ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುತೆರೆಯ ಅಂಗಳದಲ್ಲಿ ಹಿರಿತೆರೆಯ ಕನವರಿಕೆ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಪಿŁಯದರ್ಶಿನಿ’ಯ ಪ್ರಿಯಕರನಾಗಿ, ‘ಕುಲವಧು’ವಿನ ವರನಾಗಿ ಕಿರುತೆರೆಯ ಹೆಂಗಳೆಯರ ಮನಸ್ಸು ಗೆದ್ದಿರುವ ಕಲಾವಿದ ಅಜಯ್‌. ಕಿರುತೆರೆಯ ಈ ನಟನ ಒಲವು ಈಗ ಹಿರಿತೆರೆಯತ್ತ ಸರಿದಿದೆ.

ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯ ಸುಮಂತ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಜಯ್‌ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದವರು. 

‘ಸೀತೆ’, ‘ನೂರೆಂಟು ಸುಳ್ಳು’ ಮೊದಲಾದ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ಅವರು ಪೂರ್ಣ ಪ್ರಮಾಣದಲ್ಲಿ ನಟರಾಗಿ ಕಾಣಿಸಿಕೊಂಡಿದ್ದು ಸುವರ್ಣ ವಾಹಿನಿಯ ‘ಪ್ರಿಯದರ್ಶಿನಿ’ ಧಾರಾವಾಹಿ ಮೂಲಕ.

ಬೆಂಗಳೂರು ಮೂಲದ ಅಜಯ್‌ಗೆ ಬಣ್ಣದ ಜಗತ್ತಿನ ಹಿನ್ನೆಲೆಯಿಲ್ಲ, ಗಾಡ್‌ಫಾದರ್‌ಗಳೂ ಇಲ್ಲ. ಇವರ ಮನಸ್ಸಿನಲ್ಲಿ ನಟನೆಯ ಕನಸು ಚಿಗುರಿದಾಗ ಓದಿಗೆ ಚಕ್ಕರ್‌ ಹಾಕಿ ಅಭಿನಯ ಕಲಿಕೆಗೆ ತಮ್ಮನ್ನು ಸಮರ್ಪಿಸಿಕೊಂಡರು. ನಟನೆಯ ಜೊತೆಗೆ ನೃತ್ಯದಲ್ಲೂ ಆಸಕ್ತಿ ಹೊಂದಿದ್ದ  ಅಜಯ್‌, ‘ಭಜರಂಗಿ’, ‘ಶ್ಯಾಡೋ’ ಮೊದಲಾದ ನೃತ್ಯ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಬಿ.ಕಾಂಗೆ ವಿದ್ಯಾಭ್ಯಾಸ ನಿಲ್ಲಿಸಿದ ಅಜಯ್‌ಗೆ ಮೊದಲಿನಿಂದಲೂ ಓದು ಅಂದರೆ ಅಷ್ಟಕ್ಕಷ್ಟೆ.
ಕಿರುತೆರೆಗೆ ಅಜಯ್ ಆಗಮನ 

ಅಜಯ್ ಒಳಗೊಬ್ಬ ಉತ್ತಮ ನಟನಿದ್ದಾನೆ ಎನ್ನುವುದನ್ನು ಗುರ್ತಿಸಿದ್ದ ಆತನ ಸ್ನೇಹಿತರು ಕಿರುತೆರೆಯ ನಿರ್ದೇಶಕ–ನಿರ್ಮಾಪಕರಿಗೆ ಫೋಟೊಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದರು. ಅದೃಷ್ಟ ಎಂಬಂತೆ, ‘ಸರಸ್ವತಿ’, ‘ಪ್ರಿಯದರ್ಶಿನಿ’, ‘ಮಹಾಪರ್ವ’ ಈ ಮೂರು ಧಾರಾವಾಹಿಗಳಿಗೆ ಅಜಯ್ ಫೋಟೊ ಸೆಲೆಕ್ಟ್‌ ಆಗಿತ್ತು. ಒಟ್ಟೊಟ್ಟಿಗೆ ಬಂದ ಬಂಪರ್‌ ಅವಕಾಶಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಅಜಯ್‌ಗೆ ಎದುರಾಗಿತ್ತಂತೆ. ‘ಮಹಾಪರ್ವ’ ಧಾರಾವಾಹಿ ಎರಡು ತಿಂಗಳು ತಡವಾಗಿ ಆರಂಭವಾಗುತ್ತದೆಂದು ತಿಳಿದು ನನ್ನ ವೃತ್ತಿ ಬದುಕಿನ ಅಡಿಪಾಯಕ್ಕೆ ರವಿ ಗರಣಿ ನಿರ್ದೇಶನದ ‘ಪ್ರಿಯದರ್ಶಿನಿ’ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಅವರು.

ಪ್ರಿಯಕರನಾಗಿ ಮೊದಲ ಪ್ರಯತ್ನ
‘ಪ್ರಿಯದರ್ಶಿನಿ’ ಧಾರಾವಾಹಿಯಲ್ಲಿ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ಖಾತೆ ತೆರೆದ ಅಜಯ್‌ ಅವರಿಗೆ ಈ ಧಾರಾವಾಹಿ ಅವಕಾಶಗಳ ಹೆಬ್ಬಾಗಿಲು ತೆರೆಯಿತು. ‘ಪ್ರಿಯದರ್ಶಿನಿ ಧಾರಾವಾಹಿ ನನಗೆ ಕಿರುತೆರೆ ಬದುಕಿನ ಮಜಲುಗಳನ್ನು ಪರಿಚಯಿಸಿತು. ಸಾಕಷ್ಟು ಅಭಿಮಾನಿಗಳನ್ನು ದೊರಕಿಸಿಕೊಟ್ಟಿತು’ ಎಂದು ಅಭಿಮಾನದಿಂದ ನುಡಿಯುತ್ತಾರೆ ಅವರು.

ಕುಲವಧುವಿನ ಬೆನ್ನು ಬಿದ್ದು...
ಸದ್ಯ ಅಜಯ್ ನಟಿಸುತ್ತಿರುವುದು ಈ–ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ. ಇಲ್ಲಿ ಇವರದ್ದು ಕ್ರೇಜಿ ಬಾಯ್‌ ಪಾತ್ರ. ಮೋಜು, ಮಸ್ತಿಗೆ ಒತ್ತು ನೀಡುವ ಬಿಂದಾಸ್‌ ಹುಡುಗ. ‘ನನ್ನ ನಿಜ ಜೀವನಕ್ಕೂ ಈ ಪಾತ್ರಕ್ಕೂ ತಕ್ಕ ಮಟ್ಟಿನ ಸಾಮ್ಯವಿದೆ’ ಎನ್ನುವ ಅಜಯ್‌ ಅವರದ್ದು  ಪ್ರೀತಿಯನ್ನು ಅರಸುವ ಹುಡುಗ ಸುಮಂತ್‌ನ ಪಾತ್ರ.

ಹಿರಿತೆರೆಯತ್ತ ಒಲವು
‘ಸಿನಿಮಾದಲ್ಲಿ ಅವಕಾಶ ಸಿಕ್ಕರೆ  ಸಮಾಜಕ್ಕೆ ಸಂದೇಶ ನೀಡುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಒಲವಿದೆ. ಬೆಳ್ಳಿತೆರೆಯಲ್ಲಿ ನಾಯಕನಟನಾಗಿ ಕಾಣಿಸಿಕೊಳ್ಳುವ ಕನಸಿದೆ. ಅಂತಹ ಅವಕಾಶ ಸಿಕ್ಕಿಲ್ಲ ಅಂದರೆ, ಜನ ಗುರ್ತಿಸುವಂತಹ ಪಾತ್ರಗಳಿಗೆ ಜೀವತುಂಬಲು ನನ್ನ ತಕರಾರಿಲ್ಲ’ ಎಂದು ತಮ್ಮ ಆಸೆ ಆಕಾಂಕ್ಷೆಯನ್ನು ಮುಚ್ಚಿಡದೆ ವಿವರಿಸುವರು ಅಜಯ್.  

ಫಿಟ್‌ನೆಸ್‌ ಕಾಳಜಿ
ನಟರಿಗೆ ಫಿಟ್‌ನೆಸ್‌ ತುಂಬ ಮುಖ್ಯ  ಎನ್ನುವುದನ್ನು ಬಲ್ಲ ಅಜಯ್‌, ದೈಹಿಕ ಆರೋಗ್ಯಕ್ಕೆ ಹೆಚ್ಚು ಗಮನ ನೀಡುವರು.  ಪಿಯುಸಿಯಿಂದಲೇ ಜಿಮ್‌ಗೆ ಹೋಗುತ್ತಿರುವ ಇವರು ನಿತ್ಯ ಒಂದೂವರೆ ಗಂಟೆ ದೈಹಿಕ ಕಸರತ್ತು ನಡೆಸುತ್ತಾರೆ. ಭವಿಷ್ಯದಲ್ಲಿ ಸಿನಿಮಾ ನಟನಾಗಲು ಈಗಿನಿಂದಲೇ ದೇಹವನ್ನು ರೂಪಿಸುವ ದೂರದ ಆಲೋಚನೆ ಅವರದ್ದು. 

ಬೆಳಗಿನ ಉಪಹಾರದಲ್ಲಿ ಗೋಧಿ ಬ್ರೆಡ್‌, ಹಾಲು ಮತ್ತು ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಉಪಾಹಾರ ಸೇವಿಸಿದರೆ, ರಾತ್ರಿ ಊಟಕ್ಕೆ ಮುದ್ದೆ, ಚಪಾತಿಗೆ ಆದ್ಯತೆ ನೀಡುತ್ತಾರೆ. ಅನ್ನ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಇವರು ಸದಾ ದೂರ.
ಜಿಮ್‌ನಲ್ಲಿ ದೇಹ ದಂಡಿಸುವ ಇವರು ಪ್ರತಿದಿನ ಹಣ್ಣು ಹಾಗೂ ಎರಡರಿಂದ ನಾಲ್ಕು ಮೊಟ್ಟೆ ಸೇವಿಸುತ್ತಾರೆ. ‘ಚಿಕನ್‌ ಅಂದ್ರೆ ತುಂಬಾ ಇಷ್ಟ’ ಎಂದು ಬಾಯಿ ಚಪ್ಪರಿಸುತ್ತಾರೆ.

ನಟನೆಗೆ ಸಂಬಂಧಿಸಿದಂತೆ ಹಲವು ಕಸರತ್ತುಗಳನ್ನು ನಡೆಸುವ ಅಜಯ್ ಜೀವನದ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಇಟ್ಟುಕೊಂಡಿದ್ದಾರೆ. ‘ಜೀವನದಲ್ಲಿ ಯಾವತ್ತೂ ಸೋಲಬಾರದು. ಗೆದ್ದೇ ಗೆಲ್ತೀವಿ ಎನ್ನುವ ಛಲದಲ್ಲಿ ಧೈರ್ಯದಿಂದ ಮುನ್ನಡೆದರೆ ಖಂಡಿತಾ ಮಹತ್ವವಾದದ್ದನ್ನು ಸಾಧಿಸಬಹುದು’ ಎಂಬ ಉತ್ಸಾಹದ ಮಾತುಗಳನ್ನಾಡುವ  ಅಜಯ್ ಕಿರುತೆರೆಯ ನಟನಾ ಜೀವನವನ್ನು ಉಜ್ವಲಗೊಳಿಸಿಕೊಂಡು ಹಿರಿತೆರೆಗೆ ಜಿಗಿಯುವ ಹುಮ್ಮಸ್ಸಿನಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT