ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಖಾಸಗೀಕರಣಕ್ಕೆ ಸಕಾಲ

ಅರ್ಥ ವಿಚಾರ
Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾಗರಿಕ ವಿಮಾನಯಾನ ಸಚಿವ  ಅಶೋಕ್‌ ಗಜಪತಿರಾಜು ಅವರು ಇತ್ತೀ­ಚೆಗೆ ಸುದ್ದಿಗೋಷ್ಠಿಯಲ್ಲಿ ಮಾತ­ನಾಡುತ್ತ, ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸಂಸ್ಥೆ ಪವನ್ ಹಂಸ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು (ಎಎಐ) ಷೇರುಪೇಟೆ­ಯಲ್ಲಿ ನೋಂದಾಯಿಸುವ ಬಗ್ಗೆ ತಮ್ಮ ಆಲೋಚನೆ ಹಂಚಿಕೊಂಡಿದ್ದರು. ರಾಷ್ಟ್ರೀಯ ವಿಮಾನ­ಯಾನ ಸಂಸ್ಥೆ ಏರ್ ಇಂಡಿಯಾವನ್ನೂ ಖಾಸಗೀಕ­ರಣ­ಗೊಳಿಸುವ ಬಗ್ಗೆ ಸಣ್ಣ ಸುಳಿವನ್ನು ಆಗ ಅವರು ನೀಡಿದ್ದರು. ‘ಕಾಲ ಬದಲಾಗಿದೆ’ ಎಂದಿದ್ದ ಅವರು   ಸ್ಪಷ್ಟ  ನಿರ್ಧಾರ­ವನ್ನೇನೂ ಪ್ರಕಟಿಸಲಿಲ್ಲ. ಇದಕ್ಕೆ ಯಾವ ಪ್ರತಿಕ್ರಿಯೆ ಬರಬಹುದು ಎನ್ನುವುದನ್ನು ತಿಳಿಯಲು ಬಹುಶಃ ಸಚಿವರು ಈ ರೀತಿ  ಮಾತನಾ­ಡಿರಬಹುದು.

ಕೆಲ ವರ್ಷಗಳ ಹಿಂದೆ ಏರ್ ಇಂಡಿಯಾವನ್ನು ಇಂಡಿಯನ್ ಏರ್‌ಲೈನ್‌ ಜತೆ ವಿಲೀನಗೊಳಿಸಿದ ನಂತರ, ನಷ್ಟಪೀಡಿತ ಏರ್ ಇಂಡಿಯಾದ (ಎ.ಐ.) ಬಗ್ಗೆ ಪ್ರತಿದಿನವೂ ಒಂದಲ್ಲ ಒಂದು ಕೆಟ್ಟ ಸುದ್ದಿ ಕೇಳಿ ಬರುತ್ತಲೇ ಇದೆ. ಸರ್ಕಾರವು ತಮ್ಮೆಲ್ಲ ಬೇಡಿಕೆ­ಗಳನ್ನು ಈಡೇರಿಸಲೇ­ಬೇಕೆಂದು ಪಟ್ಟು ಹಿಡಿದು ಪೈಲಟ್‌ಗಳು ಮುಷ್ಕರ ನಡೆಸುತ್ತಾರೆ,  ವಿಮಾನ­ಗಳ ಹಾರಾಟ ರದ್ದತಿಯಿಂದ ಪ್ರಯಾಣಿಕರು ಸಂಕ­ಷ್ಟಕ್ಕೆ ಸಿಲುಕುತ್ತಾರೆ.

ಪ್ರಮುಖ ಮಾರ್ಗಗಳಲ್ಲಿ ಹಾರಾಟ ಮುಂದುವ­ರಿಸಲು ಇತರ ವಿಮಾನಗಳ ಹಾರಾಟಕ್ಕೆ ಕತ್ತರಿ ಹಾಕುವುದು, ಆಡಳಿತ ಮಂಡ­ಳಿಗೆ ಭಾರಿ ಪ್ರಮಾಣದಲ್ಲಿ ಉಚಿತ ಕೊಡುಗೆಗಳ ಘೋಷಣೆ, ಹೊಸ ವಿಮಾನಗಳ ಖರೀದಿಗೆ ಸಂಬಂಧಿಸಿದ ವಿವಾದಗಳು ಮತ್ತು ಸಿಬಿಐ ತನಿಖೆ, ಮಹಾಲೇಖಪಾಲರ ಛೀಮಾರಿ ಮುಂತಾದವು ಏರ್ ಇಂಡಿಯಾದ ಕೊನೆ ಮೊದಲಿಲ್ಲದ ಸಂಕಷ್ಟ­ಗಳ ಸರಮಾಲೆಯಲ್ಲಿ ಇವೆ.

ವಿಲೀನ ಪ್ರಕ್ರಿಯೆಯು ಉದ್ದೇಶಿತ ಫಲ ನೀಡಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡರೂ, ಸರ್ಕಾರ ಮಾತ್ರ ತೋರಿಕೆಯ ಬದಲಾವಣೆಗೆ ಪ್ರಯತ್ನಿಸುತ್ತಲೇ ಇದೆ. ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆ­ಯನ್ನು ಆಪೋಶನ ತೆಗೆದು­ಕೊಳ್ಳುತ್ತಿ­ರುವ ಕ್ಯಾನ್ಸರ್ ದೂರ ಮಾಡಲು ಗಂಭೀರ ಪ್ರಯತ್ನವನ್ನೇ ಮಾಡುತ್ತಿಲ್ಲ.

ಪೂರ್ಣ ಪ್ರಮಾಣದ ವಿಮಾನಯಾನ ಸಂಸ್ಥೆ­ಗಳಾದ ಸಿಂಗಪುರ ಏರ್‌ಲೈನ್ಸ್ ಮತ್ತು ದ ಎಮಿ­ರೇಟ್ಸ್ ಮಾತ್ರ ಸದ್ಯಕ್ಕೆ ವಿಶ್ವದಲ್ಲಿ ಲಾಭದಾಯಕ­ವಾಗಿ ಮುನ್ನಡೆದಿದ್ದು, ದಕ್ಷತೆಗೂ ಹೆಸರು­ವಾಸಿ­ಯಾಗಿವೆ. ಇವೆರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆ­ಗಳಾಗಿದ್ದರೂ, ಆಡಳಿತ ನಿರ್ವಹಣೆ ಮಾತ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಈ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವ­ಸ್ಥೆಯೂ ಇಲ್ಲ. ನಾವು ಹುರುಪಿನ, ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಮತ್ತು ಕೆಲ­ವೊಮ್ಮೆ ಗೊಂದಲಕ್ಕೂ ಕಾರಣ­ವಾಗುವ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದೇವೆ. ಈ ವ್ಯವಸ್ಥೆ ಪರಿಪೂರ್ಣವಲ್ಲದಿದ್ದರೂ, ಸರ್ವಾಧಿ­ಕಾರ ವ್ಯವಸ್ಥೆಗೆ ಹೋಲಿಸಿದರೆ ಇದೇ ಉತ್ತಮ­ವಾಗಿದೆ.

ಕೆಲ ವಾಸ್ತವಾಂಶಗಳೂ  ಏರ್ ಇಂಡಿಯಾದ ಸಂಕ­ಷ್ಟದ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಈ ವಿಮಾನಯಾನ ಸಂಸ್ಥೆ ₨ 40 ಸಾವಿರ ಕೋಟಿಗಳ ಸಾಲದ ಸುಳಿಯಲ್ಲಿ ಸಿಲುಕಿದೆ. ಇಷ್ಟು ಮೊತ್ತದ ಬಂಡವಾಳದಿಂದ ಯಾರೇ ಆಗಲಿ 100 ವಿಮಾನ ಯಾನ ಸಂಸ್ಥೆಗಳನ್ನು ಸ್ಥಾಪಿಸ­ಬಹುದು. ಟಾಟಾ ಸಂಸ್ಥೆ ಜತೆಗಿನ ಜಂಟಿ ಯೋಜನೆಯಲ್ಲಿ ಏರ್ ಏಷ್ಯಾದ ಪಾಲು ಬಂಡವಾಳವು 50 ದಶಲಕ್ಷ ಡಾಲರ್‌ಗಳಿಗಿಂತ (ಅಂದಾಜು ₨ 300 ಕೋಟಿ) ಕಡಿಮೆ ಇದೆ. ಏರ್ ಇಂಡಿಯಾದಲ್ಲಿ ಸಿಬ್ಬಂದಿ ಸಂಖ್ಯೆಯೂ ಗರಿಷ್ಠ ಪ್ರಮಾಣ­ದಲ್ಲಿ ಇದೆ. ಇಂಡಿಗೊ ಸಂಸ್ಥೆಯಲ್ಲಿ ಪ್ರತಿಯೊಂದು ವಿಮಾನಕ್ಕೆ 70 ಸಿಬ್ಬಂದಿ ಇದ್ದರೆ, ಏರ್ ಇಂಡಿಯಾದಲ್ಲಿ 475 ಸಿಬ್ಬಂದಿ ಇರುವುದು ನಿಜಕ್ಕೂ ಆಘಾತ­ಕಾರಿ ಸಂಗತಿಯಾಗಿದೆ.

ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ಬಿಡಿ­ಭಾಗಗಳ ಅಲಭ್ಯತೆ ಮತ್ತಿತರ ಕಾರಣ­ಗಳಿಂದ ಏರ್ ಇಂಡಿ­ಯಾದ ಶೇ 30ರಷ್ಟು ವಿಮಾನಗಳ ಹಾರಾಟ ರದ್ದಾಗಿ­ರುತ್ತದೆ. ಸಂಸ್ಥೆಯ ಕಾರ್ಮಿಕ ಸಂಘಟನೆ­ಯಲ್ಲಿಯೂ ಹಲವಾರು ಬಣಗಳಿವೆ. ಇನ್ನೊಂದೆಡೆ ಈ ಸಿಬ್ಬಂದಿಗೆ ಸೂಕ್ತ ನಾಯಕತ್ವವೂ ಇಲ್ಲ. ವಿಮಾನಯಾನ ಸಂಸ್ಥೆಯ ದಕ್ಷತೆ ಅಳೆ­ಯುವ ಜಾಗತಿಕ ಮಾನದಂಡವಾಗಿರುವ– ಲಭ್ಯ ಇರುವ ಪ್ರತಿ ಸೀಟಿನ ಕಿಲೋಮೀಟರ್  ವೆಚ್ಚದ (ಸಿಎಎಎಸ್‌ಕೆ) ಪ್ರಕಾರ, ಏರ್ ಇಂಡಿ­ಯಾದ ವೆಚ್ಚವು ಇಂಡಿಗೋದ ನಾಲ್ಕು ಪಟ್ಟು ಮತ್ತು ಏರ್ ಏಷ್ಯಾದ ಐದು ಪಟ್ಟು ಹೆಚ್ಚಿಗೆ ಇದೆ.

ಇದು ವಿಶ್ವದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ರಾಜ­ಕೀಯ ಪ್ರಭಾವದಿಂದ ನೇಮಕ­ಗೊಂಡಿರುವ ಅನನುಭವಿ ಅಧಿಕಾರ­ಶಾಹಿಯೇ ಎ.ಐ. ಆಡಳಿತ­ವನ್ನು ನಿರ್ವಹಿಸುತ್ತಿದ್ದು, ಅದಕ್ಕೆ ಸ್ವಾಯತ್ತತೆ­ಯಾಗಲಿ, ವಿಶ್ವಾಸಾರ್ಹತೆ­ಯಾಗಲಿ ಇಲ್ಲ. ಹೀಗಾಗಿ ಸಂಸ್ಥೆಗೆ   ಲಾಭದಾಯಕವಾಗಿ ಮುನ್ನಡೆ­ಯುವ ದೂರದೃಷ್ಟಿಯೇ ಇಲ್ಲದಂತಾಗಿದೆ.

ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪವು ಏಐಯನ್ನು ಹಾಳುಗೆಡ­ವಿದೆ. ಇಂತಹ ಪ್ರವೃತ್ತಿ ಸದ್ಯಕ್ಕೆ ಬದಲಾಗುವ ಸಾಧ್ಯತೆಗಳೂ ಇಲ್ಲ. ಈ ವಾಸ್ತವತೆಯನ್ನು ನಾವೆಲ್ಲ ಎದುರಿಸ­ಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆ ಸಂಸ್ಥೆಗಳಂತೆ ಎ.ಐ. ದಲ್ಲಿಯೂ ಯಾವುದೇ ಹಂತದ­ಲ್ಲಿಯೂ ಉತ್ತರದಾಯಿತ್ವ­ವಾಗಲಿ ಅಥವಾ ದಿವಾಳಿ ಏಳುವ ಭೀತಿಯಾಗಲಿ ಕಾಣುತ್ತಿಲ್ಲ.

ಕಿಂಗ್ ಫಿಷರ್ ಏರ್‌ಲೈನ್ಸ್‌ನ ಸ್ವತಂತ್ರ ನಿರ್ದೇಶಕರನ್ನು ಬ್ಯಾಂಕ್‌ಗಳು ಬೆನ್ನತ್ತಿ ಅವರನ್ನು ‘ಉದ್ದೇಶ­ಪೂರ್ವಕ ಸುಸ್ತಿದಾರರು’ ಎಂದು ಘೋಷಿಸಿವೆ. ಅದೇ ನಿಯಮವನ್ನು ಎರಡು ದಶಕಗಳ ಅವಧಿ­ಯಲ್ಲಿನ ಏರ್ ಇಂಡಿಯಾದ ಎಲ್ಲ ನಿರ್ದೇಶಕ­ರಿಗೂ ಅನ್ವಯಿಸಿ ವಿಚಾರಣೆಗೆ ಗುರಿಪಡಿಸ­ಬೇಕಾಗಿದೆ.

ಅಂತಿಮವಾಗಿ ಸರ್ಕಾರವೇ ಮಣಿದು, ಪರಿ­ಹಾರ ಘೋಷಿಸುತ್ತದೆ ಎನ್ನುವ ದೃಢ ನಂಬಿಕೆಯು ಎ.ಐ. ಆಡಳಿತ ಮಂಡಳಿಗೆ ಮತ್ತು ಪ್ರತಿಯೊಬ್ಬ ನೌಕರನಿಗೆ ಇದೆ. ಪ್ರತಿಯೊಬ್ಬರ ಪಾಲಿಗೆ, ಎ.ಐ., ‘ಪವಿತ್ರ ಹಸು’ ಆಗಿ ಪರಿಣಮಿಸಿದೆ.

ಈ ಬಿಕ್ಕಟ್ಟಿನಿಂದ ಪಾರಾಗಲು ದಾರಿಯೇ ಇಲ್ಲವೇ? ಎನ್ನುವ ಪ್ರಶ್ನೆಗೆ ಇದೆ ಎಂದೇ ಉತ್ತರಿ­ಸ­ಬೇಕಾಗುತ್ತದೆ. ರಾಜಕೀಯ ಜಾಣ್ಮೆ ಮತ್ತು ಇಚ್ಛಾಶಕ್ತಿ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ. ಎರಡು ದಶಕಗಳ ಹಿಂದೆ ಬ್ರಿಟಿಷ್ ಏರ್‌ವೇಸ್ ಮತ್ತು ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳು ದಿವಾಳಿ ಏಳುವ ಹಂತ ತಲುಪಿದ್ದರಿಂದ ಅವುಗಳನ್ನು ಖಾಸಗೀಕ­ರಣ­ಗೊಳಿಸಲಾಯಿತು. ಎ.ಐ. ಇನ್ನೂ ಆ ಹಂತಕ್ಕೆ  ತಲು­ಪಿಲ್ಲ. ಸಂಸ್ಥೆಯ ಬಳಿ ಭಾರಿ ಪ್ರಮಾಣದಲ್ಲಿ ಭೂಮಿ, ವ್ಯಾಪಕ ಸಂಪರ್ಕ ಜಾಲ ಇದೆ.  ಜನಪ್ರಿಯ ಬ್ರ್ಯಾಂಡ್‌ನ ಬೆಂಬಲ ಇದೆ. ಇದನ್ನು ಮೂರು ಪ್ರತ್ಯೇಕ ಸಂಸ್ಥೆಗಳಾಗಿ ವಿಂಗಡಿಸಿ ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯವಿದೆ.

ದೇಶದಾದ್ಯಂತ   ಎ.ಐ. ಒಡೆತನ­ದಲ್ಲಿ ಇರುವ ಭೂಮಿ ಮತ್ತು ಕಟ್ಟಡಗಳಿಗೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ ಅವುಗಳನ್ನು ಮಾರಾಟ ಮಾಡಬೇಕು. ಇದರಿಂದ ಬರುವ ಹಣವನ್ನು ಹೆಚ್ಚುವರಿ ಸಿಬ್ಬಂದಿಯ ಸ್ವಯಂನಿವೃತ್ತಿ ಯೋಜನೆಗೆ ಬಳಸಿ­ಕೊಳ್ಳಬೇಕು. ‘ಸುವರ್ಣ ಹಸ್ತ­ಲಾಘವ’ ಯೋಜ­ನೆ­ಯಡಿ ನಿವೃತ್ತರಿಗೆ ಪರಿಹಾರ ಒದಗಿಸಿದ ನಂತರವೂ ಸಾಕಷ್ಟು ಹಣ ಉಳಿಯುವ ಸಾಧ್ಯತೆ ಇದೆ.

ಮುಂಬೈ ಸೇರಿದಂತೆ ದೇಶ­ದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಎ.ಐ. ಬಳಿ ಸಾಕಷ್ಟು ಭೂಮಿ ಇದೆ. ಒಂದು ವೇಳೆ ಹಣದ ಕೊರತೆ ಬಿದ್ದರೂ ಸರ್ಕಾರ ಅದನ್ನು ಭರ್ತಿ ಮಾಡಿ­ಕೊಡ­ಬಹುದು. ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ ವರ್ಷಕ್ಕೆ ಸಾವಿರಾರು ಕೋಟಿ­ಗಳನ್ನು ಕಳೆದುಕೊಳ್ಳುವ ಬದಲಿಗೆ ಭೂಮಿ ಮಾರಾಟ ಮಾಡಿ ನಷ್ಟದ ಕೂಪದಿಂದ ಹೊರ ಬರುವುದೇ ಉತ್ತಮ ಎನಿಸುತ್ತದೆ.

ಭೂಮಿ ಮಾರಾಟ ಮಾಡಿ ಬರುವ ಹಣದಲ್ಲಿ ಹೆಚ್ಚುವರಿ ಸಿಬ್ಬಂದಿಯ ಸ್ವಯಂ ನಿವೃತ್ತಿಗೆ ವೆಚ್ಚ ಮಾಡಿದ ನಂತರ, ಕಡಿಮೆ ಸಿಬ್ಬಂದಿ ಮತ್ತು ಸಂಸ್ಥೆ ನಡೆಸಲು ಸಾಕಾಗುವಷ್ಟು ಸಂಪತ್ತು ಕಾಯ್ದು­ಕೊಂಡು ಸಂಸ್ಥೆಯನ್ನು ಯಶಸ್ವಿ­ಯಾಗಿ ಮುನ್ನಡೆ­ಸಲು ಸಾಧ್ಯವಾಗಲಿದೆ. ಆನಂತರ ಎ.ಐ. ಅನ್ನು  ಅಧಿಕ ಬೆಲೆಗೆ ಖಾಸಗಿಗೆ ಮಾರಾಟ ಮಾಡ­ಬಹುದು. ಯಾವುದೇ ಹೂಡಿಕೆದಾರರಿಗೆ ಎ.ಐ.­ಖರೀದಿಸುವುದು ತುಂಬ ಲಾಭದಾಯಕ­ವಾಗಿ­ರಲಿದೆ. ಸರ್ಕಾರವು ಶೇ 49 ಅಥವಾ ಶೇ 51­ರಷ್ಟು ಪಾಲು ಬಂಡ­ವಾಳ ಇಟ್ಟುಕೊಳ್ಳಬಹುದು. ಕೆಲ ಕಾಲದ ನಂತರ ಆ ಪಾಲನ್ನೂ ಬಿಟ್ಟು­ಕೊಟ್ಟು ಸಂಸ್ಥೆಯನ್ನು ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬಹುದು.

ಎ.ಐ. ಬಳಿ ಎಂಜಿನಿಯರಿಂಗ್ ಪರಿ­ಣತರ ದೊಡ್ಡ ತಂಡವೇ ಇದೆ. ವಿಮಾನ­ಗಳ ನಿರ್ವಹಣೆ, ದುರಸ್ತಿ ಮತ್ತಿತರ ತಾಂತ್ರಿಕ ಅಗತ್ಯಗಳಿಗಾಗಿ ಏರ್ ಇಂಡಿಯಾ ಎಂಆರ್ (ಸಂಪೂರ್ಣ ದುರಸ್ತಿ) ಸಂಸ್ಥೆಯನ್ನೇ ಸ್ಥಾಪಿಸಬಹುದು. ಲುಫ್ತಾನ್ಸಾ ಏರ್ ಲೈನ್ಸ್‌ನಿಂದ, ಲುಫ್ತಾನ್ಸಾ ಟೆಕ್ನಿಕ್ ಅನ್ನು ಬೇರ್ಪ­ಡಿಸಿ ಖಾಸಗೀಕರಣಗೊಳಿಸಿದಂತೆ ಇದನ್ನೂ ಖಾಸ­ಗಿಗೆ ಮಾರಾಟ ಮಾಡಬಹುದು.

ಈ ಖಾಸಗೀಕರಣ ಪ್ರಕ್ರಿಯೆಯನ್ನು ಜಾಣತನ­ದಿಂದ ಕಾರ್ಯಗತಗೊಳಿಸಿದರೆ ಎ.ಐ. ನಷ್ಟಕ್ಕೆ ಕಡಿ­ವಾಣ ಹಾಕಲು ಸಾಧ್ಯವಾಗುವುದರ ಜತೆಗೆ, ವಾರ್ಷಿಕ ವರಮಾನದ ಲೆಕ್ಕದಲ್ಲಿ ಸರ್ಕಾರದ ಬೊಕ್ಕಸಕ್ಕೂ ಲಾಭ ಹರಿದು ಬರಲಿದೆ. ಮಾರುತಿ ಸುಜುಕಿ ಪ್ರಕರಣದಲ್ಲಿ ಇದು ಸಾಬೀತಾಗಿದೆ.

ಜಪಾನಿನ ಸುಜುಕಿ ಸಂಸ್ಥೆಗೆ ಮಾರುತಿ ಸಂಸ್ಥೆ­ಯನ್ನು ಹಂತಹಂತವಾಗಿ ಮಾರಾಟ ಮಾಡಿದ್ದ­ರಿಂದ ಸರ್ಕಾರಕ್ಕೂ ಲಾಭವಾಗಿತ್ತು.  ಎ.ಐ. ವಿಚಾ­ರ­ದಲ್ಲಿ ಹೀಗೆ ಮಾಡಲು ಸಾಧ್ಯವಾ­ಗದಿದ್ದರೆ, ನಷ್ಟದ ಪ್ರಮಾಣಕ್ಕೆ ಕಡಿವಾಣ ಹಾಕಲು ಸಾಧ್ಯ­ವಾಗುವುದೇ ಇಲ್ಲ. ಎ.ಐ. ಯನ್ನು ಉದ್ದಕ್ಕೂ ದೋಷ­ಪೂರಿತ­ವಾಗಿಯೇ ನಿರ್ವಹಿಸಿಕೊಂಡು ಬರ­­ಲಾಗಿದೆ. ಖಾಸಗಿಯವರ ತೀವ್ರ ಪೈಪೋಟಿ­ಯನ್ನು ಸಮರ್ಥವಾಗಿ ಎದು­ರಿಸ­ಲಾಗದಂತೆ ಇದನ್ನು ದುರ್ಬಲಗೊ­ಳಿಸಲಾಗಿದೆ.

ಕೇಂದ್ರ ಸರ್ಕಾರವು ಎ.ಐ. ಬಿಕ್ಕಟ್ಟು ಪರಿಹರಿ­ಸುವ ಆಚೆಗೂ ಇತರ ಕ್ರಮ­ಗಳನ್ನು ಕೈಗೊಳ್ಳ­ಬೇಕಾ­ಗಿದೆ. ದೇಶಿ ವಿಮಾನಯಾನ ರಂಗಕ್ಕೆ ಹುರುಪು ತುಂಬಲು ದೀರ್ಘಾವಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ವಿಮಾನಯಾನ ರಂಗದ ಎಲ್ಲ ಭಾಗಿದಾರರಾದ ಸರಕು ಸಾಗಣೆ, ಸಂಪೂರ್ಣ ದುರಸ್ತಿ, ಬಿಡಿಭಾಗಗಳ ತಯಾರಿಕೆ ಮತ್ತಿತರ ಉದ್ದಿಮೆಗಳಿಗೆ ಪೂರಕವಾಗುವಂತಹ ವಾತಾವರಣ ನಿರ್ಮಿಸಬೇಕಾಗಿದೆ. ಇಲ್ಲಿ ಎ.ಐ., ಜೆಟ್ ಏರ್‌ವೇಸ್ ಅಥವಾ ಖಾಸಗಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಿಗೆ ಮಾತ್ರ ಅನು­ಕೂಲವಾ­ಗುವಂತಹ ನೀತಿ ಅಳವಡಿಸಿಕೊಳ್ಳ­ ಬಾರ­ದಷ್ಟೆ.

ಸದ್ಯಕ್ಕೆ ಶೇ 3ರಷ್ಟು ಭಾರತೀಯರು ಮಾತ್ರ ವಿಮಾನಯಾನ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅಂದಾಜು 6 ಕೋಟಿಯಷ್ಟು ಜನರು ದೇಶಿ ವಿಮಾನಯಾನ ಸೇವೆಯ ಪ್ರಯೋ­ಜನ ಪಡೆದುಕೊಂಡಿದ್ದಾರೆ. ಮುಂದಿನ 5 ವರ್ಷ­ಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ­ಯನ್ನು ಶೇ 25ರಷ್ಟು ಹೆಚ್ಚಿಸಲು ಯಾವ ನೀತಿ ಅನುಸರಿಸ­ಬೇಕು ಮತ್ತು ಎಂತಹ ಉತ್ತೇಜನ ನೀಡಬೇಕು ಎನ್ನುವುದರ ಕುರಿತೂ ಸರ್ಕಾರ ಸ್ಪಷ್ಟ ನಿಲುವು ತಳೆ­ಯಬೇಕು.

ಭಾರತವನ್ನು ಅಂತರರಾಷ್ಟ್ರೀಯ ವಿಮಾ­ನ­ಯಾನದ ಕೇಂದ್ರವಾಗಿ ಅಭಿ­ವೃದ್ಧಿ­ಪಡಿಸುವುದು, ಸಿಂಗಪುರ ಮತ್ತು ಹಾಂಕಾಂಗ್ ಮಾದರಿಯಲ್ಲಿ ವಿಮಾನ ನಿಲ್ದಾಣಗಳ ವಿನ್ಯಾಸ, ಸರಕು ಸಾಗಣೆ, ವಿಮಾನಗಳ ಸಂಪೂರ್ಣ ದುರಸ್ತಿ ಸೌಲಭ್ಯ ಮತ್ತಿತರ ವಿಷಯಗಳ ಬಗ್ಗೆಯೂ ಸರ್ಕಾರ ಸ್ಪಷ್ಟ ಧೋರಣೆ ತಳೆಯಬೇಕು.

ನಮ್ಮ ತಾಂತ್ರಿಕ ಪರಿಣತಿಯ ಮಾನವ ಸಂಪ­ನ್ಮೂಲ, ನೈಸರ್ಗಿಕ ಸಂಪನ್ಮೂಲ ಮತ್ತು ಆರ್ಥಿಕ ವೃದ್ಧಿಯ ಪ್ರಯೋಜನ­ಗಳನ್ನು ಪಡೆ­ಯುವ ನಿಟ್ಟಿ­ನಲ್ಲಿ ವಿಮಾನಯಾನ ರಂಗವನ್ನು ಪ್ರಮುಖ ಮೂಲ­ಸೌಕರ್ಯವೆಂದು ಪರಿಗಣಿ­ಸುವ ಬಗ್ಗೆಯೂ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರ­ಬೇಕಾಗಿದೆ.

ವಿಮಾನಯಾನ ಸಂಸ್ಥೆಯ (ಎ.ಐ.) ಹಿತಾ­ಸಕ್ತಿ­ಗಿಂತ ದೇಶದ ಹಿತಾಸಕ್ತಿಯೇ ಮುಖ್ಯ ಎನ್ನುವ ಸತ್ಯವನ್ನು ಕೇಂದ್ರ ಸರ್ಕಾರ ಮನಗಾಣಬೇಕು. ಎ.ಐ. ಕೂಡ ಒಂದು ಉದ್ದಿಮೆ ಸಂಸ್ಥೆಯಾಗಿದ್ದು, ಕಾರ್ಮಿಕ ಸಂಘಟನೆಗಳು ಮತ್ತು ಕೆಲವೇ ಕೆಲ ರಣೋತ್ಸಾಹಿ ಉದ್ಯೋಗಿಗಳಿಗೆ ಅದನ್ನು ಒತ್ತೆ ಇಡುವುದು ಸರಿಯಲ್ಲ. ಸರ್ಕಾರವು ನಾಗರಿಕ ವಿಮಾನಯಾನ ವಹಿ­ವಾಟಿ­ನಿಂದ ತಕ್ಷಣ ದೂರ ಸರಿಯಬೇಕಾಗಿದೆ. ಅಂತಹ ನಿರ್ಧಾರಕ್ಕೆ ಬರಲು ಇದು ಸಕಾಲವೂ ಹೌದು.

ಷೇರುಪೇಟೆಯ ವಹಿವಾಟು ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸವೂ ಹೆಚ್ಚಿದೆ. ಎಲ್ಲೆಡೆ ಉತ್ಸಾಹದ ವಾತಾವರಣ ಇದೆ. ಖಾಸಗೀಕರಣ­ಗೊಳಿಸುವುದ­ರಿಂದ ತಮಗೂ ಸಾಕಷ್ಟು ಪ್ರಯೋ­ಜ­ನಗಳು ಲಭಿ­ಸಲಿವೆ ಎನ್ನುವುದು ಎ.ಐ.­ ಸಿಬ್ಬಂದಿಯ ಅರಿವಿಗೆ ಬಂದಿದೆ. ಜನರು ತಮ್ಮ ಬಗ್ಗೆ ಅಸಮಾಧಾನ ತಾಳಿರು­ವುದು ಮತ್ತು ವಿಮಾ­ನದಲ್ಲಿ ಉಚಿತ ಊಟ ನೀಡುವ ದಿನಗಳು ಕೊನೆಗೊಂಡಿ­ರುವುದು ಅವರಿಗೂ ಮನ­ವರಿಕೆ­ಯಾ­ಗಿದೆ.

ಯಾರಿಗೂ ಅನ್ಯಾಯವಾಗ­ದಂತೆ ಮತ್ತು ಪಾರದರ್ಶಕವಾಗಿ ಖಾಸಗೀಕರಣ­ಗೊಳಿಸಿ­ದರೆ ಅದನ್ನು ತಾವು ಸ್ವಾಗ­ತಿಸುವುದಾಗಿ ಅನೇಕರು ಈಗಾಗಲೇ ಹೇಳಿ­ಕೊಂಡಿದ್ದಾರೆ.  ಶೇಕ್ಸ್‌ಪಿಯರ್ ಹೇಳಿರುವಂತೆ, ‘ಕೇಂದ್ರ ಸರ್ಕಾ­ರವು ಡೋಲಾಯಮಾನ ಧೋರಣೆ ಕೈ­ಬಿಟ್ಟು ಬದಲಾವಣೆಯ ಅಲೆಗ­ಳನ್ನು ತನ್ನ ಪ್ರವಾಹದಲ್ಲಿ ಸೆಳೆದು­ಕೊಳ್ಳ­ಬೇಕಾ­ಗಿದೆ...’
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT