ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರು ಹೂತು ಹೋಗಿರುವ ಚರಿತ್ರೆಯ ಭಾಗ

Last Updated 23 ಜನವರಿ 2014, 9:21 IST
ಅಕ್ಷರ ಗಾತ್ರ

ಸಾಗರ: ಪರಂಪರೆಯಲ್ಲಿನ ಒಡಕು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿನ ಒಳಶ್ರೇಣಿಗಳ ಕಾರಣಕ್ಕೆ  ಕನಕದಾಸರು ಹೂತು ಹೋಗಿರುವ ಚರಿತ್ರೆಯ ಭಾಗವಾಗಿರುವುದು ನೋವಿನ ಸಂಗತಿ ಎಂದು ವಿದ್ವಾಂಸ ಡಾ.ಜಯಪ್ರಕಾಶ ಶೆಟ್ಟಿ ಹೇಳಿದರು.

ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಪ್ರಜ್ಞಾರಂಗ ತಂಡ ಬುಧವಾರ ಏರ್ಪಡಿಸಿದ್ದ ‘ಮುತ್ತು ಬಂದಿದೆ ಕೇರಿಗೆ’ ಎಂಬ ಕನಕದಾಸರ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಕನಕದಾಸರ ಸಾಹಿತ್ಯದ ಕುರಿತು ಅವರು ಮಾತನಾಡಿದರು.

‘ಕೊಲ್ಲುವವರು ಎಂದೂ ದೊಡ್ಡವರಲ್ಲ, ಕಾಯುವವರು ಮಾತ್ರ ದೊಡ್ಡವರು’ ಎಂಬ ಕನಕದಾಸರ ಮಾತು ಇಂದಿನ ಸಾಮಾಜಿಕ ರಾಜಕೀಯ ಸನ್ನಿವೇಶಕ್ಕೆ ಅತ್ಯಂತ ಪ್ರಸ್ತುತವಾದದ್ದು. ಜನ್ನ ಹಾಗೂ ರಾಘವಾಂಕನ ಕಾವ್ಯಕ್ಕೆ ಸಂವಾದಿಯಾಗುವ ಚಿತ್ರ ಹಾಗೂ ರೂಪಕಗಳನ್ನು ಕನಕದಾಸರ ಕಾವ್ಯದಲ್ಲೂ ಕಾಣಬಹುದು ಎಂದರು.

ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು ಕನಕದಾಸರು ಮುಖ್ಯ ಎಂದು ಭಾವಿಸಿ ಕಾವ್ಯ ರಚಿಸಿದ್ದಾರೆ. ಕನಕರ ರಾಮಧ್ಯಾನ ಚರಿತೆ ಕಾವ್ಯದಲ್ಲಿ ಭತ್ತ ಹಾಗೂ ರಾಗಿ ರೂಪಕಗಳಂತೆ ಕಂಡರೂ ಅಲ್ಲಿ ನಡೆಯುವ ವಾಗ್ವಾದ ಅನ್ನ – ಅನ್ನಗಳ ನಡುವೆಯದ್ದು. ಅನ್ನ ಸಂಕೇತ ಆಗಬಾರದು, ಹಸಿವಿನ ಪ್ರಶ್ನೆಗೆ ಉತ್ತರವಾಗಬೇಕು ಎಂಬ ಧ್ವನಿ ಅಲ್ಲಿದೆ. ಭತ್ತ ಸೋತ ನಂತರ ಅದನ್ನು ಸಂತೈಸುವ ಮೂಲಕ ಸಹಿಷ್ಣುತೆಯ ಹಾಗೂ ಸಹತ್ವದ ರಾಜಕಾರಣದ ರಾಮನನ್ನು ಕನಕರು ಕಟ್ಟಿಕೊಡುತ್ತಾರೆ ಎಂದು ವಿಶ್ಲೇಷಿಸಿದರು.

ಕರ್ನಾಟಕ ಸಂಗೀತದ ವಾಗ್ಮೇಯದಿಂದ ಕನಕದಾಸರನ್ನು ಹೊರಗಿಟ್ಟು ಪುರಂದರದಾಸರನ್ನು ಒಳಗೆ ತೆಗೆದುಕೊಂಡಿರುವ ಸಾಂಸ್ಕೃತಿಕ ರಾಜಕಾರಣವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಂಥೆಯೇ ಕೃಷ್ಣನನ್ನು ಒಳಗಿಟ್ಟು ಕನಕನನ್ನು ಹೊರಗೆಯೆ ಇರಿಸಿದ ಪ್ರಜ್ಞಾಪೂರ್ವಕ ಸನ್ನಿವೇಶವನ್ನೂ ಮರೆಯಬಾರದು. ಕನಕ ಕೃಷ್ಣರ ನಡುವೆ ಒಳಗೆ ಹೊರಗೆ ಎಂಬ ಅಂತರ ಹೋಗಿ ಪರಸ್ಪರ ಸಂಬಂಧ ಬೆಸೆಯುವಂತಾಗಲು ಸಂವಿಧಾನ ಗಟ್ಟಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಮಾತನಾಡಿ, ಕತ್ತಿಯಿಂದ ಗೆಲ್ಲುತ್ತಿದ್ದ ಪಾಳೆಗಾರರನ್ನು ತಂಬೂರಿ ಹಿಡಿದು ಲೋಕಜ್ಞಾನದ ಮೂಲಕ ಎದುರಿಸಿದ ಕನಕದಾಸರು ಮಾನವೀಯ ಮೌಲ್ಯಗಳ ಜೊತೆಗೆ ಸಮಾನತೆಯ ಮೌಲ್ಯ ಸಾರಿದ್ದು ವಿಶೇಷ ಸಂಗತಿ ಎಂದರು.

ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್‌.ಡಿ.ರೇವಣಕರ್‌, ಪ್ರಜ್ಞಾರಂಗ ತಂಡದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ವೇದಿಕೆಯಲ್ಲಿದ್ದರು. ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಶಾಶ್ವತಿ .ಸಿ. ಮತ್ತು ಸಂಗಡಿಗರು ಪ್ರಾರ್ಥಿಸಿದರು.  ಜಿ.ಸಣ್ಣಹನುಮಪ್ಪ ಸ್ವಾಗತಿಸಿದರು. ಎಚ್.ಆರ್.ಅಮರನಾಥ್‌ ವಂದಿಸಿದರು. ಡಾ.ಪ್ರಭಾಕರ್‌ರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT