ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಓದುತ್ತಲೇ ಸಂಶೋಧನೆಗೆ ಅವಕಾಶ!

ಐಐಎಸ್‌ಇಆರ್‌ನಲ್ಲಿ ಮೂಲ ವಿಜ್ಞಾನ ಕಲಿತರೆ ಒಮ್ಮೆಲೇ ಸಿಗುತ್ತೆ ದ್ವಿ–ಪದವಿ
Last Updated 2 ಜೂನ್ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆು (ಐಐಎಸ್ಇಆರ್) ಐದು ವರ್ಷಗಳ ಬಿಎಸ್–ಎಂಎಸ್ ದ್ವಿ–ಪದವಿ ಕೋರ್ಸ್‌­ಗಾಗಿ ಪ್ರವೇಶ ಪ್ರಕ್ರಿಯೆಯನ್ನು ಆರಂಭಿ­ಸಿದೆ. ದೇಶದ ಐದು ನಗರಗಳಲ್ಲಿ ತನ್ನ ಕೇಂದ್ರಗಳನ್ನು ಹೊಂದಿರುವ ಐಐಎಸ್ಇ­ಆರ್ ಪ್ರವೇಶಕ್ಕಾಗಿ ಪ್ರತಿವರ್ಷ ಭಾರಿ ಪೈಪೋಟಿ ಕಂಡು ಬರುತ್ತದೆ.

ದೇಶದಲ್ಲಿ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲು ಭಾರತ ಸರ್ಕಾರದ ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವಾಲಯ­ದಿಂದ ಐಐಎಸ್ಇಆರ್‌ ಆರಂಭಿಸಲಾಗಿದೆ. ಭೋಪಾಲ್‌, ಕೋಲ್ಕತ್ತಾ, ಮೊಹಾಲಿ, ಪುಣೆ ಮತ್ತು ತಿರುವನಂತಪುರದಲ್ಲಿ ಐಐಎಸ್ಇಆರ್ ಕೇಂದ್ರಗಳಿವೆ. ಈ ಐದೂ ಕೇಂದ್ರಗಳಲ್ಲಿ ಬಿಎಸ್– ಎಂಎಸ್ ದ್ವಿ–ಪದವಿ ಕೋರ್ಸ್‌ ಅಧ್ಯಯನ ಮಾಡಬಹುದು.

ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳು ಈ ಐದು ವರ್ಷಗಳ ದ್ವಿ–ಪದವಿ ಕೋರ್ಸ್‌  ಸೇರಲು ಅವಕಾಶ ಇದೆ. ಅಧ್ಯಯನದ ಜತೆ–ಜತೆಗೆ ಸಂಶೋಧನೆಯನ್ನೂ ನಡೆಸಲು ಈ ಕೋರ್ಸ್‌ ಅವಕಾಶ ಒದಗಿಸುತ್ತದೆ. ಆಗಸ್ಟ್‌ನಿಂದ ಆರಂಭವಾ­ಗಲಿರುವ ಕೋರ್ಸ್‌ಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಪ್ರವೇಶಕ್ಕೆ ಹೇಗೆ ಅವಕಾಶ?: ಕಿಶೋರ್‌ ವೈಜ್ಞಾನಿಕ ಪ್ರೋತ್ಸಾಹ ಯೋಜನೆ (ಕೆವಿಪಿವೈ) ಮೂಲಕ ಅರ್ಹತೆ ಗಿಟ್ಟಿಸಿದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಐಐಟಿಗಳು ನಡೆಸುವ ಜಂಟಿ ಪ್ರವೇಶ ಪರೀಕ್ಷೆ (ಇಇಟಿ)ಗೆ ಹಾಜರಾಗಿ ಶ್ರೇಯಾಂಕ ಪಡೆದವರಿಗೂ ಅವಕಾಶ ಉಂಟು. ಹಾಗಾದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಆದವರಿಗೆ ಅವಕಾಶ ಇಲ್ಲವೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿ­ದೆಯೇ? ಹಾಗೇನಿಲ್ಲ, ಅವರಿಗೂ ಅವಕಾಶ ಉಂಟು. ರಾಜ್ಯ ಹಾಗೂ ಕೇಂದ್ರ ಪರೀಕ್ಷಾ ಮಂಡಳಿಗಳು ನಡೆಸುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ಇದೆ. ಆದರೆ, ಪ್ರವೇಶ ಪರೀಕ್ಷೆಯನ್ನು ಅವರು ಎದುರಿಸಬೇಕು.

ಐದು ಐಐಎಸ್ಇಆರ್‌ಗಳಿಗೆ ಪ್ರತ್ಯೇಕ­ವಾಗಿ ಅರ್ಜಿ ಏನೂ ಸಲ್ಲಿಸಬೇಕಿಲ್ಲ. ಎಲ್ಲ ಕೇಂದ್ರಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ. ಒಟ್ಟು 950 ಸೀಟು­ಗಳು ಲಭ್ಯವಿದ್ದು, ಕೆವಿಪಿವೈನಿಂದ ಶೇ 25 ಹಾಗೂ ಐಐಟಿ ಜೆಇಟಿಯಿಂದ ಶೇ 50 ಸೀಟುಗಳನ್ನು ಭರ್ತಿ ಮಾಡ­ಲಾಗುತ್ತದೆ. ಉಳಿದ ಸೀಟುಗಳನ್ನು ರಾಜ್ಯ ಹಾಗೂ ಕೇಂದ್ರ ಪಿಯುಸಿ ಮಂಡಳಿಗಳ ಪರೀಕ್ಷೆ­ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಕೇಂದ್ರ ಸರ್ಕಾರದ ಮೀಸಲಾತಿ ನಿಯಮಾವಳಿ ಪ್ರಕಾರ ಎಸ್‌ಸಿ, ಎಸ್‌ಟಿ ಹಾಗೂ ಹಿಂದು­ಳಿದ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯವೂ ಉಂಟು.

ಆನ್‌ಲೈನ್‌ ಮೂಲಕವೇ
ಅರ್ಜಿ ಭರ್ತಿ ಮಾಡಬೇಕು (http://www.iiser-admissions.in/). ಅರ್ಜಿ ಸಲ್ಲಿಕೆ ಕುರಿತಂತೆ ಹೆಚ್ಚಿನ ವಿವರವನ್ನು ಈ ವೆಬ್‌ಸೈಟ್‌ ಮೂಲಕವೂ ಪಡೆಯ­ಬಹುದು. ಅರ್ಜಿ ಭರ್ತಿ ಮಾಡುವಾಗ ₨ 600 ಫೀ (ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ­ಗಳು ₨ 300) ತುಂಬಬೇಕು. ಆಯ್ಕೆ­ಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₨ 5,000 ಶಿಷ್ಯವೇತನ ನೀಡಲಾಗುತ್ತದೆ. ವಸತಿಸೌಲಭ್ಯ ಹೊಂದಿದ ಕೇಂದ್ರಗಳು ಇವಾಗಿದ್ದು, ಆಯ್ಕೆಯಾದ ವಿದ್ಯಾರ್ಥಿ­ಗಳು ಕ್ಯಾಂಪಸ್‌ನಲ್ಲೇ ಉಳಿಯಲು ಸಿದ್ಧರಿರಬೇಕು.

ಅರ್ಜಿಯನ್ನು ಭರ್ತಿ ಮಾಡುವಾಗ ವಿದ್ಯಾರ್ಥಿಗಳಿಗೆ ಬೇಕಾದ ಕೇಂದ್ರವನ್ನು ಆದ್ಯತೆ ಮೇಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಆಯ್ಕೆಯಾದ ವಿದ್ಯಾರ್ಥಿ­­­ಗಳಿಗೆ ಮಾಹಿತಿ ನೀಡಿ, ಕೌನ್ಸೆಲಿಂಗ್‌ಗೆ ಆಹ್ವಾನಿಸಲಾಗುತ್ತದೆ.

₨ 19,000 ಪ್ರವೇಶ ಧನ (ಆಯಾ ಕೇಂದ್ರಕ್ಕೆ ಅನುಗುಣವಾಗಿ ಈ ಧನದಲ್ಲಿ ತುಸು ವ್ಯತ್ಯಾಸ ಇರುತ್ತದೆ) ತುಂಬ ಬೇಕಾ­ಗುತ್ತದೆ. ಊಟದ ವೆಚ್ಚ ಪ್ರತ್ಯೇಕವಾ­ಗಿದ್ದು, ವಾರ್ಷಿಕ ₨ 15,000ದಷ್ಟು ಬರ­ಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್‌ 15. ಜುಲೈ 20ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಆಯ್ಕೆ­ಯಾದ ವಿದ್ಯಾರ್ಥಿಗಳು ಪ್ರವೇಶ ಪಡೆದು­ಕೊಳ್ಳಲು ಕೊನೆಯ ದಿನಾಂಕ ಜುಲೈ 29.

ಪ್ರವೇಶ ಪರೀಕ್ಷೆ
ಪ್ರವೇಶ ಪರೀಕ್ಷೆಯು ಬಹುಉತ್ತರ ಆಯ್ಕೆ ಹಾಗೂ ಲಿಖಿತ ಎರಡೂ ಪದ್ಧತಿಯನ್ನೂ ಒಳಗೊಂಡಿರುತ್ತದೆ. ಪರೀಕ್ಷೆಗೆ ಆಯ್ಕೆ ಮಾಡಲಾಗಿರುವ ಪಠ್ಯವನ್ನು http://www.iiser-admissions.in/syllabus.php ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಮಾದರಿ ಪ್ರಶ್ನೆ ಪತ್ರಿಕೆಗಳು http://www.iiser-admissions.in/Model_1_Eng.pdf ವೆಬ್‌ಸೈಟ್‌ನಲ್ಲಿ ಲಭ್ಯ ಇರುತ್ತವೆ.

ಐದು ವಿಭಾಗಗಳಲ್ಲಿ ಅಧ್ಯಯನ
ಐದು ವಿಭಾಗಗಳಲ್ಲಿ (ಜೀವವಿಜ್ಞಾನ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ಮತ್ತು ಮಾನವಿಕ ವಿಜ್ಞಾನ) ಬಿಎಸ್–ಎಂಎಸ್ ದ್ವಿ–ಪದವಿ ಕೋರ್ಸ್‌ ಕಲಿಕೆಗೆ ಅವಕಾಶ ಉಂಟು. ಆದರೆ, ಮೊದಲ ನಾಲ್ಕು ಸೆಮಿಸ್ಟರ್‌ಗಳಲ್ಲಿ ಎಲ್ಲರಿಗೂ ಸಾಮಾನ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಐದನೇ ಸೆಮಿಸ್ಟರ್‌ನಿಂದ ಆಯಾ ವಿಶೇಷ ವಿಭಾಗಗಳಲ್ಲಿ ಅಧ್ಯಯನ ಆರಂಭವಾಗುತ್ತದೆ. ಕೊನೆಯ ವರ್ಷದ ಅವಧಿಯನ್ನು ಸಂಶೋಧನೆಗೆ ಮೀಸಲು ಇಡಲಾಗಿರುತ್ತದೆ.

ಐಐಎಸ್‌ಸಿಯಲ್ಲೂ ಅವಕಾಶ
ದ್ವಿತೀಯ ಪಿಯುಸಿ (ವಿಜ್ಞಾನ) ಓದಿದ ವಿದ್ಯಾರ್ಥಿಗಳಿಗೆ ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಏಳು ಕೋರ್ಸ್‌ಗಳ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಆದರೆ, ಅರ್ಜಿ ಸಲ್ಲಿಕೆಗೆ ಈ ವರ್ಷ  ಏಪ್ರಿಲ್‌ 30 ಕೊನೆಯ ದಿನವಾಗಿತ್ತು. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಓದಿದ­ವರಿಗೂ ಪದವಿ ಓದಲು ಐಐಎಸ್‌ಸಿ­ಯಲ್ಲಿ ಅವಕಾಶ ನೀಡಲಾಗುತ್ತದೆ.

ಕೇಂದ್ರ ಇಲ್ಲವೆ ರಾಜ್ಯ ಪಿಯುಸಿ ಮಂಡಳಿ ಪರೀಕ್ಷೆಯಲ್ಲಿ ಮಾಡ­ಲಾದ ಸಾಧನೆ ಜತೆಗೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಪಡೆದ ಅಂಕ­ಗಳನ್ನೂ ಗಣನೆಗೆ ತೆಗೆದುಕೊಂಡು ಐಐಎಸ್‌ಸಿ ಪ್ರತ್ಯೇಕವಾದ ಶ್ರೇಯಾಂಕ ಪಟ್ಟಿ ಸಿದ್ಧಪಡಿಸುತ್ತದೆ. ಆ ಶ್ರೇಯಾಂಕ ಪಟ್ಟಿ ಆಧಾರದ ಮೇಲೆ ಮೀಸಲಾತಿ ನಿಯಮಾವಳಿ ಅನುಸಾರ ಪ್ರವೇಶ ನೀಡಲಾಗು­ತ್ತದೆ. ಐಐಎಸ್‌ಸಿ ಪದವಿ ತರಗತಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಆದರೆ, ಏಪ್ರಿಲ್‌ 30ರ ಮುನ್ನ ಅರ್ಜಿ ಹಾಕದ ವಿದ್ಯಾರ್ಥಿ­ಗಳು ಇಲ್ಲಿ ಪ್ರವೇಶದ ಅವಕಾಶ ಪಡೆ­ಯಲು ಮುಂದಿನ ಫೆಬ್ರುವರಿ­ವರೆಗೆ ಈಗ ಕಾಯಬೇಕಿರುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT