ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಪುರುಷನಿಗೆ ಸಾನೆಟ್ ಮಾಲೆ

ಕವಿತೆ
Last Updated 28 ಜೂನ್ 2014, 19:30 IST
ಅಕ್ಷರ ಗಾತ್ರ

1
ಗೆಳೆಯಾ, ಪ್ರತಿಯೊಂದು ಕವಿತೆಯೂ ಪರಮಪದ
ಸೋಪಾನ. ಓದುಗನಿಗಿರಬೇಕು ಮೈತುಂಬ ಕಣ್ಣು;
ಕಾಲು; ಕೈಯಿ. ಧುತ್ತೆಂದೇರಿ ಮೇಲಕ್ಕೆ, ಹೆಡೆಮೆಟ್ಟಿ
ಜರ್ರನೆ ಜಾರಿ, ಕ್ರಮಿಸಬೇಕು ಮೀರಿದೇರಿಳಿವ ದಾರಿ.
ಆಯಾಸವಾದಾಗ ನಿಲ್ಲಬೇಕು. ತಪ್ಪು ನಡೆಗಿಂತ ನಿಲು
ಗಡೆ ವಾಸಿ. ಅಲ್ಲಲ್ಲಿ ಜಾರದಂತೆ ಮೇಲೇರಿ, ಇನ್ನೇನು
ಕಡೆ ಹಾಯಬೇಕು, ಸಡನ್ನಾಗಿ ಧಡಕ್ಕನೆ ಮೊದಲ ಮೆಟ್ಟಿಲ
ಮೇಲೇ ಕಾಲು. ಮತ್ತೆ ಶುರುಹಚ್ಚಬೇಕು ಓನಾಮದಿಂದ.
ಹತ್ತುವಾಗ ಮೆಟ್ಟಿಲ ಮೇಲೇ ಇದ್ದರೆ ಕಣ್ಣು ಕೊನೆಗೆ
ದಕ್ಕುವುದು ಏಣಿ ಮಾತ್ರ. ಸೋಪಾನ ದಾರಿ; ಆಕಾಶ
ನಮ್ಮ ಗುರಿ. ನರ್ತಕಿಯ ನತ್ತಂತೆ ಅಗಾಗ ನಕ್ಷತ್ರ.
ನಕ್ಷತ್ರ ಬೆಳಕಿನಾಕರವಲ್ಲ; ಆಕಾರ. ಪಟ್ಟಿಯಲ್ಲುಂಟು
ಹಗಲಲ್ಲುರಿವ ಸೂರ್ಯ, ಇರುಳ ತೂಕಡಿಕೆ ಚಂದ್ರ.
ಮಾತಿಗೆ ಹೇಸುವ ನಟ್ಟಿರುಳ ಲಾಟೀನಿನ ನಿಶ್ಶಬ್ದ ನಾಲಗೆ.

2
ನಮ್ಮೂರ ಹನುಮಂತ ರಾಮಭಕ್ತನಲ್ಲ; ರಾವಣವೈರಿಯೂ ಅಲ್ಲ;
ಕಡಲಹಾರಿದ ಕಲಿಯಲ್ಲ; ಪರ್ವತವೆತ್ತಿತಂದ ಗಗನಗಾಮಿಯಲ್ಲ;
ಕೇವಲ ಒಬ್ಬ ಪೈಲ್ವಾನ. ಜಟ್ಟಿಗರಾಯ ಎಂದೇ ಇಲ್ಲಿ ಅವನ
ನಾಮಧೇಯ. ಯಾವುದೋ ಗರಡಿಯ ಯಾವನೋ ಜಟ್ಟಿಯೊಂದಿಗೆ
ಕುಸ್ತಿಹಿಡಿಯುವುದಷ್ಟೇ ಅವನ ಪರಮಧ್ಯೇಯ. ಹೀಗೆ ನಮ್ಮ ಜಟ್ಟಿ
ರಾಮಾಯಣದ ಗಡಿ ದಾಟಿ ನಮ್ಮ ಹಳ್ಳಿಗೆ ಬಂದು ನೆಲೆಸಿದ್ದಾನೆ!
ವೀರಗಾಸೆ. ಬರಿಮೈ. ಕುತ್ತಿಗೆಗೆ ಹತ್ತ ಕಟ್ಟಿದ ತಾಯತ. ತೊಡೆ
ಚಪ್ಪರಿಸುವ ಬಲಗೈ. ಜುಟ್ಟ ಕಟ್ಟುತ್ತಿರುವ ಎಡಗೈ. ಮುರುಟುಗಿವಿ.
ಈ ಅಖಾಡ ಸ್ಥಿತ ಹನುಮಂತ ತಕ್ಕ ಜೋಡಿಗಾಗಿ ಕಾಯುತ್ತಿರುವ
ನತದೃಷ್ಟ ಏಕಾಂಗಿ. ಎಂಥ ಪಡಪೋಶಿ ಬಂದರೂ ಕುಸ್ತಿ ಹಿಡಿಯಲು ಸೈ
ಎಂದು ಬಿಸುಸುಯ್ಯುತ್ತಾನೆ. ದೇವರೇ ಜಟ್ಟಿಯೊಬ್ಬನ ಕಳಿಸಪ್ಪಾ ಅಂತ
ಪ್ರತಿನಿತ್ಯ ಗೋಗರೆಯುತ್ತಾನೆ. ಬಟಾಬಯಲು. ಎದುರಾಳಿಯ
ಸುಳಿವಿಲ್ಲ. ಯಾಕವನ ಕಣ್ಣು ಕೆಂಪು? ತನ್ನನ್ನು ಹೀಗೆ ಕೆತ್ತಿಟ್ಟಿದ್ದಕ್ಕ?
ಅಥವಾ ತನ್ನ ಸುಸ್ಥಿತಿಯಿಂದ ಒಂದು ದುರ್ಗತಿಗಾದರೂ ದಾಟಲಾಗದ್ದಕ್ಕ?


3
ಗಾಳಿಯೂ ನೀರೂ ಕೂಡಿ ಮಾಡಿದ ಪದಾರ್ಥ ಅಲೆ. ಬೆಟ್ಟವೂ
ಕಡಲೂ ಸೇರಿ ಸೃಜಿಸಿದ್ದು ಮಹಾನದಿ. ಕತ್ತಲೂ ಬೆಳಕು ಮೇಳೈ
ಸಿ ನಿರ್ಮಿಸಿದ್ದು ನಕ್ಷತ್ರ. ಮಾತು ಮನಸ್ಸಿನ ಅಖಂಡಿತ ಮಿಲನ
ದ ಫಲ ಸಾಹಿತ್ಯ. ಕೊಟ್ಟದ್ದು ತಂದೆ ಪಡೆದದ್ದು ತಾಯಿ. ಪ್ರತಿ
ಯೊಂದು ಕೂಸೂ ಒಂದು ಉಭಯಕವಿ ನಿರ್ಮಾಣ. ಹಿಂದಿನಿಂದ
ಬಂದದ್ದು ಇಂದನ್ನು ಕೂಡಿ ಪಡೆದ ಪಾಡು. ಒಂದಾಗಲಿಕ್ಕಾದರೂ
ಎರಡು ಬೇಕೇ ಬೇಕು. ಖಾಲಿ ಹಾಳೆಯ ಮೇಲೆ ಪೆನ್ನಿಗದೆಂಥ ಅ
ಸ್ಖಲಿತ ಪ್ರೀತಿ. ಬಯಲಿನ ಮೇಲೆ ಸಹಿಗೀಚಿದ ನದಿಗೆ ಅದೆಂಥ
ಅನುಬಂಧ. ಪ್ರತಿಯೊಂದು ಪುಷ್ಪಪಾತ್ರೆಯ ತುಂಬ ನಿರ್ವ್ಯಾಜ
ಬೆಳಕು. ಅಗಸ್ತ್ಯನ ಬೊಗಸೆಯಲ್ಲಿ ಮಿಡುಕಾಡುವ ನಿರ್ಗುಣ ನೀರ
ಲಿಂಗ. ಓಹೋ ಪುಲ್ಲಿಂಗವೇ ಆಹಾ ಸ್ತ್ರೀಲಿಂಗವೇ ನಿಮ್ಮ ಮಿಲನವಿಲ್ಲ
ದಾದೀತೇ ಈ ಜಗತ್ತೆಂಬ ಮಹದ್ರಂಗ. ಭೂಮಿಯಲ್ಲೂರಿದ ಪ್ರತಿ
ಯೊಂದು ಮಳೆಯ ಬೀಜಕ್ಕೂ ನನ್ನ ಶಿರಸಾಷ್ಟಾಂಗ ವಂದನೆ.
ಬಾನಗರ್ಭವನ್ನು ನಕ್ಷತ್ರಬೀಜ ಕಚ್ಚದೆ ಸೂರ್ಯ ಹುಟ್ಟಿದನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT