ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಕ್ಕೆ ‘ಕಟ್‌ ಅಂಡ್ ಪೇಸ್ಟ್’ ಸೋಂಕು ತಗುಲದಿರಲಿ

Last Updated 4 ಏಪ್ರಿಲ್ 2016, 9:39 IST
ಅಕ್ಷರ ಗಾತ್ರ

ಹಾಸನ: ‘ಮರದ ಮೇಲಿನ ಕೊಂಬೆಯ ಮೇಲೆ ಕೆಂಪಾದ ಎಲೆ, ಹಾರಿ – ಜಾರಿ ಬಿದ್ದುದು ಅದೇ ಮರದ ಬುಡದಲಿ...’  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಸುಬ್ರಾಯ ಚೊಕ್ಕಾಡಿ ಅವರು ಹಾಡಿದ ಕವಿತೆಯಿದು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹೊಯ್ಸಳೋತ್ಸವ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಕವಿಗೋಷ್ಠಿಯ ಉದ್ಘಾಟನಾ ಭಾಷಣದಲ್ಲಿ ಅವರು ಕವನದ ಈ ಸಾಲುಗಳನ್ನು ಹೇಳಿದರು.

‘ಕವಿತೆಗೆ ತನ್ನದೇ ಆದ ಅರ್ಥ, ಲಯ, ಭಾವನೆ ಅಡಗಿರುತ್ತದೆ. ಸಾಮಾನ್ಯ ಪದಗಳಿಂದಲೇ ಕವಿತೆ ರೂಪಗೊಂಡಿರುತ್ತದೆಯಾದರೂ ಓದುಗರ ಹೃದಯ ಗೆಲ್ಲುವಲ್ಲಿ ಅದು ಯಶಸ್ವಿಯಾಗಿರುತ್ತದೆ. ಆ ಕ್ಷಣದಲ್ಲಿ ನಡೆದ ಸತ್ಯವನ್ನು ಕವಿತೆ ಮೂಲಕ ಹೇಳುವುದು ಹೆಚ್ಚು ಸ್ವಾರಸ್ಯ ಎಂದರು.

‘ಪದ್ಯವು ಮಾನಸಿಕ ನೋವು, ಸಂತೋಷ, ಆಶಾಭಾವನೆ ಎಲ್ಲವನ್ನೂ ಹೇಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಿರುವ ಕವಿತೆಗಳು ಸಾಹಿತ್ಯಕ್ಕೆ ಅಪಾಯ ತರುವಂತವುಗಳಾಗಿವೆ. ಸಿನಿಮಾ ಕ್ಷೇತ್ರದಲ್ಲಿ ಸಾಹಿತ್ಯಕ್ಕೆ ಗೌರವ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

‘ಕಟ್‌ ಅಂಡ್ ಪೇಸ್ಟ್’ ಎಂಬ ಆಧುನಿಕ ಪರಂಪರೆ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ ಸಾಹಿತ್ಯಕ್ಕೂ ತಗುಲಿದೆ. ಹಿರಿದಾದ ಕವಿತೆಯನ್ನು ಚಿಕ್ಕದು ಮಾಡಲು ಹೊರಟಿರುವ ಸಾಹಿತಿಗಳು ಈ ಕೆಟ್ಟ ಪದ್ಧತಿಯಿಂದ ಹೊರಬರಬೇಕು. ಕಾವ್ಯ ರಚನೆಯಾಗಬೇಕಾದರೆ ಸಾಕಷ್ಟು ಶ್ರಮ ಪಡಬೇಕು. ಅದನ್ನು ಇನ್ನಾವುದೋ ಕಾರಣಕ್ಕೆ ಕಡಿತಗೊಳಿಸುವುದು ಬೇಡ. ತಂತ್ರಜ್ಞಾನ ಬೆಳೆದಂತೆ ಮನುಷ್ಯನ ವೈಚಾರಿಕ ಪ್ರಜ್ಞೆಯೂ ಬೆಳೆಯುತ್ತಿದೆ. ಸಾಹಿತ್ಯ ಲೋಕದಲ್ಲಿ ಸಾಧನೆ ಮೆರೆಯಬೇಕು ಎಂದರೆ ಹಿರಿಯರ ಸಲಹೆ, ಮಾರ್ಗದರ್ಶನ ಅಗತ್ಯ. ಅರ್ಹರ ಮಾತಿಗೆ ಮನ್ನಣೆ, ಗೌರವ ನೀಡುವ ವ್ಯವಧಾನ ಯುವ ಸಾಹಿತಿಗಳಲ್ಲಿ ಇರಬೇಕು’ ಎಂದರು.

ಕವಯಿತ್ರಿ ಗೊರೂರು ಪಂಕಜಾ ಮಾತನಾಡಿ, ‘ಜಾಗತೀಕರಣವ ದೇಶದ ಮೇಲೆ ಬೀರುತ್ತಿರುವ ದುಷ್ಪರಿಣಾಮ ಹಾಗೂ ಹುನ್ನಾರವನ್ನು ಕಾವ್ಯದ ಮೂಲಕ ಸಮಾಜಕ್ಕೆ ತಿಳಿಯಪಡಿಸಬೇಕಾದ ಜವಾಬ್ದಾರಿ ಕವಿಗಳ ಮೇಲಿದೆ. ಇದಕ್ಕಾಗಿ ಎಲ್ಲ ಸಾಹಿತ್ಯಾಸಕ್ತರು ಒಗ್ಗೂಡಬೇಕು’ ಎಂದರು.

‘ಕನ್ನಡ ಉಳಿಯಬೇಕು ಎಂದರೆ ಆಡಳಿತದಲ್ಲಿ ಕನ್ನಡ ಚಿಂತಕ, ವಿಮರ್ಶಕರು ಇರಬೇಕು. ಆದರೆ ನಮ್ಮ ಸರ್ಕಾರದಲ್ಲಿ ಅಂಥ ವ್ಯಕ್ತಿಗಳಿಲ್ಲ. ಕನ್ನಡ ಉಳಿವು ಮೊದಲು ಬೆಂಗಳೂರಿನಲ್ಲಿ ಆಗಬೇಕು. ರಾಜಧಾನಿಯಲ್ಲಿ ಭಾಷೆ ಗಟ್ಟಿಯಾಗಿದ್ದರೆ ಇತರ ಪ್ರದೇಶಗಳಲ್ಲಿ ಕನ್ನಡವನ್ನು ಉಳಿಸುವುದು ಸುಲಭ’ ಎಂದು ಅಭಿಪ್ರಾಯಪಟ್ಟರು. ಸಾಹಿತಿ ಚಂದ್ರಕಾಂತ ಪಡೆಸೂರ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ದೇವರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕೊಟ್ರೇಶ್ ಎಸ್. ಉಪ್ಪಾರ್ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT