ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನ್ರಿ... ನಿದ್ದೆ ಬಂತಾ?

Last Updated 26 ಏಪ್ರಿಲ್ 2016, 19:58 IST
ಅಕ್ಷರ ಗಾತ್ರ

ರಾತ್ರಿ ಸರಿಯಾಗಿ, ನಿಶ್ಶಬ್ದವಾಗಿ ಮಲಗಿ ನಿದ್ರಿಸುವುದರ ಮಹತ್ವ. ನಿದ್ರೆ ಸರಿಯಾಗಿಲ್ಲದಿದ್ದರೆ ಬಹಳ ಕಿರಿಕಿರಿಯಾಗುತ್ತದೆ. ಅಂತಹ ವ್ಯಕ್ತಿಗಳು ಅತ್ಯಂತ ಮುಂಗೋಪಿಗಳಾಗಿರುತ್ತಾರೆ. ರಾತ್ರಿ ಗುಣಮಟ್ಟದ ನಿದ್ರೆಯಾಗುತ್ತಿದ್ದರೆ ಅಂತಹ ವ್ಯಕ್ತಿಯ ಜೀವನ ಶೈಲಿ ಆರೋಗ್ಯಕರವಾಗಿರುತ್ತದೆ. ಬೆಳಿಗ್ಗೆ ಉಲ್ಲಾಸ ತುಂಬಿರುತ್ತದೆ, ಹೃದಯಕ್ಕೆ ಮತ್ತು ತೂಕ ಕಾಪಾಡಿಕೊಳ್ಳಲು ಉತ್ತಮ. ಮನಸ್ಸು ಚುರುಕಾಗಿರುತ್ತದೆ.  ಉತ್ತಮ ನಿದ್ದೆಯಿಂದ ವ್ಯಕ್ತಿಯ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆಯಂತೆ! ರೋಗನಿರೋಧಕ ಕ್ರಿಯೆ, ಚಯಾಪಚಯ, ನೆನಪು ಮತ್ತಿತರ ಶರೀರದ ಮುಖ್ಯ ಕ್ರಿಯೆಗಳಲ್ಲಿ ನಿದ್ರೆಯು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ನಿದ್ರೆ ಏಕೆ ಮುಖ್ಯ?
ಇಂದಿನ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಪೈಪೋಟಿ ಅತಿಯಾಗಿದೆ. ನಿದ್ರೆಯನ್ನು ‘ಸಮಯ ಹಾಳು’ ಎಂದು ಭಾವಿಸುವವರೂ ಇದ್ದಾರೆ. ಅನೇಕರು ರಾತ್ರಿ ನಿದ್ರಿಸಬೇಕಾದ ವೇಳೆಯನ್ನು ಟಿವಿ ವೀಕ್ಷಣೆ, ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಒಳ್ಳೆಯ ನಿದ್ರೆ ಮನಸ್ಸು-ಮಿದುಳನ್ನು ಸಮರ್ಥವಾಗಿರಿಸುತ್ತದೆ. ವಿವಿಧ ಅಧ್ಯಯನಗಳು ತೋರಿರುವಂತೆ ರಾತ್ರಿಯ ಒಳ್ಳೆಯ ನಿದ್ರೆ ಕಲಿಕೆ/ಗ್ರಹಿಸುವ ಸಾಮರ್ಥ್ಯಗಳನ್ನು ಉತ್ತಮಪಡಿಸುತ್ತದೆ.
ನಿಶ್ಶಬ್ದ ನಿದ್ರೆ ಶರೀರ- ಮನಸ್ಸುಗಳ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ  ಮುಖ್ಯ ಪಾತ್ರ ವಹಿಸುತ್ತದೆ. ಒಳ್ಳೆಯ ನಿದ್ರೆಯಾದಾಗ ಶರೀರ ಒಂದು ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಇದು ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಹಜ ಬೆಳವಣಿಗೆಯನ್ನು ಪ್ರವರ್ತಿಸುತ್ತದೆ. ಸರಿಯಾದ ಭಂಗಿಯಲ್ಲಿ ಮಲಗಿದರೆ ಬೆನ್ನು ಮೂಳೆಯ ಚಕ್ರಗಳು ಪುನರ್ಜಲೀಕರಣಗೊಂಡು ದಿನದ ಶ್ರಮವನ್ನು ಕಳೆದುಕೊಳ್ಳುತ್ತವೆ ಮತ್ತು ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ಮರಳಿ ಪಡೆಯುತ್ತದೆ.

ನಿದ್ರೆಯ ಬಗೆಗಿನ ಮತ್ತೊಂದು ಆಸಕ್ತಿಕರ ಸಂಗತಿ ಎಂದರೆ ಸಮತೋಲನ ಆಹಾರ, ವ್ಯಾಯಾಮ ಮತ್ತು ಒಳ್ಳೆಯ ನಿದ್ರೆಯಿದ್ದರೆ ತೂಕ ಕಡಿಮೆಯಾಗುತ್ತದೆ. 7ರಿಂದ 8 ತಾಸುಗಳ ಒಳ್ಳೆಯ ನಿದ್ರೆಯಾದರೆ ತೂಕ ನಿಯಂತ್ರಣ ಅಥವಾ ಕಡಿಮೆಯೂ ಆಗಬಹುದು. ನಿದ್ರೆಯಲ್ಲಿ ಸ್ನಾಯುಗಳು ನಿರ್ಮಾಣವಾಗುತ್ತವೆ. ನಮ್ಮ ಶರೀರ ದುರಸ್ತಿಗೊಳ್ಳುತ್ತದೆ ಹಾಗೂ ಪುನಶ್ಚೇತನಗೊಳ್ಳುತ್ತದೆ.

ನಿದ್ರಾಹೀನತೆಯಿಂದ ಮನಸ್ಸು ಸರಿಯಿರುವುದಿಲ್ಲ, ಏಕಾಗ್ರತೆ ಇರುವುದಿಲ್ಲ; ರೋಗನಿರೋಧಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ಕಾಯಿಲೆಗಳಿಗೆ ತುತ್ತಾಗಬಹುದು; ನಮ್ಮ ಪ್ರತಿಸ್ಪಂದನಾ ಸಾಮರ್ಥ್ಯ ಕುಗ್ಗಬಹುದು. ಬೆಳವಣಿಗೆ ಮತ್ತು ದುರಸ್ತಿ ಹಾರ್ಮೋನುಗಳು ನಿದ್ರೆಯಲ್ಲಿ ಮಾತ್ರವೇ ಬಿಡುಗಡೆಯಾಗುತ್ತವೆ.

ಇನ್ನಷ್ಟು ಪರಿಣಾಮಗಳು
ಮಂಪರು ಸ್ಥಿತಿ ಇರುತ್ತದೆ, ಬೇಗ ಆಯಾಸವಾಗುತ್ತದೆ; ಸೋಮಾರಿತನ, ಏಕಾಗ್ರತೆಯ ನಷ್ಟ, ನೆನಪು ಕಡಿಮೆಯಾಗುತ್ತದೆ. ನಿರ್ಣಯಗಳನ್ನು ಕೈಗೊಳ್ಳಲು ಆಗುವುದಿಲ್ಲ.

ರಾಷ್ಟ್ರೀಯ ನಿದ್ರಾ ಸಂಸ್ಥೆಯು ನಡೆಸಿದ ಒಂದು ಜನಾಭಿಪ್ರಾಯ ಸಂಗ್ರಹಣೆ ಪ್ರಕಾರ ಅತಿಯಾದ ಆಯಾಸದಿಂದ ನಮ್ಮ ಲೈಂಗಿಕ ಜೀವನ ಚೆನ್ನಾಗಿಲ್ಲ ಎಂದು 26ರಷ್ಟು ಜನರು ಉತ್ತರಿಸಿದ್ದಾರೆ.

ನಿದ್ರಾಹೀನತೆ ಮತ್ತು ಲೈಂಗಿಕ ಹಾರ್ಮೋನುಗಳಿಗೆ ಸಂಬಂಧ ಇದೆಯೆಂದು ಸಾಕಷ್ಟು ಪುರಾವೆಗಳು ದೊರೆತಿವೆ.

ನಿದ್ರಾಹೀನತೆಯಿಂದ ತೀವ್ರ ಖಿನ್ನತೆ ಆಗಬಹುದು. ಅನೇಕ ವಿಜ್ಞಾನಿಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಖಿನ್ನತೆ ಅನುಭವಿಸುತ್ತಿರುವವರಲ್ಲಿ ಬಹುಪಾಲು ರಾತ್ರಿ ಹೊತ್ತು 6ಕ್ಕಿಂತ ಕಡಿಮೆ ತಾಸುಗಳು ನಿದ್ರಿಸುತ್ತಾರೆ. ಇನ್‌ಸೊಮ್ನಿಯ ನಿದ್ರೆಯ ಅಭಾವದ ಒಂದು ಕಾಯಿಲೆ. ಇದಕ್ಕೂ ಖಿನ್ನತೆಗೂ ಆಪ್ತ ಸಂಬಂಧವಿದೆ. ವಾಸ್ತವವಾಗಿ ಖಿನ್ನತೆಯ ಮೊದಲ ಹಂತವೇ ನಿದ್ರಾಭಾವ ಸ್ಥಿತಿ. ಇನ್‌ಸೊಮ್ನಿಯದಿಂದ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. -ತೂಕ ಹೆಚ್ಚುವುದು/ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಹೃದಯ-ನಾಳೀಯ ಸಮಸ್ಯೆಗಳು, ಸ್ಟ್ರೋಕ್‌ ಕೂಡ ಆಗಬಹುದು.

ಸ್ಲೀಪ್ ಆಪ್ನಿಯ ಅಥವಾ ಗೊರಕೆಗೆ ಹಲವಾರು ಕಾರಣಗಳಿವೆ. ಉದಾಹರಣೆಗೆ: ಅತಿಯಾದ ಮದ್ಯಪಾನ, ಧೂಮಪಾನ, ಜಡತ್ವ. ಮಲಗಿದ್ದಾಗ ದೀರ್ಘವಾಗಿ ಉಸಿರಾಡದಿರು ವುದು/ ಅನಿಯಮಿತವಾಗಿ ಉಸಿರಾಡುವುದು ಗೊರಕೆಗೆ ಕಾರಣ. ಉಸಿರಾಡುವಾಗ ಪ್ರತಿ ಸಲ ಉಸಿರನ್ನು 10–60 ಸೆಕೆಂಡುಗಳವರೆಗೆ ಹಿಡಿಯಬಹುದು. ಇದನ್ನು ಆಪ್ನಿಯ ಎನ್ನುತ್ತಾರೆ. ಮೇಲು ಮೇಲುಗಡೆಯೇ ಉಸಿರಾಡುವುದಕ್ಕೆ ಹೈಪೋ ಆಪ್ನಿಯ ಎನ್ನುತ್ತಾರೆ.

ಕ್ರಮವಿಲ್ಲದ ನಿದ್ರೆ ಗುರುತಿಸುವ ಬಗೆ..
ನಿದ್ರೆಯ ವಿಧಾನವನ್ನು ಗಮನಿಸುವುದು ಮತ್ತು ಅದನ್ನು ಮೌಲ್ಯಮಾಪನ ಮಾಡುವುದು. ಹಾಗೆ ಮೌಲ್ಯಮಾಪನ ಮಾಡಿದ ನಂತರ ಚಿಕಿತ್ಸೆಯ ಪ್ರಕ್ರಿಯೆಯನ್ನು ಆರಂಭಿಸಬಹುದು. ನಿದ್ರಾಹೀನತೆಯನ್ನು ಪತ್ತೆ ಮಾಡಲು ನಿದ್ರೆ ಪ್ರಯೋಗಾಲಯಕ್ಕೆ ಭೇಟಿ ನೀಡಬಹುದು ಅಥವಾ ಮನೆಯಲ್ಲೇ ಸಹಾಯಕ ಸಾಧನಗಳನ್ನು ಬಳಸಬಹುದು. ನಿದ್ರೆಯಲ್ಲಿರುವಾಗ ಪಾಲಿಸೊಮ್ನಾಗ್ರಫಿ ಅಥವಾ ಶರೀರದ ಕ್ರಿಯೆಗಳನ್ನು ಗಮನಿಸಲಾಗುವುದು. ವೈದ್ಯರಿಗೆ ಸಮಸ್ಯೆಗೆ ಕಾರಣವನ್ನು ಕರಾರುವಾಕ್ಕಾಗಿ ಪತ್ತೆಮಾಡಲು ಮತ್ತು ಚಿಕಿತ್ಸೆ ನೀಡಲು ನೆರವಾಗುತ್ತದೆ. 

ರಾತ್ರಿ ನಿದ್ರೆ ಸಾಲದಿದ್ದರೆ ಅಥವಾ ಬಿಟ್ಟು ಬಿಟ್ಟು ನಿದ್ರೆ ಮಾಡಿದರೆ ಮಾರನೆಯ ದಿನ ಜನರು ಮೂಡಿಯಾಗುತ್ತಾರೆ. ಮರೆಯದಿರಿ, ಗುಣಮಟ್ಟದ ಜೀವನ ಬೇಕಿದ್ದರೆ ಮತ್ತು ಇಡೀ ಜೀವನ ಆರೋಗ್ಯದಿಂದ ಇರಬೇಕಿದ್ದರೆ ರಾತ್ರಿ ಒಳ್ಳೆಯ ನಿದ್ರೆ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT