ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಯಾಗಿ ಅನರ್ಹರ ನೇಮಕಕ್ಕೆ ಆಕ್ಷೇಪ

Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕೆಲವು ವಿಶ್ವವಿದ್ಯಾ­ಲಯ­ಗಳಿಗೆ ಅನರ್ಹರನ್ನು ಕುಲಪತಿಯಾಗಿ ನೇಮಿ­ಸಿ­ರುವ ಬಗ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ಯುಜಿಸಿ ಕಾರ್ಯದರ್ಶಿ ಪ್ರೊ. ಜಸ್ಪಾಲ್‌ ಸಂಧು ಅವರು ಕಳೆದ ಆ.11ರಂದು ರಾಜ್ಯ­ಪಾಲರಿಗೆ ಪತ್ರ ಬರೆದಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿದಾಗ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. 2010ರ ಯುಜಿಸಿ ನಿಯಮ ಪಾಲಿ­ಸುತ್ತಿಲ್ಲ, ಯೋಗ್ಯರನ್ನು ನೇಮಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದನ್ನು ತಪ್ಪಿಸ­ಬೇಕು. ಅರ್ಹರನ್ನೇ ಕುಲಪತಿಯನ್ನಾಗಿ ನೇಮಿಸ­ಬೇಕು. ಕುಲಪತಿ ಸ್ಥಾನಕ್ಕೆ ಆಯ್ಕೆಯಾಗುವವರು ಕನಿಷ್ಠ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಪ್ರಾಧ್ಯಾಪಕ ಹುದ್ದೆಗೆ ಸಮನಾದ ಹುದ್ದೆ­ಯಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಅವರು ಸಲಹೆ ಮಾಡಿದ್ದಾರೆ.

ಯುಜಿಸಿ ಪತ್ರ ಬಂದ ನಂತರ ರಾಜ್ಯಪಾಲರ ಕಾರ್ಯದರ್ಶಿಯವರು ಸೆ.8ರಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ‘ಕುಲಪತಿ ಸ್ಥಾನಕ್ಕೆ ಇನ್ನು ಮುಂದೆ 2010ರಲ್ಲಿ ಯುಜಿಸಿ ರೂಪಿಸಿದ ನಿಯಮಾವಳಿ­ಯಂತೆ ಯೋಗ್ಯರನ್ನೇ ಶಿಫಾರಸು ಮಾಡಬೇಕು’ ಎಂದು ಹೇಳಿದ್ದಾರೆ.

ಆಕ್ಷೇಪ ಯಾಕೆ?: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಡಾ. ಡಿ.ಎಲ್‌.ಮಹೇಶ್ವರ್‌ ಅವರನ್ನು ನೇಮಿಸಲಾಗಿದೆ. ಮಹೇಶ್ವರ್‌ ಅವರು ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿದ್ದರು. ಅವರು 2000 ದಿಂದ 2007ರ ವರೆಗೆ ಇಲಾಖೆಯ ಜಂಟಿ ನಿರ್ದೇಶಕ­ರಾಗಿದ್ದರು. ನಂತರ 6 ವರ್ಷ ಹೆಚ್ಚುವರಿ ನಿರ್ದೇಶಕ­ರಾಗಿದ್ದರು.  ಅವರನ್ನು ತೋಟಗಾರಿಕಾ ವಿಶ್ವವಿದ್ಯಾ­ಲ­ಯದ ಕುಲಪತಿಯನ್ನಾಗಿ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಯುಜಿಸಿಗೆ ದೂರು ನೀಡಲಾ­ಗಿತ್ತು. ಇದರಿಂದಾಗಿ ಯುಜಿಸಿ ರಾಜ್ಯಪಾಲರಿಗೆ ಪತ್ರ ಬರೆದಿದೆ.

ದೂರುದಾರರ ಪ್ರತಿಪಾದನೆ: ಡಾ. ಮಹೇಶ್ವರ್‌ ಅವರು ಕುಲಪತಿಯಾದ ನಂತರ ‘ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ಹುದ್ದೆ ವಿಶ್ವವಿದ್ಯಾಲ­ಯದ ಪ್ರಾಧ್ಯಾಪಕ ಹುದ್ದೆಗೆ ಸಮಾನ’ ಎಂದು ವಾದಿಸುತ್ತಿದ್ದಾರೆ. ಆದರೆ ಪ್ರಾಧ್ಯಾಪಕರ ಹುದ್ದೆಯ ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಜಂಟಿ ನಿರ್ದೇಶಕರ ವೇತನ ಶ್ರೇಣಿ ಬೇರೆ ಬೇರೆಯಾಗಿದೆ.

ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯ. ತೋಟಗಾರಿಕೆ ಜಂಟಿ ನಿರ್ದೇಶಕರಾಗಲು ಬಿಎಸ್‌ಸಿ ಪದವಿ ಇದ್ದರೆ ಸಾಕು. ಬಿಎಸ್‌ಸಿ (ತೋಟಗಾರಿಕೆ) ಪದವಿ ಪಡೆದವರು ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ನೇಮಕಗೊಂಡು ಬಡ್ತಿಯ ಮೂಲಕ ಜಂಟಿ ನಿರ್ದೇಶಕರಾಗುತ್ತಾರೆ. ಜಂಟಿ ನಿರ್ದೇಶಕರ ಹುದ್ದೆಗೆ ನೇರ ನೇಮಕಾತಿ ಇಲ್ಲ. ಜಂಟಿ ನಿರ್ದೇಶಕರ ಮೂಲವೇತನ ರೂ 40,050, ಹೆಚ್ಚುವರಿ ನಿರ್ದೇಶಕರ ವೇತನ ರೂ 44,250, ಆದರೆ ಸಹ ಪ್ರಾಧ್ಯಾಪಕರ ಮೂಲ ವೇತನ ರೂ 46,400, ಪ್ರಾಧ್ಯಾಪಕರ ಮೂಲ ವೇತನ ರೂ 50,890.

ಸಮಾನ ಹುದ್ದೆ ಆದೇಶ ಇಲ್ಲ!: ಡಾ.ಡಿ.ಎಲ್‌.ಮಹೇಶ್ವರ್‌ ಅವರನ್ನು ಕುಲಪತಿ­ಯಾಗಿ ನೇಮಿಸಿದ್ದನ್ನು ಕರ್ನಾಟಕ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಶಿಕ್ಷಕರ ಒಕ್ಕೂಟ ನ್ಯಾಯಾ­ಲಯ­ದಲ್ಲಿ ಪ್ರಶ್ನಿಸಿದೆ.  ನಂತರ ಮಹೇಶ್ವರ್‌ ಅವರು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ­ಗಳಿಗೆ ಪತ್ರವೊಂದನ್ನು ಬರೆದು, ‘ಜಂಟಿ ನಿರ್ದೇ­ಶಕರ ಹುದ್ದೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹುದ್ದೆಗೆ ಸಮಾನ ಎಂದು ಪರಿಗಣಿಸಿ ಪ್ರಮಾಣ ಪತ್ರ ನೀಡಬೇಕು’ ಎಂದು ಮನವಿ ಮಾಡಿಕೊಂಡಿ­ದ್ದಾರೆ. ಆದರೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶವಾಗಿಲ್ಲ.

ಮನವಿ ತಿರಸ್ಕಾರ: ಕರ್ನಾಟಕ ಪಶು, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಪ್ರಾಣಿಗಳ ಆರೋಗ್ಯ ಮತ್ತು ಪಶು, ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕರ ಹುದ್ದೆಯನ್ನು ಪ್ರಾಧ್ಯಾಪಕರ ಹುದ್ದೆ ಎಂದು ಘೋಷಿಸಿದೆ. ಅದೇ ರೀತಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರ ಹುದ್ದೆಯನ್ನೂ ಘೋಷಿಸಬೇಕು ಎಂದು ಈ ಹಿಂದೆ ಮಾಡಿಕೊಂಡ ಮನವಿಯನ್ನು ರಾಜ್ಯ ಸರ್ಕಾರ 2011ರ ಸೆ.7ರಂದು ತಳ್ಳಿ ಹಾಕಿದೆ. ಈ ಹುದ್ದೆ ವಿಶ್ವವಿದ್ಯಾಲಯದ ಬೋಧಕ ಹುದ್ದೆಗೆ ಸಮವಲ್ಲ. ಯುಜಿಸಿ/ ಐಸಿಎಆರ್‌ ವೇತನ  ಶ್ರೇಣಿಯನ್ನು ಪಡೆಯಲು ರಾಜ್ಯ ಸರ್ಕಾರದ ನಿರ್ದೇಶಕರು, ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಅರ್ಹ­ರಲ್ಲ ಎಂದು ಹೇಳಿದೆ.

ಮಂತ್ರಿಯೇ ಬೇಡ ಎಂದಿದ್ದರು
ಹಿಂದೆ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇ­ಶಕ­ರಾಗಿದ್ದ ಡಾ.ಮಹೇಶ್ವರ್‌ ಅವರನ್ನು ಅವರ ಸೇವಾವಧಿಯಲ್ಲಿ ಯಾವುದೇ ಉನ್ನತ ಹುದ್ದೆಗೆ ನೇಮಕ ಮಾಡಬಾರದು ಎಂದು ಈಗಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು 1999ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದಾಗ ಶಿಫಾರಸು ಮಾಡಿ­ದ್ದರು. ಹಾಪ್‌ಕಾಮ್ಸ್‌ಗೆ ನಷ್ಟ ಉಂಟು ಮಾಡಿದ ಮಹೇಶ್ವರ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದೂ ಅವರು ಸಲಹೆ ನೀಡಿದ್ದರು.

ದೃಢಪಟ್ಟಿಲ್ಲ: ಡಾ.ಮಹೇಶ್ವರ್‌
‘ನನ್ನ ವಿರುದ್ಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿದ್ದ ಯಾವುದೇ ಆರೋಪಗಳೂ ದೃಢಪಟ್ಟಿಲ್ಲ. ರಾಜ್ಯ ಸರ್ಕಾರ ಮತ್ತು ನ್ಯಾಯಾ­ಲಯಗಳು ಇದನ್ನು ನಿರಾಕರಿಸಿವೆ. ಆ ನಂತ­ರವೇ ನನಗೆ 2 ಬಾರಿ ಬಡ್ತಿ ನೀಡಲಾಗಿದೆ’ ಎಂದು ಡಾ.ಡಿ.ಎಲ್‌.ಮಹೇಶ್ವರ್‌ ಹೇಳಿದ್ದಾರೆ.
‘ತೋಟಗಾರಿಕೆ ವಿ.ವಿ ಕುಲಪತಿ ನೇಮಕಕ್ಕೆ ರಚಿಸಲಾಗಿದ್ದ ಶೋಧನಾ ಸಮಿತಿ ಕಾನೂನು ಪ್ರಕಾರವೇ ನನ್ನ ಹೆಸರನ್ನು ಸೇರಿಸಿದೆ. ಆ ಪ್ರಕಾರವೇ ನನ್ನನ್ನು ಕುಲಪತಿಯನ್ನಾಗಿ ನೇಮಿಸ­ಲಾಗಿದೆ’ ಎಂದು ಅವರು ಹೇಳಿದರು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT