ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ತೂರ ಬಾ; ಅಂತರಂಗಕ್ಕೆ ಪಾತಾಳಗರಡಿ

ರಂಗಭೂಮಿ
Last Updated 30 ಜೂನ್ 2014, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧೀಜಿಯವರ ಸಾಧ್ವೀಮಣಿ ಪತ್ನಿಯಾಗಿ, ‘ಆದರ್ಶ ಮಹಿಳೆ’ಯಾಗಿ ಬಿಂಬಿತಳಾಗಿರುವ ‘ಕಸ್ತೂರ ಬಾ’ ಅವರ ಅಂತರಂಗವನ್ನು ಅನಾವರಣಗೊಳಿಸುವ ಒಂದು ಗಂಭೀರ ಪ್ರಯತ್ನ, ಇತ್ತೀಚೆಗೆ ಕಲಾಸೌಧದಲ್ಲಿ ಸಂಚಾರೀ  ಥಿಯೇಟರ್ ಅರ್ಪಿಸಿದ ನಾಟಕ ‘ಕಸ್ತೂರ ಬಾ’. ರಂಗಾಯಣ ಕಲಾವಿದೆ ಬಿ.ಎನ್. ಶಶಿಕಲಾ ಅವರ ಏಕವ್ಯಕ್ತಿ ಪ್ರಯೋಗ ಅವರ ಅಭಿನಯ ಕೌಶಲದಿಂದ ಪರಿಣಾಮಕಾರಿಯಾಗಿ ಮೂಡಿಬಂದಿತು. ಎಲ್ಲಿಯೂ ಯಾಂತ್ರಿಕವೆನಿಸದೆ, ಒಂದು ಗಂಟೆಗೂ ಹೆಚ್ಚು ಕಾಲ ಪ್ರೇಕ್ಷಕನನ್ನು ಹಿಡಿದು ಕೂರಿಸಿದ್ದು ನಾಟಕದ ವಿಶೇಷ.

ಹೆಣ್ಣಿನ ಅಂತರಂಗ ಒಂದು ಅಗಾಧ ಕಡಲು. ಅದರೊಳಗಿನ ನಿಗೂಢತೆಯನ್ನು ಯಾರಿಂದಲೂ   ಭೇದಿಸಲಾಗದು. ಅದರೊಳಗಿನ ಮುತ್ತು, ರತ್ನ, ಹವಳದಂಥ ಅಮೂಲ್ಯ ಖನಿಯ ಜೊತೆಜೊತೆಯಲ್ಲಿ ಆವರಿಸಿದ ಹಾವಸೆ ಹಳವಂಡಗಳು, ಒಳಸುಳಿ, ಮೌನ ಮೊರೆತದ ಕುದಿತಗಳಿಗೆ ದುರ್ಬೀನಿಟ್ಟವರಾರು? ಮೇಲೆ ನೋಡಲು ಮಾತ್ರ ಪ್ರಶಾಂತ ಸಮುದ್ರ. ಇಂಥ ವ್ಯಕ್ತಿತ್ವದ ಸಾಲಿನಲ್ಲಿ ಹೆಸರಿಸಬಹುದಾದ ಕೆಲವು ಗತಕಾಲದ ಸಾಧ್ವೀಶಿರೋಮಣಿಗಳು ಸೀತೆ, ಮಂಡೋದರಿ, ಊರ್ಮಿಳೆ, ದ್ರೌಪದಿ ಮುಂತಾದವರು. ಮಹಾ ಸಹನಾಮಯಿ, ಆದರ್ಶ    ಮಹಿಳೆಯರೆಂಬ ಬಿರುದು- ಬಾವಲಿಗಳು.

ಆದರೆ ಅವರೆದೆಯನ್ನು ಸುಡುತ್ತಿದ್ದ ಬೆಂಕಿ, ನೋವು ನಿರಾಶೆಗಳ ಭಾವನೆಗಳನ್ನಾಗಲಿ, ಅವರ ಸೂಕ್ಷ್ಮ ಒಳದನಿಗಳನ್ನಾಗಲಿ ಆಲಿಸಿದವರಾರು? ಈ ರೀತಿ ಇತಿಹಾಸದ ಗರ್ಭದಲ್ಲಿ ಹೂತುಹೋದ ಕುಸಿಗೊರಲುಗಳು ಅದೆಷ್ಟೋ. ದೇಶ ಕಂಡ ಅಪರೂಪದ ಮಹಿಳೆ ಕಸ್ತೂರಬಾ ಕೂಡ ಇದಕ್ಕೆ ಹೊರತಲ್ಲ. ಅವಳು ಅವಳಾಗಿ ಬಾಳಲಿಲ್ಲ. ಗಾಂಧೀಜಿಯವರ ಅಸ್ತಿತ್ವದೊಡನೆ ತನ್ನ ಅಸ್ತಿತ್ವವನ್ನು ಲೀನಗೊಳಿಸಿ, ಅವರ ಮಹತ್ಸಾಧನೆಗೆ ಬೆನ್ನೆಲುಬಾಗಿ ತನ್ನ ಪೂರ್ತಿ ಬದುಕನ್ನು ಸವೆಸಿದ ತ್ಯಾಗಜೀವಿ! ೬೪ ವಸಂತಗಳನ್ನು ಬಾಪುವಿನ ಹೆಂಡತಿಯಾಗಿ ಕಳೆದೆನೇ ವಿನಾ ಒಂದು ದಿನವೂ ಆತ ತನ್ನೊಂದಿಗೆ ಗಂಡನಾಗಿ ಬಾಳಲಿಲ್ಲ ಎಂಬ ಕೊರಗು ಅವಳದು. ಗಂಡನ ಗುಣ, ದೋಷ-ಕೊರತೆಗಳು ಹೆಂಡತಿಯಾದವಳಿಗೆ ಮಾತ್ರ ಗೊತ್ತು. ಇದು ಕಟು ಸತ್ಯ. ನಾಟಕದಲ್ಲಿ ಈಕೆ ತನ್ನೊಳಗಿನ ನೋವಿನ ಮಜಲುಗಳನ್ನು ಬಿಚ್ಚಿಡುತ್ತಾ ಹೋಗುತ್ತಾಳೆ, ಚರಕದ ನೂಲುಗಳನ್ನು ನೇಯುತ್ತ! ಬಾಪುವಿನ ನೆರಳಾಗಿಯೇ ಬಾಳಿದ ಅವಳಿಗೆ ನಿಜಜೀವನದಲ್ಲಿ ದಕ್ಕಬೇಕಾದ ಪ್ರೀತಿ, ಸುಖ- ದಕ್ಕದೆ  ಅಸಹಾಯಕ ಎನಿಸಿದರೂ, ಧೀರೋದಾತ್ತ ಬಿರುದಾಂಕಿತ ಪದವಿ ಧರಿಸಿದ ಸಂಕೀರ್ಣ ಬದುಕು ಅವಳದು.

ನಾಟಕ ಎರಡು ವಿಭಿನ್ನ ನೆಲೆಗಳಲ್ಲಿ ಸಮಾನಾಂತರವಾಗಿ ಸಾಗುತ್ತ ಹೋಗುತ್ತದೆ. ರಂಗನಟಿಯೊಬ್ಬಳು ರಂಗದ ಮೇಲೆ ‘ಕಸ್ತೂರ ಬಾ’ ಪಾತ್ರವನ್ನು ನಟಿಸುತ್ತ, ಬಾಪುವಿನ ನೆರಳಾಗಿ ಬದುಕಿದ ಆಕೆಯ ದುಮ್ಮಾನಗಳಿಗೆ ಕನ್ನಡಿ ಹಿಡಿಯುತ್ತಾಳೆ.  ಅವಳ ವ್ಯಕ್ತಿತ್ವದೊಡನೆ ಮುಖಾಮುಖಿಯಾಗುತ್ತ ತನ್ನ   ಬದುಕಿನ ನೆರಿಗೆಗಳನ್ನು ಹೊಂದಿಸಲೆತ್ನಿಸಿ ತೊಳಲಾಡುತ್ತಾಳೆ. ಅವಳ ಬದುಕಿನ ಪ್ರತಿ ಹೆಜ್ಜೆಯಲ್ಲೂ ಕಸ್ತೂರ ಬಾ ಕಾಡುತ್ತಾಳೆ. ತನ್ನ ಬದುಕಿನ ಪರಾಮರ್ಶೆ ಕೈಗೊಳ್ಳುತ್ತ ಗೊಂದಲದಲ್ಲಿ ಸಿಲುಕಿ ಹೊಯ್ದಾಡುತ್ತಾಳೆ. ಅವಳೊಡನೆ ಸಹಜೀವಿಸುತ್ತಿದ್ದ ‘ಗಾಂಧೀ’ (ನಟಿ ಕರೆಯುತ್ತಿದ್ದುದು) ಎಂಬ ವ್ಯಕ್ತಿಗೆ ಅವಳು ಅಭಿನಯಿಸುವ ಪಾತ್ರ ಇಷ್ಟವಾದರೂ ನಿಜ ಜೀವನದಲ್ಲಿ ಅವಳಲ್ಲಿ ಕಸ್ತೂರ ಬಾಳ ಗುಣಗಳಾಗಲಿ, ವ್ಯಕ್ತಿತ್ವವಾಗಲಿ ಕಾಣದೆ ನಿರಾಸೆಯಾಗಿ ಅವಳಿಂದ ದೂರವಾಗುತ್ತಾನೆ. ಈ ಕುರಿತು ನಟಿಗೆ ಆಕ್ಷೇಪವಿದೆ. ಕಸ್ತೂರ ಬಾ ತರಹ ಒಳಗೊಂದು ಹೊರಗೊಂದು, ದ್ವಂದ್ವ ವ್ಯಕ್ತಿತ್ವ ಸರಿಯೇ? ಇದು ಎಷ್ಟು ನ್ಯಾಯ? ಇತಿಹಾಸದಲ್ಲಿ ಅನ್ಯಾಯಕ್ಕೊಳಗಾದ ಅವಳ ಹಾಗೆ ತಾನೇಕೆ ತನ್ನ ಅಸ್ಮಿತೆ ಮುಚ್ಚಿಟ್ಟುಕೊಂಡು ಬದುಕಬೇಕು ಎನ್ನುವುದು ನಟಿಯ ಪ್ರಶ್ನೆ. ಕಸ್ತೂರ ಬಾ ರೀತಿ ಮರುಗುತ್ತ ಇನ್ಯಾವ ಹೆಣ್ಣೂ ತನ್ನ ಅಸ್ತಿತ್ವ, ವ್ಯಕ್ತಿತ್ವವನ್ನು ಸಮಾಧಿ ಮಾಡದೆ ಧೈರ್ಯವಾಗಿ ಬದುಕಬೇಕು ಎನ್ನುವುದಕ್ಕೆ ಧ್ವನಿಯಾಗುತ್ತಾಳೆ ನಟಿ.

ಒಟ್ಟಾರೆ ನಾಟಕದ ಬಂಧದಲ್ಲಿ ‘ಕಸ್ತೂರ ಬಾ ಹಾಗೂ ನಟಿ’ ಮುಖಾಮುಖಿಯಾಗುವಲ್ಲಿ ಭಾರತೀಯ ಮಹಿಳೆಯರ ಸ್ಥಿತ್ಯಂತರವಿದೆ.
ಅಂತ್ಯದಲ್ಲಿ ಸಾಧನೆಯ ಬೆನ್ನೇರಿ ಹೊರಟ ತಾನು ಸಾಧಿಸಿದ್ದು ಒಂಟಿತನ ಮಾತ್ರ ಎಂಬ ವಿಷಾದ ಮಡುಗಟ್ಟುತ್ತದೆ. ಇಲ್ಲಿ ಕಾಣಿಸುವ ಎರಡು ಪಾತ್ರಗಳಲ್ಲಿ ಒಂದು ಬಂದದ್ದನ್ನು ಬಂದಹಾಗೆ ಸ್ವೀಕರಿಸುವ ವಿಧೇಯತೆ ಹೊಂದಿದ್ದರೆ, ಇನ್ನೊಂದು ಬಂದದ್ದನ್ನು ಪ್ರಶ್ನಿಸುವ, ವಿಮರ್ಶಿಸುವ ಸ್ವತಂತ್ರ ಮನೋಭಾವವನ್ನು ವ್ಯಕ್ತಪಡಿಸುತ್ತದೆ.

ನಾಟಕದ ಶಿಲ್ಪ ಬಿಗಿಯಾಗಿದ್ದು, ಅನೇಕ ಗಂಭೀರ ಪ್ರಶ್ನೆ-, ಆಲೋಚನೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರಖರ ಬೆಳಕಿನಡಿಯ ಅನೇಕ ವಸ್ತು- ಸಂಗತಿಗಳು ನೆರಳಾಗಿ ಅಥವಾ ಮರೆಯಾಗಿ ಹೋಗಿಬಿಡುವ ನಿಷ್ಠುರ ಸತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ ನಾಟಕಕಾರ ಎಸ್. ರಾಮನಾಥ. ಅಚ್ಚುಕಟ್ಟಾದ ನಿರೂಪಣಾ ಧಾಟಿ, ಅರ್ಥಪೂರ್ಣ ಸಂಭಾಷಣೆ ನಾಟಕದ ಜೀವಾಳ. ಕಸ್ತೂರ ಬಾ ಅಂತರಂಗದ ಸೂಕ್ಷ್ಮಗಳನ್ನು ನಟಿ ಶಶಿಕಲಾ ಯಶಸ್ವಿಯಾಗಿ ದಾಟಿಸಿದ್ದಾರೆ. ಏಕಕಾಲದಲ್ಲಿ ಎರಡೂ ಪಾತ್ರಗಳನ್ನು ನಿಭಾಯಿಸುವ ಅವರ ಕ್ರಿಯಾಶೀಲತೆ, ಚಾಕಚಕ್ಯತೆ ಸ್ತುತ್ಯರ್ಹ.

ದನಿಯ ಏರಿಳಿತ, ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಅವರ ಅಭಿನಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ಅವರಿಂದ ಇಂಥ ಉತ್ತಮ ಅಭಿನಯ ತೆಗೆಸಿದ ನಿರ್ದೇಶಕ ಶಶಿಧರ ಭಾರಿಘಾಟ್ ಅವರಿಗೂ ಶ್ರೇಯಸ್ಸಿನ ಪಾಲು ಸಲ್ಲಬೇಕು. ಶಶಿಕಲಾ ಅವರ ಮೃತ ಪತಿ, ರಂಗಾಯಣದ ಬಸವರಾಜ ಕೊಡಗೆ ಅವರ ನೆನಪಿಗಾಗಿ ನಡೆದ ನಾಟಕ ಪ್ರದರ್ಶನವಿದು. ಭೂಷಣ್ ಭಟ್ ಸಂಗೀತ ಹಾಗೂ ಸಗಾಯ್ ರಾಜು ಅವರ ಬೆಳಕಿನ ವಿನ್ಯಾಸ ಔಚಿತ್ಯಪೂರ್ಣ. ಸಂಚಾರೀ ಥಿಯೇಟರ್‌ನ ಎನ್. ಮಂಗಳಾ ಅವರ ಶ್ರಮ ಕೂಡ ಇಲ್ಲಿ
ಕೆಲವ ಮಾಡಿದೆ.
                                                                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT