ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನೆಗೆ ರೆಕ್ಕೆ ಕಟ್ಟಿ...

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ನಯ್ಯಾ ಸಗ್ಗಿ
‘ತಂತ್ರಜ್ಞಾನ ಸದ್ಬಳಕೆಯಿಂದ ಆಹಾರ, ವಸತಿ, ಸಾರಿಗೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೊಸ ದಾರಿಯನ್ನು ಕಂಡುಕೊಳ್ಳುವ ಮೂಲಕ ಇತರರಿಗೂ  ಉದ್ಯೋಗ ಕಲ್ಪಿಸಿ ಸಮಾಜಕ್ಕೂ ನೆರವಾಗಬಹುದು’ ಎನ್ನುತ್ತಾರೆ ಮುಂಬೈನ ಯುವ ಸಾಧಕಿ ನಯ್ಯಾ ಸಗ್ಗಿ.
ನಯ್ಯಾ ಹಾರ್ವಡ್‌ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.  ಖಾಸಗಿ ಕಂಪೆನಿಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳಿಗೆ  ಕೆಲಸಕ್ಕಾಗಿ ಅರ್ಜಿ ಹಾಕಲಿಲ್ಲ. ಆಧುನಿಕ ತಂತ್ರಜ್ಞಾನದ ಬದಲಾವಣೆಗೆ ತೆರೆದುಕೊಂಡು ಹೊಸ ದಾರಿಯನ್ನು ಕಂಡುಕೊಳ್ಳುವ ಹಂಬಲ ಅವರದ್ದಾಗಿತ್ತು. ಈ ಹುಡುಕಾಟದಲ್ಲಿ ಹೊಳೆದದ್ದು ಮಕ್ಕಳ ಆರೋಗ್ಯದ ಬಗ್ಗೆ ಸಲಹೆ ಮತ್ತು ಮಾಹಿತಿ ನೀಡುವ ವೆಬ್‌ ಪೋರ್ಟಲ್‌ ಆರಂಭಿಸುವುದು. ಆಪ್ತ ಗೆಳೆಯರೊಂದಿಗೆ ಸೇರಿಕೊಂಡು ‘ಬೇಬಿಚಕ್ರ’ ವೆಬ್‌ಸೈಟ್‌ ಪ್ರಾರಂಭಿಸಿದರು. ಇದು ಆರಂಭಗೊಂಡ ಕೆಲವೇ ತಿಂಗಳಲ್ಲಿ 40 ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವುದು ವಿಶೇಷ.

‘ಬೇಬಿಚಕ್ರ’ ಹುಟ್ಟಿನ ಹಿಂದೆ ಒಂದು ಫೇಸ್‌ಬುಕ್‌ ಕಥೆ ಇದೆ. ಗೆಳೆಯರೊಂದಿಗೆ ಚಾಟ್‌  ಮಾಡುವುದು ನಯ್ಯಾ ಅವರ ನಿತ್ಯದ ಹವ್ಯಾಸ. ಬಹುತೇಕ ಗೆಳೆತಿಯರು ವಿವಾಹವಾಗಿದ್ದರು. ಚಾಟಿಂಗ್‌ ವೇಳೆಯಲ್ಲಿ ಮಕ್ಕಳ ಆಹಾರ, ಬಟ್ಟೆ, ಆಟಿಕೆಗಳು, ಬೇಬಿಕೇರ್‌ ಸೆಂಟರ್‌ಗಳ ಬಗ್ಗೆ ಮಾಹಿತಿ ಕೇಳುತ್ತಿದ್ದರು. ನಯ್ಯಾ ಗೂಗಲ್‌ನಲ್ಲಿ ಹುಡುಕಿ ಗೆಳತಿಯರಿಗೆ ಮಾಹಿತಿ ನೀಡುತ್ತಿದ್ದರು. ಈ ಸಂಗತಿ‘ಬೇಬಿಚಕ್ರ’ ರೂಪಿಸಲು ಮೂಲ ಪ್ರೇರಣೆಯಾಯಿತು ಎನ್ನುತ್ತಾರೆ ನಯ್ಯಾ. ಸದ್ಯಕ್ಕೆ ಮುಂಬೈನಲ್ಲಿ ‘ಬೇಬಿಚಕ್ರ’ ಕಾರ್ಯನಿರ್ವಹಿಸುತ್ತಿದೆ. ಇದರ ಮುಖಾಂತರ ತಾವು ವಾಸವಾಗಿರುವ ಸ್ಥಳಗಳಲ್ಲಿ ಬೇಬಿಕೇರ್‌ ಸೆಂಟರ್‌ಗಳು,  ಶಾಲೆಗಳು, ಆಸ್ಪತ್ರೆಗಳು, ಶಿಶು ಆಹಾರ, ಆಟಿಕೆಗಳು, ಉಡುಪುಗಳು ಎಲ್ಲೆಲ್ಲಿ ದೊರೆಯುತ್ತವೆ ಎಂಬ ಮಾಹಿತಿ ಪಡೆಯಬಹುದು. ನುರಿತ ವೈದ್ಯರು, ನ್ಯೂಟ್ರಿಷಿಯನ್‌ಗಳು, ಆಪ್ತ ಸಮಾಲೋಚಕರು, ಇನ್ನಿತರ ಅವಶ್ಯಕ ಸಂಸ್ಥೆಗಳು ಸೇರಿದಂತೆ ಮಕ್ಕಳ ಹಾರೈಕೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ ಮಾಹಿತಿ ಈ ವೆಬ್‌ನಲ್ಲಿ ಲಭ್ಯ. ಇಲ್ಲಿ ಪೋಷಕರು ನೇರವಾಗಿ ಸಂವಾದ ನಡೆಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
www.BabyChakra.com

ಅನುರಾಗ್‌
ವಿಭಿನ್ನ ದಾರಿಯ ಮೂಲಕ ಉತ್ತಮ ಬದುಕು ರೂಪಿಸಿಕೊಂಡವರು ಮಧ್ಯಪ್ರದೇಶದ ಯುವಕ ಅನುರಾಗ್‌ ಅಸ್ತಿ.
ಐಟಿ ಎಂಜಿನಿಯರ್ ಆಗಿರುವ ಅನುರಾಗ್‌ಗೆ ಘನತ್ಯಾಜ್ಯವನ್ನು ಸಂಸ್ಕರಿಸಿ ಮರುಬಳಕೆ ಮಾಡುವುದರಲ್ಲಿ ಅತೀವ ಆಸಕ್ತಿ. ಮನೆಯಿಂದ  ಪ್ಲಾಸ್ಟಿಕ್ ತ್ಯಾಜ್ಯ ಮತ್ತು ವೃತ್ತಪತ್ರಿಕೆಗಳು ಗುಜರಿಗೆ ಹೋಗುತ್ತಿರಲಿಲ್ಲ. ಅವುಗಳನ್ನು  ಅನುರಾಗ್‌ ಮರು ಸಂಸ್ಕರಿಸಿ ಬಳಕೆ ಮಾಡುತ್ತಿದ್ದರು. ಇದನ್ನು ನೋಡುತ್ತಿದ್ದ ಮನೆಯವರು ‘ನೀನು ಎಂಜಿನಿಯರ್‌ ಆಗಲು ನಾಲಾಯಕ್‌ ಆದ್ರೆ ಗುಜರಿ ವ್ಯಾಪಾರಿಯಾಗಲು ಲಾಯಕ್‌’ ಎಂದು ರೇಗಿಸುತ್ತಿದ್ದರಂತೆ. ಮನೆಯವರ ತಮಾಷೆ ಮಾತುಗಳನ್ನೇ  ಅನುರಾಗ್‌ ಕಾರ್ಯರೂಪಕ್ಕೆ ತಂದರು. ಅರ್ಥಾತ್‌ ಅನುರಾಗ್‌ ‘ಕಬಡಿವಾಲ’ ಎಂಬ ಆನ್‌ಲೈನ್‌ ಗುಜರಿ ಕಂಪೆನಿ ಆರಂಭಿಸಿದರು. ಹಿರಿಯ ವಿಜ್ಞಾನಿ ಕವೀಂದ್ರ ರಘುವಂಶಿ ಅವರ ಘನತ್ಯಾಜ್ಯ ಸಂಸ್ಕರಣಾ ತಂತ್ರಜ್ಞಾನ ಬಳಸಿಕೊಂಡು ಸಂಸ್ಕರಣಾ ಘಟಕವನ್ನು ತೆರೆದರು. ಮನೆಯವರು ಮತ್ತು ಗೆಳೆಯರಿಂದ  ಹಣಕಾಸು ನೆರವು ಪಡೆದು ಅತಿ ಕಡಿಮೆ ಬಂಡವಾಳದಲ್ಲಿ ಗೋದಾಮು ಮತ್ತು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅನುರಾಗ್‌ ಸ್ಥಾಪಿಸಿದರು.

  ಆನ್‌ಲೈನ್‌  ಪೋರ್ಟಲ್‌ನಲ್ಲಿ ಬುಕ್ಕಿಂಗ್‌ ಮಾಡಿದರೆ ಕಬಡಿವಾಲ ಕಂಪೆನಿಯ ಹುಡುಗರು ಗ್ರಾಹಕರ ಮನೆ ಬಾಗಿಲಿಗೆ ಬಂದು ಗುಜರಿ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾರೆ.  ಗ್ರಾಹಕರ ಎದುರಲ್ಲೇ ವಸ್ತುಗಳನ್ನು ತೂಕ ಹಾಕಿ ಸ್ಥಳದಲ್ಲೇ ಹಣ ಪಾವತಿಸಲಾಗುತ್ತದೆ. ಗೋದಾಮಿನಲ್ಲಿ ನ್ಯೂಸ್‌ ಪೇಪರ್‌, ಪ್ಲಾಸ್ಟಿಕ್‌ ತ್ಯಾಜ್ಯ ಮತ್ತು ಖನಿಜದ ಸಾಮಾನುಗಳನ್ನು ಬೇರ್ಪಡಿಸಿ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುವುದು. ಈ ಘಟಕದಲ್ಲಿ ಕಾಗದದ ಕಪ್‌, ತಟ್ಟೆಗಳು, ಹಾಳೆಗಳು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಆಟಿಕೆಗಳನ್ನು ತಯಾರಿಸಲಾಗುತ್ತದೆ. ಖನಿಜದ ಸಾಮಾನುಗಳನ್ನು ಸಂಸ್ಕರಿಸುವ ಘಟಕ ಇಲ್ಲವಾದ್ದರಿಂದ ಅವುಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವುದಾಗಿ ತಿಳಿಸುತ್ತಾರೆ ಅನುರಾಗ್‌. ಅನುರಾಗ್‌ ಅವರ ಭಿನ್ನ ಆಲೋಚನೆ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ.
www.thekabadiwala.com

ನಂದಿತಾ ಶೆಟ್ಟಿ
ವಿದೇಶದಲ್ಲಿ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸಬೇಕು ಎನ್ನುವುದು ಕೆಲವರ ಕನಸು. ಹತ್ತಾರು ಲಕ್ಷ ರೂಪಾಯಿ ಸಂಬಳ ಬರುತ್ತಿದ್ದರೂ ನೆಮ್ಮದಿಗಾಗಿ ಅಥವಾ ತಾಯ್ನಾಡಿನ ಸೇವೆಗಾಗಿ ಸ್ವದೇಶಕ್ಕೆ  ಮರಳುವವರು ಮತ್ತೊಂದು ಕಡೆ. ಇದನ್ನೆಲ್ಲಾ ನೋಡಿದರೆ ಬದುಕು ಎಷ್ಟೊಂದು ವೈರುಧ್ಯ ಅನ್ನಿಸುತ್ತದೆ ಅಲ್ಲವೇ? ಬೆಂಗಳೂರು ಮೂಲದ ನಂದಿತಾ ಶೆಟ್ಟಿ  ಬೋಸ್ಟನ್‌ನ ಪ್ರತಿಷ್ಠಿತ ಮ್ಯಾಚೆಸ್ಟೆ ಆಸ್ಪತ್ರೆ ಯಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಆಟಿಸಂ ಪೀಡಿತ ಮಕ್ಕಳ ಮೆದುಳಿನ ಕಾರ್ಯವೈಖರಿ  ಮತ್ತು ಸಾಮಾನ್ಯರ ಮೆದುಳು ಯಾವ ರೀತಿ ಕೆಲಸ ಮಾಡುತ್ತದೆ  ಎಂಬ ಸಂಶೋಧನೆಯಲ್ಲಿ ನಂದಿತಾ ತೊಡಗಿದ್ದರು. ಇದರಲ್ಲಿ ಯಶಸ್ವಿಯಾಗಿ  ಅಂತರರಾಷ್ಟ್ರೀಯ ವೈದ್ಯಕೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆ ಅವರದ್ದು.

ಭಾರತದಲ್ಲೇ ಏನಾದರೂ ಸಾಧಿಸ ಬೇಕು, ಆ ಮೂಲಕ ಭಾರತೀಯರಿಗೆ ನೆರವಾಗಬೇಕು ಎನ್ನುವ ಅಪೆಕ್ಷೇಯಿಂದ ಸ್ವದೇಶಕ್ಕೆ ಮರಳಿದರು. ಉತ್ತರ ಪ್ರದೇಶದ ಕುಗ್ರಾಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಶಿಕ್ಷಣ ಟ್ರಸ್ಟ್‌ನಲ್ಲಿ ಕೆಲಸಕ್ಕೆ ಸೇರಿದರು.
ಸಮುದಾಯ ಮತ್ತು ಸಮಾಜದ ಬದಲಾವಣೆಗೆ ಅಗತ್ಯವಾಗಿ ಬೇಕಾಗಿರುವ ಯೋಜನೆಗಳು ಮತ್ತು ಪರಿಕಲ್ಪನೆಗಳ ಬಗ್ಗೆ ಅಧ್ಯಯನ  ಮಾಡಿದರು. ಮುಂದೆ ಸ್ಟಾಂಡ್‌ಫರ್ಡ್‌ ಇಗ್ನೈಟ್‌ ಎಂಬ ಕಲಿಕಾ ಯೋಜನಾ ಕಾರ್ಯಕ್ರಮವನ್ನು ನಂದಿತಾ ರೂಪಿಸಿದರು. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಕಲಿಕಾ ಕಾರ್ಯಕ್ರಮ ಭಾರಿ ಜನಪ್ರಿಯತೆ ಪಡೆದಿದೆ. ಎಂಜಿನಿಯರ್‌ಗಳು, ವೈದ್ಯರು, ಕಿರಿಯ ವಿಜ್ಞಾನಿಗಳು, ಪದವೀಧರರು, ಸಂಶೋಧಕರು, ವಿದ್ಯಾರ್ಥಿಗಳು ಇದರ  ಲಾಭ ಪಡೆಯುವ ಮೂಲಕ  ಉತ್ತಮ ಸಮಾಜ ರೂಪಿಸುವತ್ತ ದಾಪುಗಾಲಿಡುತ್ತಿದ್ದಾರೆ ಎನ್ನುತ್ತಾರೆ ನಂದಿತಾ.
www.gsb.stanford.edu/programs/stanford-ignite

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT