ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಲಬುರ್ಗಿ ಸರ್ ಕ್ಲಾಸ್'ಗೆ ಚಪ್ಪಾಳೆಯ ಸುರಿಮಳೆ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಧಾರವಾಡ: `... ನಾಡವರ್ಗಳ್ ಚದುರರ್, ನಿಜದಿಂ, ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್...' ಎಂಬ ಕವಿರಾಜಮಾರ್ಗದ ಸಾಲುಗಳನ್ನು ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಓದುತ್ತಿದ್ದರೆ ಇಡೀ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ ಸುರಿಯಿತು.

ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ `ಪ್ರಜಾವಾಣಿ' ಸಹಯೋಗದಲ್ಲಿ ಸಂಘಟಿತವಾದ `ಧಾರವಾಡ ಸಾಹಿತ್ಯ ಸಂಭ್ರಮ'ದ ಎರಡನೇ ದಿನವಾದ ಶನಿವಾರ `ಪ್ರಾಚೀನ ಕಾವ್ಯ ವಾಚನ'ವನ್ನು ಮಾಡಿದ ಕಲಬುರ್ಗಿ, ಪ್ರಾಚೀನ ಕಾವ್ಯದ ಸಾಲುಗಳನ್ನು ಲಾಲಿತ್ಯಪೂರ್ಣವಾಗಿ ಪ್ರಸ್ತುತಪಡಿಸಿದರು. ಸಭಾಂಗಣದಲ್ಲಿದ್ದ ಬಹುತೇಕರು ಅವರ ಶಿಷ್ಯಂದಿರೇ. ಹಾಗಾಗಿ ಅದು ಒಂದು ಬಗೆಯಲ್ಲಿ `ಕಲ್ಬುರ್ಗಿ ಸರ್ ಕ್ಲಾಸ್' ಆಗಿತ್ತು!

ಕವಿರಾಜಮಾರ್ಗ ಹಾಗೂ ಪಂಪಭಾರತದಿಂದ ಜತನದಿಂದ ಆರಿಸಿಕೊಂಡಿದ್ದ ತಲಾ ಐದು ಕಾವ್ಯದ ತುಣುಕುಗಳನ್ನು ಓದಿದ ಅವರು, `ಕಾವ್ಯ ಓದುವಾಗ ಭಾಷೆಗಿಂತ ಭಾವ ಮುಖ್ಯವಾಗಬೇಕು' ಎಂದು ಅಭಿಪ್ರಾಯಪಟ್ಟರು.

`ಕವಿರಾಜಮಾರ್ಗದಲ್ಲಿ ಬರುವ ಕಾವೇರಿಯಿಂದಮಾಗೋದಾವರಿಮರಮಿರ್ದ ನಾಡದಾ ಕನ್ನಡದೊಳ್' ಎಂಬ ವಾಕ್ಯವನ್ನು ಒಡೆದು, ಕಾವೇರಿಯಿಂದಂ ಆ... ಗೋದಾವರಿ... ಎಂದಾಗ, ಹುಡುಗರು ಕೊಠಡಿಯ ಬಾಗಿಲಿನತ್ತ ನೋಡುತ್ತಿದ್ದರು. ಎಷ್ಟೊಂದು ದೂರವಿತ್ತು ಎಂಬುದನ್ನು ಕಾಣಲು ಹೀಗೆ ಮಾಡುತ್ತಿದ್ದರು. ಎಷ್ಟೋ ಬಾರಿ ನಾನು ಕಾವ್ಯವನ್ನು ಓದಿದ ಬಳಿಕ, ಮುಂದೆ ಏನೂ ಹೇಳಬೇಡಿ ಸರ್, ನಮಗೆಲ್ಲ ಅರ್ಥವಾಯಿತು ಎಂದು ವಿದ್ಯಾರ್ಥಿಗಳೇ ಹೇಳುತ್ತಿದ್ದರು' ಎಂದು ತಾವು ಪ್ರಾಧ್ಯಾಪಕರಾಗಿದ್ದಾಗ ನಡೆದ ಘಟನೆಯನ್ನು ಮೆಲುಕು ಹಾಕಿದರು.

`ಪಂಪ ಭಾರತ'ದಲ್ಲಿ ಬರುವ ಬನವಾಸಿಯ ವರ್ಣನೆ ಮಾಡಿ, `ಮರಿದುಂಬಿಯಾಗಿ, ಇಲ್ಲವೇ ಕೋಗಿಲೆಯಾಗಿ ಬನವಾಸಿಯಲ್ಲೇ ಹುಟ್ಟುತ್ತೇನೆ' ಎಂದ ಪಂಪನ ಮಾತು ನಮ್ಮ ನಾಡಿನ ಮಹತ್ವವನ್ನು ಸಾರುತ್ತದೆ. ಇಂತಹ ಚೆಲುವಾದ ಹಳೆಗನ್ನಡ `ಹಾಡುಗಬ್ಬ' ಮತ್ತು `ಓದುಗಬ್ಬ' ಎಂಬ ಎರಡು ಶೈಲಿಯಿಂದ ಕೂಡಿತ್ತು. ಆದರೆ ಇದೀಗ ಹಾಡುಗಬ್ಬ ಮಾಯವಾಗಿ ಓದುಗಬ್ಬ ಮಾತ್ರ ಉಳಿದಿದೆ' ಎಂದು ವಿಷಾದಿಸಿದರು.

ಹರಿಹರ ಕವಿಯ ಕುಂಬಾರ ಗುಂಡಯ್ಯನ ರಗಳೆಗಳನ್ನು ಪ್ರಸ್ತುತಪಡಿಸಿದ ಕನ್ನಡ ಪ್ರಾಧ್ಯಾಪಕ ಡಾ. ಶಾಂತಿನಾಥ ದಿಬ್ಬದ, `ಚಂಪೂ ಕಾವ್ಯ ನಿಧಾನಗತಿಯಶೈಲಿಯದಾದರೆ, ರಗಳೆ ಶೀಘ್ರಗತಿಯಲ್ಲಿ ಓದಿಸಿಕೊಂಡು ಹೋಗುತ್ತದೆ. ರಗಳೆಯ ಪ್ರಕಾರವನ್ನು ಜನಪ್ರಿಯಗೊಳಿಸಿದ ಹರಿಹರನ ಶಕ್ತಿ ಆತನ ಕಾವ್ಯದಲ್ಲಿ ಕಂಡು ಬರುತ್ತದೆ. ಇಂತಹ ಕಾವ್ಯಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿಲ್ಲ ಎಂದು ದೂರುವುದು ಸರಿಯಲ್ಲ. ಬದಲಾಗಿ ಪ್ರಾಧ್ಯಾಪಕರ ಬಳಿ ಹಳಗನ್ನಡ ಕಾವ್ಯದ ಸರಕೇ ಇಲ್ಲ. ಈ ಅಂಶವನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಬಸರಾಜದೇವರ ರಗಳೆಯಲ್ಲಿ ಮಾಹೇಶ್ವರರು ಬಸವಣ್ಣನನ್ನು ಸ್ತುತಿಸುವ ರಗಳೆಯನ್ನು ಅವರು ಪ್ರಸ್ತುತಪಡಿಸಿದರು.
ಸಾಹಿತಿ ಕೃಷ್ಣಮೂರ್ತಿ ಹನೂರು ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಓದಿದರು. `ಗದಗದವರಾದ ಕುಮಾರವ್ಯಾಸ ವಾಹನ ಸೌಕರ್ಯ ಇಲ್ಲದಿದ್ದ ಕಾಲಕ್ಕೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಅದರಿಂದ ಸ್ಫೂರ್ತಿ ಹೊಂದಿದ ಹಲವರು ಕುಮಾರವ್ಯಾಸ ಭಾರತವನ್ನು ಅಲ್ಲಿ ಇಂದಿಗೂ ಹಾಡುತ್ತಾರೆ' ಎಂದರು.

ಗೋಷ್ಠಿಯ ನಿರ್ದೇಶಕ ಡಾ.ಸ್ವಾಮಿರಾವ್ ಕುಲಕರ್ಣಿ, `ಹಳಗನ್ನಡ ಕಾವ್ಯವನ್ನು ಪಠ್ಯಕ್ಕೆ ಇಡಬೇಡಿ ಎನ್ನುವ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ. ಅಧ್ಯಾಪಕರಿಗೂ ಹೇಳಲು ಬರುವುದಿಲ್ಲ. ಈ ಮನೋಭಾವ ಬದಲಾಗಬೇಕು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT