ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ–ಸೆಟ್‌ ಎದುರಿಸಲು ಸಿದ್ಧರಾಗಿ...

Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರು/ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಬಯಸುವ ಸ್ನಾತಕೋತ್ತರ ಪದವೀಧರರು/ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ. ಮೈಸೂರು ವಿಶ್ವವಿದ್ಯಾಲಯವು ಬರುವ ನವೆಂಬರ್ 30ರಂದು ರಾಜ್ಯಮಟ್ಟದ ಅರ್ಹತಾ ಪರೀಕ್ಷೆ (ಕೆ–ಸೆಟ್) ನಡೆಸಲಿದ್ದು, ಇದರಲ್ಲಿ ಉತ್ತೀರ್ಣರಾದವರು ಉಪನ್ಯಾಸಕ/ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಲು ಅರ್ಹತೆ ಪಡೆಯಲಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಮಾದರಿಯಲ್ಲೇ ಕೆ–ಸೆಟ್ ಪರೀಕ್ಷೆ ನಡೆಯಲಿದೆ. ಎನ್ಇಟಿ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶ ಇದೆ. ಆದರೆ, ಕೆ–ಸೆಟ್ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಕೆಲ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳನ್ನು ಕನ್ನಡ, ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇದೆ. ಹೀಗಾಗಿ ಕನ್ನಡ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಕೆ–ಸೆಟ್ ಪರೀಕ್ಷೆ ಎದುರಿಸುವುದು ಕಷ್ಟವಾಗಲಾಗದು.

ಹಿಂದೆಲ್ಲ 3–4 ವರ್ಷಗಳಿಗೊಮ್ಮೆ ಕೆ–ಸೆಟ್ ಪರೀಕ್ಷೆ ನಡೆಯುತ್ತಿತ್ತು. ಆದರೆ, ಕಳೆದ ವರ್ಷದಿಂದ ಈಚೆಗೆ ಪ್ರತಿ ವರ್ಷ ಕೆ–ಸೆಟ್ ಪರೀಕ್ಷೆ ಆಯೋಜಿಸಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಯುಜಿಸಿ ಇದಕ್ಕೆ ಅನುಮೋದನೆ ನೀಡಿದೆ. ಉಪನ್ಯಾಸಕರಾಗಲು ಬಯಸುವ ಆಕಾಂಕ್ಷಿಗಳು ಯಾವಾಗ ಕೆ–ಸೆಟ್ ನಡೆಯುತ್ತದೊ ಎಂದು ಚಾತಕ ಪಕ್ಷಿಗಳ ಹಾಗೆ ಕಾಯುವುದು ತಪ್ಪಿದೆ. ಅಂತಿಮ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಕೆ–ಸೆಟ್ ಪರೀಕ್ಷೆ ಬರೆಯಬಹುದು.

ಒಟ್ಟು 32 ವಿಷಯಗಳಲ್ಲಿ, ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ನವೆಂಬರ್ 30ರಂದು ಪರೀಕ್ಷೆ ನಡೆಯಲಿದ್ದು, ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ಶೇ 55ರಷ್ಟು ಅಂಕಗಳನ್ನು ಪಡೆದಿರುವವರು (ಸಾಮಾನ್ಯ ವರ್ಗ) ಕೆ–ಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರೆ ಮೀಸಲಾತಿ ಪ್ರವರ್ಗದಡಿ ಬರುವವರು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು.

ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆ ತೆಗೆದುಕೊಳ್ಳಲಿರುವ ವಿದ್ಯಾರ್ಥಿಗಳು ಕೆ–ಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ, ಇದು ತಾತ್ಕಾಲಿಕ ಪ್ರವೇಶವಾಗಿದೆ. ಸ್ನಾತಕೋತ್ತರ ಪದವಿಯಲ್ಲಿ ನಿಗದಿತ ಅಂಕಗಳನ್ನು ಪಡೆದು, ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಉಪನ್ಯಾಸಕ ಅರ್ಹತಾ ಪತ್ರ ನೀಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ಕೆ–ಸೆಟ್ ಪರೀಕ್ಷೆ ನಡೆದ ಎರಡು ವರ್ಷದ ಒಳಗಾಗಿ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹವರನ್ನು ಅನರ್ಹರು ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ವರ್ಗಕ್ಕೆ ಸೇರದ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿಯಲ್ಲಿ ತಮ್ಮ ಜಾತಿಯನ್ನು ನಮೂದಿಸಬೇಕು. ಮುದ್ರಿತ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರದ ಪ್ರತಿ, ಎಸ್ಸೆಸ್ಸೆಲ್ಸಿ, ಸ್ನಾತಕೋತ್ತರ ಪದವಿಯ ಅಂಕಪಟ್ಟಿ ಸಲ್ಲಿಸಬೇಕು. ಜಾತಿ ಪ್ರಮಾಣ ಪತ್ರವನ್ನು 2013ರ ಸೆಪ್ಟೆಂಬರ್ 1ರಿಂದ 2014ರ ಸೆಪ್ಟೆಂಬರ್ 1ರ ಒಳಗೆ ಪಡೆದಿರಬೇಕು. ಮೀಸಲಾತಿ ಕೋರುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಿ, ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಅರ್ಜಿ ಶುಲ್ಕ: ಸಾಮಾನ್ಯ ವರ್ಗದವರಿಗೆ ₨1000, ಪ್ರವರ್ಗ -2ಎ, 2ಬಿ, 3ಎ, 3ಬಿಗೆ ಸೇರಿದವರಿಗೆ ₨800, ಪ್ರವರ್ಗ -1, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆ ₨ 500. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಚಲನ್ ಮುದ್ರಿಸಿ ಎಸ್‌ಬಿಎಂ ಶಾಖೆಯಲ್ಲಿ ಶುಲ್ಕ ಪಾವತಿಸಬೇಕು.

ಪರೀಕ್ಷಾ ವಿಧಾನ: ಕೆ–ಸೆಟ್ ಪರೀಕ್ಷೆಯು ಬಹುಆಯ್ಕೆ ಮಾದರಿಯ ಮೂರು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ನವೆಂಬರ್ 30ರಂದು ಒಂದೇ ದಿನ ಪರೀಕ್ಷೆ ನಡೆಯಲಿದೆ. ಮೊದಲ ಅವಧಿಯ ಪತ್ರಿಕೆ-1 ಮತ್ತು 2 ತಲಾ 100 ಅಂಕಗಳನ್ನು ಒಳಗೊಂಡಿರುತ್ತದೆ. ಮೊದಲ ಪತ್ರಿಕೆಯಲ್ಲಿ 60 ಪ್ರಶ್ನೆಗಳ ಪೈಕಿ 50ಕ್ಕೆ ಉತ್ತರಿಸಬೇಕು. ಎರಡನೇ ಪತ್ರಿಕೆಯಲ್ಲಿ 50 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ. 150 ಅಂಕಗಳ ಮೂರನೇ ಪ್ರಶ್ನೆಪತ್ರಿಕೆಯಲ್ಲಿ 75 ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ.

ಪ್ರಶ್ನೆಪತ್ರಿಕೆ -1 ಸಾಮಾನ್ಯ ಜ್ಞಾನ, ಬೋಧನೆ/ಸಂಶೋಧನೆ, ಅಭಿರುಚಿಗೆ ಸಂಬಂಧಿಸಿದ್ದಾಗಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಯನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುವಂತಹದ್ದಾಗಿರುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿ ಮಾಡಲಾಗಿದೆ.
ಪ್ರಶ್ನೆಪತ್ರಿಕೆ -2 ಮತ್ತು 3 ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ವಿಷಯದ್ದಾಗಿರುತ್ತದೆ. 2ನೇ ಪತ್ರಿಕೆಯಲ್ಲಿ 50 ಹಾಗೂ 3ನೇ ಪತ್ರಿಕೆಯಲ್ಲಿ 75 ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕು. ಇಲ್ಲೂ ಪ್ರತಿಪ್ರಶ್ನೆಗೆ ತಲಾ 2 ಅಂಕಗಳನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾಹಿತಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ –ಜುಲೈ 31
₨100 ದಂಡದೊಂದಿಗೆ ಅರ್ಜಿ ಸಲ್ಲಿಸಲು ಕೊನೆ ದಿನ –ಆ.14
ಭರ್ತಿ ಮಾಡಿ ಮುದ್ರಿಸಿದ ಅರ್ಜಿಯೊಂದಿಗೆ ಬ್ಯಾಂಕ್ ಚಲನ್, ಜಾತಿ ಪ್ರಮಾಣ ಪತ್ರವನ್ನು ನೋಡಲ್ ಕೇಂದ್ರಕ್ಕೆ ಸಲ್ಲಿಸಲು ಕೊನೆ ದಿನ –ಸೆಪ್ಟೆಂಬರ್ 1
ಪರೀಕ್ಷೆ ದಿನಾಂಕ – ನವೆಂಬರ್ 30

ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಾಪುರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು. ಒಮ್ಮೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.

ಫಲಿತಾಂಶ ಹೇಗೆ?
ಮೊದಲ ಹಂತದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ 1 ಮತ್ತು 2ರಲ್ಲಿ ಶೇ 40ರಷ್ಟು ಹಾಗೂ ಪ್ರಶ್ನೆಪತ್ರಿಕೆ 3ರಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು. ಇತರರು ಕ್ರಮವಾಗಿ ಶೇ 35 ಹಾಗೂ ಶೇ 40ರಷ್ಟು ಅಂಕಗಳನ್ನು ಪಡೆದಿರಬೇಕು. ಎರಡನೇ ಹಂತದಲ್ಲಿ ಅಭ್ಯರ್ಥಿಯು ಮೂರೂ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ವಿಷಯವಾರು ಹಾಗೂ ಪ್ರವರ್ಗವಾರು ತಯಾರಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಆಧರಿಸಿ, ಮೊದಲ ಶೇ 15ರಷ್ಟು (ಪ್ರತಿ ವಿಷಯವಾರು ಹಾಗೂ ಪ್ರವರ್ಗವಾರು) ಅಭ್ಯರ್ಥಿಗಳನ್ನು ಕೆ–ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT