ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರ: ಶ್ರದ್ಧಾಭಕ್ತಿಯಿಂದ ನಡೆದ ತಾತಯ್ಯ ಆರಾಧನೆ

Last Updated 22 ಮೇ 2015, 9:54 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಗುರುವಾರ ಯೋಗಿ ನಾರೇಯಣ ಯತೀಂದ್ರರ 180ನೇ ಆರಾಧನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಾವಿರಾರು ಸಾಧು– ಸಾಧ್ವಿಗಳು ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಯತೀಂದ್ರರ ಮೂಲ ವಿಗ್ರಹಕ್ಕೆ ವಿಶೇಷ ಆಲಂಕಾರ, ಅಭಿಷೇಕ, ಅಷ್ಟಾವಧಾನಸೇವೆ ನೆರವೇರಿಸಲಾಯಿತು.

ಸಾಲಂಕೃತ ಪಲ್ಲಕ್ಕಿಯಲ್ಲಿ ಯತೀಂದ್ರರ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.

ಸಾಧುಗಳಿಗೆ ಕಾಷಾಯ ವಸ್ತ್ರ ವಿತರಿಸಲಾಯಿತು. ಅಖಂಡ ಭಜನೆ, ಸಂಕೀರ್ತನೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.

ಗುರುವಿನ ದಯೆಯಿಂದ ಸಾಕ್ಷಾತ್ಕಾರ: ಜನತೆಯಲ್ಲಿರುವ ಅಹಂಕಾರ, ದ್ವೇಷ, ಅಸೂಯೆ, ಸ್ವಾರ್ಥವನ್ನು ನಿವಾರಿಸಿ, ಬಿಡಿಗಾಸನ್ನೂ ಪಡೆಯದೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವನೇ ನಿಜವಾದ ಗುರು ಎಂದು ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ಅಭಿಪ್ರಾಯಪಟ್ಟರು.

ಆರಾಧನಾ ಮಹೋತ್ಸವದಲ್ಲಿ ಮಾತನಾಡಿ, ಭಗವಂತನನ್ನು ಒಲಿಸಲು ಭಜನೆಯೇ ಸರಳ ಉಪಾಯ, ಗುರುಕೃಪೆಯಿಂದ ಭಗವಂತನ ಭಕ್ತಿ ನೆಲೆಗೊಂಡರೆ ಭಜನೆ ಸಾರ್ಥಕವಾಗುತ್ತದೆ ಎಂದರು.

ಯತೀಂದ್ರರ ಹಲವು ಕೀರ್ತನೆಗಳನ್ನು ವಿವರಿಸಿದ ಅವರು, 2014–15ನೇ ಆರ್ಥಿಕ ಸಾಲಿನಲ್ಲಿ ನಡೆದ ಚಟುವಟಿಕೆಯ ವರದಿಯನ್ನು ಮಂಡಿಸಿದರು. ಹಿಂದಿನ ವರ್ಷದ ವರದಿಯನ್ನು ಆರಾಧನಾ ಮಹೋತ್ಸವದಂದು ಸಮರ್ಪಿಸುವುದು ಮಠದ ಸಂಪ್ರದಾಯವಾಗಿದೆ ಎಂದರು.

ಯೋಗಿನಾರೇಯಣ ಯತೀಂದ್ರ ಟ್ರಸ್ಟ್‌ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ರಾಜ್ಯ ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯ ಬಾಲಕೃಷ್ಣ ಭಾಗವತರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT