ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಪ್ರವೇಶಾತಿ ವಿಳಂಬ

ಮೇ15 ಕಳೆದರೂ ಆನ್‌ಲೈನ್‌ ಪ್ರಕ್ರಿಯೆಗೆ ಇನ್ನೂ ಬಾರದ ಮಾರ್ಗಸೂಚಿ
Last Updated 16 ಮೇ 2015, 19:30 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ಆನ್‌ಲೈನ್‌ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲು ತೀರ್ಮಾನಿಸಿರುವ ಕಾಲೇಜು ಶಿಕ್ಷಣ ಇಲಾಖೆ, ಮೇ15 ಕಳೆದರೂ ಆನ್‌ಲೈನ್‌ ಪ್ರವೇಶಾತಿಯ ರೂಪುರೇಷೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಪದವಿ ಕಾಲೇಜುಗಳ ಪ್ರವೇಶಾತಿಯಲ್ಲಿ ಪಾರದರ್ಶಕತೆ ತರಲು ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿ ಆಗುವ ವಿಳಂಬ ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಮೂಲಕವೇ ಪ್ರವೇಶ ನೀಡಲು ನಿರ್ಧರಿಸಲಾಗಿತ್ತು. ಬೆಂಗಳೂರಿನ ಕೆಲ ಆಯ್ದ ಕಾಲೇಜುಗಳಲ್ಲಿ ಕಳೆದ ಶೈಕ್ಷಣಿಕ ವರ್ಷವೇ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಕಾರಣ ಅದನ್ನು ರಾಜ್ಯದ ಎಲ್ಲ ಕಾಲೇಜುಗಳಿಗೆ ವಿಸ್ತರಿಸಲು ಇಲಾಖೆ ನಿರ್ಧರಿಸಿದೆ.

ಮೇ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ. ಬಳಿಕ  ವಿದ್ಯಾರ್ಥಿಗಳು ಅರ್ಜಿ ಪಡೆಯಲು ತಮ್ಮ ಆಯ್ಕೆಯ ಪದವಿ ಕಾಲೇಜುಗಳಿಗೆ ಭೇಟಿ ನೀಡುವುದು ಸಾಮಾನ್ಯ. ಆದರೆ, ಅರ್ಜಿ ನೀಡಬೇಡಿ ಎಂದು ಇಲಾಖೆ ಸೂಚನೆ ನೀಡಿದೆ. ಅಲ್ಲದೆ ಆನ್‌ಲೈನ್‌ ಪ್ರವೇಶಾತಿ ಬಗ್ಗೆಯೂ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. 

ಪ್ರವೇಶಾತಿ ದಿನಾಂಕ ಹತ್ತಿರ ಬರುತ್ತಿರುವುದರಿಂದ ಕಾಲೇಜುಗಳ ಪ್ರಾಂಶುಪಾಲರಲ್ಲಿ ಗೊಂದಲ ಉಂಟಾಗಿದ್ದು, ಮುಂದಿನ ಆದೇಶಕ್ಕಾಗಿ ಕಾದು ಕೂರುವಂತಾಗಿದೆ.

ರಾಜ್ಯದಲ್ಲಿ ಮೊದಲು ಪದವಿ ತರಗತಿ ಆರಂಭವಾಗುವುದು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ. ಸಾಮಾನ್ಯವಾಗಿ ಜೂನ್‌ 15ರ ವೇಳೆಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಉಳಿದ ವಿಶ್ವವಿದ್ಯಾಲಯಗಳಲ್ಲಿಯೂ ಜುಲೈ ಕೊನೆಯ ವೇಳೆಗೆ ತರಗತಿಗಳು ಆರಂಭವಾಗುತ್ತವೆ.

‘ಕೇಂದ್ರೀಕೃತವಾಗಿ ಆನ್‌ಲೈನ್‌ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸುವುದರಿಂದ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ. ನಿಯಮದಂತೆ ಅರ್ಹ ವಿದ್ಯಾರ್ಥಿಗಳಿಗೆ ಅವರು ಬಯಸಿದ ಕಾಲೇಜುಗಳಲ್ಲಿಯೇ ಸೀಟು ಸಿಗುತ್ತದೆ. ಆದರೆ ಈ ಬಗ್ಗೆ ಆದಷ್ಟು ಬೇಗನೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ತಡವಾದರೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುತ್ತಾರೆ. ದುಬಾರಿ ಶುಲ್ಕ ಭರಿಸಿ ಖಾಸಗಿ ಕಾಲೇಜುಗಳಿಗೆ ದಾಖಲಾಗುವುದು ಅವರಿಗೆ ಅನಿವಾರ್ಯಗಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ದಾಖಲಾತಿ ವಿಳಂಬವಾದರೆ ತರಗತಿಗಳು ಸಹ ತಡವಾಗಿ ಆರಂಭವಾಗುತ್ತವೆ. ಪಠ್ಯಕ್ರಮವನ್ನು ಸಂಪೂರ್ಣವಾಗಿ ಬೋಧಿಸಲು ಬೋಧಕರಿಗೆ ಸಮಯಾವಕಾಶ ಕಡಿಮೆ ಆಗಬಹುದು’ ಎಂಬುದು ಅವರ ಅಭಿಪ್ರಾಯ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾವು ಬಯಸುವ ಕಾಲೇಜುಗಳಲ್ಲಿಯೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾಲೇಜುಗಳಲ್ಲಿ ಕಂಪ್ಯೂಟರ್‌ ಮತ್ತು ಸ್ಕ್ಯಾನರ್‌ಗಳಿವೆ. ಅವುಗಳನ್ನು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಬಳಕೆಗೆ ನೀಡಿದರೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಹ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT