ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಮನೆ ಕಟ್ಟಿಸಿಕೊಡಿ: ಬುರ್ರಕಥಾ ಲಕ್ಷ್ಮಮ್ಮ ಮನವಿ

Last Updated 10 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೋಲಾರ: ‘ಮೂವತ್ತು ವರ್ಸ್‌ದಿಂದ ನೆರಳು ಕೊಟ್ಟಿರೋ ಈ ಗುಡುಸ್ಲು, ಬುರ್ರಕತೆಯ ಬಿಟ್ಟರೆ ನಂಗೆ ಬೇರೆ ಯಾವ ಆಸ್ತಿಯೂ ಇಲ್ಲ. ಒಂದು ಸಣ್ಣ ಮನೆ ಕಟ್ಟಿಸಿಕೊಡಿ ಎಂದು ಐದಾರು ಬಾರಿ ಪಂಚಾಯ್ತಿಗೆ ಅರ್ಜಿ ಕೊಟ್ಟೆ, ಜಾಗ ಇದ್ದರೆ ತೋರ್ಸು ಕಟ್ಸಿ ಕೊಡ್ತೀವಿ ಅಂದ್ರ, ನಾನೆಲ್ಲಿಂದ ಜಾಗ ತರ್ಲಿ?’

–ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿದ್ದ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಯನ್ನು ಭಾನುವಾರವಷ್ಟೇ ಸ್ವೀಕರಿಸಿ ಬಂದಿರುವ ಜಿಲ್ಲೆಯ ಬಂಗಾರ­ಪೇಟೆ ತಾಲ್ಲೂಕಿನ ಕಾರ­ಹಳ್ಳಿಯ ಲಕ್ಷ್ಮಮ್ಮ  ತನ್ನ ಮುರುಕಲು ಗುಡಿ­ಸಲಿನ ಮುಂದೆ ಕುಳಿತು ಹೇಳಿದ ಮಾತಿದು.

ಕಾರಹಳ್ಳಿ ಮುಖ್ಯರಸ್ತೆಯ ಪಕ್ಕದ­ಲ್ಲಿರುವ ಈರಣ್ಣ ಗುಡಿಗೆ ಸೇರಿದ ಜಾಗ­ದಲ್ಲಿ, ದೊಡ್ಡ ಆಲದ ಮರದ ನೆರಳಲ್ಲಿ ಕಟ್ಟಿಕೊಂಡಿರುವ ಗುಡಿಸಲಿನಲ್ಲಿ ನಾಡಿನ ಬುರ್ರಕತೆ ಕಲಾ ಪ್ರಕಾರ­ದೊಂದಿಗೆ ಈ ಮಹಿಳೆ ಜೀವಿಸುತ್ತಿದ್ದಾರೆ. ಗುಡಿಸಲ ಬದುಕಿಗೆ ಬುರ್ರಕತೆಯೇ ಆಧಾರ.
ಪ್ರಶಸ್ತಿಯ ಜೊತೆಗೆ ನೀಡಿರುವ ಪ್ರಶಂಸಾ ಫಲಕವನ್ನು ತೂಗುಹಾಕಲೂ ಅವರ ಗುಡಿಸಲಿನಲ್ಲಿ ಸರಿಯಾದ ಗೋಡೆ ಇಲ್ಲ. ಬಿಪಿಎಲ್ ಕಾರ್ಡಿನ ಪಡಿತರ, ಸೌದೆ ಒಲೆ ಅಡುಗೆ, ಬುಡ್ಡಿ­ದೀಪದ ಬೆಳಕಿನಲ್ಲಿ  ಅವರ ಜೀವನ ಸಾಗಿದೆ. ಅವರನ್ನು ಸಂದರ್ಶಿಸುವ ಸಲು­ವಾಗಿ   ಹಳ್ಳಿಗೆ ಭೇಟಿ ನೀಡಿದ ವೇಳೆ­, ಪ್ರಶಸ್ತಿ ಜೊತೆಗೆ ಬಂದಿದ್ದ ₨ 10 ಸಾವಿರ ಮೌಲ್ಯದ ಚೆಕ್‌ಅನ್ನು ತಾನು ಹೊಂದಿ­ರುವ ಪ್ರಗತಿ ಗ್ರಾಮೀಣ ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕೆ ಅಥವಾ ಬೇರೆ ಬ್ಯಾಂಕಿನಲ್ಲಿ ಕೊಡಬೇಕೆ ಎಂದು ಓದು ತಿಳಿದ ಮಹಿಳೆಯೊಬ್ಬರನ್ನು ಅವರು ಬೆಳಿಗ್ಗೆ ಕೇಳುತ್ತಾ ನಿಂತಿದ್ದರು!

‘ಸಾವಿನ ಮನೆಗಳಲ್ಲಿ ಮಾತ್ರ ಬುರ್ರ­ಕತೆ­ಯನ್ನು ಹಾಡಲು ಕರೀತಾರೆ. ಹಾಡಲು ಬಾ ಅಂತ ಕರೆದರೆ ಜೀವನ. ಕರೀಲಿಲ್ಲ ಅಂದ್ರೆ ಏನ್‌ ಮಾಡಾಣ? ಇರು­ಳೆಲ್ಲ ಹಾಡಿದ್ರೆ ಬರೋ ಪುಡಿಗಾಸಲ್ಲಿ ಮಗಳ್ನ ಓದುಸ್ಲಾ? ಕಾಯಿಲೆ ಬಿದ್ದ ಗಂಡನ್ನ ನೋಡ್ಲಾ?’ ಎಂದು 60 ವಯಸ್ಸು ದಾಟಿದ ಲಕ್ಷ್ಮಮ್ಮ ತಮ್ಮ ಅಸಹಾಯಕತೆ ಹೊರಹಾಕಿದರು.

ಕಷ್ಟ ಅನಿವಾರ್ಯವಲ್ಲ

ರಾಜ್ಯದಲ್ಲಿ ಬಹುತೇಕ ಜನಪದ ಕಲಾವಿದರು ಕಷ್ಟದ ಪರಿಸ್ಥಿತಿ­ಯಲ್ಲೇ ಜೀವನ ನಡೆಸುತ್ತಿದ್ದಾರೆ. ಕೆಲವರು ಭಿಕ್ಷೆ ಬೇಡುತ್ತಾರೆ. ಅದರೊಂದಿಗೆ ಕಲಾ ಪ್ರಕಾರ­ಗಳನ್ನು ಉಳಿಸುವ ಕೆಲಸವನ್ನೂ ಮಾಡು­ತ್ತಿದ್ದಾರೆ. ಲಕ್ಷ್ಮಮ್ಮ ಅವರಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ಅದರೊಂದಿಗೆ ಅವರು ಗೌರವ­ಯುತ­ವಾಗಿ ಬದುಕಲು ಬೇಕಾದ ಅನುಕೂಲ­ಗಳನ್ನು ಸರ್ಕಾರ, ಜಿಲ್ಲಾಡಳಿತ ಮಾಡಿಕೊಡಬೇಕು.
–ಪಿಚ್ಚಳ್ಳಿ ಶ್ರೀನಿವಾಸ್‌, ಜಾನಪದ ಅಕಾಡೆಮಿ ಅಧ್ಯಕ್ಷ

ಬಂಗಾರಪೇಟೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಒಬ್ಬಳೇ ಮಗಳು ಮುನಿರತ್ನ ಮತ್ತು ಮೂರು ವರ್ಷದಿಂದ ಪಾರ್ಶ್ವವಾಯುವಿಗೆ ತುತ್ತಾ­­ಗಿ­­ರುವ ಪತಿ ಮುನಿಸ್ವಾಮಿ­ಯನ್ನೂ ಸಾಕುತ್ತಾ ಈ ಕಲಾವಿದೆ ತನ್ನೊಂ­ದಿಗೆ ಸುಮಾರು ಇಪ್ಪತ್ತು ಕಲಾ­ವಿ­ದ­ರನ್ನು ಸೇರಿಸಿಕೊಂಡು ಜಿಲ್ಲೆಯಾ­ದ್ಯಂತ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತಮಿಳುನಾಡು ಗಡಿಭಾಗದ ಹಳ್ಳಿ­ಗ­ಳಿಗೂ ತೆರಳಿ ಕನ್ನಡ–ತೆಲುಗಿನಲ್ಲಿ ಬುರ್ರ­ಕತೆ ಗಾಯನ, ನಾಟಕ ಪ್ರದರ್ಶಿಸಿ ಬದು­ಕುತ್ತಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕು­ಗಳಲ್ಲೂ ನೆಲೆಸಿರುವ ಕಲಾವಿದರ ಸಂಗ­ಮ­ದಲ್ಲಿಯೇ ಬುರ್ರಕತೆ ಸಾಗುತ್ತಿದೆ.

ಬಾಲನಾಗಮ್ಮ, ಕಾಂಬೋಜಿರಾಜ, ನಲ್ಲತಂಗಿ, ಅಲ್ಲಿ ಅರ್ಜುನ, ಸಾಸುಲು ಚಿನ್ನಮ್ಮ, ದೇಸರಿಂಗರಾಜ ಕತೆ ಸೇರಿ­ದಂತೆ ಹಲವು ಬುರ್ರಕತೆಗಳನ್ನು ನೆನಪಿನ ಶಕ್ತಿ­ಯಿಂದ ಪ್ರತಿಬಾರಿ ಹೊಸದಾಗಿ ನಿರೂಪಿಸುವ ಕುಶಲಗಾರಿಕೆಯ ಲಕ್ಷ್ಮಮ್ಮ 19 ಕಲಾವಿದರನ್ನು ತನ್ನ ಜೊತೆಗೇ ಕರೆದೊಯ್ಯುತ್ತಾರೆ.

ರಾತ್ರಿಯಾದರೆ, ಕೆಲವು ಸಾಮಗ್ರಿ­ಗಳನ್ನು ಹತ್ತಿರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಟ್ಟು ಬರುತ್ತಾರೆ. ಮಳೆ ಬಂದರೆ ಗುಡಿಸಲು ಸೋರುವುದರಿಂದ ಶಾಲೆಯ ಆವರಣವೇ ತಾತ್ಕಾಲಿಕ ಆಶ್ರಯ­ತಾಣವಾಗುತ್ತದೆ.

‘ಇಂಥ ಅಪರೂಪದ ಕಲಾವಿದೆ ನಮ್ಮ ಹಳ್ಳಿಯಲ್ಲಿದ್ದರು ಎಂಬುದು ಅವರನ್ನು ದಿನವೂ ನೋಡುತ್ತಿದ್ದರೂ ಗೊತ್ತಾಗಿರಲಿಲ್ಲ. ಅವರಿಗೆ ಸೂರನ್ನು ಕಲ್ಪಿಸಿದರೆ ಜನಪದ ಕಲೆಯನ್ನು ನಿಜ­ವಾದ ಅರ್ಥದಲ್ಲಿ ಪ್ರೋತ್ಸಾಹಿ­ಸಿದಂತಾ­ಗುತ್ತದೆ’ ಎಂದು ಹಳ್ಳಿಯ ಸರ್ಕಾರಿ ಶಾಲೆಯ ಸಹಶಿಕ್ಷಕ ಮುರಳಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT