ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿದಾರರ ಅನುಕೂಲಕ್ಕೆ ತಂತಿ ಬೇಲಿ!

ಬೇಗೂರು ಕೆರೆ ಒತ್ತುವರಿಗಿಲ್ಲ ತಡೆ
Last Updated 25 ಏಪ್ರಿಲ್ 2015, 20:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೇಗೂರು ಕೆರೆ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ಹೊಸ ನಿದರ್ಶನ ಕೆರೆಗೆ ಹಾಕುತ್ತಿರುವ ಅಸಮರ್ಪಕ ತಂತಿ ಬೇಲಿ.

ರಾಜಧಾನಿಯಲ್ಲಿ ಇಂದಿಗೂ ಹೇಗೋ ಉಸಿರಾಡಿಕೊಂಡು ಉಳಿದಿರುವ ಕೆಲವೇ ಕೆಲವು ಕೆರೆಗಳಲ್ಲಿ ಬೇಗೂರು ಕೆರೆಯೂ ಒಂದು. 10ನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ಈ ಕೆರೆ ನಿರ್ಮಾಣವಾಗಿತ್ತು ಎನ್ನಲಾಗಿದೆ. 137 ಎಕರೆ ವಿಸ್ತೀರ್ಣದ ಬೇಗೂರು ಕೆರೆ ಈಗಾಗಲೇ ನಾಲ್ಕೂ ಕಡೆಯಿಂದ ಒತ್ತುವರಿಯಾಗಿರುವುದನ್ನು ಸರ್ಕಾರ ನೇಮಿಸಿದ ಸಮಿತಿಗಳೇ ತಿಳಿಸಿವೆ.

ಕೆರೆಯ ಉತ್ತರಕ್ಕೆ ಮುಖ್ಯರಸ್ತೆಯಿದ್ದು, ಇನ್ನುಳಿದ ಮೂರು ದಿಕ್ಕಿನಲ್ಲೂ ವಸತಿ ಸಮುಚ್ಚಯಗಳು ನಿರ್ಮಾಣವಾಗಿವೆ.  ಬೇಗೂರು ಗ್ರಾಮದ ಕಡೆಯಿಂದ ಕೆರೆಯ ಮೇಲೆಯೇ ಮನೆಗಳನ್ನು ನಿರ್ಮಿಸಿದ್ದಾರೆ. ಒತ್ತುವರಿಯ ಪಟ್ಟಿಗೆ ಹೊಸ ಸೇರ್ಪಡೆ ಇಡೀ ಕೆರೆಗೆ ಹೊಸದಾಗಿ ಹಾಕುತ್ತಿರುವ ಕಬ್ಬಿಣದ ಬೇಲಿ. ‌ಉತ್ತರ ದಿಕ್ಕಿನೆಡೆಗಿನ ಬೇಲಿ, ಕೆರೆಯ ಜಾಗದಿಂದ ಸುಮಾರು 25 ಅಡಿಯಷ್ಟು ದೂರ ಇದ್ದು, ಕೆರೆಯಂಚನ್ನು ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ಕುಳಗಳಿಗೇ ಸಹಕಾರಿಯಾಗಿದೆ.

‘80ರ ದಶಕದಲ್ಲೇ ಕೆರೆಯ ಮಧ್ಯೆ ಧನ ವಂತರೊಬ್ಬರು ಖಾಸಗಿಯಾಗಿ ಸೇತುವೆ ಕಟ್ಟಿಕೊಂಡು, ಮತ್ತೊಂದು ಬದಿಯಲ್ಲಿ ಲೇಔಟ್ ಮಾಡಿಕೊಂಡರು. ಇದೇ ಸೇತುವೆ ಬಳಸಿಕೊಂಡು, ಅಲ್ಲಿಂದಿಚೆಗೇ ಆ ಭಾಗದಲ್ಲಿನ ಅತಿಕ್ರಮ ನಡೆದುಕೊಂಡೇ ಬಂದಿದೆ. ವಸತಿ ಸಮುಚ್ಚಯಗಳು ಬೆಳೆದು ನಿಂತಿವೆ. ನಾವು ಚಿಕ್ಕವರಿದ್ದಾಗ ಕೆರೆಯ ವಿಸ್ತಾರ ದೊಡ್ಡದಿತ್ತು. ನೋಡಿ, ನಮ್ಮ ಕಣ್ಣ ಮುಂದೆಯೇ 30 ಅಡಿ ಜಾಗ ಬಿಟ್ಟು ಬೇಲಿ ಹಾಕುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿ ಸುತ್ತಾರೆ ಬೇಗೂರು ಕೆರೆಯ ನೀರಗಂಟಿ ಯಾಗಿದ್ದ ಕುಟುಂಬದ ಸದಸ್ಯರು. ‌

ಒಂದು ವೇಳೆ ಈ ಸೇತುವೆಯನ್ನು ಅಕ್ರಮವೆಂದು ಕೆಡವಿದರೆ, ಸೇತುವೆಯ ಇನ್ನೊಂದು ಬದಿಯವರಿಗೆ ಸಂಪರ್ಕ ಸಾಧಿಸುವ ನಕ್ಷೆಯ ರಸ್ತೆ ಇಲ್ಲವೇ ಇಲ್ಲ ಎಂದು ಅವರು ಹೇಳುತ್ತಾರೆ.

‘ಕಳೆದೊಂದು  ವರ್ಷದಿಂದ ಅನಧಿಕೃತವಾಗಿ ಅಗಾಧ ಪ್ರಮಾಣದ ಕಟ್ಟಡದ ಕಸವನ್ನು ಕೆರೆಯ ಪೂರ್ವ ಭಾಗದಲ್ಲಿ ತುಂಬಲಾಗಿತ್ತು. ಈಗ ಇದೇ ಜಾಗವನ್ನು ಸಮ ಮಾಡಿ, 500 ಮೀಟರ್‌ನಷ್ಟು  ಕಬ್ಬಿಣದ ಬೇಲಿಯನ್ನು ನಿರ್ಮಿಸಲಾಗುತ್ತಿದ್ದೆ. ಅಷ್ಟೂ ಉದ್ದಕ್ಕೂ 25 ಅಡಿಗಳ ಅಂತರ ಬಿಟ್ಟು ಬೇಲಿ ಹಾಕಲಾಗುತ್ತಿದೆ. ಇದು ಇಂದಿನ ನಿವೇಶನದ ಬೆಲೆಯಲ್ಲಿ ಕೋಟಿಗಟ್ಟಲೆ ಆಸ್ತಿಯಾಗಿದೆ. ಈ ಪ್ರದೇಶದಲ್ಲಿ ಒಂದು ಚದರ ಅಡಿ ಜಾಗ ₹ 3 ಸಾವಿರಕ್ಕೂ ಹೆಚ್ಚಿದೆ’ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

‘ಕೆರೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದೆ. ಈ ಕೆಲಸ ಪಾಲಿಕೆಯಿಂದಲೇ ಆಗಬೇಕಿತ್ತು. ಆದರೆ, ಬಿಬಿಎಂಪಿ ಎಂಜಿನಿಯರ್‌ಗಳು ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಈಗ ಹಾಕುತ್ತಿರುವ ಬೇಲಿ ಬಗ್ಗೆ ನಮಗೇನು ಗೊತ್ತಿಲ್ಲ. ಕೆರೆ ಎಷ್ಟು ಉಳಿದಿದೆಯೋ’ ಎಂದು  ಪಾಲಿಕೆಯ ಮಾಜಿ ಸದಸ್ಯ ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT