ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪುಸ್ತಕಗಳ ಸುಗ್ಗಿ

Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕನ್ನಡ ಓದುಗ ವರ್ಗವನ್ನು ಸಮೃದ್ಧಿಗೊಳಿಸುವ ಉದ್ದೇಶದಿಂದ  ಹಲವು ಪುಸ್ತಕ ಮಾರಾಟ ಮೇಳಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸುತ್ತಾ ಬಂದಿದೆ. ಈ ಬಾರಿ ಗ್ರಂಥಾಲಯದ ಶತಮಾನೋತ್ಸವ ಅಂಗವಾಗಿ ಫೆ.24ರಿಂದ 28ರವರೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಈ ಪುಸ್ತಕ ಮಾರಾಟ ಮೇಳ ಇದೆ. ಇದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದೊಂದಿಗೆ ಗ್ರಂಥಾಲಯ ಇಲಾಖೆಯ ಸಹಭಾಗಿತ್ವವಿದೆ.

ಕನ್ನಡ ಪುಸ್ತಕಗಳು ಮಾತ್ರ: ಕಡಿಮೆ ದರದಲ್ಲಿ ಒಳ್ಳೆಯ ಕನ್ನಡ ಪುಸ್ತಕಗಳು ಸಿಗಲಿ ಎಂಬ ಉದ್ದೇಶ ದಿಂದ ಕನ್ನಡ ಪುಸ್ತಕ ಪ್ರಾಧಿಕಾರ ‘ರಿಯಾಯಿತಿ ಪುಸ್ತಕ ಮಾರಾಟ ಮೇಳ’ ಆಯೋಜನೆ ಮಾಡಿದ್ದು, ಮೇಳ ದಲ್ಲಿ ಕನ್ನಡ ಪುಸ್ತಕ ಮಾರಾಟಕ್ಕೆ ಮಾತ್ರ ಪ್ರಾಮುಖ್ಯ ನೀಡುವ ಆಶಯ ಪುಸ್ತಕ ಪ್ರಾಧಿಕಾರದ್ದು. ಇದರಿಂದ ಕನ್ನಡದ ಕಂಪು ಹರಡಲು ಮತ್ತು ಸಾಹಿತ್ಯದ ಅಭಿರುಚಿಯನ್ನು ವಿಸ್ತರಿಸಲು ನೆರವಾಗುತ್ತದೆ.

ಪ್ರಕಾಶಕರು ಯಾವ ಭಾಷೆಯ ಪುಸ್ತಕಗಳನ್ನು ಬೇಕಾದರೂ ಪ್ರಕಟಿಸಿರಬಹುದು. ಆದರೆ ಮೇಳದಲ್ಲಿ ಕನ್ನಡ ಪುಸ್ತಕಗಳು ಮಾತ್ರ ಮಾರಾಟಕ್ಕೆ ಮೀಸಲು. ಜೊತೆಗೆ ಕಾಲೇಜು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಜ್ಞಾನಾರ್ಜನೆಗೆ ಸಹಕಾರಿ ಯಾಗುವ ನಿಘಂಟು ಮತ್ತು ವಿಷಯ ವಿಶ್ವಕೋಶಗಳು, ಪಠ್ಯಪುಸ್ತಕ, ಸಾಮಾನ್ಯ ಜ್ಞಾನ ಪುಸ್ತಕಗಳು ಶೇ 20 ರಿಯಾಯಿತಿ ದರದಲ್ಲಿ ದೊರೆಯಲಿವೆ.

ಎಪ್ಪತ್ತು ಮಳಿಗೆ: ಮೇಳದಲ್ಲಿ 70 ಮಳಿಗೆಗಳನ್ನು ತೆರೆಯಲು ಪ್ರಾಧಿಕಾರ ನಿರ್ಧರಿಸಿದೆ. ಇದರಲ್ಲಿ ಐದು ಮಳಿಗೆಗಳು ಇಲಾಖೆಯ ಉಪಯೋಗಕ್ಕಾಗಿ ಮೀಸಲು. ಅನುವಾದಿತ ಕೃತಿ, ಕಾವ್ಯ, ಕವನ, ಕಥೆ, ಕಾದಂಬರಿ ಹೀಗೆ ಸಾಹಿತ್ಯದ ಹಲವು ಪ್ರಕಾರದ ಪುಸ್ತಕಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶವಿದೆ. ಇನ್ನು ಪ್ರಕಾಶಕರಿಗೆ ಅನುಕೂಲವಾಗಲಿ ಎಂಬ ಉದ್ದೇಶ ದಿಂದ ಅತ್ಯಂತ ಕಡಿವೆು ಬಾಡಿಗೆ ವಿಧಿಸಲಾಗುತ್ತಿದೆ. ಒಂದು ದಿನಕ್ಕೆ ಪ್ರತಿ ಮಳಿಗೆಗೆ ₹1000
ನಿಗದಿಪಡಿಸಲಾಗಿದೆ.

ಯುವ ಪ್ರಕಾಶಕರಿಗೆ ವಿಶೇಷ ಪಾಠ
ಪುಸ್ತಕ ಮೇಳದಲ್ಲಿ ಹಲವು ಪ್ರಗತಿಪರ ಯೋಜನೆಗಳಿವೆ. ಯುವ ಪ್ರಕಾಶಕರನ್ನು ಗಮನದಲ್ಲಿ ಇಟ್ಟುಕೊಂಡು  ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಿರಿಯ ಪ್ರಕಾಶಕರು, ಕಲಾವಿದರು, ತಂತ್ರಜ್ಞರನ್ನು ಕರೆಸಿ ಪುಸ್ತಕ ಮುದ್ರಣ, ಪ್ರಸರಣ, ಪುಸ್ತಕ ಮಾರುಕಟ್ಟೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ‘ಇದುವರೆಗೆ ಮಂಗಳೂರು, ಮೈಸೂರಿನಲ್ಲಿ ತಲಾ ಒಂದು, ಬೆಂಗಳೂರಿನಲ್ಲಿ ನಾಲ್ಕು ಸೇರಿದಂತೆ ಆರು ಪುಸ್ತಕ ಮೇಳಗಳು ನಡೆದಿವೆ. ವಿದ್ಯಾರ್ಥಿಗಳು ಹಾಗೂ ಯುವಕರ ಭಾಗವಹಿಸುವಿಕೆ ಹೆಚ್ಚಿಸುವುದು ನಮ್ಮ ಗುರಿ’ ಎಂದು ಮೇಳದ ಉದ್ದೇಶಗಳನ್ನು ವಿವರಿಸುವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ.

ಆರು ಲಕ್ಷದ ಯೋಜನೆ
ಬಂಜಗೆರೆ ಜಯಪ್ರಕಾಶ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ನಂತರ ನಗರದಲ್ಲಿ ನಡೆಯುತ್ತಿರುವ ಮೊದಲ ಪುಸ್ತಕ ಮೇಳ ಇದು. ಆ ಕಾರಣಕ್ಕೆ ಅವರಿಗೆ ಈ ಮೇಳದ ಬಗ್ಗೆ ವಿಶೇಷ ಆಸ್ಥೆ. ಇದಕ್ಕೂ ಮೊದಲು ಖಾಸಗಿ ಸಹಭಾಗಿತ್ವದಲ್ಲಿ ಅರಮನೆ ಮೈದಾನ, ಬಸವನಗುಡಿ ನ್ಯಾಷನಲ್‌ ಕಾಲೇಜ್‌ ಆವರಣ ಮತ್ತು ಮಕ್ಕಳಕೂಟದ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪುಸ್ತಕ ಪ್ರಾಧಿಕಾರವು ಪಾಲ್ಗೊಂಡಿತ್ತು.

ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬಾರಿಯ ಮೇಳ ಆಯೋಜನೆಗೊಂಡಿದ್ದು, ಮಳಿಗೆ ಬಾಡಿಗೆ, ನಿರ್ವಹಣೆ, ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಮೇಳದಲ್ಲಿ ಭಾಗವಹಿಸುವ ಪ್ರಕಾಶಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಏರ್ಪಡಿಸಿದೆ.

ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ
ಪುಸ್ತಕ ಮೇಳದಲ್ಲಿ ಪ್ರತಿ ದಿನ ಸಂಜೆ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟದೊಂದಿಗೆ ಕಲೆ ಮತ್ತು ಸಂಸ್ಕೃತಿಯನ್ನು ಹಂಚುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡಲಿದೆ. ಬೆಂಗಳೂರಿನ ಹಲವು ಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಚನ ಗಾಯನ, ಭಾವಗೀತೆ, ದಾಸರ ಕೀರ್ತನೆ, ಜನಪದ ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. 

ವಿದ್ಯಾರ್ಥಿಗಳಿಗೆ ‘ಪುಸ್ತಕ ಪ್ರೇಮಿ..’
‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’  ಎಂಬ ಯೋಜನೆಯನ್ನು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರ ರೂಪಿಸಿದ್ದು. ಇದುವರೆಗೆ 150 ಕಾಲೇಜುಗಳಲ್ಲಿ ಬಳಗ ಯಶಸ್ವಿಯಾಗಿ ಆರಂಭವಾಗಿ ಸೃಜನಶೀಲ ಚಟುವಟಿಕೆ ನಡೆಸುತ್ತಿದೆ. ಪ್ರತಿ ಕಾರ್ಯಕ್ರಮಕ್ಕೆ ಪ್ರಾಧಿಕಾರ ಐದು ಸಾವಿರ ರೂಪಾಯಿ ಧನ ಸಹಾಯ ನೀಡಲಿದೆ.
ಬಳಗ ರಚಿಸಿಕೊಂಡ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಎರಡು ತಿಂಗಳಿಗೊಮ್ಮೆ ಸಾಹಿತ್ಯ ಕಾರ್ಯಕ್ರಮ ನಡೆಸಬಹುದು.

ವಿದ್ಯಾರ್ಥಿಗಳು ತಾವು ಓದಿದ ಪುಸ್ತಕ ಅಥವಾ ಸ್ವರಚನೆಯ ಕಥೆ, ಕವನ, ಸಾಹಿತ್ಯ ಕೃತಿಗಳ ಬಗ್ಗೆ ಚರ್ಚಿಸಬೇಕು.
‘ವಿದ್ಯಾರ್ಥಿಗಳಿಗೆ ಓದುವ ಅಭಿರುಚಿ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿ. ಎನ್‌ಸಿಸಿ, ಎನ್‌ಎಸ್‌ಎಸ್‌ಯಂತೆ ‘ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ’ ಘಟಕವೂ ಆರಂಭವಾಗುತ್ತಿದೆ. ಈ ಯೋಜನೆಯನ್ನು ಪಡೆಯಲು ಯಾವುದೇ ಕಾಲಮಿತಿ ಇಲ್ಲ, ಅನುದಾನಿತ, ಅನುದಾನ ರಹಿತ ಯಾವುದೇ ಪದವಿ ಕಾಲೇಜು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಅರ್ಜಿ ಕೊಟ್ಟರೆ ಸಾಕು’ ಎಂದು ತಮ್ಮ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌.

ಪ್ರಾಧಿಕಾರದ ವತಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ 250 ಕೃತಿಗಳನ್ನು ಬಿಡುಗಡೆ ಮಾಡಿದ್ದು ದಾಖಲೆ. ಹಾಗೆ ಯುವ ಕವಿಗಳ ಮೊದಲ ಕೃತಿಗಳನ್ನು ಪ್ರಕಟಿಸುವ ಯೋಜನೆಯಿಂದ ದೊಡ್ಡಮಟ್ಟದ ಕವಿ ಪೀಳಿಗೆ ಸೃಷ್ಟಿಯಾಗುತ್ತಿದೆ. ಅವರೆಲ್ಲ ಪುಸ್ತಕಗಳನ್ನು  ಸರ್ಕಾರಿ ಗ್ರಂಥಾಲಯಗಳಿಗೆ ಕಳಿಸಿಕೊಡಬಹುದು, ಕನ್ನಡ ಪುಸ್ತಕ ಪರಂಪರೆ ಬೆಳವಣಿಗೆ ಯುವಕರು ಮುಂದಾಗುತ್ತಿರುವುದು ಖುಷಿಯ ಸಂಗತಿ. –ಬಂಜಗೆರೆ ಜಯಪ್ರಕಾಶ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ

  (ಸಂಗ್ರಹ ಚಿತ್ರಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT