ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಅರಳಿದ ಪ್ರಕೃತಿ

ಕಲಾಪ
Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಪ್ರಕೃತಿ ಕೇವಲ ಚೆಲುವಿನ ರಾಯಭಾರಿಯಲ್ಲ. ಹೊರನೋಟಕ್ಕೆ ಸಹಜವಾಗಿಯೂ ಸುಂದರವಾಗಿಯೂ ಕಂಡರೂ ಅದು ತನ್ನೊಳಗೆ ಹಲವು  ಅಚ್ಚರಿಗಳನ್ನು ಅಡಗಿಸಿಟ್ಟುಕೊಂಡಿದೆ. ಭೇದಿಸುತ್ತಾ ಹೋದಂತೆ ನಿಸರ್ಗದ ರಮ್ಯತೆಯ ಜೊತೆಗೆ ರುದ್ರ ರಮಣೀಯತೆ ಕೂಡ ದರ್ಶನವಾಗುತ್ತದೆ. ಮೊಗೆದಷ್ಟೂ ಉಕ್ಕುವ ಜೀವಸೆಲೆಯಂತಿರುವ ನಿಸರ್ಗ ಚಿತ್ರಕಲಾವಿದರಿಗೆ ಸ್ಫೂರ್ತಿಯ ತಾಣ.

ಬಯಲು ಕಲಾಪ್ರದರ್ಶನಕ್ಕೆ ಯುವ ಕಲಾವಿದರನ್ನು ಪ್ರೋತ್ಸಾಹಿಸುವುದು ಮತ್ತು ಅವರ ಕಲಾಕೃತಿಗಳ ಚೊಚ್ಚಿಲ ಪ್ರದರ್ಶನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರತಿ ತಿಂಗಳು ‘ಪಡಸಾಲೆ ತಿಂಗಳ ಚಿತ್ರ’ ಎಂಬ ಚಿತ್ರಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರುತ್ತಿದೆ. ಈ ಬಾರಿಯ ಪ್ರದರ್ಶನದಲ್ಲಿ ಚಂದನಾ ಕೆ.ಎನ್‌, ನಾಗೇಶ್‌ ವಿ., ಮಾಲಿನಿ ಟಿ.ಆರ್‌. ಹಾಗೂ  ಸತ್ಯ ಎಸ್‌. ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇವರೆಲ್ಲರೂ ಚಿತ್ರಕಲಾ ವಿದ್ಯಾರ್ಥಿಗಳು.

ಪ್ರಕೃತಿ ಮತ್ತು ದೇಸಿಕಲೆಯ ಸೊಬಗಿನತ್ತ ಆಕರ್ಷಿತರಾದ ಕಲಾವಿದೆ ಚಂದನಾ ಕೆ.ಎನ್‌. ಅವರು ಈ ಪ್ರದರ್ಶನದಲ್ಲಿ ಒಟ್ಟು ಏಳು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ.

‘ಆಧುನೀಕತೆಯ ಅಬ್ಬರದಲ್ಲಿ ನಮ್ಮ ದೇಸಿಕಲೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಹಳ್ಳಿ ಜೀವನವನ್ನು ತುಂಬ ಹತ್ತಿರದಿಂದ ನೋಡಿ ಬೆಳೆದ ನಾನು ಅದನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಲಾಕೃತಿಗಳನ್ನು ರಚಿಸಿದ್ದೇನೆ. ಈ ಪ್ರದರ್ಶನದಲ್ಲಿ ದೇಸಿಕಲೆಗೆ ಸಂಬಂಧಿಸಿದ ಮೂರು ಚಿತ್ರಗಳು ಹಾಗೂ ಪ್ರಕೃತಿಗೆ ಸಂಬಂಧಿಸಿದ ನಾಲ್ಕು ಚಿತ್ರಗಳಿವೆ. ಈ ಕಲಾಕೃತಿಗಳೆಲ್ಲವೂ ಲೈನ್‌ ಡ್ರಾಯಿಂಗ್‌ ಮತ್ತು ಆ್ಯಕ್ರಿಲಿಕ್‌ ಮಾಧ್ಯಮದಲ್ಲಿವೆ. ಶ್ರಾವಣ ಮಾಸವನ್ನು ಥೀಮ್‌ ಆಗಿ ಇರಿಸಿಕೊಂಡು ಲೈನ್‌ ಡ್ರಾಯಿಂಗ್‌ ಮಾಡಿದ್ದೇನೆ ’ ಎಂದು ತಮ್ಮ ಕಲಾಕೃತಿಗಳ ಬಗ್ಗೆ ವಿವರಣೆ ನೀಡುತ್ತಾರೆ ಚಂದನಾ.

ಹಂಪಿ ವಿಶ್ವವಿದ್ಯಾಲಯದಲ್ಲಿ ‘ಮಾಸ್ಟರ್‌ ಆಫ್‌ ವಿಶುವಲ್‌ ಆರ್ಟ್‌’ನಲ್ಲಿ ವ್ಯಾಸಂಗ ಮಾಡುತ್ತಿರುವ ಮಾಲಿನಿ ಟಿ.ಆರ್‌. ಈ ಪ್ರದರ್ಶನದಲ್ಲಿ ದೇವಿ ಮತ್ತು ಕೃಷ್ಣನ ಸರಣಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ‘ಅರ್ಧ ನಾರೀಶ್ವರ ಪರಿಕಲ್ಪನೆಯನ್ನು ಇರಿಸಿಕೊಂಡು ನಾನು ದೇವಿ ಹೆಸರಿನ ಸರಣಿ ಕಲಾಕೃತಿಗಳನ್ನು ರಚಿಸಿದ್ದೇನೆ. ಹಾಗೆಯೇ, ಕೃಷ್ಣನ ಸರಣಿ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಂಡಿವೆ. ಇವೆಲ್ಲವೂ ಆ್ಯಕ್ರಿಲಿಕ್‌ ಪೇಂಟಿಂಗ್‌ಗಳು’ ಎನ್ನುತ್ತಾರೆ ಮಾಲಿನಿ.

ಕಲಾವಿದ ನಾಗೇಶ್‌ ವಿ. ಅವರ ಚಿತ್ರಕಲಾ ರಚನೆಗೆ ಹಳ್ಳಿಗಳು ಮತ್ತು ಶ್ರೀಕೃಷ್ಣ ಸ್ಫೂರ್ತಿ. ಕೃಷ್ಣನ ಅವತಾರಗಳು ಈ ಕಲಾವಿದನ ಚಿತ್ರ ಚೌಕಟ್ಟಿನಲ್ಲಿ ಅಂದವಾಗಿ ಮೂಡಿಬಂದಿವೆ. ಹಾಗೆಯೇ, ಹಳ್ಳಿಯ ಚಿತ್ರಣಗಳು ಮನಸ್ಸಿಗೆ ಮುದನೀಡುತ್ತವೆ. ಕಲಾವಿದೆ ಸತ್ಯ  ಎಸ್‌. ಅವರು ಸ್ನೇಹಿತರನ್ನು ಮನಸ್ಸಿನಲ್ಲಿಟ್ಟುಕೊಂಡು ಸರಣಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ಯುವಕಲಾವಿದರ ಕುಂಚದಲ್ಲಿ ಮೂಡಿಬಂದಿರುವ ಪ್ರಕೃತಿಯ ವೈಭೋಗ, ಹಳ್ಳಿ ಸೊಗಡಿನ ರಮ್ಯ ಚಿತ್ರಣ ಇವೆಲ್ಲವೂ ಸಹೃದಯರ ಮನಸ್ಸಿಗೆ ಮುದನೀಡುವಂತಿವೆ. ಆದರೆ, ಶತಶತಮಾನಗಳಿಂದಲೂ ಕಲಾವಿದರಿಗೆ ಸ್ಫೂರ್ತಿಯಾಗುತ್ತಾ ಬಂದಿರುವ ಈ ವಸ್ತು ವಿಷಯಗಳು ಈಗೀಗ ಕ್ಲೀಷೆ ಎನ್ನಿಸತೊಡಗಿವೆ. ಕಲಾಜಗತ್ತಿನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಬೇಕೆಂಬ ಹಂಬಲದೊಂದಿಗೆ ಚಿತ್ರಕಲಾ ಪ್ರಪಂಚಕ್ಕೆ ಅಡಿಯಿಟ್ಟಿರುವ ಯುವ ಕಲಾವಿದರು ಕ್ಲೀಷೆ ಎನ್ನಿಸುವ ವಸ್ತು ವಿಷಯಗಳಿಗೆ ಜೋತುಬೀಳದೆ ಹೊಸ ಸಂಚಲನ ಮೂಡಿಸುವ, ಕಲಾರಸಿಕರನ್ನು ಚಿಂತನೆಗೆ ಹಚ್ಚುವಂತಹ ಕಲಾಕೃತಿಗಳನ್ನು ರಚಿಸುವತ್ತ ಯೋಚಿಸಬೇಕು. ಹಳೆ ವಿಷಯವನ್ನಿರಿಸಿಕೊಂಡೇ ಹೊಸತೇನನ್ನೋ ಹೇಳುವ ಪ್ರಯೋಗಕ್ಕೆ ಕಲಾವಿದ ಒಡ್ಡಿಕೊಂಡರೆ ಬೆಳವಣಿಗೆಯ ದೃಷ್ಟಿಯಿಂದ ಒಳಿತು. 

ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ‘ಪಡಸಾಲೆ ಆರ್ಟ್‌ ಗ್ಯಾಲರಿ’ಯಲ್ಲಿ ಆಯೋಜಿಸಿರುವ ಈ ಪ್ರದರ್ಶನ ಅಕ್ಟೋಬರ್‌ 9ರವರೆಗೆ ನಡೆಯಲಿದೆ. ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT