ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಸ್ಪರ್ಧೆಯಲ್ಲಿ ಗೆದ್ದ ಕೀಡಾಪಟು

ನಾನೂ ಉದ್ಯಮಿ
Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇನ್ನೊಬ್ಬರ ಕೈಕೆಳಗೆ ದುಡಿಯಬಾರದು, ಸ್ವಂತ ಉದ್ಯಮಿಯಾಗಬೇಕು ಎನ್ನುವ ಕನಸು ಹೊತ್ತ ಅವರು ಯಶಸ್ವಿ ಉದ್ಯಮಿಯಾದರು. ಓದಿದ್ದು ಬಿ.ಎಸ್‌ಸಿ. ಪಡೆದ ಪದವಿ ಉದ್ಯೋಗ ಸೇರಲು ನೆರವಾದರೆ, ಕೊಕ್ಕೊ ಹಾಗೂ ಹೈಜಂಪ್‌ ಆಟಗಾರ್ತಿಯಾಗಿದ್ದರಿಂದ ಉದ್ಯಮಿಯಾಗಲು ಬೇಕಾದ ಧೈರ್ಯ, ಸಾಹಸ ಮನೋಭಾವ, ಸವಾಲು ಎದುರಿಸುವ ಗುಣವನ್ನು ಅಳವಡಿಸಿಕೊಂಡು ಬೆಳೆದವರು ಶಾಂತಿ ಬಿ.ರವಿ.

ಮೈಸೂರಿನ ಉಗಮ ಎಂಟರ್‌ಪ್ರೈಸಸ್‌ ಮಾಲೀಕರಾದ 54ರ ಪ್ರಾಯದ ಅವರು ಪೊಟ್ಯಾಷಿಯಂ ನೈಟ್ರೇಟ್‌ ಎಂಬ ರಾಸಾಯನಿಕ ಪದಾರ್ಥವನ್ನು (ಲವಣ) ಉತ್ಪಾದಿಸಿ, ವಿವಿಧ ಉದ್ಯಮ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅವರ ಉತ್ಪನ್ನವು ಬಂಗಾರದ ಶುದ್ಧೀಕರಣಕ್ಕೆ, ಒಸಡಿನಲ್ಲಿ ರಕ್ತಸ್ರಾವ ತಡೆಯಲು ಬಳಸುವ ವಿಶೇಷ ಟೂತ್‌ಪೇಸ್ಟ್‌, ಸೊಳ್ಳೆಬತ್ತಿ, ಟಿವಿಯ ಪಿಕ್ಚರ್ ಟ್ಯೂಬ್, ಬಲ್ಬ್, ಗಾಜಿನ ತಯಾರಿಕೆ, ಸೌರ ವಿದ್ಯುತ್‌ ಉಪಕರಣಗಳಲ್ಲಿ ಬಳಕೆಯಾಗುತ್ತದೆ. ಅಲ್ಲದೇ ಪಟಾಕಿ ಬತ್ತಿ ಹಾಗೂ ಅಗರ ಬತ್ತಿ ಉರಿಯಲು ಅಗತ್ಯವಾದ ಆಮ್ಲಜನಕವನ್ನು ಪೂರೈಸುವುದಕ್ಕಾಗಿ ಯೂ ರಾಸಾಯನಿಕವನ್ನು ಬಳಸಲಾಗುತ್ತದೆ.

ಇತ್ತೀಚೆಗೆ ಮೈಕ್ರೊ ನ್ಯೂಟ್ರೇಟ್ 13–0–45 ಎಂಬ ರಾಸಾಯನಿಕ ಪದಾರ್ಥವನ್ನು ಅವರು ಉತ್ಪಾದಿಸುತ್ತಿದ್ದಾರೆ. ಅದನ್ನು ತರಕಾರಿ, ಹೂವು, ಹಣ್ಣು ಬೆಳೆಯಲು ಸ್ಪ್ರೇ ರೀತಿಯಲ್ಲಿ ಬಳಸಲಾಗುತ್ತದೆ. ಇದು ಅವರ ಉದ್ಯಮ ಕುರಿತ ಮಾತಾಯಿತು; ದಾವಣಗೆರೆಯವರಾದ ಶಾಂತಿ ಅವರ ತಂದೆ ರೈತ ಕುಟುಂಬದ ಟಿ.ಜಿ.ಬಸಪ್ಪ ಹಾಗೂ ನಾಗಮ್ಮ ಅನಕ್ಷರಸ್ಥರಾಗಿದ್ದರೂ ಓದಿಸಿದರು. ಓದುವಾಗಲೇ ಅವರು ಉತ್ತಮ ಅಥ್ಲೀಟ್ ಆಗಿದ್ದರು. ಕೊಕ್ಕೊದಲ್ಲಿ ರಾಷ್ಟ್ರವನ್ನು, ಹೈಜಂಪ್‌ನಲ್ಲಿ ರಾಜ್ಯವನ್ನು ಹಾಗೂ ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದರು. ಹೀಗಿರುವಾಗಲೇ ಮೈಸೂರಿನ ಬೇಲೂರು ರವಿ ಅವರು ಮೈಸೂರು ವಿವಿಯ ಕೊಕ್ಕೊ ತಂಡದ ನಾಯಕರಾಗಿದ್ದರು. ಪರಿಚಯವಾಗಿ, ಮದುವೆಯಾದ ಮೇಲೆ ಮೈಸೂರಿನಲ್ಲಿ ನೆಲೆಸಿದರು.

ರಾಸಾಯನಿಕ ವಿಷಯದಲ್ಲಿ ಬಿ.ಎಸ್‌ಸಿ ಪದವಿ ಪಡೆದ ಪರಿಣಾಮ ಕಾರ್ಖಾನೆಯೊಂದರಲ್ಲಿ ಗುಣಮಟ್ಟ ನಿಯಂತ್ರಕಿಯಾಗಿ ನೇಮಕಗೊಂಡರು. ಅವರು ಕೆಲಸಕ್ಕೆ ಸೇರಿದಾಗ ಮೊದಲು ಪಡೆದ ಸಂಬಳ ₹250. ಆನಂತರ 10 ವರ್ಷಗಳವರೆಗೆ ಬೇರೆ ಬೇರೆ ಕಾರ್ಖಾನೆಗಳಲ್ಲಿ ಗುಣಮಟ್ಟ ನಿಯಂತ್ರಕಿಯಾಗಿ ದುಡಿದರು. ಆದರೆ, ಅವರು ವೃತ್ತಿ ಬದುಕಿನಲ್ಲಿ ಅಷ್ಟಕ್ಕೇ ತೃಪ್ತರಾಗಲಿಲ್ಲ. 10 ವರ್ಷಗಳಷ್ಟು ದೀರ್ಘ ದುಡಿಮೆಯ ನಂತರವೂ ಅವರು ಪಡೆಯುತ್ತಿದ್ದ ಸಂಬಳ ₹1,800ಕ್ಕಿಂತ ಮೇಲೇರಿರಲಿಲ್ಲ. ಅಷ್ಟೇ ಅಲ್ಲದೇ, ಸ್ವಂತವಾಗ ಉದ್ಯಮ ಸ್ಥಾಪಿಸಬೇಕೆಂಬ ಕನಸೂ ಅವರದಾಗಿತ್ತು.

ಉದ್ಯಮಿಯಾಗುವ ಕನಸು
‘ಉದ್ಯಮಿಯಾಗಬೇಕು’ ಎಂಬ ಕನಸಿನ ಬೆನ್ನು ಹತ್ತಿದ ಶಾಂತಿ, ನೌಕರಿ ಬಿಟ್ಟು 1992ರಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿಯ ಗಜಾನನ ರೈಸ್‌ ಮಿಲ್‌ನ ಮಳಿಗೆಯೊಂದನ್ನು ಬಾಡಿಗೆ ಪಡೆದು ಕಡೆಗೂ ‘ಸ್ವಂತ ಉದ್ಯಮ’ ಸಂಸ್ಥೆ ಆರಂಭಿಸಿದರು. ಪೊಟ್ಯಾಷಿಯಂ ನೈಟ್ರೇಟ್‌ ಉತ್ಪಾದನೆಯಲ್ಲಿ ತೊಡಗಿಕೊಂಡರು. ಆರಂಭದಲ್ಲಿ ಮೂವರು ಕಾರ್ಮಿಕರನ್ನಷ್ಟೇ ನೇಮಿಸಿ ಕೊಂಡರು. ಇನ್ನೂ ಇಬ್ಬರು ಕೆಲಸಗಾರರ ಅಗತ್ಯವಿದ್ದರೂ ಸಹ, ತಾವೇ ಆ ಹೆಚ್ಚುವರಿ ಕೆಲಸವನ್ನು ಮಾಡತೊಡಗಿದರು.

12 ಲಕ್ಷ ಸಾಲ
ಆಮೇಲೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ತುಸು ದೊಡ್ಡ ಮಟ್ಟದಲ್ಲಿಯೇ ಸ್ವಂತ ಕಾರ್ಖಾನೆ ಆರಂಭಿಸುವ ಸಲುವಾಗಿ ಕರ್ನಾಟಕ ಹಣಕಾಸು ನಿಗಮದಿಂದ (ಕೆಎಸ್‌ಎಫ್‌ಸಿ) ₹12 ಲಕ್ಷ ಸಾಲ ಪಡೆದರು. ಆರಂಭದಲ್ಲಿ ಒಂದೊಂದೇ ಚೀಲದಷ್ಟು ಪೊಟ್ಯಾಷಿಯಂ ನೈಟ್ರೇಟ್‌ ಮಾರುತ್ತಾ ಮಾರುಕಟ್ಟೆಯ ಬೇಡಿಕೆ, ಪೂರೈಕೆಯ ವಹಿವಾಟನ್ನು ಅರ್ಥೈಸಿಕೊಳ್ಳುತ್ತಾ ಹೋದರು. ನಂತರದಲ್ಲಿ ಸ್ಪರ್ಧಾತ್ಮಕ ಜಗತ್ತನ್ನು ಅರಿಯಲಾರಂಭಿಸಿದರು. ಮಾರುಕಟ್ಟೆಯಲ್ಲಿ ತುರುಸಿನ ಸ್ಪರ್ಧೆಗೆ ತಾವೂ ಸಿದ್ಧರಾದರು.

ಆಗ ಅವರ ಸಂಸ್ಥೆ 50 ಕೆಜಿ ತೂಕದ ಪೊಟ್ಯಾಷಿಯಂ ನೈಟ್ರೇಟ್‌ ಚೀಲವನ್ನು ₹600ರಷ್ಟು ಸ್ಪರ್ಧಾತ್ಮಕ ಬೆಲೆಗೆ ನೀಡಲಾರಂಭಿಸಿತು. ಈಗ ಅದೇ ಚೀಲಕ್ಕೆ ₹3,500ರಷ್ಟು ಬೆಲೆ ಇದೆ. ಹಾಗೆಂದು ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲದ ಈ ಮಹಿಳಾ ಉದ್ಯಮಿ, ರಾಸಾಯನಿಕ ಮಾರಾಟದ ಕ್ಷೇತ್ರದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ನಿಧಾನವಾಗಿ ಏರುತ್ತಾ ಯಶಸ್ಸನ್ನು ಕಾಣತೊಡಗಿದರು.

ಶ್ರಮದ ದುಡಿಮೆ
ಇದೇ ವೇಳೆ, ತಮ್ಮ ಕೈಗಾರಿಕೆಯ ಸಾಮರ್ಥ್ಯ ವಿಸ್ತರಣೆಗೆ ಮನಸ್ಸು ಮಾಡಿ ಶಾಂತಿ, ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿದರು. ಹಾಗೆಂದು ತಾವು ಕಾರ್ಮಿಕರೊಡನೆ ಸೇರಿಕೊಂಡು ಶ್ರಮವಹಿಸಿ ದುಡಿಯುವುದನ್ನೆನೂ ನಿಲ್ಲಿಸಲಿಲ್ಲ. ಈಗಲೂ ಅವರ ಬಳಿ ಇರುವ ಒಂಬತ್ತು ಕಾರ್ಮಿಕರೊಂದಿಗೆ ಈ ಮಾಲಕಿಯೂ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅದುವೇ ತಮ್ಮ ಉದ್ಯಮ ಸಂಸ್ಥೆಯ ಯಶಸ್ಸಿನ ಗುಟ್ಟು ಎಂಬುದೂ ಅವರಿಗೂ ಮನವರಿಕೆಯಾಗಿದೆ.

ಮೆಕ್ಯಾನಿಕ್‌ ಎಂಜಿನಿಯರಿಂಗ್‌ ಓದಿ ಬೇರೆಡೆ ಕೆಲಸದಲ್ಲಿದ್ದ ರವಿ ಅವರು ನೌಕರಿಗೆ ರಾಜೀನಾಮೆ ನೀಡಿದರು. ಪತ್ನಿ ಶಾಂತಿಯ ಉದ್ಯಮ ಸಂಸ್ಥೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟಿಬೆಳೆಸಬೇಕಾದ ಅಗತ್ಯವನ್ನು ಮನಗಂಡು ಪತ್ನಿಯ ಜತೆ ಕೈಜೋಡಿಸಿದರು. ಆನಂತರದಲ್ಲಿ ಎಂಬಿಎ ಓದಿದ ಪುತ್ರರಾದ ಅಜಯ್‌ ಬೇಲೂರು ಹಾಗೂ ಬಿ.ಇ ಪದವಿ ಪಡೆದ ಅರ್ಜುನ್‌ ಬೇಲೂರು ಕೂಡಾ ಅಮ್ಮ-ಅಪ್ಪನ ಉದ್ಯಮ ಸಂಸ್ಥೆಯಲ್ಲಿ ದುಡಿಮೆಗಿಳಿದರು.

ದೇಶ ವಿದೇಶದ ಗ್ರಾಹಕ ಕಂಪೆನಿ
‘ಎಡವಿ ಬಿದ್ದು, ಎದ್ದು, ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದ ನಮ್ಮ ಉದ್ಯಮ ಸಂಸ್ಥೆ ಈಗ ಮಾರುಕಟ್ಟೆಯ ಸ್ಪರ್ಧೆಯಲ್ಲಿ ವೇಗವಾಗಿಯೇ ಓಡುತ್ತಿದೆ. ರಾಸಾಯನಿಕಗಳ ಮಾರುಕಟ್ಟೆಯಲ್ಲಿ ‘ಉಗಮ ಎಂಟರ್‌ಪ್ರೈಸರ್ಸ್’ ಎಂದರೆ ಗುಣಮಟ್ಟ ವಿಚಾರದಲ್ಲಿ ಎಂದಿಗೂ ರಾಜಿಯಾಗದ ವಿಶ್ವಾಸಾರ್ಹ ಸಂಸ್ಥೆ ಎನ್ನುವ ಮಾತು ಚಾಲ್ತಿಯಲ್ಲಿದೆ. ವಿಡಿಯೊಕಾನ್‌ ಕಂಪೆನಿಗೆ ನಿರಂತರ ವಾಗಿ ಪಿಕ್ಚರ್‌ ಟ್ಯೂಬ್‌ ಉತ್ಪಾದನೆಗೆ ನಮ್ಮ ಪೊಟ್ಯಾಷಿಯಂ ನೈಟ್ರೇಟ್‌ ಪೂರೈಸುತ್ತಿದ್ದೇವೆ. ಗುಣಮಟ್ಟ ಕಳಪೆಯಾಗಿದೆ ಎಂಬ ದೂರು ಇದುವರೆಗೆ ಬಂದಿಲ್ಲ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶಾಂತಿ. ಈಜಿಪ್ಟ್‌, ಜೋರ್ಡಾನ್‌ ಮೊದಲಾದ ದೇಶಗಳಿಗೂ ನಮ್ಮ ಕಂಪೆನಿಯ ರಾಸಾಯ ನಿಕ ಉತ್ಪನ್ನಗಳು ರಫ್ತಾಗುತ್ತಿವೆ ಎಂದು ಸಂಸ್ಥೆಯ ಬೆಳವಣಿಗೆ ಕುರಿತು ವಿವರಿಸುತ್ತಾರೆ.

ಸಾಲ ತೀರಿಸಲು 13 ವರ್ಷ
‘ಉದ್ಯಮ ಸಂಸ್ಥೆಯ ಆರಂಭದ ದಿನ ಗಳಲ್ಲಿ ಕೆಎಸ್‌ಎಫ್‌ಸಿಯಿಂದ ಪಡೆದಿದ್ದ ಸಾಲ ವನ್ನು 13 ವರ್ಷಗಳಲ್ಲಿ ತೀರಿಸಿದೆವು. ಶುರು ವಿನಲ್ಲೇನೂ ಹೆಚ್ಚು ವಹಿವಾಟು ಇರದ ಕಾರಣ ಹೆಚ್ಚೇನೂ ದುಡ್ಡು ಉಳಿಯುತ್ತಿರ ಲಿಲ್ಲ. ಇದ್ದುದರಲ್ಲಿಯೇ ಕಷ್ಟಪಟ್ಟು ಹಣ ಉಳಿಸಿ, ಸಾಲ ತೀರಿಸಲು ಪ್ರಯತ್ನಿಸಿದೆವು. ₹12 ಲಕ್ಷ ಸಾಲ ಹಾಗೂ ಅದಕ್ಕೆ ವರ್ಷ ವರ್ಷ ಸೇರಿಕೊಳ್ಳುತ್ತಿದ್ದ ಬಡ್ಡಿ ಎಲ್ಲವನ್ನೂ ಮರು ಪಾವತಿಸಲು ಬಹಳ ಕಷ್ಟಪಟ್ಟೆವು ಎಂದು ಕನಸಿನ ಉದ್ಯಮ ಸಂಸ್ಥೆ ಕಟ್ಟಿಬೆಳೆಸಿದ ಪರಿ ಯನ್ನು ನೆನಪಿಸಿಕೊಳ್ಳುತ್ತಾರೆ ಈ ಮಹಿಳಾ ಉದ್ಯಮಿ. ಯಶಸ್ಸು ಅಷ್ಟು ಸುಲಭದ ತುತ್ತಲ್ಲ ಎಂಬುದನ್ನೂ ಒತ್ತಿ ಹೇಳುತ್ತಾರೆ.

ಹಾಗೆ ಕಷ್ಟ‍ಪಟ್ಟಿದ್ದಕ್ಕೇ ಶಾಂತಿ ಅವರಿಗೆ 2012ರಲ್ಲಿ ‘ಉತ್ತಮ ಕೈಗಾರಿಕೋದ್ಯಮಿ’ ಪ್ರಶಸ್ತಿ ದೊರಕಿದೆ. ಕರ್ನಾಟಕ ಸಣ್ಣ ಕೈಗಾ ರಿಕೆಗಳ ಸಂಘ ನೀಡುವ ಈ ಪ್ರಶಸ್ತಿಯನ್ನು ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಂದ ಸ್ವೀಕರಿಸಿದ ಖುಷಿಯ ದಿನಗಳನ್ನು ಈಗಲೂ ಅಷ್ಟೇ ಖುಷಿಯಿಂದ ನೆನಪಿಸಿಕೊಳ್ಳುತ್ತಾರೆ ಉದ್ಯಮಿ ಶಾಂತಿ. ‘ನಮ್ಮ ಈ ಕಾರ್ಖಾನೆಗೆ ಅಮ್ಮ ಹೃದಯ ಇದ್ದ ಹಾಗೆ. ಅಪ್ಪ ಮಿದುಳು ಇದ್ದ ಹಾಗೆ’ ಎಂಬ ಅಜಯ್‌ ಅವರ ಚುಟುಕು ಮಾತಿ ನಲ್ಲೇ ಉಗಮ ಎಂಟರ್‌ಪ್ರೈಸಸ್‌ನ ಜೀವ ಎಲ್ಲಿದೆ? ಅದರ ಸಾಧನೆಗೆ ಯಾರು ಯಾರು ಹೇಗೆ ಕಾರಣ ಎಂಬುದರ ಚಿತ್ರಣ ನೀಡು ತ್ತಾರೆ ಅಜಯ್‌. 
***
ಉದ್ಯಮಿಯಾಗಿ ಬೆಳೆದು ನಿಂತ ಪರಿ...
ನಮ್ಮದು 9 ಮಂದಿಯ ಕುಟುಂಬ. ಅಪ್ಪ, ಅಮ್ಮ, ನಾವು ಮೂವರು ಸೋದರಿಯರು ಹಾಗೂ ಇಬ್ಬರು ಸೋದರರು. ಐವರೂ ಮಕ್ಕಳನ್ನು ಅಪ್ಪ ಅಮ್ಮ ಕಷ್ಟಪಟ್ಟೇ ಓದಿಸಿದರು. ಆ ದಿನಗಳ ಕಷ್ಟದ ಬದುಕು ಸಹನೆ, ತಾಳ್ಮೆಯನ್ನು, ಸ್ವಾವಲಂಬನೆಯನ್ನು ಕಲಿಸಿತು. ಕಾಲೇಜಿನ ಓದು ಜ್ಞಾನವನ್ನು ನೀಡಿತು. ಅವೆಲ್ಲವೂ ಸೇರಿಕೊಂಡು ಸ್ವಂತ ಉದ್ಯಮಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಶಕ್ತಿ ನೀಡಿದವು. ಈ ಕಾರ್ಖಾನೆ ಶುರು ಮಾಡಿದ ಮೇಲೆ ಯಂತ್ರಗಳೊಂದಿಗಿನ ಒಡನಾಟವನ್ನು ಪತಿ ರವಿ ನೋಡಿಕೊಂಡರು ಎನ್ನುತ್ತಾ ‘ಸ್ವಂತ ಉದ್ಯಮ’ ಕಟ್ಟಿಬೆಳೆಸುವ ಕಷ್ಟ-ಸುಖವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾರೆ ಶಾಂತಿ.

ಮಹಿಳಾ ಉದ್ಯಮಿಯಾಗಿ ಬೆಳೆದು ನಿಲ್ಲುವುದು ಈ ಸಮಾಜದಲ್ಲಿ ಅಷ್ಟು ಸುಲಭದ ಮಾತಲ್ಲ. ಸಾಕಷ್ಟು ಸವಾಲುಗಳನ್ನು ಎದುರಿಸಬೇಕು. ಗೃಹಿಣಿಯಾಗಿ ಮನೆಗೆಲಸಗಳನ್ನೂ ಮಾಡಿಕೊಂಡು, ಮಕ್ಕಳನ್ನು ಓದಿಸುತ್ತಾ, ಉದ್ಯಮ ಸಂಸ್ಥೆಯನ್ನು ಕಟ್ಟಿಬೆಳೆಸುವ ಜವಾಬ್ದಾರಿಯನ್ನೂ ನಿಭಾಯಿಸಿದೆ ಎನ್ನುವ ಶಾಂತಿ ಅವರ ಮೊಗದಲ್ಲಿ ಕಷ್ಟದ ದಿನಗಳ ಗೆರೆಗಳೂ, ಸಾಧನೆಯಿಂದ ಮೂಡಿದ ಮಿನುಗೂ ಎರಡೂ ಏಕಕಾಲದಲ್ಲಿಯೇ ಗೋಚರಿಸುತ್ತವೆ. ಉಗಮ ಎಂಟರ್‌ಪ್ರೈಸಸ್‌ ಸದಾಕಾಲವೂ ಗುಣಮಟ್ಟ ಕಾಯ್ದುಕೊಂಡಿರುವುದಕ್ಕೆ ಐಎಸ್‌ಐನಿಂದ (ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌) ಪ್ರಮಾಣಪತ್ರ ಪಡೆದಿರುವುದರತ್ತಲೂ ಗಮನ ಸೆಳೆಯುತ್ತಾರೆ ಉದ್ಯಮಿ ಶಾಂತಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT