ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಅಪಘಾತ: ಕಲಿತಿದ್ದೆಷ್ಟು? ಬಿಟ್ಟಿದ್ದೆಷ್ಟು?

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಭಾರತದ ರಸ್ತೆ ಮೇಲೆ ತರಹೇವಾರಿ ಕಾರುಗಳಿವೆ. ಪ್ರತಿ ಮೂರು ತಿಂಗಳಿಗೊಂದು ಹೊಸ ಮಾದರಿಯ ಕಾರುಗಳು ಗ್ರಾಹಕರನ್ನು ಬರಸೆಳೆಯುತ್ತವೆ. ಅದರಂತೆ ಚೆಂದದ ಕಾರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಭಾರತೀಯರು ಕೇಳುವುದು ತೀರಾ ವಿರಳ. ಆದರೆ ಯುರೋಪ್‌ನಲ್ಲಿ ಪರೀಕ್ಷೆಗೊಂಡ ಭಾರತದ ಬಹಳಷ್ಟು ಕಾರುಗಳು ಸುರಕ್ಷಿತವಲ್ಲ ಎಂಬ ವರದಿಯನ್ನು ನೀಡಿವೆ. ಅದಕ್ಕೆ ಪುಷ್ಠಿ ನೀಡುವಂತೆ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿದ ರಾಷ್ಟ್ರ ಎಂಬ ಕುಖ್ಯಾತಿಯನ್ನೂ ಪಡೆದಿದೆ. ಇದರಲ್ಲಿ ಕಾರು ಅಪಘಾತಗಳ ಸಂಖ್ಯೆ ಶೇ 17 ಎಂಬುದು ಆತಂಕಕಾರಿ ವಿಷಯ.

ಇತ್ತೀಚಿನ ದಿನಗಳಲ್ಲಿ ರಸ್ತೆಗೆ ಇಳಿದಿರುವ ಬಹಳಷ್ಟು ಎಂಯುವಿಗಳು ‘ಜಂಪ್‌ ಸೀಟ್‌’ ಅಥವಾ ಹೆಚ್ಚುವರಿ ಆಸನಗಳನ್ನು ಬೂಟ್‌ ಪ್ರದೇಶ (ಡಿಕ್ಕಿ)ದಲ್ಲಿ ಕೂರಿಸಿ ಕೊಡುವ ಭರವಸೆ ನೀಡುತ್ತವೆ. ಆದರೆ ಸೀಟ್‌ ಬೆಲ್ಟ್‌ ಇಲ್ಲದ ಇಂಥ ಆಸನಗಳಲ್ಲಿ ಕುಳಿತವರು ಎಷ್ಟು ಸುರಕ್ಷಿತರು ಎಂಬ ಪ್ರಶ್ನೆ ಮೂಡುವುದು ಸಹಜ. ಭಾರತದ ಮಾರುತಿ, ಮಹೀಂದ್ರಾದಂಥ ಕಂಪೆನಿಗಳಿಂದ ಹಿಡಿದು ವಿದೇಶಿ ಕಂಪೆನಿಗಳಾದ ಹ್ಯುಂಡೈ, ಹೋಂಡಾ ಇತ್ಯಾದಿ ಕಂಪೆನಿಗಳ ಕಾರುಗಳಲ್ಲೂ ಏರ್‌ಬ್ಯಾಗ್‌, ಎಬಿಎಸ್‌ನಂಥ ಜೀವರಕ್ಷಕ ಸಾಧನಗಳು ಇಲ್ಲದ ಮಾದರಿಗಳಿವೆ. ಆದರೆ ಇದೇ ಕಾರುಗಳು ವಿದೇಶಗಳಿಗೆ ರಫ್ತಾಗುವಾಗ ಮಾತ್ರ ಅವುಗಳಿಗೆ ಅಳವಡಿಸಿ ಕಳುಹಿಸಲಾಗುತ್ತದೆ. ಆದರೆ ಇಂಥ ಸೌಲಭ್ಯಗಳ ಜರೂರತ್ತು ಸರ್ಕಾರಕ್ಕಿಂತ ಹೆಚ್ಚಾಗಿ ಗ್ರಾಹಕರಿಗೇ ಬೇಕಿಲ್ಲದ ಸ್ಥಿತಿ ಇದೆ. ಇದನ್ನೇ ಕಂಪೆನಿಗಳು ಬಂಡವಾಳವನ್ನಾ ಗಿಸಿಕೊಂಡಿರು ವುದಂತೂ ಸತ್ಯ.

ಆಶ್ಚರ್ಯಕರ ಸಂಗತಿ ಎಂದರೆ, ಭಾರತದಲ್ಲಿ ಕಾರ್ಯನಿರ್ವಹಿಸುವ ಬಹಳಷ್ಟು ಕಂಪೆನಿಗಳು ಜಾಗತಿಕಮಟ್ಟದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಭಾರತದಲ್ಲಿ ಮಾರಾಟವಾಗುವ ಯಾವುದೇ ಸುರಕ್ಷತಾ ಸಾಧನಗಳು ಇಲ್ಲದ ಹ್ಯಾಚ್‌ಬ್ಯಾಕ್‌ನ ಒಂದು ಮಾದರಿಯ ಕಾರು, ವಿದೇಶಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುತ್ತದೆ ಎಂದರೆ ಅಲ್ಲಿ ಪ್ರಯಾಣಿಕರ ಸುರಕ್ಷತೆಗೆ ನೀಡಿರುವ ಆದ್ಯತೆಯನ್ನು ಗಮನಿಸಬಹುದು. ಆದರೆ ಸೀಟ್‌ ಬೆಲ್ಟ್‌ ಹೊರತುಪಡಿಸಿ ಭಾರತದಲ್ಲಿ ‘ಬೇಸಿಕ್‌ ಮಾಡೆಲ್‌’ ಎಂಬ ಮತ್ತೊಂದು ಮಾದರಿಯೇ ಅತಿ ಹೆಚ್ಚು ಬಿಕರಿಯಾಗುವ ವಾಹನವೂ ಹೌದು.

‘ನಮ್ಮದು ಜಾಗತಿಕ ಮಟ್ಟದ ಕಾರು ಎಂದು ಬೀಗುವ ಕಾರು ತಯಾರಿಕಾ ಕಂಪೆನಿಗಳು ಯುರೋಪ್‌ ಮಾರುಕಟ್ಟೆಗೆ ಸಿದ್ಧಪಡಿಸುವ ಹಾಗೂ ಭಾರತದ ಮಾರುಕಟ್ಟೆಯ ಮಾದರಿಗೂ ಇರುವ ವ್ಯತ್ಯಾಸದ ಅಂತರ ದೊಡ್ಡದು. ಇದು ತಾರತಮ್ಯವಲ್ಲದೆ ಬೇರೆನೂ ಇರಲಾರದು. ಕಾರಿನಲ್ಲಾಗುವ ಬಹಳಷ್ಟು ಅವಘಡಗಳಿಗೆ ಕಾರು ಮಾಲೀಕರೇ ಹೊಣೆ ಎಂದು ಕಂಪೆನಿಗಳು ಕೈತೊಳೆದುಕೊಳ್ಳುತ್ತಿವೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡರೆ, ಅದಕ್ಕೆ ಮ್ಯೂಸಿಕ್‌ ಸಿಸ್ಟಂ ಅಳವಡಿಸಿರುವುದು, ಹೆಚ್ಚುವರಿಯಾಗಿ ದೀಪ ಅಳವಡಿಸಿರುವುದು, ವೈರ್‌ಗಳನ್ನು ಇಲಿ ಕಚ್ಚಿರುವುದು ಇತ್ಯಾದಿ ಕಾರಣಗಳು ಸಿದ್ಧವಾಗಿರುತ್ತವೆ. ಆದರೆ ಹೊಣೆಗಾರಿಕೆ ಮಾತ್ರ ಲಕ್ಷ ಲಕ್ಷ ನೀಡಿದ ಗ್ರಾಹಕನದ್ದೇ’ ಎಂದು ವಾಹನ ಕ್ಷೇತ್ರದ ಪರಿಣಿತರೊಬ್ಬರು ಹೇಳುತ್ತಾರೆ.

ಭಾರತೀಯ ಕಾರುಗಳು ಸುರಕ್ಷಿತವಲ್ಲ


ಇತ್ತೀಚೆಗೆ ಯುರೋಪ್ ಮೂಲದ ಕಾರು ಸುರಕ್ಷತಾ ತಪಾಸಣೆ ಸಂಸ್ಥೆಯೊಂದು ಭಾರತೀಯ ಕಾರುಗಳ ಸುರಕ್ಷತಾ ಸಾಚಾತನವನ್ನು ಪರೀಕ್ಷೆ ಮಾಡಿದ್ದನ್ನು ಬಿಬಿಸಿ ವರದಿ ಮಾಡಿತ್ತು. ಜಗತ್ತಿನ ಅತಿ ಅಗ್ಗದ ಕಾರು ನ್ಯಾನೊ, ಭಾರತದಲ್ಲೇ ಸಿದ್ಧವಾಗುವ ಫೋರ್ಡ್‌, ಫೋಕ್ಸ್‌ ವ್ಯಾಗನ್‌ ಹಾಗೂ ಹ್ಯುಂಡೈ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಐದು ಮಾದರಿಯ ಕಾರುಗಳು ಭಾರತದ ಕಾರು ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲು ಹೊಂದಿದೆ. ಅದರಂತೆಯೇ ಭಾರತದಲ್ಲಿ ಮಾರಾಟವಾಗುವ ಶೇ 80ರಷ್ಟು ಕಾರುಗಳ ಬೆಲೆ ₨6 ಲಕ್ಷಕ್ಕಿಂತ ಕಡಿಮೆ. ಆದರೆ ಯುರೋಪ್‌ ಹಾಗೂ ಉತ್ತರ ಅಮೆರಿಕದಂಥ ರಾಷ್ಟ್ರಗಳಲ್ಲಿ ಅದೇ ಮಾದರಿಯ ಕಾರಿನಲ್ಲಿ ಪಂಚತಾರಾ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಈವರೆಗೂ 20 ವರ್ಷದ ಹಿಂದೆ ಬಳಕೆಯಲ್ಲಿದ್ದ ಸುರಕ್ಷತಾ ಸಾಧನಗಳನ್ನೇ ಬಳಸಲಾಗುತ್ತಿದೆ ಎಂದು ಅದು ವರದಿ ಮಾಡಿದೆ.

ಕ್ರ್ಯಾಷ್‌ ಟೆಸ್ಟ್‌ನಲ್ಲಿ ವಿಫಲ
ಮಾರುತಿ ಸುಜುಕಿ ಆಲ್ಟೊ 800, ಟಾಟಾ ನ್ಯಾನೊ, ಫೋರ್ಡ್‌ ಫಿಗೊ, ಹ್ಯುಂಡೈ ಐ10 ಹಾಗೂ ಫೋಕ್ಸ್‌ವ್ಯಾಗನ್ ಪೋಲೊ ಮಾದರಿಯ ಕಾರುಗಳನ್ನು ಡಿಕ್ಕಿ ಹೊಡೆಸಿ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಗೆ ಒಳಪಟ್ಟ ಎಲ್ಲಾ ಕಾರುಗಳಲ್ಲೂ ಏರ್‌ಬ್ಯಾಗ್‌ ಇರಲಿಲ್ಲ. ಪರೀಕ್ಷೆಗೆ ಒಳಪಟ್ಟ ಕಾರುಗಳಲ್ಲಿ ಮಾನವನನ್ನೇ ಹೋಲುವ ಪ್ರತಿಕೃತಿ ಕೂರಿಸಲಾಗಿರುತ್ತದೆ. ಅದಕ್ಕೆ ಸಾಕಷ್ಟು ಹಾನಿಯಾಗಿದೆ.

ಪರೀಕ್ಷೆಗೆ ಒಳಪಟ್ಟ ಈ ಕಾರುಗಳಿಗೆ ಶೂನ್ಯ ತಾರಾ ಸುರಕ್ಷತಾ ರೇಟಿಂಗ್‌ ಅನ್ನು ಈ ಕಂಪೆನಿ ನೀಡಿರುವುದು ವರದಿಯಾಗಿದೆ. ಈ ಸಮೀಕ್ಷೆಯ ವರದಿಯೂ ಈ ಕಂಪೆನಿಗಳ ಆಲೋಚನೆಯನ್ನು ಬದಲಿಸಿದೆ. ಫೋಕ್ಸ್‌ವ್ಯಾಗನ್‌ ತನ್ನ ಕಾರುಗಳಲ್ಲಿ ಕನಿಷ್ಠ ಎರಡು ಏರ್‌ಬ್ಯಾಗ್‌ ಅಳವಡಿಸುವುದಾಗಿ ಹೇಳಿದೆ. ಅದಕ್ಕಾಗಿ  ಶೇ 2.7 ಶುಲ್ಕ ಹೆಚ್ಚಳ ಮಾಡಲಿದೆಯಂತೆ. ಫೋರ್ಡ್‌ ಕೂಡಾ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದೆ. ಉಳಿದ ಕಾರುಗಳೂ ಈ ನಿಟ್ಟಿನಲ್ಲಿ ಚಿಂತಿಸುವುದಾಗಿ ಹೇಳಿವೆ.

ಇಂಧನ ಕ್ಷಮತೆಗೆ ಮೊದಲ ಆದ್ಯತೆ
ಬಹಳಷ್ಟು ಕಂಪೆನಿಗಳ ಅಧಿಕಾರಿಗಳು ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಹೇಳುವುದುಂಟು. ಆದರೆ ಭಾರತದಲ್ಲಿ ಕಾರ್ಯನಿರ್ವಹಿ ಸುವ ಕಾರು ಕಂಪೆನಿಗಳ ಮೊದಲ ಆದ್ಯತೆ ಇಂಧನ ಕ್ಷಮತೆ. ಗ್ರಾಹಕರ ಅಪೇಕ್ಷೆಯೂ ಅದೆ. ಕಾರು ಡೀಸೆಲ್‌ ಆದರೆ ಸಾಕು. ಪ್ರತಿ ಲೀಟರ್‌ಗೆ 20 ಕಿ.ಮೀ. ಮೇಲೆ ಇಂಧನ ಕ್ಷಮತೆ ಇದ್ದರೆ ಅದಕ್ಕಿಂತ ಬೇರೇನು ಬೇಕು ಎಂದು ತೃಪ್ತಿ ವ್ಯಕ್ತಪಡಿಸುತ್ತಾರೆ. ಇದರ ಜತೆಯಲ್ಲಿ ಒಂದಷ್ಟು ಡಿಸ್ಕೌಂಟ್‌ ಹಾಗೂ ಮತ್ತಷ್ಟು ಕೊಡುಗೆಗಳನ್ನು ನೀಡಿದರೆ ಸಾಕು, ಇಲ್ಲಿ ಕಾರು ಮಾರಾಟ ಮಾಡುವುದು ಕಷ್ಟದ ವಿಷಯವಲ್ಲ ಎಂಬ ನಂಬಿಕೆ ಕಾರು ಮಾರಾಟ ಮಾಡುವ ಪ್ರತಿನಿಧಿಗಳದ್ದು.

ಪೊಲೀಸ್‌ ಇಲಾಖೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಿ ಸುರಕ್ಷತೆ ಕುರಿತು ಪಾಠ ಮಾಡುತ್ತಾರೆ. ಹದಗೆಟ್ಟ ರಸ್ತೆ, ಅವೈಜ್ಞಾನಿಕ ಚಾಲನೆ ಹಾಗೂ ಅಸುರಕ್ಷಿತ ವಾಹನಗಳಿಂದಾಗಿ ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಇದು 2012ರಲ್ಲಿ 1.4ಲಕ್ಷಕ್ಕೆ ಏರಿದೆ ಎಂದು ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ  ಇಲಾಖೆ ನೀಡಿರುವ ಮಾಹಿತಿ ಹೇಳುತ್ತದೆ. ಕಾರುಗಳ ಸಂಖ್ಯೆ ಏರಿದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಅಂಕಿ ಅಂಶ ನೋಡಿದರೆ ನಾವು ಪ್ರಯಾಣಿಸುವ ಕಾರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳಬೇಕಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT