ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ

Last Updated 13 ಜುಲೈ 2015, 9:22 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಪಟೇಲ್ ಪಾಂಡು ತಿಳಿಸಿದರು.

ನಾಡಿನ ಭಾಷೆ, ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಹೊಸ ಆಯಾಮದ ಚಿಂತನೆ ಅವಶ್ಯಕವಿದ್ದು, ಕನ್ನಡ ಅಭಿಮಾನಿಗಳು ತಮ್ಮನ್ನು ಬೆಂಬಲಿಸಿದರೆ ತಾವು ಆ ಕೆಲಸ ನಿರ್ವಹಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬದುಕು ಅರಸಿಕೊಂಡು ರಾಜ್ಯಕ್ಕೆ ಬಂದಿರುವ ಅನ್ಯಭಾಷಿಗರು ಅವರ ಸಂಸ್ಕೃತಿಯನ್ನು ರಾಜ್ಯದಲ್ಲಿ ಬಿತ್ತುತ್ತಿರುವುದರಿಂದ ಕನ್ನಡ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಇದನ್ನು ಮಟ್ಟಹಾಕಿ ಕನ್ನಡ ಸಂಸ್ಕೃತಿ ಬಿತ್ತಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪದ ಉನ್ನತ ಸ್ಥಾನದ ಅವಶ್ಯಕತೆ ಇದ್ದು, ತಾಲ್ಲೂಕಿನ ಕಸಾಪ ಮತದಾರರು ತಮ್ಮನ್ನು ಬೆಂಬಲಿಸಿ, ಕನ್ನಡದ ಉಳಿವಿಗಾಗಿ ಸೇವೆ ಮಾಡಲು ಅನುವು ಮಾಡಿಕೊಡಬೇಕು ಎಂದು ಸಂದರ್ಭದಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ 50ರಿಂದ 60 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಕನ್ನಡ ಶಾಲೆಗಳು ಅವನತಿಯ ಹಾದಿಯನ್ನು ತಲುಪುತ್ತಿವೆ. ಪ್ರಾಥಮಿಕ ಹಂತದಲ್ಲೆ ಕನ್ನಡ ಭಾಷೆಯನ್ನು ಕಡ್ಡಾಯ ಮಾಡುವ ಅನಿವಾರ್ಯತೆ ಇದೆ. ವ್ಯಾಪಾರದಲ್ಲೂ ಕನ್ನಡವನ್ನು ದೂರ ಮಾಡಿ, ಮಾಲ್ ಸಂಸ್ಕೃತಿ ಬಿತ್ತಲಾಗುತ್ತಿದೆ. ಆಂಗ್ಲ ಭಾಷೆಯ ಮೂಲಕ ಹೊಟ್ಟೆಪಾಡು ನಡೆಸುವಂತ ದುಸ್ಥಿತಿ ನಗರ ಪ್ರದೇಶದಲ್ಲಿ ಹೇರಳವಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನವನ್ನು ದೊರಕಿಸಿಕೊಡುವ ಅವಶ್ಯಕತೆ ಇದೆ ಎಂದು ಪಟೇಲ್ ಪಾಂಡು ತಿಳಿಸಿದರು.

ಅಕ್ಕಮಹಾದೇವಿ ನೀಡಿರುವ ಸ್ತ್ರೀವಾದವನ್ನು ಹೊರತರುವುದು, ಹಳೆಕನ್ನಡದ ನಿಘಂಟನ್ನು ಸರಳಗೊಳಿಸುವುದು, ದಾಸ ಸಾಹಿತ್ಯದ ಮೂಲಕ ಧಾರ್ಮಿಕ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿರುವ ಕೃತಿಗಳನ್ನು ಪುಸ್ತಕಗಳ ಮೂಲಕ ರಾಜ್ಯದ ಜನತೆಗೆ ತಲುಪಿಸಿ, ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು, ತಾಲ್ಲೂಕು ಮಟ್ಟದಲ್ಲಿ ಚಿಂತನ ಸಭೆಗಳನ್ನು ನಡೆಸಿ, ಕನ್ನಡ ಭಾಷೆ ಉಳಿವಿಗೆ ಕ್ರಮಗಳನ್ನು ಕೈಗೊಳ್ಳುವುದು ಮುಂತಾದ ಗುರಿಗಳನ್ನು ತಾವು ಇಟ್ಟುಕೊಂಡಿರುವುದಾಗಿ ಪಾಂಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT