ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಾಡಲ್ಲಿ ಜನಿಸುವ ಆಸೆ: ಎಸ್‌ಪಿಬಿ

‘ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್‌ ಪ್ರಶಸ್ತಿ’ ಪ್ರದಾನ
Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಎಲ್ಲ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗ ‘ನನಗಾಗಿಯೇ ಬಾಲು ಈ ಹಾಡು ಹಾಡಿದ್ದಾರೆ’ ಎಂಬ ಭಾವದಲ್ಲಿ ಅತ್ಯಂತ ಅಕ್ಕರೆಯಿಂದ ಸ್ವೀಕರಿಸಿದ್ದಾನೆ’ ಎಂದು ಹಿರಿಯ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ವಿನೀತರಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸೋಮ­ವಾರ ಏರ್ಪಡಿಸಿದ್ದ ಸಮಾ­ರಂಭ­ದಲ್ಲಿ ಮೊದಲ ‘ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್‌ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡಿದರು.

‘ದಕ್ಷಿಣದ ಎಲ್ಲ ಭಾಷೆಗಳಲ್ಲೂ ನಾನು ಹಾಡಿದ್ದೇನೆ. ಆದರೆ, ಕನ್ನಡಿಗರು ಕೊಟ್ಟ ಪ್ರೀತಿ ಬಲು ದೊಡ್ಡದು. ಮುಂದಿನ ಜನ್ಮವಿದ್ದರೆ ಈ ನಾಡಿನಲ್ಲೇ ಜನಿಸಬೇಕೆನ್ನುವ ಅಪೇಕ್ಷೆ ನನ್ನದಾಗಿದೆ. ಬೇರೆ ರಾಜ್ಯಗಳಲ್ಲೂ ಮುಚ್ಚುಮರೆ ಮಾಡದೆ ನನ್ನ ಈ ಅಪೇಕ್ಷೆಯನ್ನು ಹೇಳಿಕೊಂಡಿದ್ದೇನೆ’ ಎಂದು ಅವರು ಭಾವುಕರಾಗಿ ನುಡಿದರು.

‘ನನಗೆ ಯಾವುದು ಗೊತ್ತಿಲ್ಲ ಎಂಬು­ದನ್ನು ಸ್ಪಷ್ಟವಾಗಿ ಅರಿತು­ಕೊಂಡರೆ ಸರ­ಳ­ವಾದ ಬದುಕಿನ ಹಾದಿ ಗೋಚರಿ­ಸುತ್ತದೆ, ವಿನಯವೂ ಮೈಗೂ­ಡು­ತ್ತದೆ’ ಎಂದ ಅವರು, ‘48 ವರ್ಷಗಳ ಸುದೀರ್ಘ ಸಂಗೀತ ಯಾತ್ರೆ ನನಗೆ ಕಲಿ­ಸಿದ ಪಾಠ ಇದು’ ಎಂದು ಅವರು ಹೇಳಿದರು.

‘ಬಾಲು ಹಾಡಿದರೆ ಮಾತ್ರ ನಾನು ನಟಿಸಲು ಸಿದ್ಧ ಎನ್ನುವ ಷರತ್ತನ್ನು ನಿರ್ಮಾಪಕರಿಗೆ ವಿಧಿಸುತ್ತಿದ್ದ ವಿಷ್ಣುವರ್ಧನ್‌ ನನ್ನ ಅತ್ಯಂತ ಆತ್ಮೀಯ ಸ್ನೇಹಿತ. ಆತನ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಸಂತಸ­ವಾಗುತ್ತಿದೆ’ ಎಂದು ತಿಳಿಸಿದರು.

‘ಜೂನ್‌ 4 ನನ್ನ ಜನ್ಮದಿನ. ವಿಷ್ಣು ಬದು­ಕಿರುವವರೆಗೆ ಆ ದಿನ ತಪ್ಪದೇ ಚೆನ್ನೈಗೆ ಬರುತ್ತಿದ್ದ. ನಾನು ಹಾಡು ಹಾಡಿ­ದರೆ, ಆತ ನೃತ್ಯ ಮಾಡುತ್ತಿದ್ದ. ಆತನ ಸ್ನೇಹಭಾಗ್ಯವನ್ನು ಮರೆಯಲು ಸಾಧ್ಯವಿಲ್ಲ’ ಎಂದು ಹೇಳಿದರು. ಪ್ರಶಸ್ತಿ ಜತೆಗೆ ನೀಡಲಾಗಿದ್ದ ₨25 ಸಾವಿರ ಮೊತ್ತದ ಚೆಕ್‌ಅನ್ನು ಪರಿಷತ್ತಿಗೆ ಹಿಂದಿ­ರು­ಗಿಸಿದ ಅವರು, ‘ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಂಗೀತವೇ ನನ್ನ ಮಾತೃಭಾಷೆ’ ಎಂದ ಅವರು, ‘ನೂರೊಂದು ನೆನಪು ಎದೆ­ಯಾಳದಿಂದ’, ‘ಈ ಭೂಮಿ ಬಣ್ಣದ ಬುಗುರಿ’ ಗೀತೆಗಳನ್ನು ಹಾಡಿದರು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಕಲಾವಿದೆ ಭಾರತಿ ವಿಷ್ಣುವರ್ಧನ್‌, ‘ನಮ್ಮ ಯಜಮಾನರ ಶರೀರ ಮತ್ತು ಬಾಲು ಅವರ ಶಾರೀರದಿಂದಾಗಿ ಅವರ ಚಿತ್ರಗಳಿಗೆ ಒಂದು ಅಪೂರ್ವ ಮೆರುಗು ಬಂದಿತ್ತು’ ಎಂದು ಹೇಳಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಕಲಾವಿದ ಎಸ್‌.ಶಿವರಾಂ, ‘ಬಾಲಸುಬ್ರಹ್ಮಣ್ಯಂ ಅವರೊಬ್ಬ ಮೇರು ಗಾಯಕ, ಮಾನವೀಯತೆಯ ಸಾಕಾರ­ಮೂರ್ತಿ’ ಎಂದು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಕೇಂದ್ರ ಸಚಿವ ಅನಂತಕುಮಾರ್‌ ನೀಡಿರುವ ದತ್ತಿ ನಿಧಿಯಿಂದ ಈ ಪ್ರಶಸ್ತಿಯನ್ನು ಆರಂಭಿಸ­ಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT