ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಅಧ್ಯಕ್ಷತೆಗೆ ಅಡ್ವಾಣಿ ಒಲವು

ಹಿರಿಯರಿಗೆ ಸ್ಥಾನ: ಆರ್‌ಎಸ್‌ಎಸ್‌ ಜೊತೆ ರಾಜನಾಥ್‌ ಚರ್ಚೆ
Last Updated 15 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ತೀರುವ ವಿಶ್ವಾಸದಲ್ಲಿರುವ ಬಿಜೆಪಿಯ ಹಿರಿಯ ನಾಯಕರು ಗುರುವಾರ ಆರ್‌ಎಸ್‌ಎಸ್‌ ವರಿಷ್ಠರ ಜತೆ ಮಾತುಕತೆ ನಡೆಸಿ, ‘ಹೊಸ ಅಧಿಕಾರ ಸೂತ್ರ’ ರಚಿಸುವ ಕುರಿತು ಪ್ರಮುಖವಾಗಿ ಚರ್ಚಿಸಿದರು. 

ಇದೇ ವೇಳೆ, ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.­ಅಡ್ವಾಣಿ ಮತ್ತಿತರರಿಗೆ ಯಾವ ಹೊಣೆಗಾರಿಕೆ ನೀಡಬೇಕು ಎಂಬುದು ನಾಯಕರ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ಮತ ಎಣಿಕೆಯ ಮುನ್ನಾದಿನ, ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರು ಅಡ್ವಾಣಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು; ಅಡ್ವಾಣಿ ಅವರ ಮುಂದೆ, ಅವರನ್ನು ಲೋಕಸಭಾ ಸ್ಪೀಕರ್‌ ಆಗಿ ನೇಮಿ­ಸುವ ಪ್ರಸ್ತಾವವನ್ನು ಮುಂದಿಟ್ಟರು ಎನ್ನಲಾಗಿದೆ.

ಆದರೆ ಮಾಜಿ ಉಪ ಪ್ರಧಾನಿ ಅಡ್ವಾಣಿ ಅವರು ಇದನ್ನು ತಿರಸ್ಕರಿಸಿದ್ದಾರೆ; ರಾಜಕೀಯ ಪಾತ್ರ ನಿರ್ವ­ಹಿ­ಸಲು ಬಯಸಿರುವ ಅವರು ಎನ್‌ಡಿಎ ಕೂಟದ ಅಧ್ಯಕ್ಷ­ರಾಗುವ ಇಂಗಿತ ಹೊರಹಾಕಿದ್ದಾರೆ ಎಂದೂ ಹೇಳ­ಲಾಗಿದೆ. ಬಿಜೆಪಿಯ ಹಿರಿಯರು ಮತ್ತು ಆರ್‌ಎಸ್‌ಎಸ್‌ ಪ್ರಮುಖರು ಬೆಳಿಗ್ಗೆ ರಾಜನಾಥ್‌ ಸಿಂಗ್‌ ಅವರ ಮನೆಯಲ್ಲಿ ಸಭೆ ನಡೆಸಿದರು.

ಎರಡು ಗಂಟೆ ಕಾಲ ನಡೆದ ಈ ಸಭೆಯಲ್ಲಿ, ಬಿಜೆಪಿಯಲ್ಲಿರುವ ಆರ್ಎಸ್‌ಎಸ್‌ ಹಿನ್ನೆಲೆಯ ಸುರೇಶ್‌ ಸೋನಿ, ರಾಮ್‌ಲಾಲ್‌, ಸಾವಧಾನ್‌ ಸಿಂಗ್‌ ಮತ್ತು ವಿ.ಸತೀಶ್‌ ಅವರು ಹಾಜರಿದ್ದರು. ನಂತರ, ಮೋದಿ ಅವರ ಆಪ್ತ ಅಮಿತ್‌ ಷಾ ಅವರೂ ಸಭೆಯನ್ನು ಸೇರಿಕೊಂಡರು.

ನಿರೀಕ್ಷೆಯಂತೆ ಪಕ್ಷ ಅಧಿಕಾರಕ್ಕೆ ಬಂದರೆ, ಸರ್ಕಾರ­ದಲ್ಲಿ ಹಾಗೂ ಪಕ್ಷದ ಸಂಘಟನಾ ವ್ಯವಸ್ಥೆ­ಯಲ್ಲಿ ಯಾರ್‍ಯಾರಿಗೆ ಯಾವ್‍ಯಾವ ಹೊಣೆ ನೀಡಬೇಕೆಂಬುದರ ಸುತ್ತವೇ ಪ್ರಮುಖವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಮುಖ್ಯವಾಗಿ, ಮುರಳಿ ಮನೋಹರ ಜೋಷಿ ಮತ್ತು ಸುಷ್ಮಾ ಸ್ವರಾಜ್‌ ಅವರಿಗೆ ಯಾವ ಹೊಣೆಗಾರಿಕೆ ನೀಡಲಾಗುವುದೆಂಬ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ. ಆರಂಭ­ದಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ­ಯಾಗಿ ಬಿಂಬಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸುಷ್ಮಾ ಸ್ವರಾಜ್‌ ಮತ್ತು ಜೋಷಿ  ಅವರು ‘ಕಾದು ನೋಡುವ’ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT