ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಸಿ ಜಯಿಸಿದವರು...

ಸಾಧಕಿ
Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಪ್ರಕರಣ1: ಲೊಬ್ನಾ ಮುಸ್ತಫಾ ಮೊಹಮ್ಮದ್. ಡೌನ್‌ ಸಿಂಡ್ರೋಮ್ ಪೀಡಿತ ಅಂತರರಾಷ್ಟ್ರೀಯ ಈಜು ಪಟು. ಸ್ಪೆಷಲ್‌ ಒಲಿಂಪಿಕ್ಸ್‌ ಸೇರಿದಂತೆ ವಿಶ್ವ ದರ್ಜೆಯ ಹಲವು ಟೂರ್ನಿಗಳಲ್ಲಿ ಪದಕ ಗೆದ್ದವರು. ಈಜಿಪ್ಟ್‌ನ ‘ಚಿನ್ನದ ಮೀನು’ ಎಂಬ ಖ್ಯಾತಿ ಇವರ ಮುಡಿಗಿದೆ.

ಪ್ರಕರಣ2: ಗೌರಿ ಗಾಡ್ಗೀಳ್‌. ಡೌನ್‌ ಸಿಂಡ್ರೋಮ್‌ ಪೀಡಿತ ಪುಣೆಯ ಈಜು ಪಟು. ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧನೆ ಮೂಲಕ ಖ್ಯಾತರಾದವರು. ಸಾಧನೆ ಮೂಲಕ ‘ಯೆಲ್ಲೊ’ ಚಲನಚಿತ್ರಕ್ಕೆ ಪ್ರೇರಣೆಯಾದವರು.

ಲೊಬ್ನಾ ಹಾಗೂ ಗೌರಿ ಕತೆ ಕಿವಿ ನಿಮಿರಿಸಿಕೊಂಡು ಕೇಳುವಷ್ಟು ಭಿನ್ನ. ಡೌನ್‌ ಸಿಂಡ್ರೋಮ್‌ ಪೀಡಿತ ಈ ಇಬ್ಬರಿಗೂ ಸಾಧನೆಯ ಮೆಟ್ಟಿಲು ಸ್ವತಂತ್ರವಾಗಿ ಏರುವಷ್ಟು ಬೌದ್ಧಿಕ, ಮಾನಸಿಕ ಸಾಮರ್ಥ್ಯ ಇರಲಿಲ್ಲ. ಈ ವಿಶೇಷ ಮಕ್ಕಳ ‘ವರ್ತನೆ’ಗಳನ್ನು ಸುತ್ತಲಿನ ಜನರು ದಿಟ್ಟಿಸುತ್ತಿದ್ದರು. ಆದರೆ, ಸಾಧನೆಯ ತುದಿಗೇರಿದ ಇವರನ್ನು ಅದೇ ಜನ ಕಣ್ಣರಳಿಸಿಕೊಂಡು ನೋಡುವಂತಾಯಿತು. ಈ ಪರಿವರ್ತನೆಯ  ಹಿಂದೆ ಇರುವುದು ಅವರ ಅಮ್ಮಂದಿರ ಶ್ರಮ. 

*** 
ಲೊಬ್ನಾ ಸಾಧನಾ ಪಯಣದ ಹಿಂದಿನ ಶ್ರಮದಾತೆ ಅವರ ತಾಯಿ ಸಫಾ ಅಬ್ದೆಲ್ ಗವಾದ್. ಸಫಾ ಅವರ ಹೋರಾಟ ಶುರುವಾಗಿದ್ದು ಲೊಬ್ನಾ ಹುಟ್ಟಿನ ಜತೆ ಜತೆಗೆ.

‘ಅವಳಿಗೆ ಡೌನ್‌ ಸಿಂಡ್ರೋಮ್‌ ಇರುವ ಸಂಗತಿ ಅರಗಿಸಿಕೊಳ್ಳುವುದೂ ಕಷ್ಟವಾಗಿತ್ತು. ಹಾಗೆಂದರೆ ಏನು? ಎಂದೇ ಅರ್ಥವಾಗಲಿಲ್ಲ. ಅವಳೊಟ್ಟಿಗೆ ಹೇಗೆ ನಡೆದುಕೊಳ್ಳಬೇಕು ಎಂದೂ ತಿಳಿಯಲಿಲ್ಲ. ಆರಂಭದಲ್ಲಿ ಎಲ್ಲರೊಟ್ಟಿಗೂ ಜಗಳಕ್ಕಿಳಿಯುತ್ತಿದ್ದೆ. ಜನರೇಕೆ ಅವಳನ್ನು ದಿಟ್ಟಿಸುತ್ತಾರೆ? ಮಕ್ಕಳೇಕೆ ಅವಳನ್ನು ಕಂಡರೆ ಭಯ ಪಡುತ್ತಾರೆ? ಎಂದೆಲ್ಲ ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ಸಫಾ.

ಆದರೆ, ಬಳಿಕ ಅನಿಸಿದ್ದು, ಅವಳಿಗೂ ಬದುಕುವ ಹಕ್ಕಿದೆ, ಸಮಾಜದೊಂದಿಗೆ ವ್ಯವಹರಿಸುವ ಹಕ್ಕಿದೆ ಎಂದು. ಅಲ್ಲಿಂದ ಇರುಳಿನಲ್ಲೂ ಮಗಳನ್ನು ನೆರಳಾಗಿ ಬೆನ್ನತ್ತಿ ಬೆಂಬಲಿಸಲು ನಿರ್ಧರಿಸಿದರು. ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ಮೂರು ವರ್ಷಕ್ಕೇ ಲೊಬ್ನಾಳನ್ನು ಈಜು ಕೊಳಕ್ಕೆ ಇಳಿಸಿದರು. ಶಾಲಾ ಹಂತ ತಲುಪಿದ ಲೊಬ್ನಾಗೆ ನರ್ಸರಿ ಹುಡುಕಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ಶಾಲೆಗಳು ಅವಳನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕಿದರೂ ಧೃತಿಗೆಡಲಿಲ್ಲ.

ವಿಶೇಷ ಅಗತ್ಯ ಬೇಡುವ ಮಕ್ಕಳೊಟ್ಟಿಗೆ ಹೇಗೆಲ್ಲ ನಡೆದುಕೊಳ್ಳಬೇಕು ಎಂಬುದನ್ನು ಕಲಿತು ಮುಂದಡಿ ಇಟ್ಟರು. ಊಟ, ವೇಷ–ಭೂಷಣ, ಇತರರೊಂದಿಗೆ ಲೊಬ್ನಾ ಆಡುವ ಮಾತು, ಸಂವಹನ ಹೀಗೆ ಎಲ್ಲಕ್ಕೂ ಕಾಳಜಿ ವಹಿಸಿದರು. ನಸುಕಿನ 4 ಗಂಟೆ ಎದ್ದರೆ, ಸಫಾ ಅವರ ಪಾಲಿಗೆ ಸೂರ್ಯಾಸ್ತ ಆಗುತ್ತಿದ್ದಿದ್ದು ರಾತ್ರಿ 10ಕ್ಕೆ. ಹಲವು ವರ್ಷಗಳ ತಪಸ್ಸು ಅದು. ಈಜಿನಿಂದಾಗಿ ಲೊಬ್ನಾ ಸಾಕಷ್ಟು ಸುಧಾರಿಸಿದಳು.

12 ವರ್ಷದವಳಿದ್ದಾಗ ವಿಶೇಷ ಮಕ್ಕಳಿಗಾಗಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕ ಗೆದ್ದಳು. ಅಷ್ಟು ಸಾಕಾಯಿತು ಸಫಾ ಅವರ ದುಃಖವೆಲ್ಲ ಕರಗಲು. ‘ನಾನು ಚಂದ್ರಲೋಕದಲ್ಲಿ ಇದ್ದಷ್ಟು ಖುಷಿಯಾಗಿತ್ತು. ಅವಳನ್ನು ನೋಡಿ ಇತರ ಮಕ್ಕಳು ಹೆದರುತ್ತಿದ್ದಾಗ, ಬೀದಿಯಲ್ಲಿ ಜನ ಅವಳತ್ತ ದಿಟ್ಟಿಸಿದಾಗ ಆಗಿದ್ದ ದುಃಖವೆಲ್ಲವೂ ಮರೆತು ಹೋಯಿತು’ ಎನ್ನುತ್ತಾರೆ ಅವರು. 

‘ಎಷ್ಟೋ ವಿಷಯಗಳಲ್ಲಿ ಅವರು ನಮಗಿಂತಲೂ ಮೇಲು. ಚಾಂಪಿಯನ್‌ ಆಗುವ ಸಾಮರ್ಥ್ಯ ಇರುತ್ತೆ’ ಎಂದು ಅಚಲವಾಗಿ ನುಡಿಯುವ ಸಫಾ, ‘ಈಜಿನಲ್ಲಿ ಲೊಬ್ನಾ ಉತ್ಸಾಹ ತೋರಿದ್ದು ಜೀವನಕ್ಕೆ ಲಭಿಸಿದ ತಿರುವು’ ಎಂದು ನೆನಪಿಸಿಕೊಳ್ಳುತ್ತಾರೆ.  ಆರಂಭದಲ್ಲಿ ಲೊಬ್ನಾ ಈಜು ತರಬೇತಿಯಿಂದ ಅವರ ತಂದೆ ಹೆದರಿದ್ದರಂತೆ. ಅದಕ್ಕೆ ಪ್ರೋತ್ಸಾಹವನ್ನೂ ನೀಡುತ್ತಿರಲಿಲ್ಲವಂತೆ. ಆದರೆ, ಅವಳು ಈ ಕ್ಷೇತ್ರದಲ್ಲಿ ಮುಂದೆ ಬಂದಂತೆಲ್ಲ ಅವರೂ ಬೆಂಬಲಿಸಿ, ಅವಳತ್ತ ಲಕ್ಷ್ಯ ವಹಿಸಿದರಂತೆ.

ಎಲ್ಲಾ ಕೆಲಸ ಮಾಡುವುದು ಮಗಳಿಗೆ ಅಸಾಧ್ಯ. ಆದರೆ, ಇತರ ಕೆಲ ಕಾರ್ಯಗಳನ್ನಾದರೂ ಮಾಡುವಷ್ಟು ಸಮರ್ಥಳನ್ನಾಗಿ ಲೊಬ್ನಾ ಅವರನ್ನು ರೂಪಿಸಲು ಸ್ವಯಂ ಪಣ ತೊಟ್ಟಿದ್ದ ಸಫಾ ಸದ್ಯ ನಿರಾಳರಾಗಿದ್ದಾರೆ. ‘ಅವರಪ್ಪ ತಮ್ಮ ಕೆಲಸದಲ್ಲಿ ಅವಳನ್ನು ತೊಡಗಿಸಿಕೊಂಡು ತಿದ್ದಿದರು. ನಾನು ಮನೆಗೆಲಸದಲ್ಲಿ ಕೂಡಿಸಿಕೊಂಡೆ. ಇದರಿಂದಾಗಿ ಸದ್ಯ ಅವಳು ತನ್ನನ್ನು ತಾನು ಸ್ವಯಂ ನಿಭಾಯಿಸಬಲ್ಲಳು’ ಎಂಬುದು ಅವರ   ಕಾರಣ. ‘ನಾನು ಎಂದಿಗೂ ವಿಶೇಷ ತಾಯಿ. ಇತರರು ಸಂದೇಹ ಪಟ್ಟಾಗಲೂ ಮಗಳ ಸಾಮರ್ಥ್ಯಗಳ ಮೇಲೆ ನನಗೆ ನಂಬಿಕೆ ಇತ್ತು’ ಎಂದು ಸಂಭ್ರಮಿಸುತ್ತಾರೆ ಸಫಾ.

***
ಸಾಧನೆಗೆ ಊರುಗೋಲಾದ ಸ್ನೇಹಾ...: ಲೊಬ್ನಾ ಅವರಂತೆಯೇ ಗೌರಿ ಗಾಡ್ಗೀಳ್‌ಗೂ ಡೌನ್ ಸಿಂಡ್ರೋಮ್ ಇದೆ. ಆದರೆ, ಎಲ್ಲ ದೌರ್ಬಲ್ಯಗಳನ್ನು ಮೀರಿ ನಿಲ್ಲಲು ಗೌರಿ ಸಾಧನೆ ಮಾಡಿದ್ದಾರೆ. ಮಗಳು ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತುವಾಗೆಲ್ಲ ಊರುಗೋಲಾಗಿ ನಿಂತವರು, ನಿಲ್ಲುತ್ತಿರುವವರು ಅವರ ಅಮ್ಮ ಸ್ನೇಹಾ.

ಮಗಳಿಗೆ ಡೌನ್ ಸಿಂಡ್ರೋಮ್ ಇದೆ ಎಂಬ ಸಂಗತಿ ಗೌರಿ ಅವರ ತಂದೆ ತಾಯಿಗೂ ಒಂದೇ ಸಲಕ್ಕೆ ಜೀರ್ಣವಾಗಿದ್ದಲ್ಲ. ಅದನ್ನು ಸ್ನೇಹಾ ಅವರು ಪ್ರಾಮಾಣಿಕವಾಗಿ ಒಪ್ಪುತ್ತಾರೆ. ‘ಗೌರಿ ಮತ್ತವಳ ಅನಾರೋಗ್ಯ ನನಗೆ, ನನ್ನ ಪತಿಗೆ ಮೊದಲ ದಿನವೇ ಒಪ್ಪಿತವಾಗಿತ್ತು ಎಂದು ನುಡಿದರೆ ಅದು ಸರ್ವಥಾ ಸುಳ್ಳು’ ಎನ್ನುತ್ತಾರೆ. ಆದರೆ, ಬಳಿಕ ಗೌರಿಗೆ ಬೆನ್ನೆಲುಬಾಗಿ ಇರಲು ಅವರು ನಿರ್ಧರಿಸಿದರು.

ಗೌರಿ ಅವರ ಕುಟುಂಬ ಮೊದಲು ಮಹಾರಾಷ್ಟ್ರದ ಜಲಂಗಾವ್‌ನಲ್ಲಿತ್ತು. ಗೌರಿ ನರ್ಸರಿಗೂ ಸೇರಿಯಾಗಿತ್ತು. ಆದರೆ, ಇಂಥ ವಿಶೇಷ ಚೇತನವುಳ್ಳ ಮಕ್ಕಳಿಗೆ ಪುಣೆಯಲ್ಲಿ ಉತ್ತಮ ಸೌಲಭ್ಯಗಳಿವೆ ಎಂದರಿತ ಮೇಲೆ ಅವರ ಕುಟುಂಬ 1996ರಲ್ಲಿ ಪುಣೆಗೆ ವಲಸೆ ಬಂತು. ಅಲ್ಲಿ ವೈದ್ಯರು ಗೌರಿಗೆ ಜಲ ಥೆರಪಿ, ನೃತ್ಯ ಥೆರಪಿಗೆ ಸಲಹೆ ನೀಡಿದರು. ಅವಳಿಗಾಗ 10 ವರ್ಷ. ಬಳಿಕ ಗೌರಿಯನ್ನು ಭರತನಾಟ್ಯಕ್ಕೆ ಸೇರಿಸಿದರು. ಈಜು ಕೊಳಕ್ಕೂ ಇಳಿಸಿದರು.

ವಿಶೇಷ ಮಕ್ಕಳಿಗೆ ಈಜು ಕಲಿಸುವ ಪರಿಣಿತರು ಪುಣೆಯ ಘೋರ್ಪಡೆ ಈಜು ಕೊಳದಲ್ಲಿ ಇರಲಿಲ್ಲ. ಒಂದು ವಾರ ಗೌರಿ ನಡವಳಿಕೆ ಪರಿಶೀಲಿಸಿ ನೋಡಿ ತಿಳಿಸುವುದಾಗಿ ಕೋಚ್‌ ತಾಟಸ್ಕರ್ ಹೇಳಿದರು. ಗೌರಿ ನೀರಾಟದಲ್ಲಿ ಗೆಲುವು ಕಂಡರು. ಅಲ್ಲಿಂದ ಅಕ್ಷರಶಃ ಮಗಳ ಪೋಷಣೆಯೇ ಸ್ನೇಹಾ ಅವರ ಬದುಕಿನ ಧೇಯ್ಯವಾಯ್ತು.

ಗೌರಿಯನ್ನು ನಸುಕಿನ 5.30ಗಂಟೆಗೆ ಎಬ್ಬಿಸುವುದರೊಂದಿಗೆ ದಿನ ಮೊದಲಾಗುತ್ತಿತ್ತು. 6 ಗಂಟೆಗೆ ಅವಳನ್ನು ಓಟ, ದೈಹಿಕ ವ್ಯಾಯಾಮಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿಂದ ಹಿಂತಿರುಗಿದ ಬಳಿಕ ನುಡಿ ಸುಧಾರಣೆ ಅಭ್ಯಾಸ. ನಂತರ ಶಾಲೆ. ಅದರ ಬೆನ್ನಿಗೆ ಕಂಪ್ಯೂಟರ್ ಕ್ಲಾಸು. ಅಲ್ಲಿಂದ ಸಂಜೆ ಏಳುಗಂಟೆಗೆ ಈಜುಕೊಳಕ್ಕೆ ಇಳಿದರೆ, ರಾತ್ರಿ 10 ಗಂಟೆಯ ತನಕ ಅಭ್ಯಾಸ. ಈಜು ಕೊಳದಿಂದ ಮರಳಿದರೆ ಸ್ನೇಹಾ ಅವರ ಆ ದಿನಚರಿಗೆ ಒಂದು ಅಂತ್ಯ.

ಈಜು ಗೌರಿ ಬದುಕು ಬದಲಿಸಿತು. ಅಲ್ಲಿಂದ ಸಾಧನೆಯ ಮೆಟ್ಟಿಲು ಏರುತ್ತಲೇ ಬಂದರು. ಅವರ ಸಾಧನೆ ಚಲನ ಚಿತ್ರವೊಂದಕ್ಕೆ ವಿಷಯವಸ್ತು ಆಯಿತು. ತಮ್ಮದೇ ಜೀವನಾಧಾರಿತ ಚಿತ್ರದಲ್ಲಿ ಸೈ ಎನ್ನುವಂತೆ ನಟಿಸಿ ಗೆದ್ದರು. ಚಿತ್ರವೂ ಹಿಟ್ ಆಯಿತು. ಇದಕ್ಕೆಲ್ಲ ಗುಪ್ತಗಾಮಿನಿಯಂತೆ ಸ್ಫೂರ್ತಿ ತುಂಬಿದವರು, ಸದಾಕಾಲ ಬೆನ್ನಹತ್ತಿ ಬೆಂಬಲಿಸಿದವರು ಸ್ನೇಹಾ. ಗೌರಿ ಸಾಧನೆಗೆ ಕೋಚ್‌ ತಾಟಸ್ಕರ್ ಕೊಡುಗೆ ಅಪಾರ.

‘ಅವರಂದು ನೆರವು ನೀಡದೇ ಹೋಗಿದ್ದರೇ ಗೌರಿ ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ’ ಎಂದು ಸ್ನೇಹಾ ನೆನೆಯುತ್ತಾರೆ. ಆದರೆ, ತಮ್ಮ ಯಶಸ್ಸಿನ ಶ್ರೇಯವನ್ನು ತಾಯಿ–ತಂದೆಗೆ ಅರ್ಪಿಸುತ್ತಾರೆ ಗೌರಿ. ‘ಈ ಜಗತ್ತಿನಲ್ಲಿ ನಾನು ಮಾಡಲು ಸಾಧ್ಯವಾಗದ ಏನೊಂದೂ ಇಲ್ಲ. ಯಾವುದೇ ಸವಾಲು ಸ್ವೀಕರಿಸಿ, ಅದನ್ನೊಮ್ಮೆ ಪ್ರಯತ್ನಿಸುತ್ತೇನೆ. ಅಪ್ಪ–ಅಮ್ಮ ನನ್ನನ್ನು ಹಾಗೇ ಬೆಳೆಸಿದ್ದಾರೆ’ ಎನ್ನುತ್ತಾರೆ ಗೌರಿ.

ಒಟ್ಟಾರೆ, ನಗಣ್ಯವಾಗಿ ಕಾಣುವವರ ನಡುವೆ ವಿಶೇಷ ಮಕ್ಕಳನ್ನು ಸಾಧನೆಯ ಮೂಲಕ ಮಿಂಚಿಸಲು ಅವಿರತವಾಗಿ ಬದುಕು ತೇಯ್ದ ಈ ಅಮ್ಮಂದಿರು ಗಂಧವನ್ನೇ ಹಂಚಿದ್ದಾರೆ. ‘ಅಮ್ಮಂದಿರ’ ದಿನದ ನೆಪದಲ್ಲಿ ವಿಶೇಷ ನಮನಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT