ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಯಾರಿಗೆ ಒಲಿವಳು ನೇತ್ರಾವತಿ?

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಹುಟ್ಟುವುದು ಬೆಳ್ತಂಗಡಿ ತಾಲ್ಲೂಕಿನ ಕೊಲ್ಲಿ ಗ್ರಾಮದಿಂದ 10 ಕಿ.ಮೀ. ದೂರ­ದಲ್ಲಿರುವ ಬಂಗಾರುಪಲ್ಕೆ ಎಂಬಲ್ಲಿ. ಈ ನದಿ ಪಶ್ಚಿಮಘಟ್ಟದಿಂದ ಮೊದಲು ಹರಿದುಬರುವುದು ಇದೇ ಹಳ್ಳಿಗೆ. ಅಚ್ಚರಿ ಎಂದರೆ, ಈ ಊರಿನ ಜನ ಕುಡಿಯುವ ನೀರಿಗೆ ಆಶ್ರಯಿಸಿರುವುದು ಕೊಳವೆ­ಬಾವಿಯನ್ನು!

‘ಕೊಳವೆಬಾವಿಯಲ್ಲಿ ನೀರೇನೋ ಇದೆ; ಆದರೆ, ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತದೆ. ನೇತ್ರಾವತಿ ನದಿ ದಂಡೆಯಲ್ಲೇ ಇದ್ದರೂ ನಮಗೆ ನೀರಿನ ಸಮಸ್ಯೆ ತಪ್ಪಿದ್ದಲ್ಲ’ ಎಂದು ದೂರುತ್ತಾರೆ ಸ್ಥಳೀಯರು.

ಕುಡಿಯುವ ನೀರು ಕೇವಲ ಕೊಲ್ಲಿ ಗ್ರಾಮದ ಸಮಸ್ಯೆ ಮಾತ್ರವಲ್ಲ; ಎಲ್ಲ ಕಡೆ ನೀರಿಗಾಗಿ ಹಾಹಾಕಾರವಿದೆ. ವಾರ್ಷಿಕ ಸರಾಸರಿ 4 ಸಾವಿರ ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ಈ  ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸಾಮಾನ್ಯ. ನೇತ್ರಾವತಿಯ ಉಪನದಿಯಾದ ಎತ್ತಿನಹೊಳೆಯ ನೀರನ್ನು ಬಯಲು ಸೀಮೆಗೆ ಹರಿಸುವ ಯೋಜನೆಗೆ ಶಂಕುಸ್ಥಾಪನೆ ಆದ ಬಳಿಕ­ವಂತೂ ಜಿಲ್ಲೆಯಾದ್ಯಂತ ಜಲಜಾಗೃತಿ ಹೆಚ್ಚಿದೆ.

ಮತ ಕೇಳಲು ಬರುವವರಿಗೆ ಜನತೆ ಮೊದಲು ಕೇಳುವ ಪ್ರಶ್ನೆ ನೀರಿನ ಕುರಿತದ್ದೇ. ಮೋದಿ ಪರ ಅಲೆ; ಮೋದಿ ವಿರೋಧಿ ಅಲೆಗಿಂತಲೂ ಹೆಚ್ಚಾಗಿ ಇಲ್ಲಿ ಕಾಣಿಸಿಕೊಂಡಿರುವುದು ಕುಡಿಯುವ ನೀರನ್ನು ಉಳಿಸಿಕೊಳ್ಳುವ ಜಾಗೃತಿಯ ಅಲೆ.
‘ಸಹ್ಯಾದ್ರಿ ಸಂರಕ್ಷಣಾ ಸಂಚಯ’ವು ಜಿಲ್ಲೆಯ ಜೀವನದಿ ಜತೆ ಚೆಲ್ಲಾಟಕ್ಕೆ ಹೊರಟ ‘ರಾಜಕಾರಣಿ’­ಗಳಿಗೆ ತಕ್ಕ ಪಾಠ ಕಲಿಸಲು ‘ನೋಟಾ’ (ಮೇಲಿನ ಯಾರಿಗೂ ಮತ ಇಲ್ಲ) ಹಕ್ಕು ಚಲಾಯಿಸುವಂತೆ ಪ್ರೇರೇಪಿಸುತ್ತಿದ್ದರೆ, ಉಪ್ಪಿನಂಗಡಿಯ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯವರು ‘ನೋಟಾ ಚಲಾಯಿಸುವುದು ಬೇಡ; ಆದರೆ, ನದಿ ತಿರುವು ವಿರೋಧಿಸುವವರಿಗೆ ಮತ ನೀಡಿ’ ಎಂದು ಪ್ರಚಾರ ಮಾಡುತ್ತಿದ್ದಾರೆ.

ಜೀವನದಿಯನ್ನು ಕಳೆದುಕೊಳ್ಳಬೇಕಾದ ಆತಂಕವೇ ಇಲ್ಲಿನ ಪ್ರಮುಖ ಚುನಾವಣಾ ವಿಷಯ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಯೋಜನೆ­ಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದರೂ, ಆ ಪಕ್ಷದ ಅಭ್ಯರ್ಥಿ ಜನಾರ್ದನ ಪೂಜಾರಿ ಸಹಿತ ಹೆಚ್ಚಿನ ಅಭ್ಯರ್ಥಿಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾರನ್ನು ನಂಬುವುದು ಎಂಬ ಗೊಂದಲದ ಸ್ಥಿತಿ ಮತದಾರರದ್ದು.

ಈ ಬಾರಿ 14 ಅಭ್ಯರ್ಥಿಗಳು ಕಣದಲ್ಲಿದ್ದರೂ ತುರುಸಿನ ಸ್ಪರ್ಧೆ ಇರುವುದು  ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ನಳಿನ್ ಕುಮಾರ್‌ ಕಟೀಲ್‌ ನಡುವೆ. ನಾಲ್ಕು ಬಾರಿ ಸೋತ ಅನುಕಂಪದ ಅಲೆಯನ್ನೇ ಪೂಜಾರಿ ನೆಚ್ಚಿಕೊಂಡಿದ್ದರೆ, ನಳಿನ್‌ ಕುಮಾರ್‌ ಅವರು ಮೋದಿ ಅಲೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ.

ಪಕ್ಷದೊಳಗೆ ನಡೆದ ಚುನಾವಣೆಯಲ್ಲಿ ಗೆದ್ದಿರುವುದೂ ಪೂಜಾರಿ ಅವರ ಉತ್ಸಾಹವನ್ನು ಹೆಚ್ಚಿಸಿದೆ.

ಪೂಜಾರಿ ಪ್ರಚಾರ: ಕಾಂಗ್ರೆಸ್‌ ಭದ್ರಕೋಟೆ­ಯಾಗಿದ್ದ ಜಿಲ್ಲೆ­ಯನ್ನು ಮರಳಿ ‘ಕೈ’ವಶ ಮಾಡಿಕೊಳ್ಳಲು ಪಣತೊಟ್ಟಿರುವ ಪೂಜಾರಿ, 76ರ ಇಳಿ ವಯಸ್ಸಿನಲ್ಲೂ ಯುವಕರನ್ನೂ ನಾಚಿಸು­ವಂತೆ ಕ್ಷೇತ್ರದಾದ್ಯಂತ ಚುರುಕಿನ ಸಂಚಾರ­ದಲ್ಲಿ ತೊಡಗಿದ್ದಾರೆ. ಹಿಂದಿನ ಚುನಾವಣೆ­ಗಳಲ್ಲಿ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

ತಮ್ಮ ‘ನಿಷ್ಠುರ’ ಮಾತಿಗೆ ಸ್ವಯಂ ನಿಯಂತ್ರಣ ಹೇರಿ­ಕೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆ­ಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಗೆಲ್ಲುವಲ್ಲಿ ಪೂಜಾರಿ ಅವರ ಪಾತ್ರವೂ ಪ್ರಮುಖವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ 87,816 ಮತಗಳನ್ನು ಹೆಚ್ಚು ಗಳಿಸಿತ್ತು.

1991ರ ಬಳಿಕ ನಡೆದ ಸತತ ಆರು ಚುನಾವಣೆಗಳಲ್ಲೂ ಮೇಲುಗೈ ಸಾಧಿಸುತ್ತಾ ಬಂದ ಬಿಜೆಪಿ ಈ ಬಾರಿ ಗೆಲುವಿಗಾಗಿ ಹೆಣಗಾಡಬೇಕಾದ ಸ್ಥಿತಿಯನ್ನು ತಲುಪಿದೆ. ಕಳೆದ ಬಾರಿ ಪೂಜಾರಿ ಅವರನ್ನು 40 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌ ಬಗ್ಗೆ ಕ್ಷೇತ್ರದಾದ್ಯಂತ ಮತದಾರರು ಅಸಮಾ­ಧಾನವನ್ನೇ ವ್ಯಕ್ತಪಡಿಸುತ್ತಾರೆ.

ಆದರೆ, ನರೇಂದ್ರ ಮೋದಿಗೆ ಒಂದು ಅವಕಾಶ ಕಲ್ಪಿಸುವ ಸಲುವಾಗಿ ಬಿಜೆಪಿಗೆ ಮತ ನೀಡಬೇಕಾಗಿದೆ ಎಂಬ ಒಲವೂ ಇದೆ. ಇದನ್ನರಿತ ಪೂಜಾರಿ, ಪ್ರಚಾರ­ದುದ್ದಕ್ಕೂ ನಳಿನ್‌ ಬದಲು ಮೋದಿ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.
ಮೋದಿ ವಿರೋಧಿ ಅಲೆಯೂ ಕ್ಷೇತ್ರದಲ್ಲಿದೆ. ಜಿಲ್ಲೆಯಲ್ಲಿ ಈ ಹಿಂದಿನ ಕೋಮು ಗಲಭೆಗಳಿಂದ ಆತಂಕಗೊಂಡ ಅಲ್ಪಸಂಖ್ಯಾತ ಸಮುದಾಯ ಇದನ್ನು ಬಹಿರಂಗವಾಗಿಯೇ ತೋರಿಸಿ­ಕೊಂಡಿದೆ. 

ಮೋದಿ ಅಲೆ ಇದೆ ಎಂದು ಬಿಜೆಪಿ ಹೇಳಿ­ಕೊಳ್ಳುತ್ತಿದ್ದರೂ, ಗೆಲುವು ಸುಲಭದ ತುತ್ತಲ್ಲ ಎಂಬುದು ಆ ಪಕ್ಷದ ಮುಖಂಡ­ರಿಗೆ ಮನದಟ್ಟಾ­ಗಿದೆ. ಹಾಗಾಗಿ ಬಿಜೆಪಿ ಹಾಗೂ ಸಂಘ ಪರಿ­ವಾರದ ಕಾರ್ಯಕರ್ತರ ಪಡೆ ಪ್ರತಿ ಮನೆಗೆ ಮೂರ್ನಾಲ್ಕು ಬಾರಿ ತೆರಳಿ ಮತದಾರರ ಮನವೊಲಿಸುವ ತಂತ್ರ ರೂಪಿಸಿದೆ. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಬೆವರಿಳಿಸುತ್ತಿದೆ. ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ವಿಧಾನಸಭಾ ಚುನಾವಣೆ­ಯಲ್ಲಿ ದೂರ ಉಳಿದಿದ್ದ ತಳಮಟ್ಟದ ಕಾರ್ಯಕರ್ತರು ಈ ಬಾರಿ ಮತ್ತೆ ಪ್ರಚಾರಕ್ಕೆ ಧುಮುಕಿರುವುದು ಬಿಜೆಪಿಗೆ ಸ್ವಲ್ಪಮಟ್ಟಿಗೆ ಶಕ್ತಿ ತುಂಬಿದೆ.

ಜಿಲ್ಲೆಯಲ್ಲಿ ಕಾರ್ಮಿಕ ಹೋರಾಟವನ್ನು ಇನ್ನೂ ಜೀವಂತ­ವಾಗಿಟ್ಟಿರುವ ಸಿಪಿಎಂ ಈ ಸಲವೂ ಪಕ್ಷದ ವಿವಿಧ ಸಂಘಟನೆಗಳ ಸದಸ್ಯರ ಬಲವನ್ನು ನೆಚ್ಚಿಕೊಂಡು ಅಖಾಡಕ್ಕಿಳಿದಿದೆ. ರೈತಪರ ಚಳವಳಿಯಲ್ಲಿ ತೊಡಗಿಸಿಕೊಂಡ ಯಾದವ ಶೆಟ್ಟಿ, ಸಿಪಿಎಂ ಅಭ್ಯರ್ಥಿ. ಕಳೆದ ಬಾರಿ ಸಿಪಿಎಂ  ಬೆಂಬಲಿಸಿದ್ದ ಜೆಡಿಎಸ್‌ ಈ ಬಾರಿ  ಎಸ್‌ಡಿಪಿಐ ಅಭ್ಯರ್ಥಿ ಹನೀಫ್‌ ಖಾನ್‌ ಪರ ನಿಂತಿದೆ. ಜಿಲ್ಲೆಯ ಕೆಲವೆಡೆ ಸಕ್ರಿಯವಾಗಿರುವ ಎಸ್‌ಡಿಪಿಐನ ಯುವ ಕಾರ್ಯಕರ್ತರ ಪಡೆ ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್‌ಗೆ ಪಾಠ ಕಲಿಸುವ ಹವಣಿಕೆಯಲ್ಲಿದೆ.

ಆಮ್‌ ಆದ್ಮಿ ಪಕ್ಷದ ಎಂ.ಆರ್‌.ವಾಸುದೇವ ಅವರೂ ಕಣ­ದಲ್ಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ­ರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳೇ ಶ್ರೀರಕ್ಷೆ­ಯಾಗಬಹುದು ಎಂಬ ನಿರೀಕ್ಷೆ ಅವರದು. ಆದರೆ, ಕಾರ್ಯ­ಕರ್ತರ ಕೊರತೆಯನ್ನು ಈ ಪಕ್ಷ ಎದುರಿಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನಿಕಟ ಪೈಪೋಟಿ ಇರುವುದರಿಂದ ಸಿಪಿಎಂ, ಎಎಪಿ ಹಾಗೂ ಎಸ್‌ಡಿಪಿಐ ಅಭ್ಯರ್ಥಿ­ಗಳು ಪಡೆಯುವ ಮತಗಳೂ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ.

ಬಹಿಷ್ಕಾರದ ಗುಮ್ಮ: ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟು­ಕೊಂಡು ಚುನಾವಣೆ ಬಹಿಷ್ಕರಿಸುವ ಬೆದರಿಕೆಯ ಬ್ಯಾನರ್‌­ಗಳು ಕೆಲವೆಡೆ ಕಂಡುಬಂದಿವೆ. ಉಳ್ಳಾಲ ಕೋಡಿಯಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ವೇಳೆ ಅಮಾಯಕರನ್ನು ಬಂಧಿಸಲಾಗಿದೆ ಎಂಬ ನೆಪ ಇಟ್ಟುಕೊಂಡು ಸ್ಥಳೀಯರ ಗುಂಪು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದೆ.  

ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ಸೌಜನ್ಯಾ ಕೊಲೆ ಪ್ರಕರಣ, ಕಾಂಗ್ರೆಸ್‌ ಆಡಳಿತದಲ್ಲೂ ಜೀವಂತವಾಗಿರುವ ನೈತಿಕ ಪೊಲೀಸ್‌ಗಿರಿ, ಎಂಡೋಸಲ್ಫಾನ್‌ ಸಂತ್ರಸ್ತರ ಬವಣೆ, ಅಡಿಕೆ ನಿಷೇಧದ ಗುಮ್ಮ, ಪಶ್ಚಿಮಘಟ್ಟದ ತಪ್ಪಲಿನ ನಿವಾಸಿಗಳಲ್ಲಿ ಮನೆ ಮಾಡಿರುವ ಕಸ್ತೂರಿರಂಗನ್‌ ವರದಿಯ ಆತಂಕ, ಹುಲಿ ಯೋಜನೆಯ ಭಯ, ನಕ್ಸಲ್‌ ಸಮಸ್ಯೆ, ನಿವೇಶನ–ಹಕ್ಕುಪತ್ರ ರಹಿತರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆ ಆಗಿಯೇ ಇಲ್ಲ.

ಜಿಲ್ಲೆಯ ಜನತೆಯನ್ನು ಕಂಗಾಲಾಗಿಸಿದ್ದ ನಿಡ್ಡೋಡಿ ವಿದ್ಯುತ್‌ ಸ್ಥಾವರ ಮತ್ತು ಪಿಸಿಪಿಐಆರ್‌ನಂತಹ (ಪೆಟ್ರೋಲಿಯಂ, ಕೆಮಿಕಲ್ಸ್‌ ಆಂಡ್‌ ಪೆಟ್ರೋಕೆಮಿಕಲ್ಸ್‌ ಇನ್‌ವೆಸ್ಟ್‌­ಮೆಂಟ್‌ ರೀಜನ್‌) ಭಾರಿ ಕೈಗಾರಿಕೆಗಳ ಬಗ್ಗೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಉಲ್ಲೇಖ ಮಾಡಿದರೂ, ಈಗ ಈ ಚರ್ಚೆಯೂ ನೇಪಥ್ಯಕ್ಕೆ ಸರಿದಿದೆ.

ಜಾತಿ ಲೆಕ್ಕಾಚಾರವೂ ಗುಪ್ತಗಾಮಿನಿಯಾಗಿ ಹರಿದಾಡುತ್ತಿದೆ. ಅಭ್ಯರ್ಥಿಗಳ ಜಾತಿ ಹಿನ್ನೆಲೆಯನ್ನೇ ಇಟ್ಟುಕೊಂಡ ಅನೇಕ ‘ಸಂದೇಶ’ಗಳು ಮೊಬೈಲ್‌­ನಿಂದ ಮೊಬೈಲ್‌ಗೆ ರವಾನೆ­ಯಾಗುತ್ತಿವೆ.

ಪ್ರತಿಷ್ಠೆಯ ಕಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರು ಸಮಾವೇಶ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿ­ದ್ದಾರೆ. ಕರಾವಳಿಯಲ್ಲಿ ಕತ್ತಲಾದ ಬಳಿಕವೂ ಮನೆ ಮನೆ ಭೇಟಿ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪೈಪೋಟಿಗೆ ಬಿದ್ದಂತೆ ಪ್ರಚಾರ ತಂತ್ರ ಹೆಣೆಯುತ್ತಿವೆ. ಗೆಲುವಿನ ನಗೆ ಬೀರಲು, ಉರಿಬಿಸಿಲಿನಲ್ಲೂ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT