ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳದ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ

ಇಂದಿನಿಂದ 10 ದಿನಗಳ ಕಾಲ ಮಜ್ಜನ ಸಂಭ್ರಮ
Last Updated 20 ಜನವರಿ 2015, 19:30 IST
ಅಕ್ಷರ ಗಾತ್ರ

ಉಡುಪಿ: ಹತ್ತು ದಿನಗಳ ಕಾಲ ನಡೆಯುವ ಕಾರ್ಕಳದ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಇಂದು (ಜ.21) ಆರಂಭವಾಗಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಪಟ್ಣಶೆಟ್ಟಿ ಮೈದಾನದ ಭೈರವರಸು ಸಭಾಮಂಟಪದ ವೀರಪಾಂಡ್ಯ ವೇದಿಕೆ­ಯಲ್ಲಿ ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಹಾ­ಮಸ್ತಕಾಭಿಷೇಕ ಸಮಾರಂಭವನ್ನು ರಾಜ್ಯಪಾಲ ವಜುಭಾಯ್‌ ವಾಲಾ ಉದ್ಘಾಟಿಸುವರು.
ಜೈನ ಮಠ ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ‘ವೀತರಾಗ ಸ್ಮರಣ ಸಂಚಿಕೆ’ ಬಿಡುಗಡೆ ಮಾಡುವರು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು.

ಮಹಾ ಮಜ್ಜನಕ್ಕಾಗಿ ಗೊಮ್ಮಟ ಬೆಟ್ಟದಲ್ಲಿಯೂ ಸಿದ್ಧತೆ ಪೂರ್ಣ­ಗೊಂಡಿದೆ. ಕಬ್ಬಿಣದ ಅಟ್ಟಳಿಗೆಯ ಮುಂಭಾಗವನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಬೆಳಿಗ್ಗೆ 8.15ಕ್ಕೆ ಹಿರಿಯಂಗಡಿ ಭಗವಾನ್‌ ಶ್ರೀ ನೇಮಿನಾಥ ಬಸದಿಯಿಂದ ಭಗವಂತನ ಶ್ರೀವಿಹಾರ ಹೊರಡಲಿದೆ. 10.45ಕ್ಕೆ ಬಾಹುಬಲಿ ಸನ್ನಿಧಿಯಲ್ಲಿ ಇಂದ್ರ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ 6.30ಕ್ಕೆ ಜೈನ ಮಠದಿಂದ ಅಗ್ರೋದಕ ಮೆರವಣಿಗೆ ನಡೆಯಲಿದೆ. ರಾತ್ರಿ 7.40ಕ್ಕೆ ಸರಿಯಾಗಿ 108 ಕಲಶಾಭಿಷೇಕ ನಡೆಯಲಿದ್ದು ಆ ನಂತರ ಹಾಲು, ಚಂದನ, ಎಳನೀರು, ಅಷ್ಟಗಂಧ ಸೇರಿದಂತೆ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ.

ನೇರ ವೀಕ್ಷಣೆಗೆ ಅವಕಾಶ: ಜನರು ನೇರವಾಗಿ ಮಸ್ತಕಾಭಿಷೇಕ ವೀಕ್ಷಣೆ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಗೊಮ್ಮಟ ಬೆಟ್ಟದ ಮುಂಭಾಗದ ಸ್ಥಳವನ್ನು ಸಮತಟ್ಟು ಮಾಡಿ ಆರು ಅಡಿ ಎತ್ತರದ ವೇದಿಕೆ ನಿರ್ಮಿಸಿ ಅದರ ಮೇಲೆ ಮೂರು ಸಾವಿರ ಕುರ್ಚಿ ಹಾಕಲಾಗಿದೆ. ಬೆಟ್ಟದ ಕೆಳಗೆ ಮೂರು ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿ ಮಸ್ತಕಾಭಿಷೇಕವನ್ನು ನೇರ ಪ್ರಸಾರ ಮಾಡಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ಟಿ.ವಿಗಳನ್ನೂ ಇಡಲಾಗಿದೆ.

ಮಸ್ತಕಾಭಿಷೇಕಕ್ಕೆ ಬರುವ ಜನರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಲಾಗಿದೆ. ಐದು ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ಬೆಟ್ಟಕ್ಕೆ ಕರೆದೊಯ್ಯಲು ಮಸ್ತಕಾಭಿಷೇಕ ಸಮಿತಿ ವಾಹನ ಸೌಲಭ್ಯ ಒದಗಿಸಿದೆ. ವೃದ್ಧರಿಗೂ ವಿಶೇಷ ವಾಹನದ ವ್ಯವಸ್ಥೆ ಇದೆ.

ಅನ್ನದಾನಕ್ಕೆ ವ್ಯಾಪಕ ವ್ಯವಸ್ಥೆ: ಸ್ವ ಸಹಾಯ ಪದ್ಧತಿಯಂತೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಲಘು ಉಪಹಾರ ನೀಡಲಾಗುತ್ತದೆ.  ಶೃಂಗಾರಗೊಂಡಿರುವ ಕಾರ್ಕಳ ಪಟ್ಟಣ ಜನರನ್ನು ಸ್ವಾಗತಿಸುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಆಕರ್ಷಕ­ವಾದ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಜೀವ ಕಳೆ ತುಂಬಿ­ಕೊಂಡಿರುವ ಇಡೀ ನಗರ ಮಸ್ತಕಾಭಿಷೇಕಕ್ಕೆ ಸಜ್ಜಾಗಿ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT