ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಿಂದ ಕಲಿಯಬೇಕಾದ್ದೇನು?

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಾವಿರಾರು ವರ್ಷಗಳ ಕೃಷಿ ಇತಿಹಾಸ ನಮ್ಮ ದೇಶದ್ದು. ಬೇರೆ ದೇಶಗಳಿಗೆ ಹೋಗಿ ಕಲಿಯುವುದೇನಿದೆ? – ಇಸ್ರೇಲ್‌ಗೆ ಹೊರಟು ನಿಂತಾಗ ನಮ್ಮೆಲ್ಲರ ಮುಂದೆ ಎದುರಾಗಿದ್ದ ಪ್ರಶ್ನೆಯಿದು.

‘ಸಾಕಷ್ಟಿದೆ...’ ಎಂಬುದು ಆ ದೇಶ ಸುತ್ತಿದಾಗಲಷ್ಟೇ ಗೊತ್ತಾಯಿತು. ಹೈಟೆಕ್ ಯಂತ್ರೋಪಕರಣ ಬಳಸುತ್ತಿರುವ ದೂರು ಅದರ ಮೇಲಿದ್ದು, ನಮ್ಮಂಥ ದೇಶಗಳಿಗೆ ಅದು ಸಾಧ್ಯವೇ ಇಲ್ಲ ಎಂಬ ಅಭಿಮತ ಇದೆ. ಅದು ಭಾಗಶಃ ನಿಜ ಕೂಡ. ಆದರೆ ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸಿಕೊಳ್ಳುವ ಇಸ್ರೇಲ್, ಬಹು ದೊಡ್ಡ ಪಾಠವೊಂದನ್ನು ಕಲಿಸುತ್ತದೆ. ಆ ದೇಶದ ಕೃಷಿ ಯಶಸ್ಸಿನ ಹಿಂದೆ, ರೈತರ ಜತೆ ಸೇರಿ ವಿಜ್ಞಾನಿಗಳು ನಡೆಸುವ ಸಂಶೋಧನೆಯ ಪಾಲು ದೊಡ್ಡದು.

ನಮ್ಮಲ್ಲಿ ಕೃಷಿ ಅಭಿವೃದ್ಧಿ ನೆಪದಲ್ಲಿ ಕೋಟಿಗಟ್ಟಲೇ ವೆಚ್ಚ ಮಾಡಿ ಅನೇಕ ಸಂಶೋಧನೆ ನಡೆಸಲಾಗುತ್ತಿದೆ. ಸಬ್ಸಿಡಿಗೆಂದೇ ಸಾವಿರಾರು ಕೋಟಿ ಹಣ ಖರ್ಚಾಗುತ್ತಿದೆ. ಆದರೆ ಬೇಸಾಯ ತ್ಯಜಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಅರವಾ ಪ್ರಾಂತ್ಯದಲ್ಲಿರುವ ‘ಎಐಸಿಎಟಿ’ಯಲ್ಲಿ (ಅರವಾ ಅಂತರರಾಷ್ಟ್ರೀಯ ಕೃಷಿ ತರಬೇತಿ ಕೇಂದ್ರ) ೨೦ ದೇಶಗಳ ಆಸಕ್ತರಿಗೆ ಕೃಷಿ-– ತೋಟಗಾರಿಕೆ ಸಮಗ್ರ ತರಬೇತಿ ಕೊಡಲಾಗುತ್ತದೆ. ಅಲ್ಲಿದ್ದ ವಿಯೆಟ್ನಾಮ್‌ ವಿದ್ಯಾರ್ಥಿಯೊಬ್ಬನನ್ನು ಮಾತನಾಡಿಸಿದಾಗ ‘ನಮ್ಮ ದೇಶಕ್ಕೆ ಹೋಗಿ ಕೃಷಿ ಮಾಡುತ್ತೇನೆ’ ಅಂದ.

ಕಾಂಬೋಡಿಯಾದ ಯುವತಿ ಮೀನುಗಾರಿಕೆ ಮಾಡುವುದಾಗಿ ಹೇಳಿದಳು. ಇನ್ನೊಬ್ಬ ‘ಕೃಷಿ ಉದ್ದಿಮೆ ನಡೆಸುತ್ತೇನೆ’ ಅಂದ. ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ’ ಅಂತ ಯಾರೂ ಹೇಳಲಿಲ್ಲ. ‘ಇಲ್ಲಿನ ತರಬೇತಿಯೇ ಹೀಗೆ. ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳುವುದನ್ನು ಕಲಿಸಿ ಕೊಡುತ್ತೇವೆ’ ಎಂದಿದ್ದು ಕೇಂದ್ರದ ನಿರ್ದೇಶಕಿ ಹನಿ ಅರ್ನಾನ್.

ನಿಸರ್ಗ ಸಂಪತ್ತಿನ ಬಳಕೆ
ಯಥೇಚ್ಛ ಬಿಸಿಲು, ತೀರಾ ಕಡಿಮೆ ಮಳೆನೀರು. ಇದು ಇಸ್ರೇಲ್‌ಗೆ ನಿಸರ್ಗ ನೀಡಿದ ಕೊಡುಗೆ. ‘ಆದರೇನಂತೆ? ಅದನ್ನೇ ನಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದೇವೆ’ ಎಂದಿದ್ದು ಕೃಷಿ ಸಹಕಾರ ಕೇಂದ್ರದ ನಿರ್ದೇಶಕ ಹೈಮ್ ತಾಗರ್.

ನೈಸರ್ಗಿಕ ಸಂಪತ್ತಿನ ಸದ್ಬಳಕೆ ಪಾಠವನ್ನು ಇಸ್ರೇಲ್‌ಗಿಂತ ಬೇರಾವ ದೇಶ ಕಲಿಸೀತು? ಶಾಲಾ ಮಕ್ಕಳನ್ನು ಜಲಯೋಧರನ್ನಾಗಿ ಮಾಡುವ ಪ್ರಯತ್ನಕ್ಕೆ ಅಲ್ಲಿ ಆದ್ಯತೆ. ಇದಕ್ಕಾಗಿ ಶಾಲೆ-ಕಾಲೇಜುಗಳಲ್ಲಿ ಮಳೆನೀರು ಸಂಗ್ರಹ ಅಳವಡಿಸಲಾಗಿದೆ. ವಿದ್ಯಾರ್ಥಿ ತಂಡಗಳು ಸರದಿ ಮೇರೆಗೆ ಛಾವಣಿ, ಟ್ಯಾಂಕ್ ಸ್ವಚ್ಛಗೊಳಿಸುವುದು, ಮಳೆನೀರಿನ ಲೆಕ್ಕಾಚಾರ, ಬಳಕೆ ಪ್ರಮಾಣ, ಮರುಬಳಕೆ ವಿಧಾನ ಹಾಗೂ ಮಿತವ್ಯಯದ ಉಸ್ತುವಾರಿ ವಹಿಸಿಕೊಳ್ಳುತ್ತವೆ.

ಇನ್ನು, ಸಂಪೂರ್ಣ ಉಚಿತವಾದ ಬಿಸಿಲನ್ನು ನಾವು ಅಸೂಯೆ ಪಡುವಷ್ಟರ ಮಟ್ಟಿಗೆ ಬಳಸಿಕೊಂಡಿದ್ದು ಕಾಣಿಸುತ್ತದೆ! ಒಂದು ಅಂದಾಜಿನ ಪ್ರಕಾರ ಶೇ ೯೦ರಷ್ಟು ಮನೆಗಳಿಗೆ ಸೌರಶಕ್ತಿ ಬಳಸಲಾಗುತ್ತದೆ. ಕೃಷಿಗಂತೂ ಸೌರಶಕ್ತಿಯೇ ಮೂಲಾಧಾರ. ಬೃಹತ್ ಹಸಿರುಮನೆಗಳ ನಿರ್ವಹಣೆಗೆ ಸೌರಶಕ್ತಿಯಿಂದಲೇ ವಿದ್ಯುತ್ ಉತ್ಪಾದಿಸಿಕೊಳ್ಳುತ್ತಾರೆ.

ಒಂದು ಹೆಜ್ಜೆ ಮುಂದೆ
ಸಂಶೋಧನೆಗೆ ಎಲ್ಲೆ ಎಂಬುದೇ ಅಲ್ಲಿಲ್ಲ. ಒಂದು ಹಂತದಲ್ಲಿ ಗುರಿ ತಲುಪಿದೆವು ಎಂಬುವಷ್ಟರಲ್ಲಿ ಇನ್ನೊಂದು ಹೆಜ್ಜೆ ಮುಂದೆ ಸಾಗಲು ಯತ್ನ ಆರಂಭ­ವಾಗು­ತ್ತದೆ. ಅಂಥ ಹಲವು ನಿದರ್ಶನಗಳು

ಅಲ್ಲಿ ಕಂಡವು. ಗೋಬರ್ ಗ್ಯಾಸ್ ತೊಟ್ಟಿಯಿಂದ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ. ಹೊರಬರುವ ಸ್ಲರಿಯನ್ನು ವ್ಯವಸಾಯಕ್ಕೆ ಬಳಕೆ ಮಾಡುವುದು ಸಾಮಾನ್ಯ. ಆದರೆ ಸ್ಲರಿ ನೇರ ಬಳಕೆಯಿಂದ ಹಾನಿಕಾರಕ ಅನಿಲ ಹೊರಸೂಸುತ್ತದೆ. ಹಾಗಾಗಿ ಸ್ಲರಿಯಿಂದ ಅದೇ ಅನಿಲಗಳನ್ನು ಹೀರಿ ಬೆಳೆಯುವ ಆಲ್ಗೆ (ಜಲಸಸ್ಯ) ಬೆಳೆಸುತ್ತಾರೆ. ಆ ಆಲ್ಗೆಯಿಂದ ಜೈವಿಕ ಇಂಧನ ಉತ್ಪಾದಿಸಿ, ಅದನ್ನು ಜನರೇಟರ್‌ಗೆ ಹಾಕಿ, ವಿದ್ಯುತ್ ಉತ್ಪಾದಿಸುವ ಅವರ ತಂತ್ರಕ್ಕೆ ‘ಭೇಷ್’ ಎನ್ನದಿರಲಾದೀತೆ?

ಸುತ್ತಲಿನ ದೇಶಗಳ ಜತೆ ಇಸ್ರೇಲ್ ಸದಾ ಕಾಲು ಕೆರೆದು ಜಗಳವಾಡುತ್ತದೆ ಎಂಬ ಆರೋಪವಿದೆ. ನಿಜ ಇರಬಹುದು. ಆದರೆ ಕೃಷಿ ವಲಯವನ್ನು ಅದು ಅಷ್ಟಾಗಿ ಆವರಿಸಿದಂತೆ ಕಾಣುತ್ತಿಲ್ಲ. ಹಲವು ಉದ್ದಿಮೆ­ಗಳಲ್ಲಿ ಪ್ಯಾಲೆಸ್ಟೈನ್, ಜೋರ್ಡಾನ್‌ನ ಯುವಕ, ಯುವತಿಯರು ಕೆಲಸ ಮಾಡುತ್ತಿದ್ದುದು ಕಂಡುಬಂತು.

ಎಲ್ಲವೂ ಕರಾರುವಾಕ್ಕು
ಉಳುಮೆಯಿಂದ ಮಾರುಕಟ್ಟೆವರೆಗೆ ಕೃಷಿಯಲ್ಲಿ ಅನುಸರಿಸುವ ಪ್ರತಿ ವಿಧಾನ ಪಕ್ಕಾ ಲೆಕ್ಕಾಚಾರದ್ದು. ರಸ್ತೆ ಪಕ್ಕ ನೆಡುವ ಸಸ್ಯಗಳಿಗೆ ಹೆಚ್ಚು ದಿನಗಳ ಕಾಲ ನೀರು ಹಾಕುವುದು ದುಬಾರಿ ಎಂಬುದು ಗೊತ್ತಾದ ಬಳಿಕ, ನೆಟ್ಟ ಐದೇ ದಿನದಲ್ಲಿ ಬಣ್ಣದ ಹೂ ಹೊತ್ತು ನಿಲ್ಲುವ ಸಸ್ಯಗಳ ತಳಿ ಅಭಿವೃದ್ಧಿಪಡಿಸಲಾಯಿತು! ರಫ್ತಿನ ಬಳಿಕ ತೋಟದಲ್ಲಿ ಉಳಿಯುವ ಹಣ್ಣು- ತರಕಾರಿ ವ್ಯರ್ಥವಾಗುತ್ತವೆ ಎಂಬ ಕಳವಳ ಮೂಡಿದಾಗ ಅವುಗಳನ್ನು ಕಿತ್ತು, ಪ್ಯಾಕ್ ಮಾಡಿ ಬಡವರಿಗೆ ವಿತರಿಸುವ ಸ್ವಯಂಸೇವಕರ ಪಡೆಯನ್ನು ರೂಪಿಸಲಾಯಿತು. ‘ವೃದ್ಧ’ ಮರಗಳನ್ನು ಕಡಿಯದೇ ಮರು ನಾಟಿ ಮಾಡುವ ಬಗೆಯಂತೂ ಬಲು ಸೋಜಿಗ.

‘ಇಸ್ರೇಲ್‌ಗೆ ಭೇಟಿ ನೀಡಿ ಬಂದ ಬಳಿಕ ನನಗೆ ಸಂಪನ್ಮೂಲಗಳ ಬೆಲೆ ಅರಿವಾಗಿದೆ’ ಎನ್ನುತ್ತಾರೆ ಕೊಪ್ಪಳದ ಕೃಷಿಕ ಮಹೇಶ ಮಿತ್ತಲಕೋಡ. ಕೂಕನಪಳ್ಳಿ ಗ್ರಾಮದ ತಮ್ಮ ಮೂರು ಎಕರೆ ಮಾವಿನ ತೋಟದಲ್ಲಿ ಮೊದಲು ೬೦೦ ಸಸಿ ನೆಟ್ಟಿದ್ದ ಅವರು, ಇಸ್ರೇಲ್‌ಗೆ ಹೋಗಿ ಬಂದ ಬಳಿಕ ಅಲ್ಲಿನ ವಿಧಾನ ಅಳವಡಿಸಿ ೧,೨೦೦ ಗಿಡ ಬೆಳೆಸಿದ್ದಾರೆ. ‘ಅತ್ಯಲ್ಪ ಎನ್ನುವಷ್ಟು ನೀರಿನಲ್ಲಿ ಮಾವು ಬೆಳೆದು, ಈ ಸಲ ಎಂಟು ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದೇನೆೆ’ ಎಂಬ ಖುಷಿ ಅವರದು. ಸಂಪರ್ಕಕ್ಕೆ: ೯೮೪೫೫ ೩೯೩೬೯.

ಈ ಹಿಂದಿನ ರಾಜ್ಯ ಸರ್ಕಾರ, ಇಸ್ರೇಲ್‌ಗೆ ಕೃಷಿಕರನ್ನು ಕಳಿಸಿತ್ತು. ಮಣ್ಣು ಮುಟ್ಟಿ ಕೆಲಸ ಮಾಡುವ ರೈತರು ಹೋಗಿದ್ದರೆ ಒಂದಷ್ಟು ಪ್ರಯೋಜನವಿತ್ತೇನೋ? ಆದರೆ ಹೆಚ್ಚು ಸಂಖ್ಯೆಯಲ್ಲಿ ಹೋದವರು ಪುಢಾರಿಗಳು! ‘ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಿಗಷ್ಟೇ ಇನ್ನು ಮುಂದೆ ವಿದೇಶ ಪ್ರವಾಸಕ್ಕೆ ಅವಕಾಶ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿರುವುದು ಒಳ್ಳೆಯ ಬೆಳವಣಿಗೆ.

ಹಸಿರು ಸೃಷ್ಟಿ, ಹಣ್ಣು, ತರಕಾರಿ, ಹಾಲಿನ ಹೊಳೆ ಹರಿಯುವಂಥ ದೃಶ್ಯಗಳು ಮನಕ್ಕೆ ಮುದ ನೀಡುವಂಥವು. ಆದರೆ ಹವಾಮಾನ ವೈಪರೀತ್ಯ, ಸಂಪನ್ಮೂಲ ಕೊರತೆ ಎದುರಿಸುತ್ತಿದ್ದರೂ ಅದೇನೂ ಕನಸಲ್ಲ ಎಂದು ಇಸ್ರೇಲ್ ತೋರಿಸಿದೆ. ತುಂಡು ಭೂಮಿಯ ಇಸ್ರೇಲ್‌ನಲ್ಲಿ ಕೃಷಿಗೆ ಬಳಕೆಯಾಗುತ್ತಿರುವುದು ಶೇ ೨೦ರಷ್ಟು ಭಾಗ ಮಾತ್ರ! ಅದರಲ್ಲೇ ಆಹಾರ ಪದಾರ್ಥ ಬೆಳೆದು ವಿದೇಶಗಳಿಗೆ ರಫ್ತು ಮಾಡುತ್ತಿದೆ.

ಕೊನೆಯ ಮಾತು: ಗಾಝಾ ಪಟ್ಟಿಗೆ ಹತ್ತಿರವಿದ್ದ ‘ಮಹಾದ್ರಿನ್ ಗ್ರೂಪ್’ ಪ್ಯಾಕಿಂಗ್‌ ಘಟಕದೊಳಗೆ ಹೋಗುವ ಮುನ್ನ ಅಲ್ಲೊಂದು ಫಲಕ ಕುತೂಹಲ ಮೂಡಿಸಿತು.

೨೦೧೨ರ ನವೆಂಬರ್ ೧೪ರಂದು ಪ್ಯಾಲೆಸ್ಟೈನ್ ಕಡೆಯಿಂದ ರಾಕೆಟ್ ಇಲ್ಲಿ ಅಪ್ಪಳಿಸಿತ್ತಂತೆ. ಅದರ ಭಾಗಗಳನ್ನು ಫಲಕದಲ್ಲಿ ಜೋಡಿಸಲಾಗಿತ್ತು. ‘ಅವರು ತಮ್ಮ ಖಡ್ಗಗಳನ್ನು ಗುದ್ದಲಿಯನ್ನಾಗಿ ಮಾಡಿಕೊಳ್ಳಲಿ. ಭರ್ಚಿಗಳನ್ನು ಸಸಿ ಸವರುವ ಕತ್ತರಿಯಾಗಿಸಿಕೊಳ್ಳಲಿ. ಆ ದಿನ ಬರಲಿದೆ ಎಂಬ ಕನಸು ನಮ್ಮದು’ ಎಂದು ಬರೆಯಲಾಗಿತ್ತು.

ಅದನ್ನೋದಿದ ಪತ್ರಕರ್ತ ಮಿತ್ರನೊಬ್ಬ ಹೀಗೊಂದು ಕನಸು ಸೃಷ್ಟಿಸಿದ: ರೈತರ ಸಮಸ್ಯೆಗೆ ಸ್ಪಂದಿಸುವ ವಿಜ್ಞಾನಿಗಳು ಫಸಲಿನ ಮಧ್ಯೆ ನಿಂತಿದ್ದಾರೆ. ಫಿರಂಗಿಗಳನ್ನು ನೇಗಿಲು ಮಾಡಲಾಗಿದೆ. ಬಂದೂಕುಗಳು ಗುದ್ದಲಿಯಾಗಿವೆ. ಬೆಳೆಗೆ ಬೇಕೆನಿಸಿದಷ್ಟೇ ನೀರನ್ನು ಹೊತ್ತ ಕ್ಷಿಪಣಿಗಳು ಅಲ್ಲಿ ಬೀಳುತ್ತಿವೆ. ಅಗಾಧ ಪ್ರಮಾಣದ ನೈಸರ್ಗಿಕ ಸಂಪನ್ಮೂಲವುಳ್ಳ ಭಾರತ ಇಡೀ ಜಗತ್ತಿಗೇ ಅನ್ನ ನೀಡುವ ಸಾಮರ್ಥ್ಯ ಪಡೆದಿದೆ...

(ಲೇಖಕರು ಇಸ್ರೇಲ್‌ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿ ಕೃಷಿ ಪದ್ಧತಿ ಕುರಿತಾಗಿ ಬರೆದಿರುವ 10ನೆಯ
ಹಾಗೂ ಕೊನೆಯ ಅಂಕಣ ಇದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT