ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತೀರ ಶುಚಿಗೊಳಿಸುವ ಯಂತ್ರ!

ವಿದ್ಯಾರ್ಥಿ ತಂತ್ರಜ್ಞ
Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಡಲತೀರ ವೀಕ್ಷಣೆಗೆ ತೆರಳುವ ಪ್ರವಾಸಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಕಿನಾರೆಗೆ ಬಂದು ಅಪ್ಪಳಿಸುವ ಅಲೆಗಳ ಚಂದ ಆಸ್ವಾದಿಸುವ ಈ ಮಂದಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಬರುವಾಗ ಜೊತೆಗೇ ಕಟ್ಟಿಕೊಂಡು ಬಂದ ಪೊಟ್ಟಣ ಬಿಚ್ಚಿ ತಿಂಡಿ ತಿನಿಸು ಸೇವಿಸುತ್ತಾರೆ. ಬಾಟಲಿಗಳಲ್ಲಿ ತುಂಬಿ ತಂದ ನೀರು, ಪಾನೀಯ ಕುಡಿಯುತ್ತಾರೆ. ಕೊನೆಗೆ ಎಲ್ಲಾ ತ್ಯಾಜ್ಯವನ್ನೂ ಮರಳ ರಾಶಿಯ ಮೇಲೆ ಎಸೆದು ಹೋಗುತ್ತಾರೆ!

ಇದೇ ಕಾರಣಗಳಿಂದಾಗಿ ಕರಾವಳಿ ಪ್ರದೇಶದ ಉದ್ದಕ್ಕೂ ಕಡಲ ಕಿನಾರೆಯ ತುಂಬ ತ್ಯಾಜ್ಯವೇ ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸುವುದು ಸ್ಥಳೀಯ ಆಡಳಿತಕ್ಕೂ ದೊಡ್ಡ ಸವಾಲು ಎನಿಸಿದೆ. ವರ್ಷಕ್ಕೊಮ್ಮೆ ಶ್ರಮದಾನ ಮೂಲಕ ಕೆಲವು ಸಂಘ–ಸಂಸ್ಥೆಗಳು ಸ್ವಚ್ಛತಾ ಅಭಿಯಾನ ಕೈಗೊಂಡರೂ ದಿನಕಳೆದಂತೆ ಮತ್ತದೇ ಸ್ಥಿತಿ, ಎಲ್ಲೆಲ್ಲೂ ತ್ಯಾಜ್ಯ!

ಮಂಗಳೂರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಸ್‌ಡಿಐಟಿ) ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ವಿನೇಶ್‌ ಶಕ್ತಿನಗರ, ವಿನ್ಯಾಸ್ ಕಾವೂರು, ವಿಶ್ವಪ್ರಸಾದ್‌ ಭಟ್‌ ನೆಲ್ಲಿತೀರ್ಥ, ಸುದರ್ಶನ ಮೇರಿಹಿಲ್, ಡೆರಿಲ್‌ ಡಿಸೋಜಾ ಪಾಲಿಮಾರ್‌ ಅವರೆಲ್ಲರ ತಲೆಯನ್ನು ತೀವ್ರವಾಗಿ ಕೊರೆದ ಸಂಗತಿಯೂ ಇದೇ... ಕಡಲ ತೀರದಲ್ಲಿ ಎಲ್ಲೆಲ್ಲೂ ತ್ಯಾಜ್ಯ!

ಕಾಲೇಜು ಸಮೀಪದಲ್ಲೇ ಇರುವ ಪಣಂಬೂರು ಬೀಚ್‌ಗೆ ಆಗಾಗ ಭೇಟಿ ನೀಡುತ್ತಿದ್ದ ಈ ವಿದ್ಯಾರ್ಥಿಗಳ ತಂಡಕ್ಕೆ ಕಿನಾರೆಯುದ್ದಕ್ಕೂ ಎಲ್ಲೆಂದರಲ್ಲಿ ಹರಡಿಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಏನಾದರೂ ಮಾಡಬೇಕು ಎಂಬ ಯೋಚನೆ ಹೊಳೆಯಿತು. ಕಲಿತ ತಂತ್ರಜ್ಞಾನದ ಶಿಕ್ಷಣವನ್ನು ಕಾರ್ಯರೂಪಕ್ಕಿಳಿಸಲು ಮುಂದಾದರು. ಅದರ ಪರಿಣಾಮವೇ ರೂಪು ಪಡೆದದ್ದು ಈ ‘ಬೀಚ್‌ ಕ್ಲೀನಿಂಗ್‌’ ಯಂತ್ರ. ಮರಳು ರಾಶಿ ಮೇಲೆ ಸರಾಗವಾಗಿ ಚಲಿಸಿ ತ್ಯಾಜ್ಯ ಸಂಗ್ರಹಿಸುವ ಚಾಣಾಕ್ಷ ಸಾಧನ!

ವಿಶೇಷವೆಂದರೆ, ಈ ಯಂತ್ರ ಕಸ ವಿಲೇವಾರಿಯನ್ನಷ್ಟೇ ಅಲ್ಲ, ಕಸವನ್ನು ಸಾಂದ್ರತೆಗೆ ಅನುಗುಣವಾಗಿ ಬೇರ್ಪಡಿಸುವ ಸರಳ ತಂತ್ರಜ್ಞಾನವನ್ನೂ ಒಳಗೊಂಡಿದೆ. ಕಸಕಡ್ಡಿ, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯವೆಲ್ಲವನ್ನೂ ಸಂಗ್ರಹಿಸಿ ಪ್ರತ್ಯೇಕಿಸುವ ಕೆಲಸ ಮಾಡಬಲ್ಲದು.
ಡೀಸೆಲ್‌ನಿಂದ ಚಾಲನೆಗೊಳ್ಳುವ ಎಂಜಿನ್‌ನಿಂದ ಈ ಯಂತ್ರದ ಎಲ್ಲ ಪ್ರಕ್ರಿಯೆ ನಡೆಯುತ್ತದೆ. ಕನ್ವೇಯರ್‌ ಬ್ಲೇಡ್‌ ಮರಳು ಸಮೇತ ಕಸವನ್ನು ಸಂಗ್ರಹಿಸುತ್ತದೆ. ಸಂಗ್ರಹವಾದ ಕಸ ಹಂತ ಹಂತವಾಗಿ ಜಾಲರಿ ಮಾದರಿಯಲ್ಲಿ ಅಳವಡಿಸಿದ ಬಕೆಟ್‌ನಲ್ಲಿ ಬೀಳುತ್ತದೆ. ಆ ಸಂದರ್ಭದಲ್ಲಿ ಜಾಲರಿಯ ತೂತುಗಳ ಮೂಲಕ ಮರಳು ಕೆಳಗೆ ಉದುರಿ, ತ್ಯಾಜ್ಯ ಮಾತ್ರ ಉಳಿಯುತ್ತದೆ.

‘ನಾವು ಕರಾವಳಿಯ ಮಂದಿ. ಕರಾವಳಿಯುದ್ದಕ್ಕೂ ಹರಡಿ ನಿಂತಿರುವ ಬೀಚ್‌ ವೀಕ್ಷಣೆಗೆ ನೂರಾರು ಮಂದಿ ಬರುತ್ತಾರೆ. ಪ್ರವಾಸೋದ್ಯಮದ ವಿಶೇಷ ಆಕರ್ಷಣೆ ಇದು. ಬೀಚ್‌ನಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಸಾಧನವೊಂದರ ಅಗತ್ಯವಿದೆ ಎಂಬುದನ್ನು ಮನಗಂಡು ಈ ಯಂತ್ರವನ್ನು ಸಿದ್ಧಪಡಿಸಿದ್ದೇವೆ. ಎಂಜಿನಿಯರಿಂಗ್‌ ಪದವಿಯ ಅಂತಿಮ ವರ್ಷದ ಪಾಜೆಕ್ಟ್‌ ಆಗಿಯೂ ಇದಕ್ಕೆ ರೂಪು ನೀಡಿದ್ದೇವೆ. ಸುಮಾರು ಎರಡು ತಿಂಗಳ ಪ್ರಯತ್ನದ ಬಳಿಕ ಈ ಸಾಧನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಇದಕ್ಕೆ ಅಂದಾಜು ₨30,000 ವೆಚ್ಚವಾಗಿದೆ. ಇದನ್ನು ಇನ್ನಷ್ಟು ಸುಧಾರಿಸಲು ಅವಕಾಶ ಇದೆ’ ಎನ್ನುತ್ತಾರೆ ವಿದ್ಯಾರ್ಥಿ ತಂತ್ರಜ್ಞರ ತಂಡದ ವಿನೇಶ್‌ ಶಕ್ತಿನಗರ.

‘ಈ ಯಂತ್ರದಲ್ಲಿರುವ ಕನ್ವೇಯರ್‌ ಬೆಲ್ಟ್‌, ಜಾಲರಿಯಂತಿರುವ ಬಕೆಟ್‌ನಲ್ಲಿ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. 110 ಸಿಸಿ ಎಂಜಿನ್‌ನಿಂದ ಕನ್ವೇಯರ್‌ ಮತ್ತು ವೀಲ್‌ ಚಲಿಸುತ್ತದೆ. ಇಗ್ನಿಷನ್‌ ಕಾಯಿಲನ್ನು 12 ವೋಲ್ಟ್‌ನ ಬ್ಯಾಟರಿ ಚಾರ್ಜ್‌ ಮಾಡುತ್ತದೆ. ಎಂಜಿನ್‌ ವೇಗಕ್ಕೆ ಪೂರಕವಾಗಿ ಕನ್ವೇಯರ್‌ ವೇಗ ಪಡೆದುಕೊಂಡು ಕೆಲಸ ಮಾಡುತ್ತದೆ’ ಎಂದು ವಿವರಿಸುತ್ತಾರೆ ವಿನೇಶ್‌.

‘ಇಲ್ಲಿ ಮಾನವ ಶಕ್ತಿಯ ಬಳಕೆ ತೀರಾ ಕಡಿಮೆ. ಕೆಲವೇ ಗಂಟೆಗಳಲ್ಲಿ ವಿಶಾಲ ಪ್ರದೇಶವನ್ನು ಈ ಚಿಕ್ಕ ಯಂತ್ರದ ಸಹಾಯದಿಂದಲೇ ಸ್ವಚ್ಛಗೊಳಿಸಬಹುದು. ಟಿಲ್ಲರ್‌ ಮಾದರಿಯಲ್ಲಿ ಈ ಸಾಧನ ಕೆಲಸ ಮಾಡುತ್ತ ಮರಳಿನಿಂದ ತ್ಯಾಜ್ಯವನ್ನು ಬೇರ್ಪಡಿಸಿ ಸಂಗ್ರಹಿಸುತ್ತದೆ’ ಎನ್ನುತ್ತಾರೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯದ ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ–ತಂತ್ರಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್‌’ ಪ್ರಶಸ್ತಿ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT