ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಎದುರಾಳಿಯೊಳಗೊಬ್ಬ ಆತ್ಮೀಯ ಸ್ನೇಹಿತ...

ಪಾಕಿಸ್ತಾನದ ಹಿರಿಯ ಆಟಗಾರ ಹಸನ್‌ ಸರ್ದಾರ್‌್ ಬಿಚ್ಚಿಟ್ಟ ನೆನಪುಗಳು
Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ‘ಡ್ರಿಬ್ಲಿಂಗ್ ಮಾಡುವಾಗ ಆತ ತೋರುತಿದ್ದ ಚಾಣಾಕ್ಷತನ ಮೆಚ್ಚುವಂತದ್ದು. ಆದ್ದರಿಂದ ನೀನು ನಮ್ಮ ತಂಡಕ್ಕೆ ಬಂದುಬಿಡು. ಆಗ ನಮ್ಮದು ವಿಶ್ವದ ಶ್ರೇಷ್ಠ ತಂಡವಾಗುತ್ತದೆ ಎಂದು ಹೇಳುತ್ತಿದ್ದೆ. ಆದರೆ ಆತ ನೀನೇ ನಮ್ಮ ತಂಡಕ್ಕೆ ಬಾ ಎನ್ನುತ್ತಿದ್ದ...’
ಹಾಕಿ ದಿಗ್ಗಜ ಭಾರತದ ಮಹಮ್ಮದ್‌ ಶಾಹಿದ್‌ ಜೊತೆಗಿನ ನೆನಪುಗಳನ್ನು ಹೀಗೆ ಮೆಲುಕು ಹಾಕಿದ್ದು ಪಾಕಿಸ್ತಾನದ ಸೆಂಟರ್‌ ಫಾರ್ವರ್ಡ್‌ ಆಟಗಾರ ಹಸನ್‌ ಸರ್ದಾರ್‌.
ಪಾಕ್‌ ತಂಡ 1984ರ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ಗೆದ್ದಾಗ ಸರ್ದಾರ್ ಅವರು ತಂಡದಲ್ಲಿದ್ದರು. 1982ರ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ ತಂಡದಲ್ಲಿಯೂ ಇದ್ದರು. ಅವರು ಶಾಹಿದ್‌ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

‘ಚುರುಕಾಗಿ ಡ್ರಿಬ್ಲಿಂಗ್ ಮಾಡುವಲ್ಲಿ ಶಾಹಿದ್‌ ಪರಿಣತಿ ಹೊಂದಿದ್ದರು. ಆದರೆ ಅವರು ವೇಗದಲ್ಲಿ ಯಾವತ್ತೂ ರಾಜಿ ಮಾಡಿಕೊಂಡವರಲ್ಲ. ವೇಗ ಮತ್ತು ಡ್ರಿಬ್ಲಿಂಗ್‌ನಲ್ಲಿ ಪರಿಣತಿ ಎರಡನ್ನೂ ಒಬ್ಬ ಆಟಗಾರನಲ್ಲಿಯೇ ನೋಡ ಸಿಗುವುದು ಅಪರೂಪ’ ಎಂದು ಸರ್ದಾರ್‌ ಅವರು ಶಾಹಿದ್‌ ಆಟದ ವೈಖರಿಯನ್ನು ಮೆಲುಕು ಹಾಕಿದ್ದಾರೆ.

‘ಶಾಹಿದ್  ಜೊತೆ ಸಾಕಷ್ಟು ಸವಿ ನೆನಪುಗಳಿವೆ. ನಾವು ಬೇರೆ ಬೇರೆ ದೇಶಗಳ ತಂಡಗಳಲ್ಲಿ ಆಡಿದ್ದರೂ ಆತ್ಮೀಯ ಸ್ನೇಹಿತರು. ಆದರೆ ಪಂದ್ಯವಾಡುವಾಗ ವೃತ್ತಿಪರತೆಯನ್ನು ಬಿಡುತ್ತಿರಲಿಲ್ಲ. ಶಾಹಿದ್‌ ಶ್ರೇಷ್ಠ ಆಟಗಾರನಷ್ಟೇ ಅಲ್ಲ, ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿ’ ಎಂದು ಅವರು ಹೇಳಿದ್ದಾರೆ.

‘ಭಾರತ ವಿರುದ್ಧದ ಪಂದ್ಯವೆಂದರೆ ನಮ್ಮಲ್ಲಿ ಕುತೂಹಲವಿರುತ್ತಿತ್ತು. ಎದುರಾಳಿಯನ್ನು ಮಣಿಸುವುದು ಕಠಿಣವಾಗಿರುತ್ತಿತ್ತು. ಜಾಫರ್ ಇಕ್ಬಾಲ್‌ ಮತ್ತು ಶಾಹಿದ್‌ ಚುರುಕಾಗಿ ಆಡುವಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಇವರು ತಂಡದಲ್ಲಿದ್ದಾಗ ಭಾರತವನ್ನು ಮಣಿಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕಾಗುತ್ತಿತ್ತು’ ಎಂದು ಪಾಕ್ ತಂಡದ ಮಾಜಿ ನಾಯಕ ಸಮೀಯುಲ್ಲಾ ನೆನಪಿಸಿಕೊಂಡಿದ್ದಾರೆ. ಸಮೀಯುಲ್ಲಾ 1982ರ ಏಷ್ಯನ್‌ ಕೂಟಕ್ಕೆ ಪಾಕ್ ತಂಡದ ನಾಯಕರಾಗಿದ್ದರು.

‘1982ರ ಏಷ್ಯನ್ ಕ್ರೀಡಾಕೂಟದ ಫೈನಲ್‌ನಲ್ಲಿ ನಾವು ಭಾರತವನ್ನು ಮಣಿಸಿ ಚಿನ್ನದ ಪದಕವನ್ನು ಜಯಿಸಿದೆವು. ಆದರೆ ಆ ಪಂದ್ಯದಲ್ಲಿ ಜಾಫರ್‌ ಮತ್ತು ಶಾಹಿದ್‌ ಆಕ್ರಮಣಕಾರಿ ಆಟ ಗಮನ ಸೆಳೆದಿತ್ತು. ಆ ಪಂದ್ಯದಲ್ಲಿ ಅವರ ಆಟದ ಸೊಬಗು ಕಣ್ತುಂಬಿಕೊಳ್ಳುವುದೇ ಆನಂದವಾಗಿತ್ತು’ ಎಂದೂ ಸಮೀಯುಲ್ಲಾ ಸ್ಮರಿಸಿಕೊಂಡಿದ್ದಾರೆ.
ಮಾತು ಬಿಟ್ಟಿದ್ದ ಗೆಳೆಯ: ‘ಏಷ್ಯನ್‌ ಕ್ರೀಡಾಕೂಟದ ಬಳಿಕ ಇಸಾಂಡ್ ಕಪ್‌ ಟೂರ್ನಿಯಲ್ಲಿ ಆಡಲು ನಾವು ಮೆಲ್ಬರ್ನ್‌ಗೆ ಹೋಗಿದ್ದೆವು. ಆಗ ಭಾರತ ತಂಡ ಕೂಡ ಬಂದಿತ್ತು. ಏಷ್ಯಾ ಟೂರ್ನಿಯಲ್ಲಿ ಸೋತಿದ್ದ ಕಾರಣ ಆತ ತುಂಬಾ ಬೇಸರದಲ್ಲಿದ್ದ.  ಆದ್ದರಿಂದ ಕೆಲವು ದಿನ ಮಾತನಾಡಿರಲಿಲ್ಲ. ಆ ಟೂರ್ನಿಯಲ್ಲಿ ಭಾರತ ತಂಡ ಪಾಕ್‌ ವಿರುದ್ಧ ಗೆಲುವು ಸಾಧಿಸಿದ್ದ ವೇಳೆ ಇಲ್ಲಿ ಬಂದ ಫಲಿತಾಂಶ ಏಷ್ಯನ್‌ ಗೇಮ್ಸ್‌ನಲ್ಲಿ ಬರಬೇಕಿತ್ತು ಎಂದಿದ್ದ’ ಎಂದೂ ಸರ್ದಾರ್ ನೆನಪಿಸಿಕೊಂಡರು.

‘1980ರಲ್ಲಿ ಶಾಹಿದ್ ತಂಡದಲ್ಲಿದ್ದಾಗ ಆತನಿಗೆ 20 ವರ್ಷವಷ್ಟೇ. ತಂಡದಲ್ಲಿದ್ದ ಪ್ರತಿ ಆಟಗಾರರಿಗೂ ಗೌರವ ನೀಡುತ್ತಿದ್ದ. ಆತನಲ್ಲಿನ ಡ್ರಿಬ್ಲಿಂಗ್ ಕೌಶಲ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು  ಅನುಕೂಲವಾಯಿತು’ ಎಂದು ಆಗ ತಂಡದಲ್ಲಿದ್ದ ಎಂ.ಕೆ. ಕೌಶಿಕ್‌ ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT