ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಳಲ್ಲ ಇವರು ಸಂಹರಿಸಲು

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ದೇಶದಲ್ಲಿರುವ ಬಾಲಕಾರ್ಮಿಕರಲ್ಲಿ ಶೇ 90ಕ್ಕಿಂತ ಹೆಚ್ಚು ಮಕ್ಕಳು ಐಸ್‌ಕ್ರೀಮ್‌ ಪಾರ್ಲರ್, ಹೋಟೆಲ್‌ ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಅಂಗಡಿಯಂತಹ ಸಣ್ಣಪುಟ್ಟ ಉದ್ದಿಮೆಗಳಲ್ಲಿ ದುಡಿಯುತ್ತಿದ್ದಾರೆ. ಶೇ 2– 2.5ರಷ್ಟು ಮಕ್ಕಳು ಭಿಕ್ಷಾಟನೆ, ವೇಶ್ಯಾವಾಟಿಕೆ, ಜೀವಕ್ಕೆ ಹಾನಿ ಉಂಟು ಮಾಡಬಲ್ಲ ಅಪಾಯಕಾರಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

ನಮ್ಮ ಬಾಲಕಾರ್ಮಿಕ ಕಾಯ್ದೆಯನ್ನು ವಿಶ್ಲೇಷಿಸುವಾಗ ನಾವು ಈ ಎರಡೂ ವರ್ಗಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಎರಡನೇ ವಲಯವಾದ  ಅಪಾಯಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕೂಡಲೇ ಅಲ್ಲಿಂದ ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕಾದ ತುರ್ತು ಅಗತ್ಯ ಇದೆ. ಇದಕ್ಕಾಗಿ ಸಂಬಂಧಪಟ್ಟ ಕಾನೂನುಗಳನ್ನು ಉತ್ತಮವಾಗಿ ಅನುಷ್ಠಾನ ಮಾಡಲೇಬೇಕು. ಇದರ ಜೊತೆಗೆ, ಆ ಮಗುವಿನ ಕುಟುಂಬಕ್ಕೆ ಪುನರ್ವಸತಿ, ಉದ್ಯೋಗದಂಥ ಸಹಕಾರ ನೀಡುವುದೂ ಅಗತ್ಯ.

ಆದರೆ ಮೊದಲನೇ ವಲಯದಲ್ಲಿ ಬರುವ ಮಕ್ಕಳ ಸಮಸ್ಯೆಯನ್ನು ನಾವು ಭಿನ್ನವಾಗಿ ನೋಡಬೇಕಾಗಿದೆ. ಅವರು ದುಡಿಯುವ ಕ್ಷೇತ್ರ ತೀರಾ ಅಪಾಯಕಾರಿ ಏನಲ್ಲ. ಹೀಗಾಗಿ ಅವರನ್ನು ಕೆಲಸದಿಂದ ತೆಗೆದುಹಾಕುವುದಕ್ಕಿಂತ, ಅದರ ಜೊತೆಗೆ ಅವರಿಗೆ ಶಿಕ್ಷಣ, ವಯಸ್ಸಿಗೆ ಅನುಗುಣವಾದ ಕೆಲಸ ಮತ್ತು ದುಡಿಮೆಯ ಅವಧಿ, ಸರಿಯಾದ ಆರ್ಥಿಕ ಸವಲತ್್ತು ಸಿಗುವಂತೆ ಮಾಡಬೇಕಾಗಿದೆ. ಯಾಕೆಂದರೆ ಇಲ್ಲಿ ಅವರು ಕೆಲಸವನ್ನಷ್ಟೇ ಮಾಡುವುದಿಲ್ಲ. ಬದುಕಿಗೆ ಅಗತ್ಯವಾದ ಕೌಶಲವನ್ನೂ ಕಲಿಯುತ್ತಿರುತ್ತಾರೆ. ಒಬ್ಬ ಉದ್ಯಮಿಗೆ ಬೇಕಾದ ಮೂಲಪಾಠ ಅವರಿಗೆ ದೊರಕುತ್ತಿರುತ್ತದೆ.

ಜಗತ್ತಿನ ಯಶಸ್ವಿ ಉದ್ದಿಮೆದಾರರು ತಮ್ಮ ಬಾಲ್ಯದಲ್ಲಿ ಇಂತಹ ಕ್ಷೇತ್ರಗಳಲ್ಲಿ ದುಡಿದ ಉದಾಹರಣೆಗಳು ನಮ್ಮ ಮುಂದಿವೆ. ಈ ಬಗೆಯ ದುಡಿಮೆಯ ಮೂಲಕ ತಮಗೆ ದೊರೆತ ಆತ್ಮಸ್ಥೈರ್ಯ, ಉದ್ಯಮಶೀಲತೆ ಮತ್ತು ತಮ್ಮ ಯಶಸ್ಸಿನಲ್ಲಿ ಅವುಗಳ ಪಾತ್ರವನ್ನು ಹಲವರು ಸ್ಮರಿಸುತ್ತಾರೆ. ಜನಗಣತಿಗಳು ತೋರಿಸುವ ಅಂಕಿಅಂಶಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಬಾಲಕಾರ್ಮಿಕರು ದೇಶದಲ್ಲಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ‘ಬಾಲ ಕಾರ್ಮಿಕ ಕಾಯ್ದೆ’ಗೆ ತಿದ್ದುಪಡಿ ತರುವ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವು ಬೇಡಿಕೆಗಳು ಕೇಳಿಬಂದಿದ್ದು, ಎಲ್ಲ ರೀತಿಯ ಕೆಲಸವನ್ನೂ ಮಕ್ಕಳಿಗೆ ನಿಷೇಧಿಸಬೇಕು ಮತ್ತು ಬಾಲಕಾರ್ಮಿಕರ ವಯೋಮಿತಿಯನ್ನು 18ಕ್ಕೆ ಏರಿಸಬೇಕು ಎನ್ನುವುದು ಮುಖ್ಯವಾದುದು. ಇದು ತೀರಾ ಅಪಾಯಕಾರಿಯಾದ ಒತ್ತಾಯ. ಇಂತಹ ತಿದ್ದುಪಡಿಯಿಂದ, ಭವಿಷ್ಯದ ಕೆಲಸಕ್ಕೆ ಚಿಕ್ಕಂದಿನಿಂದಲೇ ಕೌಶಲ ಅರಿಯುವ ಎಲ್ಲ ದಾರಿಗಳೂ ಮುಚ್ಚಿಹೋಗುತ್ತವೆ ಮತ್ತು ನಮ್ಮ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಈ ಬಗೆಯ ಶಿಕ್ಷಣ ಪಡೆಯಲು ಅವಕಾಶಗಳೇ ಇಲ್ಲ.

ಏನಿದು ಎನ್‌ಸಿಎಲ್‌ಪಿ ಯೋಜನೆ? ರಾಜ್ಯದಲ್ಲಿ ಆದ ಪ್ರಗತಿ 2001ರಿಂದ 2015 ಫೆಬ್ರುವರಿ

ದೇಶದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದ ಜಿಲ್ಲೆಗಳಲ್ಲಿ, ಅಂತಹವರಿಗೆ ಪುನರ್ವಸತಿ ಕಲ್ಲಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ಸರ್ಕಾರ 1988ರಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯನ್ನು (ಎನ್‌ಸಿಎಲ್‌ಪಿ) ಜಾರಿಗೆ ತಂದಿತು.

ಎಲ್ಲೆಲ್ಲಿವೆ?: ಎನ್‌ಸಿಎಲ್‌ಪಿ ಯೋಜನೆಯಡಿ ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ    ಪುನರ್ವಸತಿ ಕೇಂದ್ರಗಳು:
ವಿಜಯಪುರ, ರಾಯಚೂರು, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಪ್ಪಳ, ದಾವಣಗೆರೆ, ಮೈಸೂರು, ಬಾಗಲಕೋಟೆ, ಚಿತ್ರದುರ್ಗ, ಕಲಬುರ್ಗಿ, ಬಳ್ಳಾರಿ, ಕೋಲಾರ, ಮಂಡ್ಯ

19 ಸಾವಿರ ಪ್ರಕರಣ ದಾಖಲು


1398 ಪ್ರಕರಣಗಳಲ್ಲಿ ಶಿಕ್ಷೆ

ರೂ90 ಲಕ್ಷ ದಂಡ ಸಂಗ್ರಹ

ರೂ69 ಲಕ್ಷ ಕಾರ್ಪಸ್  ನಿಧಿ ಸಂಗ್ರಹ

ಕೆಲಸದಿಂದಲೂ ಕಲಿಕೆ ಇದೆ ಮತ್ತು ಎಲ್ಲ ಕೆಲಸಗಳೂ ಅಪಾಯಕಾರಿ ಅಲ್ಲ. ಅಪಾಯಕಾರಿ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದರ ವಿರುದ್ಧ ಈಗಾಗಲೇ ಸಾಕಷ್ಟು ಕಾನೂನುಗಳಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ ಅಷ್ಟೆ. ಇಂತಹ ಕೆಲಸಗಳು ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಅಪಾಯಕಾರಿ ಆಗಿರುವುದರಿಂದ ಆ ಬಗ್ಗೆ ತೀವ್ರವಾಗಿ ಆಲೋಚನೆ ಮಾಡಬೇಕಾಗಿದೆ. ಪ್ರಸಕ್ತ ಕಾನೂನಿನಲ್ಲಿ ಕೆಲವು ಆಯ್ದ ಕ್ಷೇತ್ರಗಳನ್ನಷ್ಟೇ ಸೇರಿಸಲಾಗಿದ್ದು, ಅದರಿಂದ ಹೊರತಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವವರಿಗೆ ಶಿಕ್ಷೆ, ದಂಡ ತೀರಾ ಕಡಿಮೆ ಪ್ರಮಾಣದಲ್ಲಿದೆ. ಅದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆಯೂ ಇದೆ.

ಕಾನೂನುಗಳ ಸಮರ್ಪಕ ಜಾರಿಯಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಜಾಮೀನು ರಹಿತ ಅಪರಾಧವನ್ನಾಗಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಆದರೆ ಇಂತಹ ಕ್ರಮಗಳಿಂದ ನಿಜವಾಗಿಯೂ ಬಾಲಕಾರ್ಮಿಕರ ಸಮಸ್ಯೆ ನಿವಾರಣೆ ಆಗುವುದೇ? ಈಗಾಗಲೇ ಎಷ್ಟೆಲ್ಲ ಕಾನೂನುಗಳಿದ್ದರೂ ನಾವು ಸಾಧಿಸಿದ್ದೇನು?

ಕಾನೂನು ಬಿಗಿಗೊಳಿಸುವುದರಿಂದ ಬೆದರಿಕೆಗಳು ಹೆಚ್ಚುತ್ತವೆ. ಸಮಸ್ಯೆ ಪರಿಹಾರಕ್ಕಿಂತ ಹೆಚ್ಚಾಗಿ ತೆರೆಮರೆಗೆ ಸರಿದು, ಶೋಷಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ಬಾಲಕಾರ್ಮಿಕರಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅವರನ್ನು  ರಕ್ಷಿಸುವಂತಹ ವಿಧಾನವನ್ನು ಬಹುಜನರು ವಿರೋಧಿಸಿದ್ದು. ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಿದರೆ ಅವರು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ನಮ್ಮಲ್ಲಿ ಎಷ್ಟೇ ಕಾನೂನುಗಳಿದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಿಲ್ಲ. ಹೀಗಾಗಿ ಎಲ್ಲಕ್ಕಿಂತ ಹೆಚ್ಚಾಗಿ  ಸಮಸ್ಯೆಯ ಮೂಲವನ್ನು ಕಂಡುಕೊಳ್ಳಬೇಕಾಗಿದೆ.

ಮೊದಲನೆಯದಾಗಿ, ಪರಿಹಾರ ಕಾರ್ಯದಲ್ಲಿ ಮಕ್ಕಳು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ. ಅದನ್ನು ನಮ್ಮ ಕಾಯ್ದೆಯ ಮುಖ್ಯ ಭಾಗವನ್ನಾಗಿ ಮಾಡಬೇಕಾಗಿದೆ. ಮಗು ದುಡಿಯಲು ಮುಖ್ಯ ಕಾರಣ ಅದರ ಕುಟುಂಬದ ಪರಿಸ್ಥಿತಿ. ಆ ಪರಿಸ್ಥಿತಿಯ ಬದಲಾವಣೆಗೆ ಸಮಗ್ರ ಕಾರ್ಯತಂತ್ರ ರೂಪಿಸಬೇಕು. ಕುಟುಂಬದ ಆದಾಯ ಮೂಲ ಹೆಚ್ಚಳ, ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಅದರಲ್ಲಿ ಮುಖ್ಯ ಭಾಗವಾಗಿರಬೇಕು.

ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. 18 ವರ್ಷಕ್ಕೂ ಮೇಲ್ಪಟ್ಟು ಮಕ್ಕಳಿಗೆ ಶಿಕ್ಷಣ ನೀಡಿದರೂ ಮುಂದೇನು ಎಂಬ ಸಮಸ್ಯೆ ಕಾಡುತ್ತದೆ. ಇಂದು ಪಡೆಯುವ ಸಾಮಾನ್ಯ ಪದವಿಯಂತಹ ಶಿಕ್ಷಣ ಬದುಕಿಗೆ ಬೆಂಬಲ ನೀಡುವಷ್ಟು ಆದಾಯ ಗಳಿಸುವ ಭರವಸೆಯನ್ನು ನೀಡುವುದಿಲ್ಲ. ಅಷ್ಟೇ ಅಲ್ಲ, ದೇಶ ಕಟ್ಟಲು ಕೇವಲ ಎಂಜಿನಿಯರ್, ಮಾಹಿತಿ ತಂತ್ರಜ್ಞಾನ ಪರಿಣತರು, ವೈದ್ಯರಷ್ಟೇ ಸಾಕೇ? ಉತ್ತಮ ರೈತ, ಬಡಗಿ, ಕಟ್ಟಡ ರಚನೆಕಾರರಂತಹ  ನೂರಾರು ಕುಶಲಕರ್ಮಿಗಳ ಅಗತ್ಯವಿಲ್ಲವೇ? ಅವರಿಗೊಂದು ಗೌರವದ ಬದುಕು ಬೇಡವೇ? ಅದನ್ನು ಪಡೆಯಲು ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಇದೆಯೇ?

ಇವೆಲ್ಲವನ್ನೂ ಗಳಿಸುವುದು ಇಂದಿಗೂ ಅನೌಪಚಾರಿಕ ನೆಲೆಯಲ್ಲಿಯೇ. ಇಂತಹ ಅನೌಪಚಾರಿಕ ಶಿಕ್ಷಣವನ್ನು ನಾವು ಗುರುತಿಸಬೇಕಾಗಿದೆ ಮತ್ತು ಅದನ್ನು ಪಡೆಯುವ ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜಶಾಸ್ತ್ರದ ಶಿಕ್ಷಣ ಸಿಗುವ ವ್ಯವಸ್ಥೆ ಮಾಡಬೇಕಾಗಿದೆ. ಮಾತ್ರವಲ್ಲ, ಅವರ ದುಡಿಮೆಯ ಕ್ಷೇತ್ರದಲ್ಲಿ ತಕ್ಕ ಕೌಶಲ, ಯುಕ್ತ ಸಂಭಾವನೆ, ಅಪಾಯಕಾರಿ ಪ್ರಕ್ರಿಯೆಯಿಂದ ರಕ್ಷಣೆ, ಉತ್ತಮ ಆರೋಗ್ಯ, ಭದ್ರತೆಯಂತಹ ವ್ಯವಸ್ಥೆ ಮಾಡಿದರೆ ಸಮಸ್ಯೆಗೆ ಪರಿಹಾರವಷ್ಟೇ ಅಲ್ಲ, ನಮಗೆ ಅಗತ್ಯವಿರುವ ಕುಶಲಕರ್ಮಿಗಳನ್ನೂ ನಾವು ಸೃಷ್ಟಿಸಿಕೊಂಡಂತೆ ಆಗುತ್ತದೆ. ಈ ಮೂಲಕ ನಿರುದ್ಯೋಗ, ಬಡತನದಂಥ ಸಮಸ್ಯೆಗಳಿಗೆ ಬಹುತೇಕ ಉತ್ತರ ಕಂಡುಕೊಳ್ಳುತ್ತೇವೆ.

ಜೊತೆಗೆ ಈ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ವಿಕೇಂದ್ರೀಕರಣದ ನೆಲೆಯಲ್ಲಿ ನೋಡಬೇಕಾಗಿದೆ. ಗ್ರಾಮ ಅಥವಾ ಪಂಚಾಯಿತಿಯನ್ನು ಒಂದು ಘಟಕವಾಗಿ ನೋಡಿದರೆ, ಬಾಲಕಾರ್ಮಿಕರ ಸಂಖ್ಯೆ ನಾವು ನಿಭಾಯಿಸಬಹುದಾದ ಪ್ರಮಾಣದಲ್ಲೇ ಇರುತ್ತದೆ. ಅಂತಹ ಮಕ್ಕಳ ಕುಟುಂಬದ ಹಿನ್ನೆಲೆ, ಅವರು ಮಾಡುತ್ತಿರುವ ಕೆಲಸ ಅಪಾಯಕಾರಿಯೇ, ಅಲ್ಲವೇ ಎಂಬಂತಹ ಎಲ್ಲ ಅಗತ್ಯ ಮಾಹಿತಿಯನ್ನೂ ಸ್ಥಳೀಯ ಆಡಳಿತಗಳು ಕಲೆ ಹಾಕುವುದು ಸುಲಭ. ಅಲ್ಲದೆ ಪರಿಹಾರ ಕಾರ್ಯಕ್ರಮದಲ್ಲಿ ಆ ಮಕ್ಕಳ ಕುಟುಂಬಗಳನ್ನೂ ಒಳಗೊಳ್ಳಲು, ಅವರ ಮೇಲೆ ನಿರಂತರ ನಿಗಾ ವಹಿಸಲು ಸಾಧ್ಯವಾಗುತ್ತದೆ.

ಇಂತಹ ಕೆಲಸಕ್ಕೆ ಅಗತ್ಯವಿರುವ ಮಾಹಿತಿ, ಹಣಕಾಸು, ಜನಸಂಪನ್ಮೂಲ ಎಲ್ಲವನ್ನೂ ಸ್ಥಳೀಯ ಸರ್ಕಾರಗಳಿಗೆ ಒದಗಿಸಬೇಕು. ಹಾಗೆ ಮಾಡಲು ನಮಗೆ ಇಚ್ಛಾಶಕ್ತಿಯ ಅಗತ್ಯವಿದೆ. ಇಲ್ಲದಿದ್ದರೆ ಇನ್ನೊಂದು ಶತಮಾನ ಕಳೆದರೂ ನಾವು ಈ ಸಮಸ್ಯೆಗೆ ಪ್ರಜಾಪ್ರಭುತ್ವದ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಅಥವಾ ಬಾಹ್ಯ ಒತ್ತಡಗಳಿಗೆ ಮಣಿದು ಕೃಷಿಯಲ್ಲಿ ಕಳೆ ನಿವಾರಿಸುವಂತೆ, ಬಾಲಕಾರ್ಮಿಕರೆಲ್ಲ ನಮ್ಮ ಸಮಾಜದ ಕಳೆಗಳು ಎಂಬಂತೆ ಸಂಹಾರ ಮಾಡಲು ಹೊರಡುತ್ತೇವೆ ಅಷ್ಟೆ.
(ಲೇಖಕ ‘ಸಿಡಬ್ಲ್ಯುಸಿ’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT