ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಬಿರುಕು ಬಯಲಿಗೆ

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯ ನಂತರ ಆಮ್‌ ಆದ್ಮಿ ಪಕ್ಷದ ನಾಯಕರಲ್ಲಿ  ಬೂದಿ ಮುಚ್ಚಿದ ಕೆಂಡದಂತಿದ್ದ ವೈಮನಸ್ಸು ಈಗ ಸ್ಫೋಟಗೊಂಡಿದೆ.

ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಪಕ್ಷದ ಮುಂದಿನ ನಡೆ ಕುರಿತು ಚರ್ಚಿಸಲು ಶುಕ್ರವಾರ  ಕರೆಯಲಾದ  ರಾಷ್ಟ್ರೀಯ ಕಾರ್ಯಕಾರಿಣಿ ನಾಯಕರ ಕಚ್ಚಾಟ, ಆರೋಪ ಮತ್ತು  ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು.

ಪಕ್ಷದ ಪ್ರಮುಖ ನಾಯಕರಾದ ಯೋಗೇಂದ್ರ ಯಾದವ್‌ ಮತ್ತು ಮನೀಶ್‌ ಸಿಸೋಡಿಯಾ ನಡುವೆ ಆರಂ­ಭ­­ವಾದ ಮಾತಿನ ಚಕಮಕಿ ಪಕ್ಷ­ದೊಳ­ಗಿನ ಆಂತರಿಕ ತಿಕ್ಕಾಟವನ್ನು ಬಹಿರಂಗ­ಗೊಳಿಸಿತು. 

‘ವ್ಯಕ್ತಿ ಆರಾಧನೆಗೆ ಪಕ್ಷ ಬಲಿ­ಯಾಗುತ್ತಿದೆ’ ಎಂದು ಯಾದವ್‌ ಅವರು ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ­ದರು. ಇದರಿಂದ ಕೆರಳಿದ ಕೇಜ್ರಿವಾಲ್‌ ಆಪ್ತ ಸಿಸೋಡಿಯಾ, ‘ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗ­ಗೊಳಿಸು­ತ್ತಿ­ದ್ದೀರಿ’ ಎಂದು  ತಿರುಗೇಟು ನಿಡಿದರು.

ಒಂದು ಹಂತದಲ್ಲಿ ನಾಯಕರ ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಟೀಕೆ­­ಗಳಿಂದ  ಸಭೆ  ಗೊಂದಲದ ಗೂಡಾ­ಯಿತು. ಮತ್ತೊಂದೆಡೆ, ಇವರಿ­ಬ್ಬರು ಪಕ್ಷದ ನಾಯಕತ್ವ ವೈಖರಿ ಕುರಿತು ಬರೆದಿರುವ ಪತ್ರಗಳು ಕೂಡ ಶುಕ್ರವಾರ ಮಾಧ್ಯಮ­ಗಳಿಗೆ ಸೋರಿಕೆ­ಯಾಗಿ ಚರ್ಚೆಗೆ ಗ್ರಾಸವಾಗಿದೆ.

ಕೇಜ್ರಿವಾಲ್‌ ವಿರುದ್ಧ ಆರೋಪ ದಾಖಲು: ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಿರುದ್ಧ ಮಾಡಿ­ರುವ ಭ್ರಷ್ಟಾ­­­ಚಾರ ಆರೋ­­ಪದ ಹೇಳಿಕೆಯನ್ನು ಹಿಂದಕ್ಕೆ ಪಡೆ­­ಯಲು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿ­ವಾಲ್‌ ನಿರಾಕರಿಸಿದ್ದಾರೆ. ಈ ವಾಗ್ವಾ­ದ­ಗಳನ್ನು ಕೊನೆಗಳಿಸಿ, ಪ್ರಕರಣ­ವನ್ನು ಸೌಹಾ­ರ್ದ­ಯುತವಾಗಿ ಪರಿಹರಿಸಿ­ಕೊಳ್ಳಿ ಎಂದು ದೆಹಲಿಯ ನ್ಯಾಯಾ­ಲಯ­­ವೊಂದು ನೀಡಿದ ಸಲಹೆ­ಯನ್ನು ಕೇಜ್ರಿವಾಲ್‌ ನಿರಾಕರಿಸಿದರು.

ಹೀಗಾಗಿ ದೆಹಲಿಯ ಮೆಟ್ರೊ­ಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಗೋಮತಿ ಮನೋಚ ಅವರು ಅಪರಾಧ ದಂಡ ಸಂಹಿತೆಯ 251ನೇ ಸೆಕ್ಷನ್‌ ಪ್ರಕಾರ ಕೇಜ್ರಿವಾಲ್‌ ಅವರ ವಿರುದ್ಧ ಮಾನ­ನಷ್ಟ ಆರೋಪ ದಾಖಲಿಸಿದ್ದಾರೆ. ಗಡ್ಕರಿ ಮತ್ತು ಅವರ ಪರವಾಗಿರುವ ಸಾಕ್ಷಿ­­ಗಳನ್ನು ದಾಖಲು ಮಾಡಲು ಆಗಸ್ಟ್‌ 2ನೇ ತಾರೀಕನ್ನು ನಿಗದಿ ಮಾಡಿದ್ದಾರೆ.

ನಿತಿನ್‌ ಗಡ್ಕರಿ ವಿರುದ್ಧ ಜ.30ರಂದು ಕೇಜ್ರಿವಾಲ್‌ ಭ್ರಷ್ಟಾ­ಚಾರದ ಆರೋಪ ಮಾಡಿದ್ದರು. ‘ಗಡ್ಕರಿ ಭ್ರಷ್ಟ ರಾಜ­ಕಾರಣಿ­­ಯಾ­ಗಿದ್ದು, ಮತ ಹಾಕುವ ಮುನ್ನ ಯೋಚಿಸಿ’ ಎಂದು ಕೇಜ್ರಿವಾಲ್‌ ಹೇಳಿಕೆ ನೀಡಿದ್ದರು. ಕೋರ್ಟ್‌ ಆರೋಪ ದಾಖ­­ಲಿಸಿ­ದ ನಂತರ ಕೇಜ್ರಿ­ವಾಲ್‌ ಪ್ರಕ­ರ­ಣ­­ದಲ್ಲಿ ತಮ್ಮ­ದೇನೂ ತಪ್ಪಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT