ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನ ಡಿಗ ವಿಕಾಸ್‌ ಭಾರತದ ‘ಚಿನ್ನ’

Last Updated 31 ಜುಲೈ 2014, 20:22 IST
ಅಕ್ಷರ ಗಾತ್ರ

ಗ್ಲಾಸ್ಗೊ : ಭಾರತದ ವಿಕಾಸ್ ಗೌಡ 20ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಎಸೆತದಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.
ಕರ್ನಾಟಕದ ವಿಕಾಸ್‌ ತಮ್ಮ ಮೂರನೇ ಯತ್ನದಲ್ಲಿ 63.64 ಮೀಟರ್ಸ್‌ ದೂರ ಡಿಸ್ಕ್‌ ಎಸೆಯುವ ಮೂಲಕ ಈ ಚಾರಿತ್ರಿಕ ಸಾಮರ್ಥ್ಯ ತೋರಿದರು.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿಯೇ ಕನ್ನಡಿಗನೊಬ್ಬ  ವೈಯಕ್ತಿಕ ಸ್ವರ್ಧೆಯಲ್ಲಿ ಬಂಗಾರದ ಸಾಧನೆ ತೋರಿರುವುದು ಇದೇ ಮೊದಲು. ಮೂಲತಃ ಹಾಸನ ಜಿಲ್ಲೆಯವರಾದ ಶಿವೇಗೌಡರ ಪುತ್ರ ವಿಕಾಸ್‌ ಅಮೆರಿಕಾದಲ್ಲಿಯೇ ನೆಲೆಸಿದ್ದು, ಕಳೆದ 15 ವರ್ಷಗಳಿಂದ ಡಿಸ್ಕಸ್‌ ಎಸೆತದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಕೇವಲ ಒಂದೇ ಯತ್ನದಲ್ಲಿ 64.32 ಮೀಟರ್ಸ್‌ ದೂರ ಡಿಸ್ಕ್‌ ಎಸೆದು ಫೈನಲ್‌ ತಲುಪಿದ್ದ 31ರ ಹರೆಯದ ವಿಕಾಸ್‌ ಅವರಿಂದ ಗುರುವಾರ ರಾತ್ರಿ ಆ ಮಟ್ಟಿಗಿನ ಸಾಮರ್ಥ್ಯ ಮೂಡಿ ಬರಲಿಲ್ಲ. ಇವರು ಮೊದಲ ಯತ್ನದಲ್ಲಿ 60.63 ಮೀಟರ್ಸ್‌ ಎಸೆದರೆ, ನಾಲ್ಕು ಮತ್ತು ಆರನೇ ಯತ್ನದಲ್ಲಿ ‘ಫೌಲ್‌’ ಎಸಗಿದರು. ಮೂರನೇ ಯತ್ನದಲ್ಲಿ ಅವರ ಸಾಮರ್ಥ್ಯವೇ ಅವರಿಗೆ ಬಂಗಾರದ ಪದಕವನ್ನು ನಿರ್ಧರಿಸಿತು.

ಇಲ್ಲಿ ಇವರು ಎಸೆದ ದೂರ ವಿಕಾಸ್‌ ಜೀವನ ಶ್ರೇಷ್ಠ ಸಾಧನೆಯೇನಲ್ಲ. ಇವರು ಹಿಂದೆ 66.28 ಮೀಟರ್ಸ್‌ ದೂರ ಡಿಸ್ಕ್‌ ಎಸೆದಿದ್ದರು. ಇದೇ ಋತುವಿನಲ್ಲಿ ಇವರು 65.62 ಮೀಟರ್ಸ್‌ ಸಾಮರ್ಥ್ಯ ತೋರಿದ್ದರು. ಗುರುವಾರ ರಾತ್ರಿ ಇವರಿಗೆ ಆಸ್ಟ್ರೇಲಿಯದ ಹರಾಡಿನ್‌ ಅವರಿಂದ ನಿರೀಕ್ಷಿತ ಪೈಪೋಟಿ ಮೂಡಿ ಬರಲಿಲ್ಲ. ಅವರೂ ಈ ಋತುವಿನಲ್ಲಿ 65.94 ಮೀಟರ್ಸ್‌ ಸಾಧನೆ ಮಾಡಿದ್ದರು. ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಇವರು ಇಲ್ಲಿ ವೈಫಲ್ಯ ಕಂಡರು. ಬೆನ್‌ ಹರಾಡಿನ್‌ ಇಲ್ಲಿ 61.91 ಮೀಟರ್ಸ್‌ ದೂರವಷ್ಟೇ ಎಸೆಯಲು ಶಕ್ತರಾಗಿ ನಾಲ್ಕನೇ ಸ್ಥಾನಕ್ಕೆ ಇಳಿದರು.

ಸೈಪ್ರಸ್‌ನ ಪೆರೆಲಸ್‌ ಮತ್ತು ಜಾಸನ್‌ ಮಾರ್ಗನ್‌ ಕ್ರಮವಾಗಿ ರಜತ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಶಿವೇಗೌಡರ ಕನಸು ನನಸು
ಬೆಂಗಳೂರಿನ ಅಥ್ಲೆಟಿಕ್ಸ್‌ ಕ್ಷೇತ್ರದಲ್ಲಿ ಎಪ್ಪತ್ತರ ದಶಕದಲ್ಲಿ ಶಿವೇಗೌಡರನ್ನು ಗೊತ್ತಿಲ್ಲದವರೇ ಇಲ್ಲ. ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಇವರು ಕೆಲವು ಕಾಲ ಕೋಚ್‌ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಇವರು 1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಅಥ್ಲೆಟಿಕ್‌ ತಂಡದ ಕೋಚ್‌ಗಳಲ್ಲಿ ಒಬ್ಬರಾಗಿದ್ದರು.

ಇವರು ಕಾಲು ಶತಮಾನದ ಹಿಂದೆ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದರು. ಬೆಂಗಳೂರಿನಿಂದ ಅಮೆರಿಕಾಕ್ಕೆ ತೆರಳಿದಾಗ ವಿಕಾಸ್‌ಗೆ ಕೇವಲ ಐದು ವರ್ಷ ವಯಸ್ಸು.

‘ನಾನು ಅಥ್ಲೆಟಿಕ್ಸ್‌ನಲ್ಲಿ ತೀರಾ ಎತ್ತರಕ್ಕೇರಲಾಗಲಿಲ್ಲ. ನನ್ನ ಮಗ ಅಂತಹ ಎತ್ತರಕ್ಕೇರುವುದನ್ನು ನೋಡುವುದು ನನ್ನ ಕನಸು’ ಎಂದು ಶಿವೇಗೌಡರು ವರ್ಷದ ಹಿಂದೆ  ‘ಪ್ರಜಾವಾಣಿ’ ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಅವರು ತಮ್ಮ ಮಗನಿಗೆ ಅಮೆರಿಕಾದಲ್ಲಿ ಉತ್ತಮ ಮಟ್ಟದ ತರಬೇತಿ ಕೊಡಿಸಲು ತಮ್ಮ ಶಕ್ತಿ ಮೀರಿ ಶ್ರಮಿಸಿದರು.

ವಿಕಾಸ್‌ಗೆ ಹತ್ತು ವರ್ಷ ವಯಸ್ಸಾಗಿದ್ದಾಗ ಲಾಂಗ್‌ಜಂಪ್‌ನಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು. 11ನೇ ವಯಸ್ಸಿಗೆ ಎಸೆತದ ಅಭ್ಯಾಸದಲ್ಲಿ ತೊಡಗಿದರು. ವಿಕಾಸ್‌ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಶಾಟ್‌ಪಟ್‌ ಎಸೆತದಲ್ಲಿ ಉತ್ತಮ ಸಾಧನೆ ತೋರಿದ್ದರು. ಆ ನಂತರ ಇವರು ಡಿಸ್ಕಸ್‌ ಎಸೆತದ ಅಭ್ಯಾಸದಲ್ಲಿ ತೊಡಗಿದರು. 

ದೆಹಲಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕಾಮನ್‌ವೆಲ್ತ್‌  ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದಿದ್ದರು. 2012ರಲ್ಲಿ ನಡೆದಿದ್ದ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಇವರು ಇದೇ ಸ್ಪರ್ಧೆಯ ಫೈನಲ್‌ ತಲುಪಿದ್ದರು. ಈ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ಹೆಗ್ಗಳಿಕೆ ಕೂಡಾ ಇವರದಾಗಿದೆ.

ಕಳೆದ ವರ್ಷ ಇವರು ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಡಿಸ್ಕಸ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಬಂಗಾರದ ಪದಕದ ಮೇಲೆ ವಿಕಾಸ್‌ ಕಣ್ಣು ನೆಟ್ಟಿದ್ದಾರೆ. 2010ರ ಗುವಾಂಗ್‌ ಜೌ ಏಷ್ಯನ್‌ ಕೂಟದಲ್ಲಿ ಕಂಚು ಜಯಿಸಿದ್ದರು. ಇವರಿಗೆ 2011ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿದೆ.

ಅನು ರಾಣಿಗೆ ಎಂಟನೇ ಸ್ಥಾನ
ಭಾರತದ ಅನು ರಾಣಿ ಮಹಿಳೆಯರ ಜಾವೆಲಿನ್‌ ಎಸೆತದ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರು.

ಮೊದಲ ಯತ್ನದಲ್ಲಿ 55.23ಮೀ. ದೂರ ಎಸೆದು ಮುಂದಿನ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ಮೂಡಿಸಿದ್ದರು. ಆದರೆ, ಮೂರು, ನಾಲ್ಕು ಮತ್ತು ಆರನೇ ಸುತ್ತಿನಲ್ಲಿ  ಮೊದಲ ಸುತ್ತಿಗಿಂತಲೂ ಕಡಿಮೆ ಸಾಮರ್ಥ್ಯ ತೋರಿದರು. ಎರಡನೇ ಯತ್ನದಲ್ಲಿ 56.37ಮೀ. ದೂರ ಎಸೆದು ಎಂಟನೇ ಸ್ಥಾನ ಪಡೆದರು.

ಫಲಿತಾಂಶ: ಕಿಮ್ ಮಿಕ್ಲೆ (ಆಸ್ಟ್ರೇಲಿಯ) (ದೂರ: 65.96)–1,  ಸುನಿಟೆ ವಿಲ್‌ಜೋಯನ್‌ (ದೂರ: 63.19)–2,   ಲೀ ರಬೆರ್ಟ್ಸ್‌್ (ಆಸ್ಟ್ರೇಲಿಯ) (ದೂರ: 62.95)–3.

ಟಿಂಟು ಲೂಕಗೆ ಏಳನೇ ಸ್ಥಾನ
ಭಾರತದ  ಅಥ್ಲೀಟ್‌ ಟಿಂಟು ಲೂಕ  ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ  ಫೈನಲ್‌ಗೆ ಅರ್ಹತೆ ಗಿಟ್ಟಿಸಲು ವಿಫಲರಾಗಿದ್ದಾರೆ.  ಭಾರತದ ಓಟಗಾರ್ತಿ  2:03.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಏಳನೇಯವರಾಗಿ ಸ್ಪರ್ಧೆ ಕೊನೆಗೊಳಿಸಿದರು.

***
ಭಾರತದ ಅಥ್ಲೆಟಿಕ್ಸ್‌ ಮಟ್ಟಿಗೆ ಇದೊಂದು ಅಪರೂಪದ ಸಾಧನೆ. ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ. ವಿಕಾಸ್‌ ಗೌಡ ಪರಿಶ್ರಮ ಕನ್ನಡನಾಡಿನ ಯುವಜನರಿಗೆ ಮಾದರಿ ಎನಿಸುವಂತಹದ್ದು.

-ಉದಯ ಪ್ರಭು, ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್‌

ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹ ಕ್ಷಣ.
-ಕೆ.ಗೋವಿಂದರಾಜ್‌, ಅಧ್ಯಕ್ಷರು, ಕರ್ನಾಟಕ ಒಲಿಂಪಿಕ್‌ ಸಂಸ್ಥೆ

‘ಇದು ಕನ್ನಡನಾಡಿನ ಹೆಮ್ಮೆಯ ಪದಕ’

ಬೆಂಗಳೂರು: ‘ವಿಕಾಸ್‌ ಪದಕ ಗೆದ್ದಿರುವುದು ಅತೀವ ಸಂತಸವಾಗಿದೆ. ಇದು ಕನ್ನಡ ನಾಡಿನ ಎಲ್ಲರಿಗೂ ಸೇರಿದ ಪದಕ, ಇದು ಕನ್ನಡಿಗರ ಹೆಮ್ಮೆಯ ಪದಕ’ ಎಂದು ವಿಕಾಸ್‌ ಗೌಡ ಅವರ ತಂದೆ ಶಿವೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಕಾಸ್‌ ಪದಕ ಗೆದ್ದ ಒಡನೆ ಗ್ಲಾಸ್ಗೊದಿಂದ ದೂರವಾಣಿ ಮೂಲಕ ಪತ್ರಿಕೆಯನ್ನು ಸಂಪರ್ಕಿಸಿದ ಶಿವೇಗೌಡರು ನನ್ನ ಬದುಕಿನಲ್ಲಿ ಇದು ಮರೆಯಲಾಗದ ಕ್ಷಣ ಎಂದರು. ‘ಮಳೆ ಬಿದ್ದು ವಾತಾವರಣ ತೀರಾ ತಣ್ಣಗಿತ್ತು. ಇದೇ ಕಾರಣದಿಂದ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಾ, ಇಲ್ಲವಾ ಎಂಬ ದುಗುಡ ಬೆಳಿಗ್ಗೆ ವಿಕಾಸ್‌ ಮನದಲ್ಲಿತ್ತು. ಆದರೆ ಅಂತಿಮವಾಗಿ ಉತ್ತಮ ಸಾಮರ್ಥ್ಯವನ್ನೇ ತೋರಿದ್ದಾನೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT