ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

ಲಲಿತಕಲಾ ಅಕಾಡೆಮಿ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ
Last Updated 25 ನವೆಂಬರ್ 2014, 20:10 IST
ಅಕ್ಷರ ಗಾತ್ರ

ಬೆಂಗಳೂರು: ಸುವರ್ಣ ಸಂಭ್ರಮದಲ್ಲಿ­ರುವ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ‘ಜೀವಮಾನ ಶ್ರೇಷ್ಠ ಸಾಧನೆ’ಗಾಗಿ ಆರು ಮಂದಿ ಹಿರಿಯ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಕಾರ್ಯ­ಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಕಲಾವಿದರನ್ನು ಸನ್ಮಾನಿಸಿದರು. ‘ಜೀವಮಾನ ಶ್ರೇಷ್ಠ ಸಾಧನೆ’ ಪ್ರಶಸ್ತಿ ಪುರಸ್ಕೃತರಿಗೆ ₨ 10 ಸಾವಿರ ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.

ಅಕಾಡೆಮಿಯು ಇತ್ತೀಚೆಗೆ ಆಯೋಜಿಸಿದ್ದ 43ನೇ ವಾರ್ಷಿಕ ಕಲಾ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿ ಯುವ ಕಲಾವಿದರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರಿಗೆ ₨ 5 ಸಾವಿರ ಬಹುಮಾನ ಹಾಗೂ ಫಲಕ ನೀಡಲಾಯಿತು.

ಇದೇ ಸಂದರ್ಭದಲ್ಲಿ ಅಕಾಡೆಮಿಯ ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ ಅವರು, ‘50ನೇ ವರ್ಷಾಚರಣೆ ಕಾರಣ ಅಕಾಡೆಮಿ ವತಿಯಿಂದ ಮೂರು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.

ಪ್ರಶಸ್ತಿ ಪುರಸ್ಕೃತರು (ಜೀವಮಾನ ಶ್ರೇಷ್ಠ ಸಾಧನೆ): ಬೆಳಗಾವಿಯ ಚಂದ್ರಕಾಂತ ಕುಸನೂರು, ಬೆಂಗಳೂರಿನ ಡಾ.ಬಿ.ಕೆ.ಎಸ್‌.ವರ್ಮ, ಶಿವಮೊಗ್ಗದ ಲಕ್ಷ್ಮಿ ರಾಮಪ್ಪ (2013ನೇ ಸಾಲು) ಬೀದರ್‌ನ ಚಂದ್ರಶೇಖರ ಸೋಮಶೆಟ್ಟಿ, ಮೈಸೂರಿನ ಬಸವರಾಜ ಮುಸಾವಳಗಿ ಹಾಗೂ ವಿಜಯಪುರದ  ಕೆ.ಗಂಗಾಧರ್‌ (2014ನೇ ಸಾಲು).

43ನೇ ವಾರ್ಷಿಕ ಕಲಾ ಬಹುಮಾ­ನಿತರು: ಕಲಬುರ್ಗಿಯ ಎಸ್‌.ಎಚ್‌. ಮಶಾಳ್ಕರ್‌, ಅಶೋಕ್‌ ಜಿ.ನೆಲ್ಲಗಿ, ಎಸ್‌.ಎಸ್‌.ಮರಗೋಳ್‌, ಬೆಂಗಳೂರಿನ ಕೆ.ಎಸ್‌.ರಂಗನಾಥ್‌, ಜೆ.ದುಂಡರಾಜ, ಎನ್‌.ಕಾಂತರಾಜ್‌, ದಕ್ಷಿಣ ಕನ್ನಡದ ಆನಂದ ಬೆದ್ರಾಳ, ರಾಯಚೂರಿನ ದೇವೇಂದ್ರ ಹುಡಾ, ಮೈಸೂರಿನ ಎನ್‌.ಪರಮೇಶ್ವರ ಹಾಗೂ ಉತ್ತರ ಕನ್ನಡದ ವಿಶ್ವೇಶ್ವರ ಎಂ.ಪಟಗಾರ.

ಕಲಾವಿದರ ಅಸಮಾಧಾನ: ‘ಕಲಾವಿದರು ಕಲಾ ಸಂಸ್ಕೃತಿ­ಶ್ರೀಮಂತಗೊಳಿಸುತ್ತಿದ್ದಾರೆ ಎಂದು ಭಾಷಣ ಮಾಡುತ್ತಾರೆ. ಆದರೆ, ಕಲಾ­ವಿದರು ಮಾತ್ರ ಬಡವರಾ­ಗಿಯೇ ಇರು­ತ್ತಾರೆ. ನೀವು ಕೊಡುವ ₨10ಸಾವಿರ ಬಹುಮಾನ ಮೊತ್ತ ಯಾವುದಕ್ಕೂ ಸಾಲುವುದಿಲ್ಲ’ ಎಂದು ಜೀವಮಾನ ಶ್ರೇಷ್ಠ ಸಾಧನೆ­ ಪ್ರಶಸ್ತಿ ಪಡೆದ ಬೆಳಗಾವಿಯ ಚಂದ್ರಕಾಂತ ಕುಸನೂರು ಬೇಸರಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಅಕಾ­ಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ, ‘ನಮಗೂ ಮುಜುಗರವಾಗಿದೆ. ₨ 5 ಸಾವಿರ ಬಹುಮಾನ ಮೊತ್ತ­ವನ್ನು ₨ 25ಸಾವಿರಕ್ಕೂ, ₨10 ಸಾವಿರ­ವನ್ನು ₨ 75 ಸಾವಿರಕ್ಕೂ ಹೆಚ್ಚಿಸಲು ಸಚಿವೆ ಉಮಾಶ್ರೀ ಅವರ ಅನುಮತಿ ಲಭಿ­ಸಿದೆ. ತಾಂತ್ರಿಕ ಅಡಚಣೆ­ಯಿಂದ ಈ ಬಾರಿ ನೀಡಲು ಸಾಧ್ಯವಾಗಿಲ್ಲ’ ಎಂದರು.

ಉಮಾಶ್ರೀಗೆ ಧಿಕ್ಕಾರ
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಸಾಹಿತಿಗಳ ಕಲಾವಿದರ ಒಕ್ಕೂಟ­ದಿಂದ ಉಮಾಶ್ರೀ ವಿರುದ್ಧ ಧಿಕ್ಕಾರ ಇರುವ ಕರಪತ್ರ ಹಂಚ­ಲಾಯಿತು. ಉಮಾಶ್ರೀ ಅವ­ರಿಗೂ ಈ ಕರಪತ್ರ ಲಭಿಸಿತು. ಸಾಂಸ್ಕೃ­­ತಿಕ ಸಂಘ ಸಂಸ್ಥೆ­ಗಳಿಗೆ ಸಚಿ­ವರು ಅನು­ದಾನ ಬಿಡು­ಗಡೆ ಮಾಡು­ತ್ತಿಲ್ಲ ಎಂಬ ಆರೋಪ ಅದರಲ್ಲಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಉತ್ತಮ ಕೆಲಸದಲ್ಲಿ ತೊಡ­ಗಿರುವ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಅನು­ದಾನ ನೀಡಲಾಗುತ್ತಿದೆ. ದುರು­­ಪ­ಯೋ­ಗಪಡಿಸಿಕೊಳ್ಳುವ ಸಂಸ್ಥೆ­ಗಳಿಗೆ ಅನುದಾನ ನೀಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT