ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಿನಲ್ಲಿ ಕನಸುಗಳ ಮೊಗ್ಗು ಅರಳುವ ಸಮಯ

ಅಕ್ಷರ ಗಾತ್ರ

‘ಬಿರು ಬೇಸಿಗೆ ಬಿಸಿಲಲ್ಲವೋ
ಬೆಳ್ಳನೆ ಬೆಳಕಿನ ಸುಮಬಾಣ.’

ಅಬ್ಬಾ...! ಈ ಬಿಸಿಲಿನ ಬಿಳುಪು ಶಾಖಕ್ಕೆ ಎಂಥಾ ಗತ್ತು, ಗಮ್ಮತ್ತು. ಜನರೇಕೆ ಈ ಬಿಸಿಲ ಧಗೆಗೆ ಒದ್ದಾಡುತ್ತಾರೋ ನಾ ಕಾಣೆ. ಆ ಸೂರ್ಯನನ್ನು ಎಷ್ಟು ಬೈದರೂ ಸಮಾಧಾನಿಸದ ಮನಸ್ಸುಗಳು ಇವರದು. ನನಗಂತೂ ಬಿಸಿಲೆಂದರೆ ಬಿಸಿಲಲ್ಲವೋ, ಹದವಾದ ಕಾವಿನಲಿ ಮೀಯುವ ಗಳಿಗೆ.’ ಬಿಸಿಲ ಕಾವೇರಿ ಸೆಕೆಯ ಉತ್ತುಂಗದಲ್ಲಿ ಹರಿಯುವ ಬೆವರಿನ ಧಾರೆಯಲ್ಲಿ ಮಿಂದು, ತಂಪಾಗುವ ಕ್ಷಣಗಳಲ್ಲಿ ಮೆಲ್ಲನೆ ತೀಡುವ ತಂಗಾಳಿ ಹಾಯ್‌ ಎನ್ನಿಸಿದರೆ ಅದಕ್ಕೆ ಕಾರಣ ಈ ಸೂರ್ಯನೊಬ್ಬನ ಶಾಖ.

ಬೆಳ್ಳಂಬೆಳಿಗ್ಗೆ ಹುಟ್ಟುವ ಬಾಲ ಸೂರ್ಯನ ಕಿರಣಗಳು ತುಸು ಕಠಿಣವೆನಿಸಿದರೂ ಆತ ಏನೂ ತಿಳಿಯದ ಮುಗ್ಧನಂತೆ. ಗಂಟೆ 10–11–12ರ ದಾಟಿ ಹೊಮ್ಮುತ್ತಿದ್ದಂತೆ ಆತನ ಯೌವನಭರಿತ ತೀಕ್ಷ್ಣ ಕಿರಣಗಳು ವಿರಹಿಗಳ ಎದೆ ಬಡಿತವನ್ನು, ಆಸೆಗಳ ತಹ ತಹಿಕೆಗೆ ಒಡ್ಡುವ ಈ ಸುಡು ಬಿಸಿಲಿಗೂ ಒಂದು ಚೆಲುವಿದೆ.

ಅವನನ್ನು ನೋಡುವ ಕಣ್ಣುಗಳಲ್ಲಿ ಒಲವಿರಬೇಕು, ಸುಡು ಬಿಸಿಲನ್ನು ಆಹ್ವಾನಿಸುವ ಧೀರತೆ ಬೇಕು. ನಮ್ಮ ಒಳಗೊಳಗೆ ಅವನನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ತೆರೆದ ಮನಸ್ಸಿದ್ದರೆ ಮಾತ್ರ ಆತ ಚೆಲುವಿನ ಸೂರ್ಯ. ಕುಂತಿಗೆ ಒಲಿದ ಪ್ರಿಯಕರನಲ್ಲವೇ ಆತ, ನಮ್ಮ ಕರೆಯನ್ನು ಮನ್ನಿಸದೆ ಇರುವವನೇ ಅಲ್ಲ ಅವನು...!

ಈ ಬಿಸಿಲ ಝಳಕಿನ ಬಿಳಿ ಹೂ ಹಬ್ಬ ಇನ್ಯಾವ ಕಾಲಕ್ಕಿದೆ ಹೇಳಿ...? ನಾಸಿಕವನ್ನು ತುಂಬಿ ಯಾವುದೋ ಪರವಶತೆಗೆ ಒಲಿಸಿಕೊಳ್ಳುವ ಮಲ್ಲಿಗೆಯ ಕಂಪು ಈ ಕಾಲದಲ್ಲೇ, ದಾರಿ ಬದಿಯಲ್ಲಿ ನೆತ್ತಿಯ ಮೇಲೆ ಕೂಡೆ ಹಿಡಿದು ಮರೆ ಮಾಡಿಕೊಂಡಿದ್ದರೆ ಹಾಗೆ– ದಟ್ಟವಾಗಿ ಹಬ್ಬುವ ಕಡು ಪರಿಮಳದ ಸೊಂಪು. ಅಲ್ಲೇ ದುಂಬಿಗಳ ಝೇಂಕಾರ, ಪಟ್ಟಣದ ಹೊಗೆ, ದೂಳಿನಿಂದ ಸಹನೆ ತಪ್ಪಿದರೂ, ಇದರ ಚೆಲುವು, ಅಂದ, ಪರಿಮಳ ನಮ್ಮನ್ನೇ (ಮೈ, ಮನಸ್ಸುಗಳನ್ನು) ಸುಗಂಧಭರಿತವಾಗಿಸುತ್ತದೆ.

ಈ ಪರಿಯ ಹಿತ ಇನ್ಯಾವ ಕಾಲದಲ್ಲೂ ಇಲ್ಲ. ಮಳೆಗಾಲವೆಂದರೆ ಮೈ, ಬಟ್ಟೆಗಳೆಲ್ಲಾ ಒದ್ದೆಯ ಮುದ್ದೆ ಒಳಗೆ ಗಡ ಗಡ ನಡುಗಿಸುವ ಚಳಿ. ಹೊರಗೆ ಹೋಗುವ ಮಾತಿಲ್ಲದೆ ಎಲ್ಲವೂ ಚಲನರಹಿತ ಸ್ಥಿತಿ. ರಸ್ತೆಗಳೂ ಕೆಸರುಮಯ. ಗುಡುಗು ಮಿಂಚಿನ ಮಳೆಯ ಅಬ್ಬರ ಸಹಿಸಲು ಸಾಧ್ಯವೇ...?

ಇನ್ನು, ಚಳಿಗಾಲವೋ... ಯಾರಿಗೆ ಬೇಕಪ್ಪ ಇದರ ಸಂಕಟ. ಜಗತ್ತನ್ನೇ ಹೊಸದಾಗಿಸುತ್ತೇನೆ ಎಂದು ದಾಂಗುಡಿ ಇಡುವ ಈತನ ಕಾರುಬಾರೇನೂ ಕಡಿಮೆ ಇಲ್ಲ. ಸುಂದರ ಚರ್ಮವನ್ನೆಲ್ಲಾ ಸುಕ್ಕುಗಟ್ಟಿಸಿ, ಕರಿಯಾಗಿಸಿ, ತುಸು ಬೆಳ್ಳಗಿರುವವರನ್ನು ಮತ್ತಷ್ಟು ಕಪ್ಪು ಮಾಡುವ ಈತನ ಬರುವಿಕೆಯೇ ಬೇಸರ ಮೂಡಿಸುತ್ತದೆ. ಗಿಡ ಮರಗಳ ಎಲೆಗಳನ್ನು ತರಿದು ಬೆತ್ತಲಾಗಿಸಿ, ಹಣ್ಣೆಲೆಗಳ ರಾಶಿ ರಾಶಿ ಕಸ ಹರಡಿ ಹೋಗುವವನು.

ಈ ಬೇಸಿಗೆಯ ಕಾಲ ಪೃಥ್ವಿಯನ್ನು ತನ್ನ ರಜತದ ಬಿಸಿ ಕಿರಣಗಳಿಂದ ಶಾಖವಾಗಿಸುತ್ತಾ ಹೊಸ ಚೈತನ್ಯಕ್ಕೆ ದಾರಿ ಮಾಡಿಕೊಡುತ್ತಾನೆ. ಜೀವಿಗಳ ಚಲನೆಯ ಸಡಗರವೋ ಸಡಗರ. ಮನೆಯ ಕಾಳು ಕಡ್ಡಿಗಳನ್ನು ಬಿಸಿಲಿಗೆ ಹಾಕಿ ಹದವಾಗಿ ಒಣಗಿಸಿ ವರ್ಷವಿಡೀ ಜೋಪಾನ ಮಾಡುವ, ಕಾಯ್ದುಕೊಳ್ಳುವ ಗಳಿಗೆ. ರೇಷ್ಮೆ ವಸ್ತ್ರಗಳು, ದುಬಾರಿ ಬಟ್ಟೆಗಳನ್ನು ಒಮ್ಮೆ ಬಿಸಿಲಿನ ಮೈಗೆ ತಾಗಿಸಿ ಎತ್ತಿಟ್ಟರೆ ಯಾವುದೇ ಭಯವಿಲ್ಲ. ಆತನ ಬರುವಿಕೆಗಾಗಿಯೇ ಕಾದು ಅಜ್ಜಿ. ಅಮ್ಮ ಮಾಡಿಡುವ ಥರಾವರಿ ಹಪ್ಪಳ, ಸಂಡಿಗೆಗಳು ಮಳೆಗಾಲಕ್ಕೆ ಭದ್ರವಾಗಿ ನಾಲಿಗೆಯ ಚಪಲವನ್ನು ತಣಿಸುತ್ತದೆ. ರಸ್ತೆ ಬದಿಯಲ್ಲಿ ಚೆಲುವೆಯರ ಸಂಭ್ರಮ.

ತಾಮುಂದು ನಾ ಮುಂದು ಎನ್ನುವಂತೆ ಚೆಲುವಾಗಿ ಬಣ್ಣ ಬಣ್ಣದ ಹೂ ಮುಡಿದು ನಿಂತು ಧರೆಯ ಮೇಲೆ ಸುರಿದು ಆಕೆಗೆ ಕೃತಜ್ಞತೆ ಹೇಳುವ ನಿಜವಾದ ವಸಂತೋತ್ಸವ ಈ ಬೇಸಿಗೆ ಕಾಲದಲ್ಲಿ. ಮಾವು, ಹಲಸುಗಳ ಕಂಪಿನ ರುಚಿ ಹರಡಿ ಮೈ–ಮನಸ್ಸು, ನಾಲಿಗೆ, ಮೆದುಳಿನ ಆಹ್ಲಾದಕರ ಸುಖಕ್ಕೆ ಇಂಬು ಕೊಡುವನು ಈ ಸೂರ್ಯ ದೇವ.

ಮಧ್ಯಾಹ್ನದ 12ರಲ್ಲಿ ಮದಿಸಿದ ಆನೆಯಂತೆ ಝಳಪಿಸುವ ಆತನ ಕಿರಣಗಳ ಹೊಡೆತಕ್ಕೆ ಹಾಗೇ ಮುಖ ಮಾಡಿ ಅವನತ್ತ ನೋಡಬೇಕು... ಆಹಾ... ನಾವು ನೋಡುವುದನ್ನು ಸಹಿಸಲಾರ ಆತ. ಆತನೇ ನಮ್ಮಲ್ಲಿ ಸ್ಫುರಿಸಬೇಕು– ಅಬ್ಬಾ ಎಂಥ ತೀಕ್ಷ್ಣತೆ ಅವನಿಗೆ. ಪ್ರೇಮಿಗಳ ಉಸಿರಾಟದ ಧಗೆಯಂತೆ ಆವರಿಸಿ ಉಸಿರಾಟವನ್ನು ಅಚಲಿತಗೊಳಿಸುವ ಸಬಲ. ಆ ಕಾವಿನಲ್ಲಿ ಕನಸುಗಳ ಮೊಗ್ಗುಗಳು ಅರಳಿ ಬೆಳಕಿನ ಹೂ ಹಬ್ಬ. ಬೆಳ್ಳನೆಯ ಹಾಲಿನ ಧಾರೆಯಂತೆ ಒಡಲ ತುಂಬುವ ಪರಿ.

ಅವನ ಸೊಬಗೇನು? ಅವನ ಧೀರತೆ ಚೆಲುವೇನು...! ಅವನ ಸ್ನೇಹದ ಮಾಧುರ್ಯವೇನು...? ಅಬ್ಬಾ ಅವನ ಒಂದಿಷ್ಟು ಕುಂದದ ಚೆಲುವಿಗೆ ಮಾರುಹೋಗದೆ ಇರುವ ಸಹೃದಯರು ಯಾರು...?

ಜ್ವಲಿಸುವ ಬೆಳಕಿನ ಧಾರೆಯನ್ನು ಹಾಗೆ ಮೈ ಮನಸ್ಸುಗಳ ಗಡಿಯನ್ನು ದಾಟಿ ಹಾಗೆ ನಿಮ್ಮೊಳಗೆ ಆವಾಹಿಸಿಕೊಳ್ಳಿ. ಕ್ಷಣ ಕ್ಷಣವೂ ಕರಗಿದಂತೆ ನಿಮ್ಮ ಮೈ ಕಣ ಕಣವೂ ಬಿಸಿಯೇರಿ ಉನ್ನತ ತಾಪಕ್ಕೆ ತಲುಪಿದಂತೆ ವಿರಹದ ಕಾವಿನ ತಾಪವೂ ಒಂದರೊಳಗೊಂದು ಬೆರೆತಂತೆ ನಮ್ಮನ್ನೇ ಒಡ್ಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಾವು. ನಾವೇ ಆಗಿ ಕಾಣಿಸಿಕೊಳ್ಳುತ್ತಾ ಏರಿದ ತಾಪದಲ್ಲಿ ಹಾಗೆ ದೇಹ ಮಿಂದು ಉಕ್ಕುವ ಜಲಧಾರೆಯಲ್ಲಿ ತಣ್ಣಗಾಗುತ್ತಾ ಬರುತ್ತದೆ.

ಉಟ್ಟ ಬಟ್ಟೆಯೆಲ್ಲಾ ತಣ್ಣಗಾಗಿ ಹಾಗೆ ಹಾಯ್‌! ಎನ್ನಿಸುವ ಗಳಿಗೆ. ಈ ಗಳಿಗೆಗಾಗಿ ಕಾಯಬೇಕು, ಕಾದು ಬಿಸಿಲಿನ ಬೇಗೆಯ ತಂಪನ್ನು ಅನುಭವಿಸಬೇಕು. ಇಲ್ಲಿ ಸೆಕೆಯ ಅನುಭವವನ್ನು ಮಾಗಿಸಿಕೊಳ್ಳಬೇಕು. ನಮ್ಮ ಮನಸ್ಸು, ದೇಹವನ್ನು ಅದಕ್ಕೆ ಒಡ್ಡಿಕೊಳ್ಳಬೇಕು. ಆಗ ‘ಬಿಸಿಲೆಂದರೆ ಬರೀ ಬಿಸಿಲಲ್ಲವೋ...! ಸೂರ್ಯನ ದಯೆ ಕಾಣೋ...’ ಅಂತ ಎಲ್ಲರಿಗೂ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT