ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಸ್ಪರ್ಧೆಯತ್ತ ಪಕ್ಷಗಳ ಒಲವು

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ
Last Updated 28 ಅಕ್ಟೋಬರ್ 2014, 9:52 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 87 ಸ್ಥಾನಗಳಿಗೆ ಐದು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ  ನ್ಯಾಶನಲ್‌ ಕಾನ್ಫೆರೆನ್ಸ್‌ (ಎನ್‌ಸಿ), ಬಿಜೆಪಿ, ಪಿಡಿಪಿ  (ಪೀಪಲ್ಸ್ ಡೆಮಾಕ್ರಟಿಕ್‌ ಪಾರ್ಟಿ) ಹಾಗೂ ಜೆಕೆಎನ್‌ಪಿಪಿ ಸೇರಿದಂತೆ ಬಹುತೇಕ ಪಕ್ಷಗಳು ಏಕಾಂಗಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿವೆ.

ಮೊದಲ ಹಂತದ ಚುನಾವಣೆಗೆ ಚುನಾವಣಾ ಆಯೋಗವು ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಆದರೂ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನಾಗಲಿ ಅಥವಾ ಚುನಾವಣಾ ಪ್ರಣಾಳಿಕೆಯನ್ನಾಗಲಿ ಈವರೆಗೂ ಪ್ರಕಟಿಸಿಲ್ಲ.

ಬಿಜೆಪಿ, ಬಿಎಸ್‌ಪಿ, ಎನ್‌ಸಿಪಿಗಳಂತಹ ರಾಷ್ಟ್ರೀಯ ಪಕ್ಷಗಳು ಏಕಾಂಗಿಯಾಗಿ ಚುನಾವಣೆ ಎದುರಿಸುವ ಸುಳಿವು ನೀಡಿವೆ. ಆದರೆ ನ್ಯಾಷನಲ್‌ ಕಾಂಗ್ರೆಸ್ ಅಂಗಪಕ್ಷವಾಗಿರುವ ಕಾಂಗ್ರೆಸ್‌ ಮಾತ್ರ ಚುನಾವಣಾ ಪೂರ್ವ ಮೈತ್ರಿಯ ಬಗೆಗೆ ಮೌನ ಮುರಿದಿಲ್ಲ.

ಮತ್ತೊಂದೆಡೆ, ನ್ಯಾಷನಲ್‌ ಕಾಂಗ್ರೆಸ್‌, ಪಿಡಿಪಿ ಹಾಗೂ ಜೆಕೆಎನ್‌ಪಿಪಿಯಂತಹ ಪ್ರಾದೇಶಿಕ ಪಕ್ಷಗಳೂ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿವೆ.

ಚುನಾವಣಾ ಪೂರ್ವ ಮೈತ್ರಿಯನ್ನು ತಳ್ಳಿಹಾಕಿರುವ ಬಿಜೆಪಿ, ಎಲ್ಲಾ 87 ಸ್ಥಾನಗಳಲ್ಲಿಯೂ ಸ್ಪರ್ಧಿಸುವುದಾಗಿ ಸೋಮವಾರವಷ್ಟೇ ಸ್ಪಷ್ಟಪಡಿಸಿದೆ.

‘ಯಾವುದೇ ರಾಜಕೀಯ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ನಮಗೆ 44ಕ್ಕಿಂತ ಹೆಚ್ಚಿನ ಸೀಟುಗಳು ಲಭಿಸಲಿವೆ’ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಿಜೆಪಿ ಉಸ್ತುವಾರಿ ಅವಿನಾಶ್ ರೈ ಖನ್ನಾ ಅವರು ಸೋಮವಾರವಷ್ಟೇ ಹೇಳಿದ್ದರು.

 ‘ಚುನಾವಣಾ ಪೂರ್ವ ಮೈತ್ರಿಯಿಲ್ಲದೇ ಏಕಾಂಗಿಯಾಗಿ ಚುನಾವಣೆ ಎದುರಿಸಲಿದ್ದೇವೆ’ ಎಂದು ಬಿಎಸ್‌ಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥ ತುಲಸಿದಾಸ್‌ ತಿಳಿಸಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ ಅಂಗ ಪಕ್ಷವಾಗಿದ್ದ ಎನ್‌ಸಿಪಿ ಕೂಡ ಸ್ವತಂತ್ರವಾಗಿ ಚುನಾವಣೆ ಎದುರಿಸುವುದಾಗಿ ಹೇಳಿದೆ.

‘ರಾಜ್ಯದಲ್ಲಿ ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸಲಿದ್ದೇವೆ. ಯಾವುದೇ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿಯಿಲ್ಲ’ ಎಂದು ಎನ್‌ಸಿಪಿ ರಾಜ್ಯ ಘಟಕದ ಮುಖ್ಯಸ್ಥ ಠಾಕೂರ್  ರಂಧೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.‌‌

ನವೆಂಬರ್‌ 25ರಿಂದ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT