ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಅಬ್ಬರದಲ್ಲಿ ಕೇಳೀತೆ ಕೊಳೆಗೇರಿ ಕೂಗು?

ಬದಲಾವಣೆ ಬೇಕಾಗಿದೆ
Last Updated 29 ಜೂನ್ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು ನಗರದ ಅಭಿವೃದ್ಧಿಯಲ್ಲಿ ಬಿಬಿಎಂಪಿಯ ಜವಾಬ್ದಾರಿಯೇನು? ಸಂವಿಧಾನದ 74ರ ತಿದ್ದುಪಡಿ ಪ್ರಕಾರ (ನಗರ ಪಾಲಿಕೆ ಕಾಯಿದೆ) ಕಲಂ 243 (w), ಸ್ಥಳೀಯ ಸರ್ಕಾರಗಳು ನಗರ ಯೋಜನೆ, ರಸ್ತೆ ಮತ್ತು ಪಾದಚಾರಿ ಮಾರ್ಗಗಳು, ನೀರು ಸರಬರಾಜು, ಬಡತನ ನಿರ್ಮೂಲನೆ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಶಿಕ್ಷಣ, ಕಸ ವಿಲೇವಾರಿ, ಪರಿಸರ, ಕೊಳಚೆ ಪ್ರದೇಶಗಳ ಸುಧಾರಣೆ, ಉದ್ಯಾನ ಹಾಗೂ ಆಟದ ಮೈದಾನಗಳು, ಭೂ ಉಪಯೋಗ ನಿಯಂತ್ರಣ ಇತ್ಯಾದಿ.

ಆದರೆ, ಈ ಪಟ್ಟಿಯಲ್ಲಿನ ಅರ್ಧಕ್ಕೂ ಹೆಚ್ಚು ಜವಾಬ್ದಾರಿಗಳನ್ನು ಬಿಬಿಎಂಪಿ ನಿರ್ಲಕ್ಷ್ಯಿಸಿದೆ. ಮುಖ್ಯವಾಗಿ ಬಡತನ ನಿರ್ಮೂಲನೆ. ನಗರದಲ್ಲಿನ ಅತಿ ಮೂಲೆಗುಂಪಾಗಿರುವ ಸಮುದಾಯ ಗಳೆಂದರೆ ಕೊಳೆಗೇರಿ ನಿವಾಸಿಗಳು, ಕೊಳೆಗೇರಿಯಲ್ಲೂ ಇರುವ ಸಂಪನ್ಮೂಲ ಇಲ್ಲದೆ ಪಾದಚಾರಿ ಮಾರ್ಗಗಳ ಮೇಲೆ ಮಲಗಿರುವ ನಗರ ನಿರಾಶ್ರಿತರು, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಗಾರ್ಮೆಂಟ್‌ ಕಾರ್ಮಿಕರು, ಸೆಕ್ಯೂರಿಟಿ ಕಾರ್ಮಿಕರು ಇತರರು. ಈ ಸಮುದಾಯಗಳಿಗೆ ಬಿಬಿಎಂಪಿ ಮಾಡಿದ್ದಾದರೂ ಏನು? ರಾಜಧಾನಿಯಲ್ಲಿ ಬಡತನ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ.

ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿನ ಬಡವರ ಪರಿಸ್ಥಿತಿ ಭಯಾನಕವಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದೊಡ್ಡದಿದೆ. ಶೇ 71 ಮಹಿಳೆಯರಿಗೆ ರಕ್ತಹೀನತೆ ಇದೆ. ಕೇವಲ 18ರಷ್ಟು ಬಡ ಸಮುದಾಯಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿದೆ. ನಗರದಲ್ಲಿ ಶೇ 25 ಜನರು ಕೊಳಚೆ ಪ್ರದೇಶದಲ್ಲಿದ್ದಾರೆ. ಶೇ 1ರಷ್ಟು ಜನರು ಪಾದಚಾರಿ ಮಾರ್ಗದಲ್ಲಿ, ಮೇಲ್ಸೇತುವೆಗಳ ಕೆಳಗೆ ಮಲಗುತ್ತಾರೆ. ಇದು ಐ.ಟಿ. ನಗರದ ಕಟು ಸತ್ಯ.

ಬರುವ ಸ್ಥಳೀಯ ಸರ್ಕಾರ ಏನು ಮಾಡಬಹುದು?
ನಗರದಲ್ಲಿ ಬಡತನ ನಿರ್ಮೂಲನೆ ಮಾಡಲು ಕೊರತೆ ಇರುವುದು ಹಣಕಾಸಿನದ್ದು ಅಲ್ಲ. ಬದಲಿಗೆ ಮಾನವೀಯತೆಯದ್ದು, ಇಚ್ಛಾಶಕ್ತಿಯದ್ದು. ಇರುವ ಹಣವನ್ನು ಬಳಸಿ ನಗರವನ್ನು ಸಿಂಗಪುರ, ನ್ಯೂಯಾರ್ಕ್‌ ಮಾಡುವ ಬದಲು ಇಲ್ಲಿನ ಜನರಿಗೆ ನೀರು, ಸೂರು ಸಿಗುವ ಹಾಗೆ ಮಾಡಬೇಕು.
ಬಿಬಿಎಂಪಿಗೆ ಗುತ್ತಿಗೆ ನೌಕರರಿಗೆ ಸಂಬಳ ಸಿಗುವಂತೆ ಮಾಡಲು ಆಸಕ್ತಿ ಇಲ್ಲ. ಗಾಜಿನ ಚೂರು, ಡಯಾಪರ್‌ ಇತ್ಯಾದಿ ಎತ್ತುವ ಕೈಗಳಿಗೆ ಕೈಗವಸು ಕೊಡಿಸುವಷ್ಟು ಮಾನವೀಯತೆ ಇಲ್ಲ. ಇದರಿಂದಲೇ ಬಿಬಿಎಂಪಿಯ ಬಡವರ ಮೇಲಿನ ಕಾಳಜಿ ತಿಳಿಯುತ್ತದೆ.

ಸುಪ್ರೀಂ ಕೋರ್ಟ್‌ 2010ರಲ್ಲಿಯೇ ಪ್ರತಿ ನಗರದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ ನಗರ ನಿರ್ಗತಿಕರ ಕೇಂದ್ರ ನಿರ್ಮಿಸಬೇಕು ಎಂದು ಆದೇಶಿಸಿತು. ಆ ಲೆಕ್ಕದಲ್ಲಿ ಬಿಬಿಎಂಪಿಯಲ್ಲಿ 95 ಕೇಂದ್ರಗಳನ್ನು ನಿರ್ಮಿಸಬೇಕಿತ್ತು. ಆದರೆ, ಇಲ್ಲಿ 10 ಕೇಂದ್ರಗಳೂ ಇಲ್ಲ! ಒಂದು ಕೇಂದ್ರ ನಡೆಸಲು ಬಿಬಿಎಂಪಿಗೆ ವೆಚ್ಚವಾಗುವುದು ₹ 6ಲಕ್ಷದಿಂದ ₹ 8 ಲಕ್ಷ. ಮೇಲ್ಸೇತುವೆಗಳನ್ನು ನಿರ್ಮಿಸಲು ನೂರಾರು ಕೋಟಿ ವೆಚ್ಚ ಮಾಡುವ ಬಿಬಿಎಂಪಿಗೆ ನಿರ್ಗತಿಕರಿಗೆ ₹ 10 ಕೋಟಿ ಖರ್ಚು ಮಾಡಲು ಆಗುವುದಿಲ್ಲವೇ? ಇನ್ನೊಂದು ಉದಾಹರಣೆಯೆಂದರೆ, ಕೊಳೆಗೇರಿ ಪ್ರದೇಶಗಳು. ನಗರದ ಸುಮಾರು 80 ಕೊಳೆಗೇರಿಗಳು ದಶಕಗಳಿಂದ ಬಿಬಿಎಂಪಿ ಭೂಮಿಯಲ್ಲೇ ಇವೆ. ಇಲ್ಲಿನ ನಿವಾಸಿಗಳಿಗೆ ಭೂಮಿಯ ಹಕ್ಕುಗಳನ್ನು ನೀಡಬೇಕು ಎಂದು 1986ರಿಂದ ಹಲವು ಬಾರಿ ಸಭೆಗಳು ನಡೆದಿವೆ. ಬಿಬಿಎಂಪಿಯಲ್ಲಿ ಹತ್ತಾರು ಬಾರಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೂ ಈ ಕೆಲಸ ಆಗಿಲ್ಲ. ಅಲ್ಲಿನ ನಿವಾಸಿಗಳಿಗೆ ಹಣ ಕೊಡಬೇಕಾಗಿಲ್ಲ. ಸರ್ಕಾರ ಮನೆ ಕಟ್ಟಿ ಕೊಡಬೇಕಾಗಿಲ್ಲ. ಬದಲಿಗೆ ಅವರೇ ಮನೆ ಕಟ್ಟಿದರೆ ಅದನ್ನು ಬಂದು ಒಡೆಯುವುದಿಲ್ಲ ಎಂಬ ಆಶ್ವಾಸನೆ ಕೊಟ್ಟರೆ ಸಾಕು.

ಟೆಂಡರ್‌ ಶ್ಯೂರ್‌ ಯೋಜನೆಯಡಿ ಬಿಬಿಎಂಪಿ ನಗರದ 20 ರಸ್ತೆಗಳಿಗೆ ₹ 100 ಕೋಟಿ ಖರ್ಚು ಮಾಡಲಿದೆ. ರಸ್ತೆಗಳು ಬಹು ಸುಂದರವಾಗಿ ನಿರ್ಮಾಣವಾಗುತ್ತಿವೆ ! ನಿಜ, ಅದೇ ₹ 100 ಕೋಟಿಯಲ್ಲಿ ಎಷ್ಟು ನಿರ್ಗತಿಕ ಕೇಂದ್ರಗಳನ್ನು ಕಟ್ಟಬಹುದಿತ್ತು, ಎಷ್ಟು ಹೊಸ ಅಂಗನವಾಡಿಗಳನ್ನು ನಿರ್ಮಿಸಬಹುದಿತ್ತು?
ಬಡವರಿಗೆ ಮನೆ ಕಟ್ಟಿಕೊಡಲು ಹಣ ಇಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ. ಅದೇ ಬಿಬಿಎಂಪಿ 2013ರಲ್ಲಿ ಈಜಿಪುರದ 15 ಎಕರೆ ಜಾಗವನ್ನು ಗರುಡಾ ಮಾಲ್‌ ಮಾಲೀಕರಿಗೆ ನೀಡಿತು. ಅದರಲ್ಲಿ ಅರ್ಧ ಭಾಗದಲ್ಲಿ ಮನೆ ಕಟ್ಟಲು, ಅರ್ಧ ಭಾಗದಲ್ಲಿ ಮಾಲ್‌ ಕಟ್ಟಲು ಅನುಮತಿ ನೀಡಿತು. ಇದರಿಂದಾಗಿ ಬೀದಿಪಾಲಾದವರು ಸಾವಿರಾರು  ಮಂದಿ! 

ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಬಿಬಿಎಂಪಿ ಬಡತನ ನಿರ್ಮೂಲನೆಯನ್ನು ಕೇಂದ್ರವಾಗಿಟ್ಟು ಆಲೋಚಿಸಿದರೆ ಹಲವಾರು ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಕಳೆದ ವಾರ ₹ 300 ಕೋಟಿ ವೆಚ್ಚದಲ್ಲಿ ಎರಡು ಎಲಿವೇಟೆಡ್‌ ರಸ್ತೆಗಳನ್ನು ನಿರ್ಮಿಸುವುದಾಗಿ ಘೋಷಿಸಿತು. ಇದೇ ಮೊತ್ತದಲ್ಲಿ ನೂರಾರು ಬಸ್‌ ತಂಗುದಾಣಗಳನ್ನು ನಿರ್ಮಿಸಬಹುದಿತ್ತು. ಮುಂಬೈ ಸರ್ಕಾರ ಅಲ್ಲಿನ ಸಾರಿಗೆ ನಿಗಮಕ್ಕೆ ₹ 150 ಕೋಟಿ ಅನುದಾನ ನೀಡಿದ್ದರಿಂದ ಮುಂಬೈಯಲ್ಲಿ ಬಸ್ ದರ ಕಡಿಮೆಯಾಗಿದೆ. ಆ ನೀತಿಯನ್ನು ಇಲ್ಲೂ ಜಾರಿಗೆ ತಂದು ಬಿಬಿಎಂಪಿಯು ಬಿಎಂಟಿಸಿಗೆ ₹ 100 ಕೋಟಿ ಅನುದಾನ ನೀಡಿದರೆ ಬಸ್‌ ದರ ಇಳಿಯುತ್ತದೆ. ನಗರದ 52 ಲಕ್ಷ ಜನರ ಖರ್ಚು ವೆಚ್ಚ ಕಡಿಮೆಯಾಗುತ್ತದೆ. ಸಾರಿಗೆ ವ್ಯವಸ್ಥೆ ಮೇಲೆ ₹ 300 ಕೋಟಿ ಖರ್ಚು ಮಾಡಲೇಬೇಕು ಎಂಬ ಹಟ ಸರ್ಕಾರಕ್ಕೆ ಇದ್ದರೆ ಅದನ್ನು ಬಸ್‌ ಸಂಚಾರ ಉತ್ತಮಗೊಳಿಸಲು ಮಾಡಲಿ. ಆಗ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ, ಬಡವರಿಗೂ ಅನುಕೂಲವಾಗುತ್ತದೆ.

ನಗರದಲ್ಲಿ 1.2 ಲಕ್ಷ ಬೀದಿ ವ್ಯಾಪಾರಿಗಳು ಇದ್ದಾರೆ. ನಗರವನ್ನು ಸುಂದರಗೊಳಿಸುವ ನೆಪದಲ್ಲಿ ಬಿಬಿಎಂಪಿ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುತ್ತಿದೆ. ಅದರ ಬದಲು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಬೀದಿ ವ್ಯಾಪಾರಿಗಳನ್ನು ನೋಂದಾಯಿಸಿ ಮಳೆ, ಗಾಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ಮಾಲ್‌ಗಳ ಜಾಗದಲ್ಲಿ ಸಂತೆಗಳನ್ನು ಶುರು ಮಾಡಿದರೆ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ. ಇನ್ನೂ ಹೆಚ್ಚು ಜನರು ವ್ಯಾಪಾರ ಕಡಿಮೆ ಮಾಡಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ನಗರದ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳು ಸಿಗುತ್ತವೆ.

ಈ ಎಲ್ಲ ಅಂಶಗಳನ್ನು ಜಾರಿಗೆ ತರಲು  ಸ್ಥಳೀಯ ಆಡಳಿತದಲ್ಲಿ ಬಡವರ ಪ್ರಾತಿನಿಧ್ಯ ಇರಬೇಕು. ನಗರದ ವಾರ್ಡ್ ಸಮಿತಿಗಳಲ್ಲಿ ಸ್ಥಳೀಯ ನಿವಾಸಿಗಳಿಗೆ ಪ್ರಾತಿನಿಧ್ಯ ಸಿಗಬೇಕು. ಆದರೆ, ಇಂದು ಸಮಿತಿಗಳಲ್ಲಿ ಬಡಾವಣೆ ನಿವಾಸಿಗಳ ಸಂಘದ ಪದಾಧಿಕಾರಿಗಳೇ ತುಂಬಿ ಹೋಗಿದ್ದಾರೆ. ಯಾವುದಾದರೂ ವಾರ್ಡ್ ಸಮಿತಿಯಲ್ಲಿ ಅಲ್ಲಿನ ಪೌರಕಾರ್ಮಿಕರನ್ನು ಅಥವಾ ಗಾರ್ಮೆಂಟ್‌ ಕಾರ್ಮಿಕರನ್ನು ಅಥವಾ ಬೀದಿ ವ್ಯಾಪಾರಿಗಳನ್ನು ಸೇರಿಸಿಕೊಂಡರೆ ಬಡವರ ಪರವಾಗಿ ತೀರ್ಮಾನಗಳು ಬರುತ್ತವೆ.

ಬಿಬಿಎಂಪಿ ಬಜೆಟ್‌ನಲ್ಲಿ ಬಡವರಿಗೆ ಮೀಸಲಿಡುವ ಹಣ ಅಲ್ಪ ಪ್ರಮಾಣದ್ದು. ಅದರಲ್ಲಿ ಬಹುತೇಕ ಹಣ ಬಳಕೆಯಾಗುವುದಿಲ್ಲ. ಬಡವರಿಗಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬುದನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಈಗ ಈ ಕೆಲಸ ಆಗುತ್ತಿಲ್ಲ. ನಗರದ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನು ರಚಿಸಲಾಗಿದೆ. ಅದರ ಜೊತೆಗೆ ಪ್ರತಿ ವಾರ್ಡ್‌ನಲ್ಲೂ ಬಡವರಿಗೆ ಮೀಸಲಾದ ಯೋಜನೆಗಳು ಯಾವುವು ಎಂಬ ಮಾಹಿತಿ ಫಲಕವನ್ನು ಹಾಕಬೇಕು. ಪ್ರತಿ ವಾರ್ಡ್‌ನಲ್ಲಿ ತಿಂಗಳಿಗೊಮ್ಮೆ ಸಾರ್ವಜನಿಕ ಸಭೆ ನಡೆಸಿ ಈ ಯೋಜನೆಗಳ ಖರ್ಚು ವೆಚ್ಚದ ಮಾಹಿತಿ ನೀಡಬೇಕು. ಆಗ ಪಾರದರ್ಶಕತೆ ತಾನಾಗಿಯೇ ಬರುತ್ತದೆ.
ಅಸಮಾನತೆಗಳ ಐಟಿ ನಗರವನ್ನು ಇನ್ನಷ್ಟು ಸ್ಮಾರ್ಟ್‌ ಮಾಡುವ ಮುನ್ನ ಸಮಾನತೆ, ಸಾಮಾಜಿಕ ನ್ಯಾಯ ಎಂಬ ಪದಗಳಿಗೆ ಅರ್ಥ ಕೊಡುವುದು ಬಿಬಿಎಂಪಿಯ ಜವಾಬ್ದಾರಿ.
(ಲೇಖಕ–ಸಾಮಾಜಿಕ ಕಾರ್ಯಕರ್ತ)
*

ಬಿಬಿಎಂಪಿಗೆ ಚುನಾವಣೆ ಘೋಷಣೆ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ‘ಪ್ರಜಾವಾಣಿ’ ತಜ್ಞರಿಂದ ಲೇಖನ ಆಹ್ವಾನಿಸಿ ಪ್ರಕಟಿಸುತ್ತಿದೆ. ಬಿಬಿಎಂಪಿಯಲ್ಲಿ ಬರುವ ಹೊಸ ಕೌನ್ಸಿಲ್‌ನ ಆಡಳಿತಕ್ಕೆ ಈ ಲೇಖನಮಾಲೆ ಒಂದು ದಿಕ್ಸೂಚಿ ಆಗಬೇಕು ಎನ್ನುವ ಆಶಯ ಪತ್ರಿಕೆಯದಾಗಿದೆ. ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT