ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಕಾನೂನು: ಬಿಜೆಪಿ ಬೃಹತ್ ಪ್ರತಿಭಟನೆ

Last Updated 22 ಜುಲೈ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ  ಪ್ರಕರಣಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದರ ಜೊತೆಯಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ  ಬೃಹತ್ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ಮತ್ತು ಮುಖಂ­ಡರು ವಿಧಾನಸೌಧಕ್ಕೆ  ಮುತ್ತಿಗೆ ಹಾಕಲು  ಸ್ವಾತಂತ್ರ್ಯ ಉದ್ಯಾನದಿಂದ ರ್‌್ಯಾಲಿ ಹೊರಟರು. ಆದರೆ, ಆನಂದರಾವ್ ವೃತ್ತದ ಸಮೀಪ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡರು.

ಇದಕ್ಕೂ ಮುನ್ನ ಸಂಸದ ಬಿ.ಎಸ್.­ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್‌ ಮುಖಂಡರು ಬಹುಮತವಿದೆ ಎಂಬ ಒಂದೇ ಕಾರಣಕ್ಕೆ ಅಧಿಕಾರದ ಪಿತ್ಥ ನೆತ್ತಿಗೇರಿಸಿಕೊಂಡು ದುರಾ­ಡಳಿತ ನಡೆಸುತ್ತಿದ್ದಾರೆ. ಕರ್ತವ್ಯ ಮರೆತಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ’ ಎಂದು ಕಿಡಿಕಾರಿದರು.

‘ಹಣಕಾಸು ನಿರ್ವಹಣೆ, ತೆರಿಗೆ ಸಂಗ್ರಹ, ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ರೈತರು, ದಲಿತರು ಹಾಗೂ ಹಿಂದುಳಿದವರ  ವಿರೋಧಿಯಾದ ಈ ಸರ್ಕಾರ ಜನರ ಪಾಲಿಗೆ ಸತ್ತಂತಿದೆ’ ಎಂದು ದೂರಿದರು.

‘ಇತ್ತೀಚೆಗೆ ನಡೆದ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದೆ. ಸಚಿವರಿಗೆ ಆಡಳಿತದಲ್ಲಿ ಆಸಕ್ತಿಯಿಲ್ಲ. ಮುಖ್ಯಮಂತ್ರಿ ನಿದ್ರಾವಸ್ಥೆಯಲ್ಲಿದ್ದಾರೆ. ಸರ್ಕಾರದ ಕಾರ್ಯ ವೈಖರಿಗೆ ಜನ ಬೇಸತ್ತಿದ್ದಾರೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಜನಪರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದ ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ, ಸುವರ್ಣ ಭೂಮಿ, ಉಚಿತ ಸೈಕಲ್
ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ’ ಎಂದು ಆರೋಪಿಸಿದರು.

‘ಅಧಿವೇಶನದಲ್ಲಿ ಬಿಜೆಪಿ, ಜನ ಮತ್ತು ಅಭಿವೃದ್ಧಿಪರ ಚರ್ಚೆ ನಡೆಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರಿಸುವ ಮೂಲಕ ರಾಜ್ಯವನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಹಿಂದುಳಿದ ವರ್ಗದ ಚಾಂಪಿಯನ್ ಪಟ್ಟ ಪಡೆದಿರುವ ಮುಖ್ಯಮಂತ್ರಿಗಳಿಗೆ ದಲಿತರ ಧ್ವನಿ ಕೇಳುತ್ತಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಹಿಳೆಯರ ಬಗ್ಗೆ ಕಳಕಳಿ ಮತ್ತು ತಾಕತ್ತು ಇದ್ದರೆ, ಗೃಹ ಸಚಿವ ಜಾರ್ಜ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು’ ಎಂದು ಸವಾಲು ಹಾಕಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಆರ್.ಅಶೋಕ, ಶಾಸಕ ಗೋವಿಂದ ಕಾರಜೋಳ ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT