂದು ವೈಟ್‌ಫೀಲ್ಡ್ ಸಂಚಾರ ಪೊಲೀಸರು ಹೇಳಿದ್ದಾರೆ.

ಬಿಎಸ್‌ಎಫ್‌ನ ಎಎಸ್‌್ಐ ಸಾವು
ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರ ಕ್ರಾಸ್ ಬಳಿ ಗುರುವಾರ ರಾತ್ರಿ ಕೆಟ್ಟು ನಿಂತಿದ್ದ ಸರಕು ಸಾಗಣೆ ಆಟೊಗೆ ಬೈಕ್ ಡಿಕ್ಕಿಯಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಎಎಸ್‌ಐ ಜಗದೀಪ್ ವಿಶಾಲ್ (37) ಮೃತಪಟ್ಟಿದ್ದಾರೆ.

ಪುಣೆ ಮೂಲದ ವಿಶಾಲ್, ಯಲಹಂಕದ ಬಿಎಸ್‌ಎಫ್‌ನಲ್ಲಿ 120ನೇ ಬೆಟಾಲಿಯನ್‌ನ ಎಎಸ್‌ಐ ಆಗಿದ್ದರು.  ಎರಡು ದಿನಗಳ ಹಿಂದೆ ಅವರ ಪತ್ನಿ–ಮಕ್ಕಳು ನಗರಕ್ಕೆ ಬಂದಿದ್ದರು. ಗುರುವಾರ ರಾತ್ರಿ ವಾಪಸ್ ಹೊರಟಿದ್ದ ಕುಟುಂಬ ಸದಸ್ಯರನ್ನು ಬಸ್ ಹತ್ತಿಸಲು ಹೋಗಿದ್ದ ವಿಶಾಲ್, ಬೈಕ್‌ನಲ್ಲಿ ವಸತಿ ಸಮುಚ್ಚಯಕ್ಕೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ ಸರಕು ಸಾಗಣೆ ಆಟೊ ಕೆಟ್ಟು ನಿಂತಿದ್ದರಿಂದ ಅದರ ಚಾಲಕ ಮನ್ಸೂರ್, ಸಂಜೀವಿನಿನಗರ ಕ್ರಾಸ್‌ ನಲ್ಲೇ ವಾಹನ ನಿಲ್ಲಿಸಿ ಹೋಗಿದ್ದ.

ಆ ಪ್ರದೇಶದಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ಆಟೊ ಕಾಣಿಸು ತ್ತಿರಲಿಲ್ಲ. ರಾತ್ರಿ 11.30ರ ಸುಮಾರಿಗೆ ಆ ಮಾರ್ಗವಾಗಿ ಬೈಕ್ ಓಡಿಸಿಕೊಂಡು ಬಂದ ವಿಶಾಲ್, ಸಂಜೀವಿನಿನಗರ ಕ್ರಾಸ್ ಬಳಿ ತಿರುವು ಪಡೆ ಯುವಾಗ ಆಟೊಗೆ ಡಿಕ್ಕಿ ಮಾಡಿದ್ದಾರೆ. ‘ಹೆಲ್ಮೆಟ್ ಧರಿಸಿರದ ಕಾರಣ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಸ್ವಲ್ಪ ಸಮಯದಲ್ಲೇ ವಿಶಾಲ್ ಪ್ರಾಣ ಬಿಟ್ಟಿದ್ದಾರೆ. ಚಾಲಕ ಮನ್ಸೂರ್‌ನನ್ನು ಬಂಧಿಸಿ, ಆಟೊ ಜಪ್ತಿ ಮಾಡಲಾಗಿದೆ’ ಎಂದು ಹೆಬ್ಬಾಳ ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT