ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪಠ್ಯ: ಕಳಪೆ ಯಾಕೆ?

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಟರಾಜ್ ಹುಳಿಯಾರ್ ಅವರ ಅಂಕಣ ಬರಹಕ್ಕೆ ನನ್ನ ಪ್ರತಿಕ್ರಿಯೆ (ಪ್ರ.ವಾ., ಅ.15). ಲೇಖಕರು ಪಿಯುಸಿ ಮತ್ತು ಅದಕ್ಕೆ ಮೇಲಿನ ತರಗತಿಗಳಲ್ಲಿ ಪಠ್ಯಪುಸ್ತಕಗಳ ದುರ್ಗತಿಯನ್ನು ಕುರಿತು ವಿವರಿಸಿದ್ದಾರೆ. ಆದರೆ ನನ್ನ ಕಳಕಳಿ  ಕನ್ನಡದ ಬಗ್ಗೆ ಅಭಿಮಾನ ಮೂಡಿಸಬಲ್ಲ ಒಂದ­ರಿಂದ ಹತ್ತನೇ ತರಗತಿಯ ಪಠ್ಯಗಳನ್ನು ಕುರಿತಾ­ಗಿದೆ.

ಕನ್ನಡವನ್ನು ಎರಡನೇ ಭಾಷೆ­ಯಾಗಿ  ಮತ್ತು ಇಂಗ್ಲಿಷ್‌ ಮೊದಲ ಭಾಷೆ­ಯಾಗಿ ತೆಗೆದು­ಕೊಂಡ ವಿದ್ಯಾರ್ಥಿಗಳ ಸಂಖ್ಯೆ ನಗರಗಳಲ್ಲಿ ಸಾಕಷ್ಟಿರ­ಬೇಕು. ಇವರಿಗೆ ನಿಗದಿಯಾದ ಇಂಗ್ಲಿಷ್ ಪಠ್ಯ­ಪುಸ್ತ­ಕ­­ಗಳ ಸಂಪಾದನೆ ಮತ್ತು ಅವುಗಳ ತಯಾರಿ­ಕೆಯ ಗುಣಮಟ್ಟವನ್ನು ಇವರೇ ಓದುವ ಕನ್ನಡ ಪಠ್ಯ­ಪುಸ್ತಕಗಳಿಗೆ ಹೋಲಿಸಿದರೆ ನಿರಾಸೆ­ಯಾಗು­ತ್ತದೆ.

ಇಂಗ್ಲಿಷ್ ಪಠ್ಯಗಳಲ್ಲಿ ಅಂದವಾದ ಮುದ್ರಣ, ಬಣ್ಣದ ಚಿತ್ರಗಳು, ಒಳ್ಳೆಯ ಕಾಗದದ ಬಳಕೆ ಇದ್ದರೆ, ಅದೇ ಹಂತಕ್ಕೆ ಬೋಧಿಸಲು ಇಟ್ಟಿರುವ ಕನ್ನಡ ಪಠ್ಯಗಳಲ್ಲಿ ಕಪ್ಪು-ಬಿಳುಪು ಮುದ್ರಣ, ಕಳಪೆ ಗುಣಮಟ್ಟದ ಕಾಗದದ ಬಳಕೆ, ತಿಂಗಳಲ್ಲೇ ಕಿತ್ತು­ಹೋಗುವ ಬೈಂಡಿಂಗ್ ಹಾಗೂ ಆಕರ್ಷಣೆ ಮೂಡಿಸದ ಚಿತ್ರಗಳಿವೆ.

ಇಂಗ್ಲಿಷ್ ಪಠ್ಯಗಳಲ್ಲಿ ಶೇಕ್ಸ್‌ಪಿಯರ್ ಮತ್ತು ವರ್ಡ್ಸ್‌ವರ್ತ್ ಜತೆಜತೆಗೇ  ರಸ್ಕಿನ್ ಬಾಂಡ್, ಸತ್ಯಜಿತ್ ರೇ ಮೊದಲಾದವರ ಸ್ವಾರಸ್ಯಕರ ಕತೆ-­ಗಳು, ಹಾಸ್ಯ, ಪತ್ತೇದಾರಿ, ಸಾಹಸ ಇವುಗಳ­ನ್ನೊ­ಳ­­ಗೊಂಡ ಕತೆ-, ಕಾವ್ಯ, -ನಾಟಕಗಳ ಭಾಗ­ಗಳನ್ನು ಓದಲು ನಿಗದಿ ಮಾಡಿದ್ದಾರೆ. ಆದರೆ ಅದೇ ಕನ್ನಡ ಪಠ್ಯಗಳಲ್ಲಿ  ಹೆಸರೇ ಕೇಳಿರದ ಕವಿ–ಲೇಖಕರ ನೀರಸ ಕವಿತೆಗಳು ಹಾಗೂ ಪ್ರಬಂಧ­ಗಳಿವೆ.

21ನೇ ಶತಮಾನದ ಹೊಸ ತಲೆಮಾರಿನ ಮಕ್ಕಳನ್ನು ಸ್ವಲ್ಪವೂ ತಟ್ಟದ ವಿಷಯಗಳು  ಹಾಗೂ ಏಕತಾನತೆ ಹುಟ್ಟಿಸುವ ಕನ್ನಡ ಕವಿತೆಗಳು ಹಾಗೂ ಪಾಠಗಳಿವೆ.  ಇಂಗ್ಲಿಷ್‌ ಪಠ್ಯದಲ್ಲಿ ಶ್ರಮ ಪಟ್ಟು ತಯಾರಿಸಿದ ಟಿಪ್ಪಣಿಗಳು, ಸುಲಭವಾಗಿ ಸಿಕ್ಕುವ ಕಠಿಣ ಪದಗಳ ಹಾಗೂ ವಾಕ್ಯ ಪುಂಜಗಳ ಅರ್ಥ, ಕವಿತೆ ಮತ್ತು ಗದ್ಯ ಪಾಠದ ಸ್ವಾರಸ್ಯವನ್ನು ಮನದಟ್ಟು ಮಾಡುವ ಪ್ರಶ್ನೆಗಳು ವಿದ್ಯಾರ್ಥಿಗೆ ದೊರೆತರೆ ಕನ್ನಡ ಪಠ್ಯದಲ್ಲಿ ಸೃಜನಾತ್ಮಕತೆ­ಯಿಲ್ಲದೆ ತಯಾರಿಸಿದ ಪ್ರಶ್ನೆಗಳು ತುಂಬಿವೆ.

ಕನ್ನಡದ ಉಳಿವಿನ ಬಗ್ಗೆ ಕಾಳಜಿ ವ್ಯಕ್ತವಾಗು­ತ್ತಿ­ರುವ ದಿನಗಳಲ್ಲಿ ಕನ್ನಡ ಪಠ್ಯಪುಸ್ತಕ ರಚನೆಯ ಬಗ್ಗೆ ಒಣ ಚರ್ಚೆಗಿಂತ ಹೆಚ್ಚಾಗಿ ಪರಿಣಾಮ­ಕಾರಿ­ಯಾಗಿ ಕೆಲಸ ನಡೆಯಬೇಕಾಗಿದೆ. ಇಂಟರ್­ ನೆಟ್ ನೀಡುವ ಹೊಸ ಹೊಳಹುಗಳನ್ನು ಹೊಸ ಪೀಳಿಗೆಯ ದೃಷ್ಟಿಯಿಂದಲಾದರೂ ಈ ನಿಟ್ಟಿನಲ್ಲಿ ಬಳಸಿಕೊಳ್ಳುವುದು  ಅನಿವಾರ್ಯವಾಗಿದೆ.
–ಸಿ.ಪಿ.ರವಿಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT