ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಾವು: ಸ್ಥಳೀಯರಿಂದ ಕಲ್ಲು ತೂರಾಟ

ವಿದ್ಯುತ್ ತಂತಿ ಅಳವಡಿಸುವ ವೇಳೆ ದುರ್ಘಟನೆ * ಕಾರ್ಯಪಾಲಕ ಎಂಜಿನಿಯರ್‌ ಮೇಲೆ ಹಲ್ಲೆ
Last Updated 27 ಮೇ 2016, 9:38 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಡಅಲಪನಹಳ್ಳಿ ಸಮೀಪ ವಿದ್ಯುತ್‌ ತಂತಿ ಅಳವಡಿಸುತ್ತಿದ್ದ ವೇಳೆ ವಿದ್ಯುತ್‌ ಪ್ರಸರಣದಿಂದಾಗಿ ಕಾರ್ಮಿಕ ವಿದ್ಯುತ್‌ ಕಂಬದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮೃತ ಕಾರ್ಮಿಕನನ್ನು ತಾಲ್ಲೂಕಿನ ಮೇಳೆಕೋಟೆ ಗ್ರಾಮದ ನಾಗೇಶ್‌(40) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೆಸ್ಕಾಂ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್‌ ಟಿ.ಬಿ.ಗಂಗರಾಜ್‌ ಅವರ ಮೇಲೆ ಮೃತ ಕಾರ್ಮಿಕನ ಸಂಬಂಧಿಗಳು ಹಾಗೂ ಸ್ಥಳೀಯ ನಿವಾಸಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಟಿ.ಬಿ. ಗಂಗರಾಜ್‌ ತಲೆಗೆ ತೀವ್ರಪಟ್ಟಾಗಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಘಟನೆ ವಿವರ: ತಾಲ್ಲೂಕಿನ ಕಾಡಅಲಪನಹಳ್ಳಿ ಸುತ್ತಲಿನ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್‌ ತಂತಿ ಹಾಕಲಾಗುತಿತ್ತು. ತಂತಿ ಅಳವಡಿಸುವ ಸಲುವಾಗಿ ಗುತ್ತಿಗೆದಾರರು ಬೆಸ್ಕಾಂನಿಂದ ವಿದ್ಯುತ್‌ ನಿಲುಗಡೆಯನ್ನು ಪಡೆದಿದ್ದರು. ಆದರೆ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ದಿಢೀರನೆ ವಿದ್ಯುತ್‌ ಪ್ರಸರಣವಾಗಿದೆ. ಇದರಿಂದ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕ ನಾಗೇಶ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ.

ಇದು ಎರಡನೇ ಘಟನೆ: ದೊಡ್ಡಬೆಳವಂಗಲ ಬೆಸ್ಕಾಂ ವಿಭಾಗದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಪ್ರಸರಣದಿಂದ ಕಾರ್ಮಿಕರು ಮೃತ ಪಟ್ಟಿರುವ ಎರಡನೆ ಘಟನೆ ಇದಾಗಿದೆ. ದೊಡ್ಡಬೆಳವಂಗಲ ವಿಭಾಗದ ಸಹಾಯಕ ಎಂಜಿನಿಯರ್‌ ಆಗಿರುವ ಬಾಲಕೃಷ್ಣ ಅವರ ಕರ್ತವ್ಯ ಲೋಪವೇ ಇದಕ್ಕೆ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.   ಬೇಸ್ಕಾಂನ ಯಾವುದೇ ಭಾಗದಲ್ಲಿ ತಂತಿ ಅಳವಡಿಸುವ ಕೆಲಸ ಇರುವ ಸಂದರ್ಭದಲ್ಲಿ ಅಧಿಕೃತವಾಗಿ ವಿದ್ಯುತ್‌ ನಿಲುಗಡೆ ಪಡೆದ ನಂತರವೇ  ಕೆಲಸ ಪ್ರಾರಂಭಿಸಲಾಗುತ್ತದೆ.

ಆದರೆ ಕೆಲಸ ಮುಕ್ತಾಯ ಮಾಡಿ ಅಧಿಕೃತವಾಗಿ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡುವ ಮುನ್ನವೇ ವಿದ್ಯುತ್‌ ಪ್ರಸರಣ ಆಗಿರುವುದು ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ದೊಡ್ಡಬೆಳವಂಗಲ ವಿಭಾಗದ ಎಂಜಿನಿಯರ್‌ ಬಾಲಕೃಷ್ಣ ವಿರುದ್ದ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬೆಳವಂಗಲ ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಅಮಾಯಕರ ಮೇಲೆ ಹಲ್ಲೆ: ಕಾರ್ಮಿಕ ಮೃತಪಟ್ಟಿರುವ ಸುದ್ಧಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬೆಸ್ಕಾಂ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್‌ ಟಿ.ಬಿ. ಗಂಗರಾಜ್‌ ಅವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಆದರೆ ಈ ಘಟನೆಗೂ ಟಿ.ಬಿ.ಗಂಗರಾಜ್‌ ಅವರಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ ಪೊಲೀಸರು.

ತೀವ್ರ ನಿಗಾಘಟಕಕ್ಕೆ ಸ್ಥಳಾಂತರ: ಬೆಸ್ಕಾಂ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್‌ ಟಿ.ಬಿ.ಗಂಗರಾಜ್‌ ಅವರ ತಲೆಗೆ ತೀವ್ರವಾಗಿ ಗಾಯವಾಗಿ ರಕ್ತ ಸಾವ್ರ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾಘಟಕಕ್ಕೆ ದಾಖಲು ಮಾಡಲಾಗಿದೆ. ಬೆಸ್ಕಾಂ ಲೈನ್‌ಮೆನ್‌ ರವಿ ಎಂಬಾತನ ಮೇಲೆಯೂ ಹಲ್ಲೆ  ನಡೆದಿದ್ದು ಚಿಕಿತ್ಸೆ ನೀಡಲಾಗಿದೆ.

ಕಲ್ಲು ತೂರಾಟ, ಬಂಧನ
ಬೆಸ್ಕಾಂ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್‌ ಟಿ.ಬಿ.ಗಂಗರಾಜ್‌ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಬಂಧ ಅನಿಲ್‌ ಕುಮಾರ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ಪ್ರಸಾದ್‌ ತಿಳಿಸಿದ್ದಾರೆ.

ಪದಾಧಿಕಾರಿಗಳ ಭೇಟಿ: ಬೆಸ್ಕಾಂ ತಾಲ್ಲೂಕು ಕಾರ್ಯಪಾಲಕ ಎಂಜಿನಿಯರ್‌ ಟಿ.ಬಿ.ಗಂಗರಾಜ್‌ ಅವರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಕೆಪಿಟಿಸಿಎಲ್‌ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಪತಿ, ಖಂಜಾಂಚಿ ಸಿ.ಟಿ. ರಂಗನಾಥ್‌ಗೌಡ ಆಸ್ಪತ್ರೆಗೆ ಭೇಟಿ ನೀಡಿ ಟಿ.ಬಿ. ಗಂಗರಾಜ್‌ ಅವರ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಾಲ್ಲೂಕು ವಿದ್ಯುತ್‌ ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT