ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ತಪ್ಪು ನಿರ್ಧಾರವೇ ಪ್ರತಿಭಟನೆಗೆ ಕಾರಣ

ಪಿ.ಎಫ್‌ ವಿವಾದ, ಗಲಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ
Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಎಫ್‌ ಕುರಿತಂತೆ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರವೇ ಇತ್ತೀಚೆಗೆ ನಗರದಲ್ಲಿ ಗಾರ್ಮೆಂಟ್‌ ಕಾರ್ಮಿಕರಿಂದ ಪ್ರತಿಭಟನೆ ನಡೆಯಲು ಕಾರಣವಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ (ಐಎನ್‌ಟಿಯುಸಿ) ರಾಜ್ಯ ಘಟಕ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಮುಂದಾಲೋಚನೆ ಇಲ್ಲದೆ, ಕಾರ್ಮಿಕರ ಸಂಘಟನೆಗಳೊಂದಿಗೆ ಸರಿಯಾದ ರೀತಿಯಲ್ಲಿ ಚರ್ಚಿಸದೆ ಜಾರಿಗೆ ತರಲು ಹೊರಟ ಕೆಟ್ಟ ನೀತಿಯೇ ಚಳವಳಿಗೆ ಕಾರಣವಾಯಿತು. ಅಷ್ಟೊಂದು ಜನ ಬೀದಿಗೆ ಬಂದಿದ್ದರಿಂದಲೇ ಕೇಂದ್ರ ಸರ್ಕಾರ ಕಣ್ಣು ತೆರೆಯಿತು’ ಎಂದು ಹೇಳಿದರು.

‘ಕೆಲ ಕಿಡಿಗೇಡಿಗಳು ಪ್ರತಿಭಟನೆ ವೇಳೆ ಕಾನೂನು ಕೈಗೆ ತೆಗೆದುಕೊಂಡು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ್ದಾರೆ. ಹಾಗೇ ಮಾಡಬಾರದಾಗಿತ್ತು’ ಎಂದು ತಿಳಿಸಿದರು.

‘ಆ ಘಟನೆಯಲ್ಲಿ ಕೆಲ ಅಮಾಯಕರನ್ನು ಜೈಲಿಗೆ ಕಳುಹಿಸಲಾಗಿದೆ. ಅವರನ್ನು ಬಿಡುಗಡೆಗೊಳಿಸಿ ಎಂದು ಕಾರ್ಮಿಕರು ಮನವಿ ಸಲ್ಲಿಸಿದ್ದಾರೆ. ಪೊಲೀಸ್‌ ಇಲಾಖೆಯೊಂದಿಗೆ ಮಾತನಾಡಿ, ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಮಿಕ ಸಚಿವ ಪರಮೇಶ್ವರ್‌ ನಾಯ್ಕ ಮಾತನಾಡಿ, ‘ರಾಜ್ಯದ 27 ಉದ್ದಿಮೆಗಳಲ್ಲಿ ಏಕಕಾಲಕ್ಕೆ ಕನಿಷ್ಠ ವೇತನವನ್ನು ₹10,500ಕ್ಕೆ ಪರಿಷ್ಕರಣೆ ಮಾಡಲಾಗಿದೆ. ದೇಶದ ಬೇರೆ ಯಾವ ರಾಜ್ಯದಲ್ಲೂ ಇಂತಹ ಉಪಕ್ರಮ ಕೈಗೊಂಡಿಲ್ಲ’ ಎಂದು ಹೇಳಿದರು.

‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ₹4000 ಕೋಟಿಯನ್ನು ಸದ್ಭಳಕೆಯಾಗಬೇಕು ಎನ್ನುವ ಉದ್ದೇಶದಿಂದ 2013 ಮೇ ತಿಂಗಳಿನಿಂದ 2016 ಮಾರ್ಚ್‌ ವರೆಗೆ 7.5 ಲಕ್ಷ ಕಾರ್ಮಿಕರನ್ನು ಗುರುತಿಸಿ ನೋಂದಾಯಿಸಿ, ಅವರಿಗೆ ಮಂಡಳಿಯಿಂದ ₹125 ಕೋಟಿಗೂ ಅಧಿಕ ಆರ್ಥಿಕ ನೆರವು ನೀಡಲಾಗಿದೆ’ ಎಂದು ತಿಳಿಸಿದರು.

‘ಕಟ್ಟಡ ನಿರ್ಮಾಣದ ಕುರಿತು ತರಬೇತಿ ನೀಡುವ ಸಲುವಾಗಿ  ₹364 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ನಿರ್ಮಾಣ ಅಕಾಡೆಮಿಯನ್ನು ಸ್ಥಾಪಿಸಲಾಗುವುದು. ಕಟ್ಟಡದ ಕಾಮಗಾರಿಗೆ ಮೇ 14 ರಂದು ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ’ ಎಂದರು.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ಯುಪಿಎ ಸರ್ಕಾರ ರೂಪಿಸಿದ ಅನೇಕ ಜನಪರ ಯೋಜನೆಗಳನ್ನು ಎನ್‌ಡಿಎ ಸರ್ಕಾರದ ಮುಖಂಡರು ತಾವೇ ರೂಪಿಸಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಬಡವರು, ರೈತರಿಗೆ ವಿರುದ್ಧವಾದ ಕಾರ್ಯಕ್ರಮಗಳನ್ನು ಮಾಡುತ್ತಿದೆಯೇ ವಿನಾ ಜನಹಿತ ಯೋಜನೆಗಳನ್ನು ರೂಪಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ತನಕ ತಾವು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಅರಿತ ಬಿಜೆಪಿಯವರು ಇವತ್ತು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಬದಲಾವಣೆ ವಿಚಾರವನ್ನೇ ಪ್ರಸ್ತಾಪಿಸಿಲ್ಲ. ಆದರೆ ಕೆಲ ಪತ್ರಿಕೆಗಳು ವಿರೋಧ ಪಕ್ಷದವರನ್ನು ಮೆಚ್ಚಿಸಲು ಅಂತಹ ವಿಚಾರಗಳನ್ನು ಊಹಾಪೋಹವಾಗಿ ಬರೆಯುತ್ತಿವೆ. ಸಿದ್ದರಾಮಯ್ಯಗೆ ಜನ ಹಾಗೂ ಹೈಕಮಾಂಡ್‌ ಬೆಂಬಲವಿದೆ. ಹೀಗಾಗಿ ಅವರು ಮುಂದಿನ ಎರಡು ವರ್ಷಗಳು ಮಾತ್ರವಲ್ಲ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಹ ಅವರ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ. ಮತ್ತೆ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ’ ಎಂದರು.

ನಾಡಗೀತೆಗೆ ಅಗೌರವ
ಗಣ್ಯರು ಕಾರ್ಯಕ್ರಮ ಉದ್ಘಾಟಿಸುತ್ತಿದ್ದ ವೇಳೆ ನಿರೂಪಕರ ಸೂಚನೆಯಂತೆ ಗಾಯಕರು ನಾಡಗೀತೆ ಹಾಡಲು ಆರಂಭಿಸಿದರು. ಅದರ ಪರಿವೇ ಇಲ್ಲದ ಗಣ್ಯರು ಆಸನದತ್ತ ಮರಳಿ ಕುಳಿತರು. ಸಭಿಕರು ಹಾಗೇ ಕುಳಿತಿದ್ದರು. ಕೆಲ ಕ್ಷಣಗಳ ಬಳಿಕ ನಾಡಗೀತೆಯ ಅರಿವಾಗುತ್ತಿದ್ದಂತೆ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಎದ್ದು ನಿಂತರು.

ನೈಜ ಆಸ್ತಿ
ಕಾರ್ಮಿಕರೇ ದೇಶದ ನೈಜ ಆಸ್ತಿ.  ಸಂಪತ್ತನ್ನು ಸೃಷ್ಟಿಸುವವರು ಅವರೇ. ಆ ಸಂಪತನ್ನು ಎಲ್ಲರೂ ಹಂಚಿಕೊಂಡು ಬಾಳಿದಾಗಲೇ ನಾವು ಒಂದು ಆರೋಗ್ಯಕರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT