ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಹನಿ ನೀರು ಕಡ್ಡಾಯ

ಕಾಯ್ದೆ ತಿದ್ದುಪಡಿಗೆ ಸರ್ಕಾರದ ತೀರ್ಮಾನ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬ್ಬು ಬೆಳೆಗೆ ಹನಿ ನೀರಾವರಿ ಅಳವಡಿಸುವುದನ್ನು ಕಡ್ಡಾಯ ಮಾಡಲಾಗುವುದು. ಈ ಸಂಬಂಧ 1965ರ ಕರ್ನಾಟಕ ನೀರಾ­ವರಿ ಕಾಯ್ದೆಗೆ ತಿದ್ದುಪಡಿ ತರಲಾಗು­ವುದು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಇಲ್ಲಿ ಪ್ರಕಟಿಸಿದರು.

‘ನೀರು ಪೋಲಾಗುವುದನ್ನು ತಡೆ­ಯುವ ಉದ್ದೇಶದಿಂದ ಮಹಾರಾಷ್ಟ್ರ­ದಲ್ಲಿ ಕೂಡ ಇದೇ ರೀತಿ ಹನಿ ನೀರಾ­ವರಿಯನ್ನು ಕಡ್ಡಾಯಗೊಳಿ­ಸಲಾ­ಗಿದೆ. ಅದನ್ನು ರಾಜ್ಯದಲ್ಲಿಯೂ ಅನುಸರಿಸಿ, ನೀರು ಉಳಿಸುವ ಪ್ರಯತ್ನ ಮಾಡಲಾ­ಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕಬ್ಬಿಗೆ ಹನಿ ನೀರಾವರಿ ಅಳವಡಿಕೆ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಎಕರೆಗೆ ₨ 40 ಸಾವಿರ ಖರ್ಚಾಗಲಿದ್ದು, ಅದಕ್ಕೆ ಸಬ್ಸಿಡಿ ರೂಪದ ನೆರವು ನೀಡಲಾಗುವುದು ಎಂದರು.

‘ನಿಯಮ ಪ್ರಕಾರ ರಾಜ್ಯದಲ್ಲಿ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕಾಲುವೆ ಮೂಲಕ ನೀರು ಹರಿಸಿ ಕಬ್ಬು ಬೆಳೆಯಲು ಅವಕಾಶ ಇದೆ. ಆದರೆ, ನಮ್ಮಲ್ಲಿ 4.5 ಲಕ್ಷ ಹೆಕ್ಟೇರ್‌ ಪ್ರದೇಶ­ದಲ್ಲಿ ಕಾಲುವೆ ಮೂಲಕ ನೀರು ಹರಿಸಿ ಕಬ್ಬು ಬೆಳೆಯುತ್ತಿದ್ದು, ಇದು ನಿಯಮ­ಬಾಹಿರ. ಇನ್ನು ಮುಂದೆ ಇದಕ್ಕೆ ಅವ­ಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.

‘ಹನಿ ನೀರಾವರಿ ಮೂಲಕ ಕಬ್ಬಿಗೆ ನೀರಾವರಿ ಕಲ್ಪಿಸಿದರೆ ಸುಮಾರು 186 ಟಿಎಂಸಿ ಅಡಿ ನೀರನ್ನು ಉಳಿಸಬಹುದು’ ಎಂದು ಹೇಳಿದರು.

ಮೇಕೆದಾಟು: ಅಧ್ಯಯನಕ್ಕೆ ಜಾಗತಿಕ ಟೆಂಡರ್‌
ಬೆಂಗಳೂರು: ಅರಣ್ಯ ಮುಳುಗಡೆ ಕಾರಣಕ್ಕೆ ಮೇಕೆದಾಟಿನಲ್ಲಿ 45 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಕಷ್ಟವಾದರೆ ಸಣ್ಣ ಗಾತ್ರದ ಜಲಾಶಯಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಒಟ್ಟಾರೆ ಈ ಯೋಜನೆ ಬಗ್ಗೆ ವರದಿ ಸಲ್ಲಿಸಲು ಜಾಗತಿ ಮಟ್ಟದ ಟೆಂಡರ್‌ ಕರೆಯಲಾಗಿದೆ. ವರದಿ ಬಂದ ನಂತರ ಪರ್ಯಾಯ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಮೇಕೆದಾಟಿನಲ್ಲಿ 10– 20 ಟಿಎಂಸಿ ಅಡಿ ಸಾಮರ್ಥ್ಯದ ಸಣ್ಣ ಜಲಾಶಯ ನಿರ್ಮಿಸಿ, ಹೆಚ್ಚುವರಿ ನೀರು ಬಂದಾಗ ಅಲ್ಲಿಂದ ಕಣ್ವ, ಮಂಚನಬೆಲೆ, ಹೆಸರಘಟ್ಟ, ತಿಪ್ಪಗೊಂಡನಹಳ್ಳಿ ಜಲಾಶಯಗಳಿಗೆ ಪಂಪ್ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಇದರಿಂದ ಅರಣ್ಯ ಉಳಿಸಬಹುದು ಎಂದು ಹೇಳಿದರು.

‘ಅಧ್ಯಯನಗಳ ಪ್ರಕಾರ ಹನಿ ನೀರಾವರಿ ವ್ಯವಸ್ಥೆಯಿಂದ ಕಬ್ಬಿನ ಇಳುವರಿ ಹೆಚ್ಚಾಗಲಿದೆ. ರಾಜ್ಯದಲ್ಲಿ ಸುಮಾರು ₨ 7,600 ಕೋಟಿ ಮೌಲ್ಯ­ದಷ್ಟು ಹೆಚ್ಚು ಕಬ್ಬನ್ನು ಹನಿ ನೀರಾವರಿ ಜಾರಿಯಾದ ನಂತರ ಬೆಳೆಯಬಹುದು’ ಎಂದು ವಿವರಿಸಿದರು.

ತೇಲುವ ರೆಸ್ಟೋರೆಂಟ್‌: ಕೆ.ಆರ್‌.ಎಸ್‌ನ ಹಿನ್ನೀರಿನಲ್ಲಿ ತೇಲುವ ರೆಸ್ಟೋರೆಂಟ್ ನಿರ್ಮಿಸುವ ಉದ್ದೇಶ ಇದೆ. ಈ ಸಂಬಂಧ ಯೋಜನಾ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸ­ಲಾಗಿದೆ ಎಂದು ವಿವರಿಸಿದರು.

ನಾರಾಯಣಪುರ ಅಣೆಕಟ್ಟೆ ಹಿನ್ನೀರಿನಲ್ಲಿ ಆಲಮಟ್ಟಿ ವರೆಗೆ ದೋಣಿ ಸಂಚಾರ ಆರಂಭಿಸುವ ಉದ್ದೇಶ ಇದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ ಎಂದು ಅವರು ಹೇಳಿದರು.

ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ 248 ಎಕರೆ ಜಾಗ ಇದ್ದು, ಅಲ್ಲಿ ಉದ್ಯಾನ ನಿರ್ಮಿಸುವುದಾಗಿ ತಿಳಿಸಿದರು.

ಅಧ್ಯಯನ: ಅರ್ಕಾವತಿ ನದಿಕೊಳ್ಳದಲ್ಲಿ ಇದುವರೆಗೆ ಕೈಗೆತ್ತಿಕೊಂಡ ಪುನಶ್ಚೇತನ ಕಾರ್ಯಕ್ರಮದಿಂದ ಅಂತರ್ಜಲ ವೃದ್ಧಿಯಾಗಿದೆ. ಈಗ ಇಡೀ ಯೋಜನೆ ಬಗ್ಗೆ ಅಧ್ಯಯನ ವರದಿ ಸಲ್ಲಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದರು.

ಆಲಮಟ್ಟಿ ಜಲಾಶಯವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವುದರಿಂದ 1 ಲಕ್ಷ ಎಕರೆ ಪ್ರದೇಶ ಮುಳುಗಡೆ ಆಗಲಿದ್ದು, ಅದರ ಪ್ರಮಾಣ ಕಡಿಮೆ ಮಾಡುವುದಕ್ಕೂ ತಜ್ಞರ ಅಭಿಪ್ರಾಯ ಕೇಳಲಾಗಿದೆ. ಈ ಕುರಿತ ಅಧ್ಯಯನಕ್ಕೂ ಜಾಗತಿಕ ಟೆಂಡರ್‌ ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT