ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುಚಕ್ರವೂ ಸಂತಾನೋತ್ಪತ್ತಿಯೂ

ಅಂಕುರ 98
Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಅಂಡಾಣು ಬಿಡುಗಡೆಯ ಲಕ್ಷಣಗಳೇನು?
ಒಂದು ವೇಳೆ ನಿಮಗೆ ನಿಯಮಿತವಾಗಿ ಋತುಚಕ್ರ ಕಂಡು ಬರುತ್ತಿದ್ದಲ್ಲಿ, ಅಂದರೆ ಮುಂದಿನ ಋತುಚಕ್ರವನ್ನು ನೀವು ಹೆಚ್ಚುಕಮ್ಮಿ ನಿಖರವಾಗಿ ಊಹಿಸುವಂತಾಗಿದ್ದಲ್ಲಿ ಅದು ಅಂಡಾಣು ಬಿಡುಗಡೆಯ ಪ್ರಮುಖ ಲಕ್ಷಣವೆಂದು ಹೇಳಬಹುದಾಗಿದೆ. ಕೆಲವೊಮ್ಮೆ ಅಂಡಾಣು ಬಿಡುಗಡೆಯಾಗುವಾಗ ಮಹಿಳೆಯರು ಅದನ್ನು ಅನುಭವಿಸಬಲ್ಲರು. ಅವರ ಒಳ ಉಡುಪಿನಲ್ಲಿ ಸಣ್ಣ ಕಲೆಗಳು ಕಾಣಿಸಿಕೊಳ್ಳಬಹುದು. ಡಿಂಭನಾಳದಲ್ಲಿ ಸಣ್ಣದಾಗಿ ಸೆಳೆತ ಕಾಣಿಸಿಕೊಳ್ಳಬಹುದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದಾದ ಆಸಕ್ತಿ ಹೆಚ್ಚಾಗಬಹುದು. ಸ್ತನಗಳು ಗಡುಸಾಗಬಹುದು. ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಇನ್ನೊಂದು ಪ್ರಮುಖ ಲಕ್ಷಣವೆಂದರೆ ಗರ್ಭಕಂಠದ ಸ್ರಾವ ಲೊಳೆಲೊಳೆಯಾಗಿರುತ್ತದೆ. ಅದರಲ್ಲಿಯೂ ವ್ಯತ್ಯಾಸ  ಕಂಡು ಬರುತ್ತದೆ.

ನಾನು ಅತಿ ಫಲವಂತಿಕೆಯನ್ನು ಅನುಭವಿಸುವುದು ಯಾವಾಗ?
ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಅಂಡಾಣು ಬಿಡುಗಡೆಯ ಕೆಲವು ದಿನಗಳ ಮೊದಲು ಮತ್ತು ಅನಂತರ ಸಂಭೋಗವನ್ನು ನಡೆಸಿ. ಫಾಲಿಕಲ್ (ಸ್ರಾವಕಗ್ರಂಥಿ)ನಿಂದ ಅಂಡಾಣು ಬಿಡುಗಡೆಗೊಂಡ ಬಳಿಕ ಅವು ಕೇವಲ 12ರಿಂದ 24 ಗಂಟೆಗಳಷ್ಟೆ ಉಳಿಯಬಲ್ಲವು.  ಸ್ತ್ರೀಯ ಸಂತಾನೋತ್ಪತ್ತಿ ಅಂಗದಲ್ಲಿ ವೀರ್ಯ ಹಲವು ದಿನಗಳು ಬದುಕಬಲ್ಲವು. ಅಂಡವಿಸರ್ಜನೆಯ ಸಮಯದಲ್ಲಿ ಸಂಭೋಗಕ್ರಿಯೆ ನಡೆದರೆ ಅಂಡ ಬಿಡುಗಡೆಯಾಗುವ ಸಮಯದಲ್ಲಿ ಜೀವಶಕ್ತಿಯುಳ್ಳ ವೀರ್ಯ ಇದ್ದಂತಾಗುವುದು. ಫಲೀಕರಣ ಆಗದಿದ್ದರೆ, ಅಂಡ ದ್ವಾರಬಂಧಕ್ಕೆ ಒಳಗಾಗಿ, ಶರೀರ ಅದನ್ನು ಮತ್ತೆ ಹೀರಿಕೊಳ್ಳುತ್ತದೆ.

ನನಗೆ ಋತುಚಕ್ರವಿಲ್ಲ ಎಂದಾದರೆ ಅಂಡೋತ್ಪತ್ತಿ ನಡೆಯುತ್ತಿಲ್ಲ ಎಂದು ಅರ್ಥವೆ?
ಸಾಮಾನ್ಯವಾಗಿ ಅಂಡೋತ್ಪತ್ತಿ ಮತ್ತು ಋತುಚಕ್ರಕ್ಕೂ ಸಂಬಂಧವಿರುತ್ತದೆ; ಋತುಚಕ್ರ ಇಲ್ಲದಿದ್ದಲ್ಲಿ ಅಂಡೋತ್ಪತ್ತಿ ಕ್ರಿಯೆ ನಡೆಯುವ ಸಾಧ್ಯತೆಯಿಲ್ಲ. ಗರ್ಭಾಶಯದ ಸ್ಕಾರಿಂಗ್‌ನಂಥ ವಿರಳ ಸಂದರ್ಭಗಳಲ್ಲಿ ಸ್ತ್ರೀಗೆ ಅಂಡೋತ್ಪತ್ತಿ ನಡೆಯುತ್ತಿರುತ್ತದೆ, ಆದರೆ ಋತುಚಕ್ರದ ಅನುಭವ ಅವಳಿಗೆ ಇರುವುದಿಲ್ಲ.

ಹಾಗಾದರೆ ನನಗೆ ಸರಿಯಾದ ಋತುಚಕ್ರವಿದೆ ಎಂದರೆ ಅಂಡೋತ್ಪತ್ತಿಯೂ ಆಗುತ್ತಿದೆ ಎಂದೆ?
ಹಾಗೇನಿಲ್ಲ. ಅಂಡೋತ್ಪತ್ತಿ ನಡೆಯದಿದ್ದಾಗಲೂ ಕೆಲವರು ಸ್ತ್ರೀಯರಿಗೆ ಅಂಡಾಶಯದ ರಕ್ತಸ್ರಾವ ಆಗುವುದುಂಟು. ಈ ರೀತಿಯ ರಕ್ರಸ್ರಾವ ಅನಿಯಮಿತವಾಗಿರುತ್ತದೆ. ಇದಕ್ಕೆ ಕಾರಣಗಳೂ ಹಲವು. ಇಂಥ ರಕ್ತಸ್ರಾವ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
ಅಂಡೋತ್ಪತ್ತಿ ಆಗುತ್ತಿದೆಯೆ ಇಲ್ಲವೆ ಎಂಬ

ಗೊಂದಲವಿದ್ದಾಗ, ಅದನ್ನು ನಿಖರವಾಗಿ ತಿಳಿಯುವುದು ಹೇಗೆ?
ಸ್ತ್ರೀಯೊಬ್ಬಳಲ್ಲಿ ಅಂಡೋತ್ಪತ್ತಿಯಾಗುತ್ತಿದೆಯೆ ಇಲ್ಲವೆ ಎಂದು ತಿಳಿಯಲು ಕೆಲವು ಪರೀಕ್ಷೆಗಳಿವೆ. ಋತು ಚಕ್ರದ ಸಮಯದಲ್ಲಿ ದೇಹದ ಕನಿಷ್ಠ ತಾಪಮಾನ ವನ್ನು (ಬೇಸಲ್ ಬಾಡಿ ಟೆಂಪರೇಚರ್) ಪರೀಕ್ಷಿಸುವ ಮೂಲಕ ಅಂಡೋತ್ಪತ್ತಿಯನ್ನು ಗುರುತಿಸಬಹುದು. ಆದರೆ ಈ ಪರೀಕ್ಷೆ ಬೇಸರದಾಯಕ; ಮಾತ್ರವಲ್ಲ, ನಿಖರತೆಯ ಪ್ರಮಾಣವೂ ಕಡಿಮೆ.
ಪ್ರೋಜೆಸ್ಟರೋನ್‌ ಪ್ರಮಾಣವನ್ನು ಗುರುತಿಸುವ ಪರೀಕ್ಷೆಯಿಂದಲೂ ಕಂಡುಕೊಳ್ಳಬಹುದು. ಯೋನಿನಾಳವನ್ನು ಪರೀಕ್ಷಿಸುವ ಟ್ರ್ಯಾನ್ಸ್‌–ವೇಜಿನಲ್‌ ಅಲ್ಟ್ರಾಸೌಂಡ್‌ನಿಂದಲೂ ಅಂಡಗಳ ಬೆಳವಣಿಗೆಯನ್ನು ಕಂಡುಹಿಡಿಯಬಹುದು. ಈಗ ಹೆಚ್ಚಿನ ಸ್ತ್ರೀಯರು ‘ಹೋಂ ಆ್ಯವುಲೇಷನ್‌ ಪ್ರೆಡಿಕ್ಟರ್‌ ಕಿಟ್‌’ (ಓಪಿಕೆ)ಗಳ ಸಹಾಯದಿಂದ ಮನೆಯಲ್ಲಿಯೇ ಅಂಡೋತ್ಪತ್ತಿಯ ಚಿಹ್ನೆಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಸಾಧನ ಮೂತ್ರದಲ್ಲಿರುವ ಎಲ್‌ಎಚ್‌ನ್ನು ಪತ್ತೆ ಮಾಡುವ ಮೂಲಕ ಅಂಡೋತ್ಪತ್ತಿಯ ಸುಳಿವನ್ನು ನೀಡುತ್ತದೆ. ಇವಲ್ಲದೆ ವೈದ್ಯರು ಮತ್ತೂ ಹಲವು ಪರೀಕ್ಷೆಗಳ ಮೂಲಕ ಅಂಡೋತ್ಪತ್ತಿಯ ಖಚಿತತೆಯನ್ನು ನಿರ್ಧರಿಸಬಲ್ಲರು.

ಅಂಡೋತ್ಪತ್ತಿಗೆ ಕಾರಣವಾಗಬಲ್ಲ ಚಿಕಿತ್ಸೆಗಳಿವೆಯೆ?
ಅಂಡೋತ್ಪತ್ತಿಗೆ ಅಡ್ಡಿಯಾಗಿರುವ ಅಂಶಗಳ ಮೇಲೆ ಚಿಕಿತ್ಸೆ ಅವಲಂಬಿತವಾಗಿರುತ್ತದೆ. ಹಲವು ಸಂದರ್ಭಗಳಲ್ಲಿ ಅಂಡೋತ್ಪತ್ತಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಔಷಧಗಳು ಮತ್ತು ಫಲೀಕರಣ ಚಿಕಿತ್ಸೆಯ (ಫರ್ಟಿಲಿಟಿ ಟ್ರೀಟ್‌ಮೆಂಟ್) ನಿವಾರಿಸಬಹುದು. ತಜ್ಞವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT