ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಡಿ ಒಂದು; ಸೇವೆ ಹದಿನೆಂಟು!

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ವಿಜಯನಗರ ಅತ್ತಿಗುಪ್ಪೆಯ14ನೆ ಅಡ್ಡರಸ್ತೆಯ ಮಧು ಕುಮಾರ್ ಮನೆ ಬದಲಿಸಲು ಮುಂದಾಗಿದ್ದರು. ಅವರು ಅಂದುಕೊಂಡ ಬಡಾವಣೆಯಲ್ಲಿ ಮನೆಯೂ ಸಿಕ್ಕಿತ್ತು. ಆದರೆ ಮನೆಯಲ್ಲಿ ತುಂಬಿ ತುಳುಕುತ್ತಿದ್ದ ವಸ್ತುಗಳನ್ನು ಸಾಗಿಸಲು ಬೇಕಿರುವ ಸಾಗಣೆದಾರರನ್ನು ನಾಲ್ಕಾರು ಸಲ ಹುಡುಕಾಡಿದರು. ಒಮ್ಮೆ ಹಣದ ಚೌಕಾಸಿಯಲ್ಲಿ ಮಾತುಕತೆ ಮುರಿದು ಬಿದ್ದರೆ, ಮತ್ತೊಮ್ಮೆ ಪ್ಯಾಕರ್ಸ್‌ ಕೈ ಕೊಟ್ಟರು.

ಹೀಗೆ ಹಲವು ದಿನ ಕಳೆದ ಮೇಲೆ ಮಧು ಕುಮಾರ್‌ಗೆ ಸ್ನೇಹಿತರ ಸಲಹೆಯಿಂದ ಸಿಕ್ಕಿದ್ದು ‘Brou4u’  ಎಂಬ ಅಂತರ್ಜಾಲ ಸೇವಾ ತಾಣ. ಬೆಂಗಳೂರಿನಲ್ಲಿ ನೆಲೆ ನಿಂತಿರುವ,  ಮಲೆನಾwin 17 ಮಂದಿ ಯುವಕರು ರೂಪಿಸಿರುವ ‘Brou4u’ ವೆಬ್ ತಾಣ 18 ಸೇವೆಗಳನ್ನು ಒದಗಿಸುತ್ತಿದೆ. ಉದಾಹರಣೆಗೆ ಕಾರ್ಪೆಂಟರ್, ಕಾರು ವಾಷಿಂಗ್‌, ಎಲೆಕ್ಟ್ರಿಷಿನ್ ಸೇವೆಗಳು ಅಗತ್ಯವಿದ್ದವರಿಗೆ ಅವರ ಬಳಿಗೆ ಸೇವೆಯನ್ನು ಒದಗಿಸಲಿದೆ. ಗ್ರಾಹಕರು ಬಯಸಿದ ದಿನದಂದು ಕೈಗೆಟುಕುವ ಬೆಲೆಯಲ್ಲಿ ಈ ಸೇವೆಗಳನ್ನು ಒದಗಿಸುವುದು ಈ ತಾಣದ ವಿಶೇಷ.

‘Brou4u’ ಫೆಬ್ರುವರಿಯಲ್ಲಿ ಕಾರ್ಯಾರಂಭ ಮಾಡಿದ್ದು, ನಗರದಲ್ಲಿ ಹಲವು ಸೇವೆಗಳನ್ನು ನೀಡುತ್ತಿದೆ. ವಿವಿಧ ಕ್ಷೇತ್ರಗಳ 800ಕ್ಕೂ ಅಧಿಕ ಮಂದಿ ಗ್ರಾಹಕರು ಈ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಗ್ರಾಹಕರು ಈ ಜಾಲತಾಣಕ್ಕೆ ಹೋಗಿ, ಅಲ್ಲಿ ಯಾವ ಬಡಾವಣೆ ಮತ್ತು ಯಾವ ಸೇವೆ ಬೇಕು ಎಂದು ಕ್ಲಿಕ್ಕಿಸಿದರೆ ಮಾಹಿತಿ ತೆರೆದುಕೊಳ್ಳುತ್ತದೆ. ಆನಂತರ ಜಾಲತಾಣದವರು ಗ್ರಾಹಕರನ್ನು ಸಂಪರ್ಕಿಸುತ್ತಾರೆ. 

ಪ್ರಮೋದ್ ಹೆಗಡೆ, ರಜತ್, ಅಕ್ಷಯ್, ಪೃಥ್ವಿ, ಶ್ರೀನಾಥ್, ಮಂಜುನಾಥ್ ಮತ್ತಿತರ 17 ಮಂದಿ ಈ ತಾಣದ ರೂವಾರಿಗಳು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಈ ಗೆಳೆಯರ ಹೊಸತನದ ತುಡಿತವೇ ಈ ತಾಣದ ಹುಟ್ಟಿಗೆ ಕಾರಣ. ಸದ್ಯಕ್ಕೆ ಬೆಂಗಳೂರಿನಲ್ಲಿ ಸೇವೆ ಒದಗಿಸುತ್ತಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ದೆಹಲಿ, ಹೈದರಾಬಾದ್, ಚೆನ್ನೈ ಮತ್ತಿತರ ನಗರಗಳಿಗೂ ತನ್ನ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳುವ ಉತ್ಸಾಹದಲ್ಲಿದೆ.

‘ನಾವೆಲ್ಲರೂ ಗೆಳೆಯರು. ಹೊಸದಾಗಿ ಏನನ್ನಾದರೂ ಮಾಡಬೇಕು ಅಂದುಕೊಂಡಿದ್ದೆವು. ಅದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕಿನ್ ಇಂಡಿಯಾ ಪರಿಕಲ್ಪನೆ ನಮ್ಮನ್ನು ಸೆಳೆಯಿತು. ಅದರ ಪ್ರತಿಫಲವಾಗಿ ನಾವು ಈ ಸೇವಾ ತಾಣ ಆರಂಭಿಸಿದೆವು. ಹೈಸ್ಕೂಲ್‌ನಲ್ಲಿ ಒಟ್ಟಿಗೆ ಕಲಿತ ಎಂಟು ಮಂದಿ ಈಗಲೂ ಜೊತೆಗೆ ಇದ್ದೇವೆ. ನಮ್ಮ ಉದ್ದೇಶ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು.

ಆರಂಭದಲ್ಲಿ ನಾವೇ ಕಾರ್ಪೆಂಟರ್, ಪ್ಲಂಬರ್ ಹೀಗೆ ಹಲವು ಸೇವೆಗಳನ್ನು ಒದಗಿಸುವ ಸೇವಾದಾರರ ಬಳಿ ತೆರಳಿ ನಮ್ಮ ಯೋಜನೆ ಕುರಿತು ಮನವರಿಕೆ ಮಾಡಿಕೊಟ್ಟೆವು. ಹಲವರು ಇದಕ್ಕೆ ಸ್ಪಂದಿಸಿದರು. ನಂತರ ದಿನಗಳಲ್ಲಿ ಹಲವರು ನಮ್ಮ ಜಾಲತಾಣದ ಬಗ್ಗೆ ತಿಳಿದು ಸ್ವಂತ ಆಸಕ್ತಿಯಿಂದ ತಾಣ ಸೇರಿದರು. ಹಾಗೆಂದು ಎಲ್ಲರನ್ನೂ ನಮ್ಮ ತಾಣಕ್ಕೆ ಸೇರಿಸಿಕೊಳ್ಳುವುದಿಲ್ಲ.

ಉದಾಹರಣೆಗೆ, ಒಬ್ಬ ಕಾರ್ಪೆಂಟರ್‌ನ ಕೌಶಲವನ್ನು ಮೊದಲು ನಾವು ಪರೀಕ್ಷಿಸುತ್ತೇವೆ. ಅವರ ಕೆಲಸ ನಮಗೆ ತೃಪ್ತಿ ನೀಡಿದರೆ ಮಾತ್ರ ಅವರನ್ನು ನಮ್ಮ ತಾಣಕ್ಕೆ ಆಯ್ಕೆ ಮಾಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ನಮ್ಮಲ್ಲಿರುವ ಸೇವೆಗಳು ಬಹಳ ಮಂದಿಗೆ ಬೇಕಾಗುತ್ತದೆ. ನಾವು ಗ್ರಾಹಕರು ಕೇಳುವ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎಂದು ತಮ್ಮ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತಾರೆ ತಂಡದ ಸದಸ್ಯೆ ಪೃಥ್ವಿ.

ತಾಣದಲ್ಲಿ ನಿರ್ದಿಷ್ಟ ಕಾರ್ಯಕ್ಕೆ ಯಾವ ಕೆಲಸಗಾರ ಎಷ್ಟು ಬೆಲೆ ನಿಗದಿ ಮಾಡಿದ್ದಾರೆ ಎನ್ನುವುದನ್ನು ಹೋಲಿಕೆ ಮಾಡಿಕೊಳ್ಳಬಹುದು. ಅಂತಿಮವಾಗಿ ಗ್ರಾಹಕರಿಂದ ‘Brou4u’ ಫೀಡ್‌ಬ್ಯಾಕ್ ಸಹ ಪಡೆಯಲಾಗುತ್ತದೆ. ಶನಿವಾರ ಮತ್ತು ಭಾನುವಾರಗಳಲ್ಲೂ ಸೇವೆ ದೊರೆಯುತ್ತದೆ.

‘ಅಸಂಘಟಿತವಾಗಿರುವ ಸೇವೆಗಳನ್ನು ಸಂಘಟಿತಗೊಳಿಸುವುದು ನಮ್ಮ ಮುಖ್ಯ ಉದ್ದೇಶ. ಗ್ರಾಹಕರು ತಾಣ ಸಂರ್ಪಕಿಸಿ ಇಂಥ ಸೇವೆ ಬೇಕು ಎಂದು ಕೇಳಿದಾಗ ನಾವು ಮಧ್ಯವರ್ತಿಯಾಗಿ ಕೆಲಸ ಮಾಡುತ್ತೇವೆ. ಯಾರಿಂದ ಸೇವೆಯನ್ನು ಅಪೇಕ್ಷಿಸಿದ್ದಾರೋ ಅವರನ್ನು ಗ್ರಾಹಕರಿಗೆ ಲಿಂಕ್ ಮಾಡುತ್ತೇವೆ. ಇದಕ್ಕಾಗಿ ನಮ್ಮ ವ್ಯಕ್ತಿಯೊಬ್ಬರು ಕೆಲಸ ಮಾಡುತ್ತಾರೆ.

ನಂತರ ಸರ್ವಿಸ್ ಚಾರ್ಚ್ ತೆಗೆದುಕೊಳ್ಳುತ್ತೇವೆ. ಇದೇ ನಮ್ಮ ಆದಾಯ. ನಗರದ ಎಲ್ಲ ಬಡಾವಣೆಗಳಿಗೂ ಸೇವೆ ನೀಡುತ್ತೇವೆ. ನಮ್ಮ ತಾಣದಿಂದ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಬಡಾವಣೆ ಉಸ್ತುವಾರಿ ನೋಡಿಕೊಳ್ಳಲು ಸಂಸ್ಥೆಗೆ ಪ್ರತಿನಿಧಿಗಳ ಅಗತ್ಯವಿದ್ದು ಉದ್ಯೋಗಾಸಕ್ತರು ನಮ್ಮನ್ನು ಸಂಪರ್ಕಿಸಬಹುದು.

ನಗರದಲ್ಲಿರುವ ಐಟಿ–ಬಿಟಿ ಉದ್ಯೋಗಿಗಳೂ ಸೇರಿದಂತೆ ಹಲವರಿಗೆ ಕಾರ್‌ ವಾಷ್ ಸೇರಿದಂತೆ ಕೆಲವು ಕೆಲಸಗಳಿಗೆ ಸಮಯ ಹೊಂದಿಸುವುದು ಕಷ್ಟ. ಅಂತಹವರಿಗೆ ನಮ್ಮ ತಾಣ ಅತ್ಯುತ್ತಮ ಆಯ್ಕೆ. ನಮ್ಮ ಕೆಲಸಕ್ಕೆ ಗ್ರಾಹಕರಿಂದ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದಿನದ 24 ಗಂಟೆಗಳೂ ನಮ್ಮ ಸೇವೆ ಲಭ್ಯ’ ಎಂದು ಭವಿಷ್ಯದಲ್ಲಿ ತಮ್ಮ ತಾಣ ಮತ್ತು ತಂಡವನ್ನು ಮತ್ತಷ್ಟು ವಿಸ್ತಾರಗೊಳಿಸುವ ಆಶಯ ವ್ಯಕ್ತಪಡಿಸುತ್ತಾರೆ ಪೃಥ್ವಿ.

ಐದು ಜನರು ತಾಣದ ಪ್ರಚಾರ ಕಾರ್ಯದಲ್ಲಿ, ನಾಲ್ಕು ಮಂದಿ ಮಾರುಕಟ್ಟೆ ವಿಭಾಗದಲ್ಲಿ. ಆರ್ಡರ್ ಟ್ರಾಕ್ ಮಾಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಸಮಾನ ಮನಸ್ಕ ಗೆಳೆಯರು ಹಂಚಿಕೊಂಡು ತಂಡ ರಚಿಸಿಕೊಂಡಿದ್ದಾರೆ. 
*
ಲಭ್ಯ ಸೇವೆಗಳು
ಪುರೋಹಿತರು, ಎಲೆಕ್ಟ್ರಿಷಿಯನ್‌, ಪ್ಲಂಬರ್, ಡ್ರೈವಿಂಗ್ ಸ್ಕೂಲ್, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಸಂಪರ್ಕ, ಕಂಪ್ಯೂಟರ್ ಸರ್ವಿಸ್, ಕೇಕ್ ಮತ್ತು ಫ್ಲವರ್ ಡಿಲೆವರಿ, ಕಾರ್ಪೆಂಟರ್, ಪ್ಯಾನ್ ಕಾರ್ಡ್, ವಾಟರ್ ಟ್ಯಾಂಕ್ ಕ್ಲಿನಿಕ್, ಕಾರು ಕ್ಲಿನಿಕ್, ಪೆಟ್ ಕೇರ್ ಹೀಗೆ ಒಟ್ಟು 18 ಸೇವೆಗಳು ‘Brou4u’ನಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT