ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಎಸ್‌ ಉಗ್ರರಿಂದ ಕನ್ನಡಿಗರ ಬಿಡುಗಡೆ

ಆಂಧ್ರದ ಇಬ್ಬರು ಪ್ರಾಧ್ಯಾಪಕರ ಮಾಹಿತಿ ಇನ್ನೂ ಲಭ್ಯವಿಲ್ಲ
Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರರು ಬುಧವಾರ ಲಿಬಿಯಾದಲ್ಲಿ ಅಪಹರಿಸಿದ್ದ  ಕರ್ನಾಟಕ ಮೂಲದ ಇಬ್ಬರು  ಪ್ರಾಧ್ಯಾಪಕರನ್ನು ಶುಕ್ರವಾರ  ಬಿಡುಗಡೆ ಮಾಡಿದ್ದಾರೆ. ಆದರೆ, ಆಂಧ್ರಪ್ರದೇಶದ ಇನ್ನಿಬ್ಬರು ಪ್ರಾಧ್ಯಾಪಕರನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂಡಿದ್ದಾರೆ.

ರಾಯಚೂರಿನ ಲಕ್ಷ್ಮೀಕಾಂತ, ಬಂಗಾರಪೇಟೆಯ ವಿಜಯ್‌ಕುಮಾರ್, ಹೈದರಾಬಾದ್‌ನ  ಗೋಪಿಕೃಷ್ಣ    ಮತ್ತು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಬಲರಾಂ ಅವರು ಲಿಬಿಯಾದ ರಾಜಧಾನಿ ಟ್ರಿಪೋಲಿ ಸಮೀಪದ ಸಿರ್ತ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿಂದ ಭಾರತಕ್ಕೆ  ಮರಳಲು   ವಿಮಾನ ನಿಲ್ದಾಣಕ್ಕೆ ಕಾರ್‌ನಲ್ಲಿ ಬರುತ್ತಿದ್ದಾಗ ಸಿರ್ತ್‌ನಿಂದ 50  ಕಿ.ಮೀ ದೂರದ ತಪಾಸಣಾ ಠಾಣೆ ಬಳಿ ಐಎಸ್‌ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು. 

ಲಿಬಿಯಾದ ಪದಚ್ಯುತ ಸರ್ವಾಧಿಕಾರಿ  ದಿ. ಮಹಮ್ಮದ್‌ ಗಡಾಫಿಯ ಹುಟ್ಟೂರು ಸಿರ್ತ್ ಮತ್ತು ಸುತ್ತಲಿನ ಕೆಲ ಪ್ರದೇಶಗಳು ಐಎಸ್‌ ಉಗ್ರರ ವಶದಲ್ಲಿವೆ. ಅಪಹರಣದ ವಿಷಯವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶುಕ್ರವಾರ ಬೆಳಿಗ್ಗೆ ಪ್ರಧಾನಿ ಗಮನಕ್ಕೆ ತಂದಿದ್ದರು. ಅಪಹೃತರ ಸುರಕ್ಷಿತ ಬಿಡುಗಡೆಗೆ ಪ್ರಯತ್ನ ನಡೆದಿದೆ ಎಂದು ವಿದೇಶಾಂಗ ಖಾತೆ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿ ಇರಾಕ್‌ನ ಮೋಸುಲ್‌ನಿಂದ ಪಂಜಾಬ್‌ ಮೂಲದ 39 ಜನರನ್ನು ಉಗ್ರರು ಅಪಹರಿಸಿದ್ದರು. ಆದರೆ ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಹೊಸ ಅಪಹರಣ ಸರ್ಕಾರಕ್ಕೆ ತಲೆನೋವು ತಂದಿತ್ತು. ಅನಿರೀಕ್ಷಿತ: ಉಗ್ರರು ಶುಕ್ರವಾರ ಲಕ್ಷ್ಮೀಕಾಂತ ಮತ್ತು ವಿಜಯಕುಮಾರ್‌ ಅವರನ್ನು   ಅನಿರೀಕ್ಷಿತವಾಗಿ ಬಿಡುಗಡೆ ಮಾಡಿದರು. ಇನ್ನೂ ಉಗ್ರರ ವಶದಲ್ಲಿಯೇ ಇರುವ ತಮ್ಮವರ ಬಿಡುಗಡೆಗಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರದ ವಿಶೇಷ ಪ್ರತಿನಿಧಿಗಳು ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

‌ಹೊರಡುವ ಮುನ್ನ  ಕರೆ:   2007ರಿಂದ ಸಿರ್ತ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಗೋಪಿಕೃಷ್ಣ   ಭಾರತಕ್ಕೆ ಹೊರಡಲು ಸಿದ್ಧತೆ ಮಾಡಿಕೊಂಡು, ಹೈದರಾಬಾದ್‌ ನಲ್ಲಿರುವ ಪತ್ನಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು.

ದೂರವಾಣಿ ಕರೆ
ಲಕ್ಷ್ಮಿಕಾಂತ ಸಿರ್ತ್‌ ವಿವಿ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ 2009ರ ಸೆಪ್ಟೆಂಬರ್‌ನಿಂದ ಪ್ರಾಧ್ಯಾಪಕರಾಗಿದ್ದಾರೆ. ಬುಧವಾರ

(ಜುಲೈ 29) ಸಂಜೆ 4 ಗಂಟೆಗೆ ಮನೆಗೆ ಕರೆ ಮಾಡಿ, ಶನಿವಾರ (ಆ.1) ಬೆಳಿಗ್ಗೆ ಹೈದರಾಬಾದ್‌ಗೆ ಬರುವುದಾಗಿ ತಿಳಿಸಿದ್ದರು.  ವಿಮಾನ ನಿಲ್ದಾಣಕ್ಕೆ ಬರಲು ತಂದೆಗೆ ಹೇಳಿದ್ದರು. ಆದರೆ ಅದಾದ ಕೆಲವೇ ಹೊತ್ತಿಗೆ ಸಿರ್ತ್‌ ವಿಶ್ವವಿದ್ಯಾಲಯದಿಂದ ಬಂದ ಕರೆ ಮನೆಯವರಲ್ಲಿ ಆತಂಕಕ್ಕೆ ನೂಕಿತ್ತು.

ಭಾರತಕ್ಕೆ ಬರಲು ಬುಧವಾರ ಸಿರ್ತ್‌ನಿಂದ ಕಾರಿನಲ್ಲಿ ನಾಲ್ವರು ಭಾರತೀಯ ಗೆಳೆಯರೊಂದಿಗೆ ಟ್ರಿಪೋಲಿಗೆ ಹೊರಟಿದ್ದರು. ಮಾರ್ಗಮಧ್ಯದ ಚೆಕ್‌ಪೋಸ್ಟ್‌ ಬಳಿ ಮುಸುಕುಧಾರಿಗಳು ಕಾರನ್ನು ತಡೆದು ನಾಲ್ವರು ಭಾರತೀಯರನ್ನು ಅಪಹರಣ ಮಾಡಿದ್ದರು. ಈ ವಿಷಯವನ್ನು ಕಾರಿನ ಚಾಲಕ ವಿ.ವಿ ಆಡಳಿತಕ್ಕೆ ತಿಳಿಸಿದ್ದನು.  ಶುಕ್ರವಾರ ಬಿಡುಗಡೆ ಬಳಿಕ ಲಕ್ಷ್ಮಿಕಾಂತ ಅವರು ಮನೆಯವರನ್ನು ಸಂಪರ್ಕಿಸಿ ಮಾತನಾಡಿದರು.

ಪೊಲೀಸ್‌ ಶೋಧಕ್ಕೆ ಬೆದರಿದ ಉಗ್ರರು
‘ಸಿರ್ತ್‌ನ ಹಾಸ್ಟೆಲ್‌ನಿಂದ ಕಾರಿನಲ್ಲಿ ಹೊರಟ ನಾವು ಹತ್ತು ಕಿಲೋಮೀಟರ್ ದೂರ ಕ್ರಮಿಸಿದ್ದೆವು. ಆಗ ಕಾರೊಂದರಲ್ಲಿ  ನಾಲ್ಕೈದು ಮುಸುಕುಧಾರಿ ಉಗ್ರರು ನಮ್ಮ ಕಾರನ್ನು ಅಡ್ಡಹಾಕಿದರು. ಎಲ್ಲರ ಬಳಿ ಬಂದೂಕುಗಳಿದ್ದವು. ಕೂಡಲೇ ನಮ್ಮ ಕಾರಿನ ಚಾಲಕ ಸ್ಥಳದಿಂದ ಪರಾರಿಯಾದ. ಬಹುಶಃ ಆತ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿರಬೇಕು. ಹಾಗಾಗಿ ಉಗ್ರರು ನಮ್ಮನ್ನು ತಮ್ಮ ಸ್ಥಳಕ್ಕೆ ಕರೆದೊಯ್ಯುವುದಕ್ಕೂ ಮುಂಚೆಯೇ, ಪೊಲೀಸರು ನಗರದಾದ್ಯಂತ ಸುತ್ತುವರೆದು, ನಮ್ಮ ಹುಡುಕಾಟದಲ್ಲಿ ತೊಡಗಿದ್ದರು.

ಇದರಿಂದ ಭಯಗೊಂಡ ಉಗ್ರರು, ಅಪಹರಿಸಿದ ಸ್ಥಳದಲ್ಲೇ ನಮ್ಮನ್ನು ಕರೆತಂದು ಬಿಟ್ಟು ಪರಾರಿಯಾದರು’ ಎಂದು ಅಲ್ಲಿ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿರುವ ವಿಜಯಕುಮಾರ್‌ ಅವರು  ತಮ್ಮ ಸೋದರ ಹೇಮಂತ್‌ಗೆ ದೂರವಾಣಿಯಲ್ಲಿ ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT