ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ: ನಿರ್ಣಾಯಕ ಸ್ಥಾನದಲ್ಲಿ 5 ಜಿಲ್ಲೆಗಳ ಮತದಾರರು

Last Updated 15 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹತ್ತಾರು ಬಗೆಯ ತಂತ್ರಗಳಿಗೆ ಮೊರೆ ಹೋಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲು 1.89 ಲಕ್ಷ ಜನ ಅರ್ಹತೆ ಪಡೆದಿದ್ದಾರೆ. ಪರಿಷತ್ತಿನ ಮತದಾರರ ಪೈಕಿ ಶೇಕಡ 36.55ರಷ್ಟು ಜನ ಕೇವಲ ಐದು ಜಿಲ್ಲೆಗಳಲ್ಲಿ ವ್ಯಾಪ್ತಿಯಲ್ಲಿರುವ ಕಾರಣ, ಅಭ್ಯರ್ಥಿಗಳು ನಡೆಸುತ್ತಿರುವ ಪ್ರಚಾರದಲ್ಲಿ ಈ ಜಿಲ್ಲೆಗಳು ಆದ್ಯತೆ ಪಡೆಯುತ್ತಿವೆ.
ಬೆಂಗಳೂರು ನಗರ, ಮಂಡ್ಯ, ಹಾಸನ, ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಸಾಹಿತ್ಯ ಪರಿಷತ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾಹಿತ್ಯಕವಾಗಿ ಕ್ರಿಯಾಶೀಲವಾಗಿರುವ ಪ್ರದೇಶ ಎಂದೇ ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲಿರುವ ಕಸಾಪ ಮತದಾರರ ಪ್ರಮಾಣ ಕೇವಲ ಶೇಕಡ 1.45ರಷ್ಟು!

ಇದೇ ರೀತಿ, ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮೈಸೂರು ಜಿಲ್ಲೆಯಲ್ಲಿ ಇರುವ ಕಸಾಪ ಮತದಾರರ ಪ್ರಮಾಣ ಶೇ 4.47ರಷ್ಟು. ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮತದಾರರ ಒಟ್ಟು ಪ್ರಮಾಣ ಕೇವಲ ಶೇ 3.92!
ಕಣದಲ್ಲಿರುವ ಅಭ್ಯರ್ಥಿಗೆ ಪ್ರತಿ ಮತ, ಪ್ರತಿ ಜಿಲ್ಲೆಯೂ ಮುಖ್ಯ. ಆದರೆ, ಮತದಾರರು ಜಾಸ್ತಿ ಇರುವ ಐದು ಜಿಲ್ಲೆಗಳತ್ತ ಹೆಚ್ಚಿನ ಗಮನ ಇರುತ್ತದೆ ಎಂಬುದು ನಿಜ. ಈ ಐದು ಜಿಲ್ಲೆಗಳು ಮಾತ್ರವಲ್ಲದೇ ಮತದಾರರು ದೊಡ್ಡ ಪ್ರಮಾಣದಲ್ಲಿ ಇರುವ ತುಮಕೂರು, ಬೀದರ್‌ನಂಥ ಜಿಲ್ಲೆಗಳೂ ಅಭ್ಯರ್ಥಿಗೆ ಬಹುಮುಖ್ಯವೇ ಆಗುತ್ತವೆ ಎಂದು ಈ ಬಾರಿ ಕಣದಲ್ಲಿರುವ ಅಭ್ಯರ್ಥಿಯೊಬ್ಬರು ಹೇಳಿದರು.

ಅಧ್ಯಕ್ಷ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಫೆಬ್ರುವರಿ 28ರಂದು ಚುನಾವಣೆ ನಡೆಯಲಿದೆ. ಈ ಬಾರಿ 14 ಜನ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಇದ್ದಾರೆ. ಸತತ ಮೂರು ವರ್ಷಗಳಿಂದ ಸದಸ್ಯರಾಗಿರುವವರು ಮತದಾನ ಮಾಡಲು ಅರ್ಹತೆ ಪಡೆದಿರುತ್ತಾರೆ.
‘ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಒಮ್ಮೆ ಸ್ಪರ್ಧಿಸಿ ಸೋತವರು ಮುಂದಿನ ಚುನಾವಣೆಯಲ್ಲಾದರೂ ಗೆಲ್ಲಬೇಕು ಎಂಬ ಉದ್ದೇಶದಿಂದ, ಜನರನ್ನು ಪರಿಷತ್ತಿನ ಸದಸ್ಯರನ್ನಾಗಿಸುವ ಪರಿಪಾಠ ಇದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಮತದಾರರ ಪ್ರಮಾಣ ತೀರಾ ಹೆಚ್ಚಾಗಲು ಇದೂ ಒಂದು ಕಾರಣ ಆಗಿರಬಹುದು’ ಎಂದು ಪರಿಷತ್ತಿನ ಜೊತೆ ನಿಕಟ ಸಂಬಂಧ ಇರುವವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲ್ಲದೆ, ಜಾತಿ ಕೂಡ ಇಲ್ಲಿ ದೊಡ್ಡ ಆಟ ಆಡುತ್ತದೆ. ತಮ್ಮ ಜಾತಿಯವರು ದೊಡ್ಡ ಸಂಖ್ಯೆಯಲ್ಲಿ ಸದಸ್ಯರಾಗಲಿ, ಮತದಾನದ ಹಕ್ಕು ಪಡೆಯಲಿ ಎಂಬ ಕಾರಣಕ್ಕೇ ಸದಸ್ಯತ್ವ ಹೆಚ್ಚಿಸುವವರೂ ಇದ್ದಾರೆ’ ಎಂದು ಅವರು ಹೇಳಿದರು.

ಸಾಹಿತ್ಯ ಪರಿಷತ್ ಮತದಾರರಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಎರಡು ಜಾತಿಗಳ ಮತದಾರರೇ ಅಲ್ಲಿ ನಿರ್ಣಾಯಕ. ಉಳಿದೆಲ್ಲ ಜಾತಿಗಳ ಮತದಾರರು ಗೆಲುವು ಅಥವಾ ಸೋಲಿಗೆ ಪೂರಕವಾಗಿ ಕೆಲಸ ಮಾಡಬಲ್ಲರೇ ವಿನಾ, ‘ನಿರ್ಣಾಯಕ’ ಆಗಲಾರರು ಎನ್ನುತ್ತವೆ ಪರಿಷತ್ ಮೂಲಗಳು.

ಪರಿಷ್ಕರಣೆ: ಪರಿಷತ್ತಿನ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆದರೆ ಮತದಾರರ ಪ್ರಮಾಣ ಶೇಕಡ 10ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಅದರಲ್ಲೂ, ಬೆಂಗಳೂರು ನಗರದ ಪಟ್ಟಿ ಪರಿಷ್ಕರಣೆ ಆದ್ಯತೆ ಮೇಲೆ ಆಗಬೇಕಿರುವ ಕೆಲಸ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT