ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣಭಾರ–ಅನುಕಂಪದ ಮಧ್ಯೆ ಮತದಾರ!

Last Updated 16 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ  ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ.­ರಾಘವೇಂದ್ರ (ಬಿಜೆಪಿ) ಹಾಗೂ ಅವರದೇ ರಾಜಕೀಯ ಗರಡಿಯಲ್ಲಿ ಪಳ­ಗಿದ್ದ ಎಚ್‌.ಎಸ್‌.ಶಾಂತವೀರಪ್ಪ ಗೌಡ (ಕಾಂಗ್ರೆಸ್‌) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಮೇಲ್ನೋಟಕ್ಕೆ ರಾಘವೇಂದ್ರ ಹಾಗೂ ಕಾಂಗ್ರೆಸ್‌ನ ಶಾಂತವೀರಪ್ಪ ಗೌಡ ನಡುವಿನ ಸ್ಪರ್ಧೆಯಾದರೂ, ಅಸ­ಲಿಗೆ ಇದು ಯಡಿಯೂರಪ್ಪ ಕುಟುಂಬ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾ­ಜಿದ್ದಿಯ ಕಣ. ಪಕ್ಷೇತರರಾಗಿ ಮಾಜಿ ಸಚಿವ ಗೂಳಿ­ಹಟ್ಟಿ ಡಿ.ಶೇಖರ್‌, ನ್ಯಾಷನಲ್‌ ಡೆವ­ಲಪ್‌­ಮೆಂಟ್‌ ಪಾರ್ಟಿಯ ಜಮೀರು­ದ್ದೀನ್‌, ಕೆಜೆಪಿಯ ಸಕಲೇಶ್‌ ಹುಲ್ಮಾರ್‌, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿ­­ಯಾದ  ಬಿ.ಎಸ್. ಯುವರಾಜ್‌, ಪಕ್ಷೇತರ ಅಭ್ಯರ್ಥಿಗಳಾದ ಎಂ.ಆರ್‌. ಅನಿಲ್‌, ಡಿ.ಎಸ್‌. ಈಶ್ವರಪ್ಪ ಕಣದಲ್ಲಿದ್ದಾರೆ.

ಮಗನಿಗೆ ಅಪ್ಪನ ಸಾರಥ್ಯ: ಕ್ಷೇತ್ರದಲ್ಲಿ ರಾಜಕೀಯ ಪಟ್ಟುಗಳನ್ನು ಹಾಕುತ್ತಾ 7 ಬಾರಿ ಗೆಲುವು ಸಾಧಿಸಿದ್ದ ಯಡಿಯೂ­ರಪ್ಪ ಅವರೇ ಖುದ್ದಾಗಿ ಈ ಬಾರಿ ಮಗನ ಚುನಾವಣಾ ಪ್ರಚಾರದ ಸಾರಥ್ಯ ವಹಿಸಿದ್ದಾರೆ. ತಾವು ಸಂಸದ­ರಾಗಿ ಆಯ್ಕೆಯಾದ ಮರುದಿ­-ನ­ದಿಂ­ದಲೇ ಮತದಾರರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಕ್ಷೇತ್ರದ ಹಳ್ಳಿ– ಹಳ್ಳಿಗಳನ್ನು  ಸುತ್ತಿ­ದ್ದಾರೆ. ‘ನನಗೆ ನೀಡಿದ ಬೆಂಬಲ­ವನ್ನು ರಾಘುವಿಗೂ ಮುಂದುವರಿಸಿ’ ಎಂದು ಕೋರಿದ್ದಾರೆ.

ಕಾಂಗ್ರೆಸ್‌ನಲ್ಲಿ ಒಗ್ಗಟ್ಟು: ಕ್ಷೇತ್ರದಲ್ಲಿ ಸಾಕಷ್ಟು ಮುಂಚಿತವಾಗಿ ಪ್ರಚಾರ ಆರಂಭಿಸಿದ್ದ ಬಿಜೆಪಿ ಹಿಂದಿನಂತೆ ಈ ಬಾರಿಯೂ ಅನಾಯಾಸವಾಗಿ ಗೆಲುವು ಪಡೆ­­ಯುವ ಲೆಕ್ಕಾಚಾರದಲ್ಲಿ ಇತ್ತು. ಆದರೆ, ಲೋಕಸಭಾ ಚುನಾವಣಾ ಫಲಿ­ತಾಂಶದ ನಂತರ ಪಾಠ ಕಲಿತಂತಿರುವ ಕಾಂಗ್ರೆಸ್‌ ನಾಯಕರು ಮೊದಲ ಬಾರಿಗೆ ಅಭೂತಪೂರ್ವ ಒಗ್ಗಟ್ಟು ತೋರಿದ್ದು, ಬಲವೃದ್ಧಿಸಿಕೊಂಡಿದ್ದಾರೆ. ಇದು ಬಿಜೆಪಿಯ ನಾಯಕರ ನಿದ್ದೆಗೆ­ಡಿಸಿದೆ.

ಆದರೆ ಕಾಂಗ್ರೆಸ್‌ಗೆ ಬಲಿಷ್ಠ ಕಾರ್ಯ­ಕರ್ತರ ಪಡೆ ಇಲ್ಲದೇ ಇರುವುದು  ಮುಖಂಡರ ನಿದ್ದೆಗೆಡಿಸಿದೆ. ಅದ­ಕ್ಕಾ­ಗಿಯೇ, ಸಚಿವರು, ಶಾಸಕರಿಗೆ ಕೊನೆಯ ದಿನದವರೆಗೂ ಕ್ಷೇತ್ರದಲ್ಲಿ ಇರುವಂತೆ ಸೂಚನೆ ನೀಡಿದ್ದು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.
ಆರಂಭದಲ್ಲಿ ನೀರಸ ಎನ್ನುವಂತಿದ್ದ ಕಾಂಗ್ರೆಸ್‌ ಪ್ರಚಾರ ವೈಖರಿ, ಕಾರ್ಯಕ­ರ್ತರ ಉತ್ಸಾಹ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಬಂದು ಹೋದ ನಂತರ ನೂರ್ಮಡಿಗೊಂಡಿದೆ.

ಶಿಕಾರಿಪುರ ಚುನಾವಣೆಯನ್ನು ಪ್ರತಿ­ಷ್ಠೆಯ ಪ್ರಶ್ನೆಯಾಗಿ ತೆಗೆದು­ಕೊಂಡಿ­ರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರ­ಮೇಶ್ವರ್‌ ಎರಡು ದಿನ ಕ್ಷೇತ್ರದಲ್ಲೇ ಬೀಡುಬಿಟ್ಟು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂ­ಬಿ­­­ಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಒಂದು ಡಜನ್‌ಗೂ ಹೆಚ್ಚು ಸಚಿವರು, ಶಾಸ­ಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದು, ಆಯಾ ಜಾತಿಯವರನ್ನು ಮುಂದೆ ಬಿಟ್ಟು ಮತದಾರರನ್ನು ಸೆಳೆ­ಯುವ ಕಾರ್ಯದಲ್ಲಿ ತೊಡಗಿದ್ದಾರೆ.

‘ರಾಜ್ಯದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದು ಮತದಾರರ ಮನಸ್ಸು ಬದಲಿ­ಸುವ ಪ್ರಯತ್ನ ಮಾಡುತ್ತಿದ್ದಾರೆ.

ಜಾತಿವಾರು ಲೆಕ್ಕಾಚಾರ: ಯಡಿ­ಯೂ­ರಪ್ಪ ಕುಟುಂಬದ ವೋಟ್‌ ಬ್ಯಾಂಕ್‌ಗೆ ನೇರ­ವಾಗಿ ಕೈಹಾಕಿರುವ ಕಾಂಗ್ರೆಸ್‌, ಕ್ಷೇತ್ರ­ದಲ್ಲಿನ ಅಹಿಂದ ಬುಟ್ಟಿಯನ್ನು ಗಟ್ಟಿಯಾಗಿ ಹೆಣೆಯುತ್ತಿದೆ. ಕ್ಷೇತ್ರದ 1.89 ಲಕ್ಷ ಮತದಾರರಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಂತರ ಪರಿಶಿಷ್ಟರು, ಮುಸ್ಲಿ­ಮರು ಹಾಗೂ ಇತರೆ ಹಿಂದುಳಿದ ವರ್ಗ­ದವರು ಇದ್ದಾರೆ.

ಕಾಂಗ್ರೆಸ್‌, ಲಿಂಗಾಯತೇತರ ಮತ­ದಾ­­ರರನ್ನು ಒಟ್ಟುಗೂಡಿಸಿ ಬಲ ವೃದ್ಧಿಸಿ­ಕೊಳ್ಳುವ ತಂತ್ರಗಾರಿಕೆ ಮಾಡುತ್ತಿದೆ. ಇದಕ್ಕೆ ಪ್ರತಿತಂತ್ರ ಮಾಡುತ್ತಿರುವ ಬಿಜೆಪಿ, ಪ್ರತ್ಯೇಕವಾಗಿ ಸಣ್ಣಸಣ್ಣ ಜಾತಿಗಳ ಮುಖಂಡರ ಸಭೆ ನಡೆಸಿ ಹಿಂದಿನ ‘ಋಣಭಾರ’ ನೆನಪಿಸುತ್ತಿದೆ.

ಕ್ಷೇತ್ರದಲ್ಲಿ ಯಡಿಯೂರಪ್ಪ ಲಿಂಗಾ­ಯ­ತರ ಪ್ರಶ್ನಾತೀತ ನಾಯಕ. ಅಂತಹ ನಾಯಕತ್ವಕ್ಕೆ ಸವಾಲು ಎಸೆದಿರುವ ಕಾಂಗ್ರೆಸ್‌, ಇದೊಂದು ಬಾರಿ ಲಿಂಗಾ­ಯತ ಸಮುದಾಯಕ್ಕೇ ಸೇರಿದ ತನ್ನ ಅಭ್ಯರ್ಥಿ ಶಾಂತವೀರಪ್ಪ ಗೌಡ ಅವರ ಕೈ ಹಿಡಿಯುವಂತೆ ಮತದಾರರನ್ನು ಕೋರು­ತ್ತಿದೆ. ಕೆಲ ಮುಖಂಡರು, ಲಿಂಗಾ­ಯತ­ರಲ್ಲೇ ಬಹುಸಂಖ್ಯಾ­ತರಾ­ಗಿರುವ ‘ಸಾದರ’ ಉಪ ಜಾತಿಗೆ ಸೇರಿದ ಶಾಂತ­ವೀರಪ್ಪ ಅವರಿಗೆ ಅವಕಾಶ ಮಾಡಿಕೊಡಿ ಎಂದು ‘ಒಳಪಂಗಡಗಳ ಅಸ್ತ್ರ’ ಬಿಡುತ್ತಿದ್ದಾರೆ.

‘ಬಿದಾಯಿ ಯೋಜನೆ’ ವಿರೋಧಿಸಿ ಬೆಂಗಳೂರಿನಲ್ಲಿ ಯಡಿಯೂರಪ್ಪ ಹಿಂದೆ ನಡೆಸಿದ ಧರಣಿಯನ್ನೇ ಅಸ್ತ್ರ ಮಾಡಿ­ಕೊಂಡಿ­­ರುವ ಕಾಂಗ್ರೆಸ್‌, ಯಡಿ­ಯೂ­ರಪ್ಪ ಮುಸ್ಲಿಮರ ವಿರೋಧಿ ಎಂದು ಬಿಂಬಿ­ಸುವ ಪ್ರಯತ್ನ ಮಾಡು­ತ್ತಿದೆ. ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಕಾಂಗ್ರೆಸ್‌ ವಶದಲ್ಲಿದ್ದು, ಅಧ್ಯಕ್ಷ, ಉಪಾ­­­­ಧ್ಯಕ್ಷರು ಮುಸ್ಲಿಂ ಸಮುದಾಯಕ್ಕೆ ಸೇರಿ­ರುವುದು ತೊಗರ್ಸಿ, ಶಿರಾಳಕೊಪ್ಪ ಭಾಗ­ದಲ್ಲಿ ಅನುಕೂಲಕರ ವಾತಾ­ವ­ರಣ ಕಲ್ಪಿಸಬಹುದೆಂಬ ಲೆಕ್ಕಾಚಾರವಿದೆ.

ಬಿಜೆಪಿಗೆ ಕಾರ್ಯಕರ್ತರ ಪಡೆ
ಬಿಜೆಪಿಯ ಮುಖ್ಯ ಶಕ್ತಿ ಇರುವುದು ಅದರ ಕಾರ್ಯಕರ್ತರ ಪಡೆಯಲ್ಲಿ. ಇಷ್ಟು ವರ್ಷ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ಬಿಜೆಪಿ ಮುಂದಿಟ್ಟಿದೆ. ಸಂಡದಲ್ಲಿ ಕೈಗಾರಿಕಾ ವಲಯ ಸ್ಥಾಪನೆ, ಹುಚ್ಚರಾಯಪ್ಪ ಕೆರೆ ಅಭಿವೃದ್ಧಿ, ರಸ್ತೆಗಳು, ಗ್ರಾಮಗಳಿಗೆ ಕಲ್ಪಿಸಿದ ಮೂಲ ಸೌಕರ್ಯಗಳನ್ನು ಮತದಾರರ ಮುಂದಿಡುತ್ತಿದ್ದಾರೆ. ಯುವಕರನ್ನು ಸೆಳೆಯುವಾಗ ಮೋದಿ ಜಪ ಬಳಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ಮುಖಂಡರು ಯಡಿಯೂರಪ್ಪ ಕಾಲದಲ್ಲಿನ ಭ್ರಷ್ಟಾಚಾರವನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಹಿಂದುಳಿದವರ ಸಾಲಮನ್ನಾ, ಬಿದಾಯಿ ಯೋಜನೆಗಳ ಫಲವನ್ನು ಮತವಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯ ಸೋಲು ಈ ಬಾರಿ ಅನುಕಂಪವಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ.
ಸ್ಥಳೀಯ ಮುಖ್ಯ ಸಮಸ್ಯೆಗಳಾದ ಬಗರ್‌ಹುಕುಂ, ಅಡಿಕೆ ಬೆಳೆ ಬಗ್ಗೆ  ಪ್ರಸ್ತಾಪಿಸಿ, ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಮತ ಸೆಳೆಯಲು ಎರಡೂ ಪಕ್ಷಗಳು ಯತ್ನ ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT