ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರೀಕರಣವೇ ಅಭಿವೃದ್ಧಿಯ ನೆಲೆಯೂ, ಮೂಲವೂ...

Last Updated 15 ಏಪ್ರಿಲ್ 2014, 9:51 IST
ಅಕ್ಷರ ಗಾತ್ರ

ಮಂಗಳೂರು: ‘ಪರಿಸರದ ಪರ, ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಚುನಾವಣೆಯ ಸಂದರ್ಭದಲ್ಲಷ್ಟೇ ನಡೆಯುವುದಿಲ್ಲ. ಚುನಾವಣೆ­ಯಲ್ಲಿ ನಾವು ಮಾಡುವ ಹೋರಾಟ ಇಂತಹ ಚಳವಳಿಯ ನಾಂದಿಯಷ್ಟೇ. ಪಕ್ಷಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿರುವ, ಮಾಡಿರುವ ‘ಅಭಿ­ವೃದ್ಧಿ’ಯನ್ನು ಕಂಡು ಬೇಸರ ಆಗಿದೆ.

ಇಂತಹ ಸಂದರ್ಭದಲ್ಲಿ ನೀವು ಮಾಡುತ್ತಿರುವ ಸ್ಪರ್ಧೆ ಪ್ರಸ್ತುತ­ವಾಗಿದ್ದು, ಸಂತಸ ತಂದಿದೆ’ ಎಂಬ ಅಭಿಪ್ರಾಯ ಜನ­ಸಾಮಾನ್ಯರಿಂದ ಕೇಳುವಾಗ ರೋಮಾಂಚನವಾಗುತ್ತದೆ. ಜನಪರ ಕೆಲಸಕ್ಕೆ ಪರವೂರಿನವರೂ ಬಂದರೆ ಅವರ ಪರವಾಗಿಯೇ ಇರುವ ಜನರೂ ಇಲ್ಲಿದ್ದಾರೆ ಎಂಬುದೇ ನಮಗೆ ಸ್ಫೂರ್ತಿ...

ಇದು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಬೆಂಗಳೂರು ಮೂಲದ ಕೆ.ಎನ್‌.ಸೋಮಶೇಖರ್‌ ಅವರ ಹೋರಾಟದ ಮಾತು. ಪರಿಸರದ ಪರ ಹೋರಾಟಗಳನ್ನು ನಡೆಸುತ್ತಲೇ ಬಂದಿರುವ ಸೋಮಶೇಖರ್‌ ಅವರು ಚುನಾವಣಾ ಪ್ರಚಾರದಲ್ಲಿ ಆಯ್ಕೆ ಮಾಡಿಕೊಂಡಿದ್ದು ಪರಿಸರ ಪರವಾದ ಕಾಳಜಿಯನ್ನೇ. ಅಭಿವೃದ್ಧಿಯ ವಿಚಾರವೇ ಚುನಾವಣಾ ವಿಷಯವಾಗಿರುವ ಇಂದಿನ ಸಂದರ್ಭದಲ್ಲಿ ಕೇವಲ ಪರಿಸರದ ಕಾಳಜಿಯ ವಿಷಯವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕೇಳಿದರೆ, ‘ನೋಡಿ ಕೈಗಾರಿಕೆಗಳ, ಕಟ್ಟಡಗಳ ನಿರ್ಮಾಣವೇ ಅಭಿವೃದ್ಧಿ ಎಂದಾದರೆ ಉಸಿರಾಡುವ ಗಾಳಿ, ಕುಡಿಯವ ನೀರಿನ ಮೂಲಗಳ ಪರಿಸ್ಥಿತಿ ಏನಾಗಬಹುದು? ಫಲವತ್ತಾದ ಕಾಡು, ಜಮೀನು ನಾಶ ಮಾಡಿದರೆ ಹೇಗಿರಬಹುದು. ಪರಿಸರ ಚೆನ್ನಾಗಿದ್ದರೆ ಮಾತ್ರ ಅಭಿವೃದ್ಧಿ, ಏಳಿಗೆ ಸಾಧ್ಯ. ಪರಿಸರವೇ ಇಲ್ಲದೆ ಇದ್ದರೆ ಅಭಿವೃದ್ಧಿ ಯಾರಿಗಾಗಿ’ ಎಂದು ಮರು ಪ್ರಶ್ನೆ ಹಾಕಿದರು.

ಗ್ರಾಮೀಣ ಪ್ರದೇಶಕ್ಕೇ ಆದ್ಯತೆ
‘ನಗರದಲ್ಲಿ ಇರುವವರ ಪೈಕಿ ಹೆಚ್ಚಿನವರು ವಲಸೆ ಬಂದವರು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವವರು ಪರಿಸರದ ಜತೆಗೆ ಬದುಕುವವರು. ಹಾಗಾಗಿ ನಾವು ಹಳ್ಳಿಗಳ ನಿವಾಸಿಗಳ ಬಳಿಗೆ ತೆರಳಿ ಮತಯಾಚಿಸಿದ್ದೇವೆ. ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಮ್ಮ ಹೋರಾಟಗಳ ಬಗ್ಗೆ ಅರಿವಿರುವ ಇಲ್ಲಿನ ನಾಗರಿಕರು ಕರೆ ಮಾಡಿ ಬೆಂಬಲ ಸೂಚಿಸಿದರೆ, ಕಾಲೇಜುಗಳಲ್ಲಿ ಇರುವ ಪರಿಸರ ಕ್ಲಬ್‌ಗಳ ಸದಸ್ಯರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಎಲ್ಲ ಸಂಘಟನೆಗಳ, ಎಲ್ಲ ವರ್ಗಗಳ ಮತವೂ ನಮಗೆ ಬೇಕು’ ಎಂಬ ನಿರೀಕ್ಷೆಯ ಮಾತುಗಳನ್ನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಬಹು ಚರ್ಚಿತ ವಿಷಯ. ಅದರ ಪರಿಣಾಮವಾಗಿ ಇಲ್ಲಿನ ಕೆಲವು ಪರಿಸರ ಪರ ಹೋರಾಟದ ಸಂಘಟನೆಗಳು ‘ನೋಟಾ’ ಚಲಾಯಿಸಲು ಕರೆ ನೀಡಿವೆ. ಮತ ನಿರಾಕರಣೆ ಅಥವಾ ಬಹಿಷ್ಕಾರ ಧೋರಣೆ ಪ್ರಜಾಪ್ರಭುತ್ವವನ್ನು ಕುಗ್ಗಿಸುತ್ತದೆ. ಇದೇ ವಿಷಯ ನಮ್ಮ ಚಳವಳಿ ಅಥವಾ ಹೋರಾಟಕ್ಕೆ ಪ್ರೇರಣೆ ಎಂದು ವಿವರಿಸಿದರು.

‘ನಾವೇನೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊಸಬರಲ್ಲ. ಪಶ್ಚಿಮ ಘಟ್ಟ, ಕರಾವಳಿ ಉಳಿಸುವ ಅನೇಕ ಹೋರಾಟಗಳಲ್ಲಿ ನಾವು ಭಾಗವಹಿಸಿದ್ದೇವೆ. ಇದೇ ನಮಗೆ ರಕ್ಷೆಯಾಗಲಿದೆ. ಆಳುವ ಸರ್ಕಾರಗಳ ಜನವಿರೋಧಿ ಮತ್ತು ಪರಿಸರಕ್ಕೆ ವಿರುದ್ಧವಾದ ನಿಲುವುಗಳ ವಿರುದ್ಧ ನಾವು ಮಾಡುತ್ತಿರುವುದು ಪ್ರತಿಭಟನಾ ರಾಜಕೀಯ ಜನಾಂದೋಲನ.

ನಿಮ್ಮ ಮತ ಪರಿಸರ ಉಳಿವಿಗೆ, ಹಸಿರೀಕರಣವೇ ಉಸಿರೀಕರಣ, ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಆರೋಗ್ಯವೇ ಬಯಸಲು ಸೀಮೆಯ ಸಿರಿತನ ಎಂಬ ಘೋಷಣೆಗಳೊಂದಿಗೆ ಮತ ಯಾಚಿಸುತ್ತೇವೆ’ ಎಂದು ನಮನ ಬೊಟಾನಿಕಲ್‌ ಗಾರ್ಡನ್‌ ಮೂಲಕ ರೈತ ಅಗತ್ಯಗಳ ಪೂರೈಕೆ ಮಾಡುತ್ತಿರುವ ಸೋಮಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT