ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್‌

Last Updated 19 ಮೇ 2014, 20:07 IST
ಅಕ್ಷರ ಗಾತ್ರ

ನವದೆಹಲಿ: ಹದಿನಾರನೇ ಲೋಕಸಭೆಯಲ್ಲಿ ಶೇ 10 ರಷ್ಟು ಸ್ಥಾನಗಳನ್ನೂ ಪಡೆಯಲು ವಿಫಲ­ವಾಗಿರುವ ಕಾಂಗ್ರೆಸ್‌ ಉತ್ತರ ಪ್ರದೇಶದಲ್ಲಿ ಚೇತರಿಸಿಕೊಳ್ಳಲೂ ಆಗದಷ್ಟು ನೆಲ ಕಚ್ಚಿದೆ.

ಒಟ್ಟು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿ­ರುವ ದೇಶದ ಈ ಅತಿ ದೊಡ್ಡ ರಾಜ್ಯದಲ್ಲಿ ಅಮ್ಮ, ಮಗ (ಸೋನಿಯಾ, ರಾಹುಲ್‌) ಹೊರತುಪಡಿಸಿ­ದರೆ ಉಳಿದವರು ಸೋತು ಸೊರಗಿದ್ದಾರೆ. ಶೇ 7.5ರಷ್ಟು ಮತ ಮಾತ್ರ ಈ ಪಕ್ಷಕ್ಕೆ ಬಂದಿದೆ. ರಾಹುಲ್‌ ಗೆಲುವಿನ ಅಂತರ ಭಾರಿ ಕುಸಿದಿದೆ.

2009ರ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳನ್ನು ಗೆದ್ದಿತ್ತು. ಆಗ ಅದು ಸ್ಪರ್ಧಿಸಿದ್ದು 69 ಕ್ಷೇತ್ರಗಳಲ್ಲಿ. ಪಡೆದಿದ್ದು ಶೇ 30.43 ರಷ್ಟು ಮತಗಳನ್ನು. ಇದಕ್ಕೂ ಹಿಂದೆ 73 ಕ್ಷೇತ್ರಗಳಲ್ಲಿ ಅಭ್ಯರ್ಥಿ­ಗಳನ್ನು ಕಣಕ್ಕಿಳಿಸಿದ್ದರೂ, ಗೆಲ್ಲಲು ಸಾಧ್ಯವಾಗಿದ್ದು ಒಂಬತ್ತರಲ್ಲಿ ಮಾತ್ರ. ಆಗ ಬಂದಿದ್ದು ಶೇ 12.33­ರಷ್ಟು ಮತಗಳು. 2014ರ ಚುನಾವಣೆ ಒಂದೂ­ಕಾಲು ಶತಮಾನದಷ್ಟು ಸುದೀರ್ಘ ಇತಿಹಾಸ ಹೊಂದಿರುವ ದೊಡ್ಡ ಪಕ್ಷಕ್ಕೆ ದುಃಸ್ವಪ್ನವಾಗಿದೆ. ಇನ್ನು ಚೇತರಿಸಿಕೊಳ್ಳಲು ಸಾಧ್ಯವಿಲ್ಲ­ವೇನೊ ಎನ್ನುವ ಮಟ್ಟಿಗೆ ಹಾನಿ ಮಾಡಿದೆ.

ಅಂತರ ಇಳಿಮುಖ: ಕಾಂಗ್ರೆಸ್‌ ಗೆದ್ದಿರುವ ಎರಡು ಕ್ಷೇತ್ರಗಳಲ್ಲೂ ಗೆಲುವಿನ ಅಂತರ ಕಳೆದ ಚುನಾವಣೆ­ಗಿಂತ ಕಡಿಮೆ ಆಗಿದೆ. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ಜಯದ ಅಂತರ ಕಳೆದ ಚುನಾವಣೆಗಿಂತ ಈ ಸಲ 19,452 ಮತಗಳಷ್ಟು ಇಳಿದಿದೆ. 2009ರ ಚುನಾವಣೆಯಲ್ಲಿ ಅವರು  3,72,165 ಮತಗಳ ಅಂತರ ಕಾಪಾಡಿ­ಕೊಂಡಿದ್ದರು. ಈಗ ಇದು  3,52,713 ಆಗಿದೆ.
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗೆಲುವಿನ ಅಂತರ 2.62 ಲಕ್ಷದಷ್ಟು ಕಡಿಮೆ ಆಗಿದೆ. ಕಳೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ 3,70,198. ಈಗಿನ ಅಂತರ ಕೇವಲ 1,07,903.

ನೆಹರು, ಗಾಂಧಿ ಕುಟುಂಬಕ್ಕೆ ಮೊದಲಿಂದಲೂ ರಾಜಕೀಯ ಆಶ್ರಯ ನೀಡಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಕ್ರಮೇಣ  ಜನಪ್ರಿಯತೆ ಕಳೆದುಕೊಳ್ಳುತ್ತಿರುವುದಕ್ಕೆ ಈ ಚುನಾವಣೆಯ ಫಲಿತಾಂಶ  ಸಾಕ್ಷಿಯಾಗಿದೆ.

ಅಸಮಾಧಾನ: ರಾಹುಲ್‌ ಹತ್ತು ವರ್ಷದಿಂದ ಅಮೇಠಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ಅಮೇಠಿಯನ್ನು ಮಗನಿಗೆ ಬಿಟ್ಟು­ಕೊಟ್ಟು ಪಕ್ಕದಲ್ಲಿರುವ ರಾಯ್‌ಬರೇಲಿಗೆ ಹೋಗಿದ್ದರು. ಸತತ ಮೂರನೇ ಸಲ ರಾಹುಲ್‌ ಇಲ್ಲಿಂದ ಆಯ್ಕೆಯಾಗಿದ್ದಾರೆ. ಒಂದು ದಶಕದಲ್ಲಿ ಯುವರಾಜನ ಸಾಧನೆ ಶೂನ್ಯ. ಅವರು ಕ್ಷೇತ್ರಕ್ಕೆ ಬರುವುದೇ ಕಡಿಮೆ. ಬಂದರೂ ಜನರನ್ನು ಭೇಟಿ­ಯಾಗುವುದಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡು­ವುದಿಲ್ಲ ಎಂಬ ಅಸಮಾಧಾನ ಅಂತರ ಕಡಿಮೆ­ಯಾಗಲು ಕಾರಣ.

ರಾಹುಲ್‌ ಗೆಲುವಿನ ಅಂತರ ಕಡಿಮೆ ಆಗಿರು­ವುದರಲ್ಲಿ ಅಚ್ಚರಿಯೇನಿಲ್ಲ. ಆದರೆ, ರಾಯ್‌ಬರೇಲಿ ಮತದಾರರು ಸೋನಿಯಾ ಕಾರ್ಯವಿಧಾನ ಕುರಿತು ಟೀಕೆಗಳನ್ನು  ಮಾಡುವುದಿಲ್ಲ. ಎಲ್ಲರೂ ಪ್ರೀತಿ­ಯಿಂದ ಮಾತನಾಡುತ್ತಾರೆ. ಇಡೀ ಕ್ಷೇತ್ರದ ಮತದಾರರ ಸೋನಿಯಾ ಬಗ್ಗೆ ಒಲುವು ಹೊಂದಿ­ದ್ದರೂ, ಅಂತರ ಕಡಿಮೆ ಆಗಿದ್ದು ಏಕೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ.

‘ಪಿಲಿಭೀಟ್‌’ನಿಂದ ಚುನಾಯಿತ ರಾಗಿರುವ ಗಾಂಧಿ ಕುಟುಂಬದ ಮತ್ತೊಬ್ಬ ಸದಸ್ಯೆ ಮೇನಕಾ ಗಾಂಧಿ ಅವರ ಬಗೆಗೂ ವ್ಯಾಪಕವಾದ ಟೀಕೆ ಕೇಳಿಬಂದಿತ್ತು. ಮೂರು ದಶಕಗಳಿಂದ ಈ ಕ್ಷೇತ್ರ­ವನ್ನು ಮೇನಕಾ ಹಾಗೂ ಅವರ ಮಗ ವರುಣ್‌ ಗಾಂಧಿ ಪ್ರತಿನಿಧಿಸಿದ್ದಾರೆ. ಈ ಸಲ ವರುಣ್‌ ಸುಲ್ತಾನ್‌ಪುರದಿಂದ ಆಯ್ಕೆಯಾಗಿದ್ದಾರೆ.

ಮೇನಕಾ ಅವರ ಬಗ್ಗೆ ಪಿಲಿಭೀಟ್‌ ಜನ ಅಸಮಾ­ಧಾನ ಹೊಂದಿದ್ದರೂ ‘ಮೋದಿ ಅಲೆ’ಯಲ್ಲಿ ತೇಲಿ ದಡ ಮುಟ್ಟಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮೇನಕಾ 16ನೇ ಲೋಕಸಭೆ ಪ್ರವೇಶಿಸಿದ್ದಾರೆ. ಸುಲ್ತಾನ್‌ಪುರದಲ್ಲಿ ವರುಣ್‌ ಗಾಂಧಿ 1,78ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಅಮೇಠಿಯಲ್ಲಿ ರಾಹುಲ್‌ ಗೆಲುವಿನ ಅಂತರ ಇನ್ನೂ ಹೆಚ್ಚುತಿತ್ತು. ಆದರೆ, ಮತದಾನಕ್ಕೆ ಎರಡು ದಿನ ಮೊದಲು ಭಾವಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಮಾಡಿ ರಾಹುಲ್‌ ಅವರನ್ನು ಹಿಗ್ಗಾಮುಗ್ಗ ಜಾಲಾಡಿದರು. ಅದು ಚುನಾವಣೆ ಮೇಲೆ ಪರಿಣಾಮ ಬೀರಿತು ಎಂಬ ವ್ಯಾಖ್ಯಾನಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಮೋದಿ ಬಂದು ಹೋದ ಮೇಲೆ ರಾಹುಲ್‌ ಗೆಲುವಿನ ಬಗ್ಗೆ ಕೊಂಚ ಅನುಮಾನ ತಲೆ­ದೋ­ರಿತ್ತು. ಮತ ಎಣಿಕೆ ಆರಂಭದಲ್ಲಿ ರಾಹುಲ್‌ ಸ್ಮೃತಿ ಅವರಿಗಿಂತಲೂ ಹಿಂದೆ ಬಿದ್ದಿದ್ದು ಆತಂಕಕ್ಕೂ ಕಾರಣವಾಗಿತ್ತು. ಅನಂತರ ಪರಿಸ್ಥಿತಿ ಸುಧಾರಿಸಿತು. ಅಮೇಠಿ ಹಾಗೂ ರಾಯ್‌ಬರೇಲಿಯಲ್ಲಿ  ಪ್ರಿಯಾಂಕ ಪ್ರಚಾರ ಮಾಡಿದರೂ ರಾಹುಲ್‌ ಮತ್ತು ಸೋನಿಯಾ ಅವರ ಗೆಲುವಿನ ಅಂತರ ಕಡಿಮೆ ಆಗಿದೆ.
ಕಾಂಗ್ರೆಸ್‌ನೊಳಗೆ ಈ ಬಗ್ಗೆ ವಿಮರ್ಶೆಗಳು ನಡೆಯುತ್ತಿವೆ.

ಈಗ ಅವರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರಿ ಬೆಲೆ ತೆರಬೇಕಾಗಬಹುದು ಎಂಬ ಎಚ್ಚರಿಕೆಯ ಮಾತುಗಳು ಕಾಂಗ್ರೆಸ್‌ನೊಳಗೆ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT